ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (mar 6) ಬಜೆಟ್ ಮಂಡಿಸುತ್ತಿದ್ದು, ಕನ್ನಡ ಚಿತ್ರರಂಗಕ್ಕೆ ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಟಿಕೆಟ್ ದರ ನಿಗದಿ, ಮೈಸೂರಿನಲ್ಲಿ ಚಿತ್ರನಗರಿ ಹಾಗೂ ಕನ್ನಡ ಚಿತ್ರಗಳನ್ನು ಪ್ರೊಮೋಟ್ ಮಾಡಲು ಸರ್ಕಾರದಿಂದಲೇ OTT ರೂಪಿಸುವ ಯೋಜನೆಗಳು ಹೊರಬಿದ್ದಿವೆ.
ಬಜೆಟ್‌ನಲ್ಲಿ ಕನ್ನಡ ಚಿತ್ರರಂಗಕ್ಕೆ ಮಹತ್ವದ ಘೋಷಣೆಗಳು ಹೊರಬಿದ್ದಿವೆ. ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿನಿಮಾ ಕ್ಷೇತ್ರಕ್ಕೆ ಅಗತ್ಯವಿದ್ದ ಯೋಜನೆಗಳಿಗೆ ಹಣ ಮೀಸಲಿಟ್ಟಿದ್ದಾರೆ.
ಟಿಕೆಟ್ ದರ | ಈ ಹಿಂದೆ 2017 – 18ನೇ ಸಾಲಿನ ಬಜೆಟ್‌ನಲ್ಲಿ ಏಕರೂಪ ಟಿಕೆಟ್ ದರ ಜಾರಿ ಮಾಡಲು ಘೋಷಿಸಲಾಗಿತ್ತು. 2018ರ ಮೇ ತಿಂಗಳಲ್ಲಿ ಸರ್ಕಾರದ ಆದೇಶವೂ ಆಗಿತ್ತು. ಆದರೆ ಆದೇಶಕ್ಕೆ ತಡೆಯಾಜ್ಞೆ ತಂದ ನಿಟ್ಟಿನಲ್ಲಿ ಈ ಯೋಜನೆ ಕೈಗೂಡಿರಲಿಲ್ಲ. ಈ ಬಾರಿ ರಾಜ್ಯದ ಎಲ್ಲಾ ಸಿಂಗಲ್‌ಸ್ಕ್ರೀನ್ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಏಕರೂಪ ಟಿಕೆಟ್ ದರ ನಿಗದಿ ಪಡಿಸುವ ಘೋಷಣೆ ಹೊರಬಿದ್ದಿದೆ. ಅದರಂತೆ ಟಿಕೆಟ್ ದರ 200 ರೂಪಾಯಿ ಮೀರುವಂತಿಲ್ಲ.
ಮೈಸೂರಿನಲ್ಲಿ ಚಿತ್ರನಗರಿ | ಮೈಸೂರಿನಲ್ಲಿ ಚಿತ್ರನಗರಿ ರೂಪಿಸುವ ಬಗ್ಗೆ ಸಿದ್ದರಾಮಯ್ಯ ಈ ಹಿಂದಿನ ತಮ್ಮ ಅವಧಿಯಲ್ಲೇ ಹೇಳಿದ್ದರು. ಈ ಬಾರಿ ಅದಕ್ಕೆ ಅನುಮೋದನೆ ಸಿಕ್ಕಿದೆ. ‘ಅಂತಾರಾಷ್ಟ್ರೀಯ ದರ್ಜೆಯ ಚಿತ್ರನಗರಿಯನ್ನು ಪಿಪಿಪಿ ಮಾದರಿಯಲ್ಲಿ ಅಂದಾಜು 500 ಕೋಟಿ ರೂಪಾಯಿ ವೆಚ್ಚದಲ್ಲಿ ಮೈಸೂರಿನಲ್ಲಿ ಸ್ಥಾಪಿಸಲು 150 ಎಕರೆ ಜಮೀನನ್ನು ಕಾಯ್ದಿರಿಸಲಾಗಿದೆ. ಮುಂದಿನ ವರ್ಷಗಳಲ್ಲಿ ಚಿತ್ರನಗರಿಯನ್ನು ಸ್ಥಾಪಿಸಲು ಸರ್ಕಾರ ಬದ್ಧವಾಗಿದೆ’ ಎಂದಿದ್ದಾರೆ ಸಿದ್ದರಾಮಯ್ಯ.
ಕನ್ನಡ ಚಿತ್ರಗಳಿಗಾಗಿ OTT | ‘ಕನ್ನಡ ಚಿತ್ರಗಳನ್ನು OTT ವೇದಿಕೆಗಳು ಕಡೆಗಣಿಸುತ್ತಿವೆ. ಇದರಿಂದ ಹಿನ್ನಡೆಯಾಗುತ್ತಿದೆ’ ಎನ್ನುವುದು ಹಳೆಯ ಕೂಗು. ಈ ಬಗ್ಗೆ ಆಗಿಂದಾಗ್ಗೆ ಚಿತ್ರರಂಗದವರು ಪ್ರಸ್ತಾಪಿಸುತ್ತಲೇ ಇದ್ದರು. ಈ ನಿಟ್ಟಿನಲ್ಲಿ ಕನ್ನಡ ಚಿತ್ರಗಳನ್ನು ಪ್ರೊಮೋಟ್ ಮಾಡಲು ಸರ್ಕಾರದಿಂದಲೇ OTT ವೇದಿಕೆ ರೂಪಿಸುವ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ‘ಕನ್ನಡ ಚಲನಚಿತ್ರಗಳ ಪ್ರೋತ್ಸಾಹಕ್ಕಾಗಿ ಓಟಿಟಿ ವೇದಿಕೆ ಸೃಷ್ಟಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿಗಳು ಹೇಳಿದ್ದಾರೆ.