ನಿರ್ದೇಶಕ ಪೃಥ್ವಿ ಕೊಣನೂರು ಅವರು ಚಿತ್ರದಲ್ಲಿ ಕತೆಯೊಂದನ್ನು ನೇರವಾಗಿ ನಿರೂಪಿಸಬೇಕೆಂದು ಹೊರಟಂತಿಲ್ಲ. ಕತೆ ಇಲ್ಲಿ ನೆಪವಷ್ಟೆ. ಅದರ ಸುತ್ತ ಅವರು ಹಲವು ಸೂಕ್ಷ್ಮ ವಿಷಯಗಳನ್ನು ಹೇಳುತ್ತಾ ಹೋಗುತ್ತಾರೆ. ಕತೆಯನ್ನು ಮೀರಿ ಸನ್ನಿವೇಶಗಳು ಮತ್ತು ಪಾತ್ರಗಳ ಮೂಲಕ ಸಿನಿಮಾ ಬೆಳೆಯುತ್ತದೆ.

ಜಗತ್ತಿನ ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಸದ್ದು ಮಾಡಿದ ಸಿನಿಮಾ ‘ಪಿಂಕಿ ಎಲ್ಲಿ?’. ಸಾಮಾಜಿಕ ಸಮಸ್ಯೆಯೊಂದರ ಜೊತೆಗೆ ಮನುಷ್ಯ ಸಂಬಂಧಗಳ ಕುರಿತು ಹೇಳುವ ಕಥಾವಸ್ತು. ಹಾಗಾಗಿ ದೇಶ – ಕಾಲದ ಚೌಕಟ್ಟುಗಳಿಲ್ಲ. ಸಿನಿಮಾಗೆ ಸಂಬಂಧಿಸಿದ ಈಗಿನ ನುಡಿಗಟ್ಟಿನೊಂದಿಗೆ ಹೇಳಬಹುದಾದರೆ PAN World ಕಂಟೆಂಟ್‌! ಇತ್ತೀಚಿನ ದಿನಗಳ ಪ್ರಬುದ್ಧ ಮತ್ತು ಉತ್ತಮ ಸಿನಿಮಾಗಳ ಪಟ್ಟಿಗೆ ಸೇರ್ಪಡೆಗೊಳ್ಳಬಹುದಾದ ಪ್ರಯೋಗ.

ನಿರ್ದೇಶಕ ಪೃಥ್ವಿ ಕೊಣನೂರು ಅವರು ಚಿತ್ರದಲ್ಲಿ ಕತೆಯೊಂದನ್ನು ನೇರವಾಗಿ ನಿರೂಪಿಸಬೇಕೆಂದು ಹೊರಟಂತಿಲ್ಲ. ಕತೆ ಇಲ್ಲಿ ನೆಪವಷ್ಟೆ. ಅದರ ಸುತ್ತ ಅವರು ಹಲವು ಸೂಕ್ಷ್ಮ ವಿಷಯಗಳನ್ನು ಹೇಳುತ್ತಾ ಹೋಗುತ್ತಾರೆ. ನಾವು ನೋಡುವ, ದಿನನಿತ್ಯ ಎದುರುಗೊಳ್ಳುವ ವ್ಯಕ್ತಿ – ಸನ್ನಿವೇಶಗಳನ್ನು ಸಿನಿಮಾದಲ್ಲಿ ಅಳವಡಿಸಿದ್ದಾರೆ. ಜೊತೆಗೆ ಸಮಾಜದಲ್ಲಿ ನಡೆಯುವ ಆದರೆ ಹೆಚ್ಚಿನವರಿಗೆ ಗೊತ್ತಿರದ ಸಂಗತಿಗಳನ್ನೂ ತೋರಿಸುತ್ತಾರೆ. ಆದ್ದರಿಂದ ಸಹಜತೆಯ ಜೊತೆ ಕುತೂಹಲವೂ ಇಲ್ಲಿ ಅಡಕವಾಗಿದೆ.

ಶೀರ್ಷಿಕೆ ಹೇಳುವಂತೆ ಇದು ಪಿಂಕಿಯ ಹುಡುಕಾಟದೊಂದಿಗೆ ಶುರುವಾಗುವ ಕತೆ. ಪ್ರೇಕ್ಷಕ ಇದಿಷ್ಟನ್ನೇ ಊಹಿಸಿದ್ದಿದ್ದರೆ ಸಿದ್ಧ ಮಾದರಿಯ ಕ್ಲೈಮ್ಯಾಕ್ಸ್‌ಗಳನ್ನು ಆಲೋಚಿಸಿಬಿಡುತ್ತಿದ್ದ. ಆದರೆ ಇಲ್ಲಿ ನಿರ್ದೇಶಕರು ಕತೆಗೆ ಬೇರೆ ಬೇರೆ ಆಯಾಮಗಳನ್ನು ನೀಡುತ್ತಾ ಹೋಗುತ್ತಾರೆ. ಆಲದ ಬಿಳಿಲುಗಳಂತೆ ಕತೆಗೆ ಬೇರೆ ಮಗ್ಗುಲುಗಳು ದಕ್ಕುತ್ತವೆ. ಬದುಕಿನ ಸಂಕೀರ್ಣತೆ, ಜಟಿಲತೆಗಳನ್ನು ಸಾವಕಾಶವಾಗಿ ಹೇಳುತ್ತಾರೆ. ಪ್ರೇಕ್ಷಕ ತಾನು ಊಹಿಸಿದ ಮೂಲ ಕತೆಯನ್ನು ಮರೆತು ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತಾ ಹೋಗುತ್ತಾನೆ. ಯಾವುದೇ ಹಂತದಲ್ಲೂ ನಿರ್ದೇಶಕರು ಪಾತ್ರಗಳ ಮೂಲಕ ಹೇಳಿಸುವ ಮಾತು, ನಿರೂಪಣೆ ವಾಚ್ಯ ಎನಿಸುವುದಿಲ್ಲ ಎನ್ನುವುದು ಹೆಚ್ಚುಗಾರಿಕೆ.

ಚೊಚ್ಚಲ ಸಿನಿಮಾ ‘ಪಲ್ಲಟ’ದ ಉತ್ತಮ ನಟನೆಗೆ ರಾಜ್ಯ ಪ್ರಶಸ್ತಿ ಪಡೆದಿದ್ದ ನಟಿ ಅಕ್ಷತಾ ಪಾಂಡವಪುರ. ‘ಪಿಂಕಿ ಎಲ್ಲಿ?’ ಚಿತ್ರದಲ್ಲಿನ ಅವರ ಪಾತ್ರಕ್ಕೆ ಅಲ್ಲಿಗಿಂತಲೂ ಹೆಚ್ಚಿನ ಸವಾಲುಗಳಿವೆ. ಮಗುವನ್ನು ಕಳೆದುಕೊಂಡ ತಾಯಿ, ಆಧುನಿಕ ಜಗತ್ತಿನ ಸ್ವತಂತ್ರ್ಯ ವ್ಯಕ್ತಿತ್ವದ ಯುವತಿ, ಗೋಜಲಾದ ವೈವಾಹಿಕ ಬದುಕನ್ನು ಎದುರಿಸುತ್ತಾ ಸರಿ, ತಪ್ಪುಗಳ ಹುಡುಕಾಟದಲ್ಲಿರುವ ಅವರ ಪಾತ್ರಕ್ಕೆ ಭಿನ್ನ ಶೇಡ್‌ಗಳಿವೆ. ಅವರು ಈ ಸೂಕ್ಷ್ಮಗಳನ್ನು ಅರಿತು ಅಭಿನಯಿಸಿ ‘ಬಿಂದು’ ಪಾತ್ರದ ತೂಕ ಹೆಚ್ಚಿಸಿದ್ದಾರೆ. ನಟನೆಯೇ ಗೊತ್ತಿರದ, ಕಲಾವಿದರಲ್ಲದ ಮೂರ್ನಾಲ್ಕು ಪಾತ್ರಧಾರಿಗಳು ಚಿತ್ರದ ಅಂದ ಹೆಚ್ಚಿಸಿದ್ದಾರೆ. ಇವರಿಗೆ ಹೊಂದಿಕೊಂಡು ನಟಿಸುವ ಸವಾಲುಗಳನ್ನೂ ಅಕ್ಷತಾ ಜವಾಬ್ದಾರಿಯಿಂದ ನಿಭಾಯಿಸಿದ್ದಾರೆ. ಈ ಪಾತ್ರಗಳನ್ನು ವಿನ್ಯಾಸಗೊಳಿಸಿದ, ಸಿಂಕ್‌ ಸೌಂಡ್‌ ಮೂಲಕ ಸಹಜತೆಯನ್ನು ಆಪ್ತವಾಗಿ ಕಟ್ಟಿಕೊಟ್ಟ ನಿರ್ದೇಶಕರಿಗೆ ಹಾಗೂ ಇಂಥದ್ದೊಂದು ಉತ್ತಮ ಸಿನಿಮಾ ನಿರ್ಮಿಸಲು ಮುಂದಾದ ನಿರ್ಮಾಪಕ ಕೃಷ್ಣೇಗೌಡರಿಗೆ ಅಭಿನಂದನೆ ಸಲ್ಲಬೇಕು. ನಿರ್ದೇಶಕರ ಸಹಜ ನಿರೂಪಣೆಗೆ ಒತ್ತಾಸೆಯಾಗಿ ನಿಂತ ಛಾಯಾಗ್ರಾಹಕ ಅರ್ಜುನ್‌ ರಾಜಾ, ಸಂಕಲನಕಾರ ಶಿವಕುಮಾರ ಸ್ವಾಮಿ, ಧ್ವನಿಗ್ರಹಣ ವಿಭಾಗದಲ್ಲಿ ದುಡಿದ ಕೃಷ್ಣಮೂರ್ತಿ ಮತ್ತು ಕೃಷ್ಣನುನ್ನಿ ಅವರ ಕೆಲಸಕ್ಕೂ ಚಪ್ಪಾಳೆ. ‘ಪಿಂಕಿ ಎಲ್ಲಿ?’ ನೋಡಬೇಕಾದ ಅಪರೂಪದ ಸಿನಿಮಾ.

LEAVE A REPLY

Connect with

Please enter your comment!
Please enter your name here