ಉತ್ತರ ಕರ್ನಾಟಕ ಸೊಗಡಿನ ಭಾಷೆ, ಕತೆಯ ಸಿನಿಮಾ ‘ಸೈಕಲ್ ಸವಾರಿ’ ಟ್ರೈಲರ್ ಬಿಡುಗಡೆಯಾಗಿದೆ. ಮಿಠಾಯಿ ಮಾರುವವನ ಲವ್‌ಸ್ಟೋರಿ. ದೇವು ಕೆ ಅಂಬಿಗ ಚಿತ್ರಕಥೆ ರಚಿಸಿ ನಿರ್ದೇಶಿಸಿ, ನಟಿಸಿರುವ ಚಿತ್ರವಿದು. ದೀಕ್ಷಾ ಭಿಸೆ ಚಿತ್ರದ ನಾಯಕಿ. ನವೆಂಬರ್ 3ರಂದು ಸಿನಿಮಾ ತೆರೆಕಾಣಲಿದೆ.
ಹಳ್ಳಿಯಲ್ಲಿ ಮಿಠಾಯಿ ಮಾರಿಕೊಂಡು ಜೀವನ ನಡೆಸುತ್ತಿದ್ದ ಯುವಕನೊಬ್ಬನ ಲವ್‌ಸ್ಟೋರಿ ಹೇಳುತ್ತಿದ್ದಾರೆ ನಿರ್ದೇಶಕ ದೇವು ಕೆ ಅಂಬಿಗ. ಸಂಪೂರ್ಣ ಉತ್ತರ ಕರ್ನಾಟಕ ಸೊಗಡಿನ ಭಾಷೆ, ಕತೆಯನ್ನು ಹೊಂದಿರುವ ಚಿತ್ರದಲ್ಲಿ ನಿರ್ದೇಶಕ ದೇವು ಅವರೇ ನಾಯಕನಾಗಿಯೂ ನಟಿಸಿದ್ದಾರೆ. ಬಿಜಾಪುರದ ದೀಕ್ಷಾ ಭಿಸೆ ನಾಯಕಿ. ರೋಹನ್ ಎಸ್ ದೇಸಾಯಿ ಅವರು ಸಂಗೀತದ ಜೊತೆಗೆ ಛಾಯಾಗ್ರಹಣ, ಡಿಐ ಕೆಲಸವನ್ನೂ ಸಹ ನಿರ್ವಹಿಸಿದ್ದಾರೆ. ಕಿರುಚಿತ್ರಗಳನ್ನು ನಿರ್ದೇಶಿಸಿರುವ ದೇವು ಅವರಿಗೆ ಇದು ಬೆಳ್ಳಿತೆರೆಯ ಚೊಚ್ಚಲ ಪ್ರಯೋಗ. ಕಿರುಚಿತ್ರಕ್ಕೆಂದು ಬರೆದ ‘ಸೈಕಲ್ ಸವಾರಿ’ ಕತೆ ಇದೀಗ ಸಿನಿಮಾ ಆಗಿದೆ. ಈ ಬಗ್ಗೆ ಮಾತನಾಡುವ ದೇವು, ‘ಎರಡು ಪಾತ್ರಗಳನ್ನಿಟ್ಟುಕೊಂಡು ಕಿರುಚಿತ್ರವೊಂದನ್ನು ನಿರ್ದೇಶನ ಮಾಡಬೇಕೆಂದು ಈ ಕತೆ ಬರೆದಿದ್ದೆ. ನಂತರ ಅದು ಸಿನಿಮಾ ಆಯಿತು. ಅಗ ನಮ್ಮಲ್ಲಿದ್ದುದು 5 ಲಕ್ಷ ಮಾತ್ರ. ನಂತರ ಸುರೇಶ್ ಶಿವೂರು ನಮ್ಮ ಸಹಾಯಕ್ಕೆ ನಿಂತರು. ಕಡ್ಡಿಹೋಗಿ ದೊಡ್ಡ ಗುಡ್ಡವೇ ಆಯ್ತು!’ ಎನ್ನುತ್ತಾರೆ.
ಹೀರೋ ದೇವು ಅವರು ಚಿತ್ರದಲ್ಲಿ ಬಾಂಬೆ ಮಿಠಾಯಿ ಮಾರುವ ಬಸು ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ನಾಯಕಿ ಶ್ರೀಮಂತರ ಮನೆಯ ಹುಡುಗಿ. ಮೂಲತಃ ಭರತನಾಟ್ಯ ಕಲಾವಿದೆಯಾದ ದೀಕ್ಷಾ ಬೀಸೆ ಅವರಿಗೇ ಇದು ಮೊದಲ ಸಿನಿಮಾ. ಚಿತ್ರದ ಸಂಗೀತ ಮತ್ತು ಛಾಯಾಗ್ರಹಣ ನಿಭಾಯಿಸಿರುವ ರೋಹನ್ ದೇಸಾಯಿ ಮಾತನಾಡಿ, ‘ಕಡಿಮೆ ತಂತ್ರಜ್ಞರು ಕೆಲಸ ಮಾಡಿರುವ ಚಿತ್ರವಿದು. ಅಕ್ಷನ್, ಮಾಸ್, ಕಾಮಿಡಿ, ಸಸ್ಪೆನ್ಸ್, ಲವ್ ಎಲ್ಲಾ ಥರದ ಅಂಶಗಳು ಚಿತ್ರದಲ್ಲಿವೆ’ ಎನ್ನುತ್ತಾರೆ. ಶಿವಾಜಿ, ಗೀತಾ ರಾಘವೇಂದ್ರ, ಕಾವ್ಯ ಚಿತ್ರದ ಇತರೆ ಪ್ರಮುಖ ಕಲಾವಿದರು. ಬಹುತೇಕ ಉತ್ತರ ಕರ್ನಾಟಕ ಭಾಗದಲ್ಲೇ ಚಿತ್ರೀಕರಿಸಿರುವ ಈ ಚಿತ್ರದ ಕತೆ, ಚಿತ್ರಕಥೆ, ಸಂಭಾಷಣೆಯನ್ನೂ ನಿರ್ದೇಶಕ ದೇವು ಅವರೇ ಬರೆದಿದ್ದಾರೆ. ಕಲಾರಂಗ್ ಫಿಲಂ ಸ್ಟುಡಿಯೋ ಅಂಡ್ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ಸುರೇಶ್ ಶಿವೂರ ಮತ್ತು ಲೋಕೇಶ್ ಸವದಿ ಚಿತ್ರ ನಿರ್ಮಿಸಿದ್ದಾರೆ.