ಶಿವಗಣೇಶ್‌ ನಿರ್ದೇಶನದಲ್ಲಿ ಆರ್ಯನ್‌ ಸಂತೋಷ್‌ ಮತ್ತು ಅರ್ಚನಾ ಕೊಟ್ಟಿಗೆ ಅಭಿನಯದ ‘ಡಿಯರ್‌ ಸತ್ಯ’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ನಟ ಶ್ರೀಮುರಳಿ ಅವರು ಟ್ರೈಲರ್‌ ಬಿಡುಗಡೆಗೊಳಿಸಿ ತಮ್ಮ ಗೆಳೆಯ ಆರ್ಯನ್‌ ಸಂತೋಷ್‌ ಸಿನಿಮಾಗೆ ಶುಭ ಹಾರೈಸಿದರು.

“ಸಂತೋಷ್ ನನಗೆ ತುಂಬಾ ವರ್ಷಗಳ ಸ್ನೇಹಿತ. ಈಗ ಅವರು ಆರ್ಯನ್ ಸಂತೋಷ್ ಆಗಿದ್ದಾರೆ. ಟ್ರೈಲರ್‌ ತುಂಬಾ ಚೆನ್ನಾಗಿ ‌ಮೂಡಿಬಂದಿದೆ. ಈ ಚಿತ್ರದಲ್ಲಿ
ಉಪ್ಪಿ ಸರ್ ಹಾಡಿರುವ ಹಾಡು ನನಗಿಷ್ಟ. ಎಲ್ಲಕ್ಕಿಂತ ಹೆಚ್ಚಾಗಿ ಈ ಸಿನಿಮಾ ನನ್ನ ಸ್ನೇಹಿತ ಸಂತೋಷ್‌ಗೆ ಯಶಸ್ಸು ತಂದು ಕೊಡಲಿ” ಎಂದು ಹಾರೈಸಿದರು ಶ್ರೀಮುರಳಿ. ಅವರಿಂದ ‘ಡಿಯರ್‌ ಸತ್ಯ’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಯ್ತು. ಪರ್ಪಲ್ ರಾಕ್ ಎಂಟರ್ ಟೈನರ್ ಹಾಗೂ ವಿಂಟರ್ ಬ್ರಿಡ್ಜ್ ಸ್ಟುಡಿಯೋಸ್ ಬ್ಯಾನರ್‌ನಡಿ ಗಣೇಶ್ ಪಾಪಣ್ಣ, ಯತೀಶ್ ವೆಂಕಟೇಶ್, ಶ್ರೀನಿವಾಸ್ ಶ್ರೀಭಕ್ತ ಹಾಗೂ ಅಜಯ್ ಅಪರೂಪ ಈ ಸಿನಿಮಾ ನಿರ್ಮಿಸಿದ್ದಾರೆ.

ಹೀರೋ ಆರ್ಯನ್‌ ಸಂತೋಷ್‌ ಮಾತನಾಡಿ, “ಈ ಚಿತ್ರವನ್ನು ಮೊದಲು ತಮಿಳಿನಲ್ಲಿ ಮಾಡಬೇಕೆಂದುಕೊಂಡಿದ್ದೆವು. ಚೆನ್ನೈ ನ ಹೈಕೋರ್ಟ್ ಎದುರು ಪ್ಯಾರಿಸ್ ಕಾರ್ನರ್ ಎಂಬ ಸ್ಥಳವಿದೆ. ಆ ಜಾಗವೇ ನನಗೆ ಕತೆ ರಚಿಸಲು ಸ್ಪೂರ್ತಿ. ಇದೊಂದು ನೈಜಘಟನೆ ಆಧಾರಿತ ಚಿತ್ರ. ಕಥೆ ಸಿದ್ದಮಾಡಿಕೊಂಡ ಮೇಲೆ ನಿರ್ಮಾಪಕರ ಹುಡುಕಾಟದಲ್ಲಿ ಸಾಕಷ್ಟು ವರ್ಷ ಕಳೆದಿದ್ದೇನೆ.‌ ನಂತರ ಗಣೇಶ್ ಪಾಪಣ್ಣ ಅವರು ಫೋನ್ ಮಾಡಿ ಕತೆ ಕೇಳಿ ಸ್ನೇಹಿತರೊಡಗೂಡಿ ಸಿನಿಮಾ ನಿರ್ಮಾಣಕ್ಕೆ ಮುಂದಾದರು. ಚಿತ್ರೀಕರಣ ಮುಗಿದ ತಕ್ಷಣ ಕೋವಿಡ್ ಶುರುವಾಯಿತು. ಎಲ್ಲಾ ಮುಗಿದು , ಈಗ ನಮ್ಮ ಚಿತ್ರ ಮಾರ್ಚ್ ಹತ್ತರಂದು ತೆರೆಗೆ ಬರುತ್ತಿದೆ” ಎಂದ ಅವರು ಟ್ರೈಲರ್‌ ಬಿಡುಗಡೆಗೊಳಿಸಿದ ನಟ ಶ್ರೀಮುರಳಿ ಅವರಿಗೆ ಧನ್ಯವಾದ ಅರ್ಪಿಸಿದರು. ಚಿತ್ರದ ನಾಯಕಿ ಅರ್ಚನಾ ಕೊಟ್ಟಿಗೆ, ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್, ಛಾಯಾಗ್ರಾಹಕ ವಿನೋದ್ ಭಾರತಿ ಸಿನಿಮಾ ಕುರಿತಾಗಿ ತಮ್ಮ ಅನುಭವ, ಅಭಿಪ್ರಾಯ ಹಂಚಿಕೊಂಡರು.

LEAVE A REPLY

Connect with

Please enter your comment!
Please enter your name here