ಕಳೆದ ವರ್ಷ ಇದೇ ಹೊತ್ತಿನಲ್ಲಿ ತೆರೆಕಂಡಿದ್ದ ‘ಡೇರ್ ಡೆವಿಲ್ ಮುಸ್ತಾಫಾ’ ಸಿನಿಮಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಸಣ್ಣ ಕತೆಯನ್ನು ಆಧರಿಸಿದ ಪ್ರಯೋತವಿದು. ಸಿನಿಮಾ ತೆರೆಕಂಡ ವರ್ಷದ ನೆನಪಿನಲ್ಲಿ ನಿರ್ದೇಶಕ ಶಶಾಂಕ್ ಸೋಗಾಲ್ ಪುಸ್ತಕವೊಂದನ್ನು ಹೊರತಂದಿದ್ದಾರೆ.
ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಸಣ್ಣ ಕತೆಯನ್ನು ಆಧರಿಸಿದ ‘ಡೇರ್ ಡೆವಿಲ್ ಮುಸ್ತಾಫಾ’ ಸಿನಿಮಾ ಕಳೆದ ವರ್ಷ ಇದೇ ಹೊತ್ತಿನಲ್ಲಿ ತೆರೆಕಂಡಿತ್ತು. ಭಾವೈಕ್ಯತೆಯನ್ನು ಸಾರುವ ಈ ಕತೆಯನ್ನು ಶಶಾಂಕ್ ಸೋಗಾಲ್ ಆಕರ್ಷಕವಾಗಿ ತೆರೆಗೆ ಅಳವಡಿಸಿದ್ದರು. ಇದೀಗ ಸಿನಿಮಾಗೆ ವರ್ಷ ತುಂಬಿದೆ. ಈ ನೆನಪಿಗಾಗಿ ನಿರ್ದೇಶಕ ಶಶಾಂಕ್ ಸೋಗಾಲ್ ಸಿನಿಮಾದ ಚಿತ್ರಕಥೆ ಹಾಗೂ ಆಯ್ದ ವಿಮರ್ಶೆಗಳನ್ನು ಪುಸ್ತಕ ರೂಪದಲ್ಲಿ ತಂದಿದ್ದಾರೆ. ಮೊನ್ನೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು. ನಿರ್ದೇಶಕಿ, ನಟಿ ಸಿಂಧು ಎಸ್ ಮೂರ್ತಿ, ನಿರ್ದೇಶಕರಾದ ಅನೂಪ್ ಭಂಡಾರಿ, ನಿತಿನ್ ಕೃಷ್ಣಮೂರ್ತಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಸಿನಿಮಾವನ್ನು ಅಭ್ಯಸಿಸುವ ಕೃತಿಗಳು ಕನ್ನಡದಲ್ಲಿ ಕಡಿಮೆ ಎಂದೇ ಹೇಳಬಹುದು. ಈ ಪಟ್ಟಿಗೆ ‘ಡೇರ್ ಡೆವಿಲ್ ಮುಸ್ತಾಫಾ’ ಕೃತಿ ಸೇರ್ಪಡೆಯಾಗಿದೆ. ಈ ಪುಸ್ತಕದಲ್ಲಿ ಕಾಲೇಜು ದಿನಗಳನ್ನು ಮೆಲುಕು ಹಾಕುವಂತಹ ಸನ್ನಿವೇಶ, ಸಹಪಾಠಿಗಳ ನಡುವೆ ನಡೆಯುವ ಸಣ್ಣ ಪುಟ್ಟ ಜಗಳ, ಹಾಗು ಧರ್ಮಕ್ಕೂ ಮಿಗಿಲಾದದ್ದು ಫ್ರೆಂಡ್ ಶಿಪ್ ಎಂಬ ಸಾರಾಂಶವನ್ನು ಸಮಾಜಕ್ಕೆ ಸಾರುವಂತಹ ವಿಷಯದ ಜೊತೆಗೆ ಸಿನಿಮಾ ಆಸಕ್ತರಿಗೆ ಪಠ್ಯವಾಗಬಲ್ಲ ವಸ್ತು ಇದೆ. ಒಂದು ಸಣ್ಣ ಕತೆಗೆ ಹೇಗೆ ಸ್ಕ್ರೀನ್ ಪ್ಲೇ ರೂಪ ಕೊಡಲಾಯ್ತು? ದೃಶ್ಯರೂಪಕ್ಕೆ ಇಳಿಸಿದ್ದು ಹೇಗೆ? ಸಿನಿಮಾ ಆಗುವಾಗಿನ ಸವಾಲುಗಳೇನು? ಎನ್ನುವ ಹಲವು ವಿಷಯಗಳು ಇಲ್ಲಿ ಪ್ರಸ್ತಾಪವಾಗಿವೆ. ಸಿನಿಮಾದ ಸೂಕ್ಷ್ಮಗಳ ಬಗ್ಗೆ ಅರಿವು ಮೂಡಿಸಬಲ್ಲ ಇಂತಹ ಕೃತಿಗಳ ಅವಶ್ಯಕತೆ ಇದೆ ಎಂದು ಕಾರ್ಯಕ್ರಮದಲ್ಲಿದ್ದ ಅತಿಥಿಗಳು ಅಭಿಪ್ರಾಯಪಟ್ಟರು.