ಪ್ಯಾರಿಸ್‌ ವಸ್ತುಸಂಗ್ರಹಾಲಯದಿಂದ ಬೆನಿನ್‌ ಗಣರಾಜ್ಯಕ್ಕೆ ಪಯಣಿಸುವ ಕಲಾಕೃತಿಗಳ ಕುರಿತ ಸಾಕ್ಷ್ಯಚಿತ್ರ ‘ದಹೋಮಿ’. ನಿರ್ದೇಶಕಿ ಮಾಟಿ ಡಿಯಪ್, ಕಲಾಕೃತಿಗಳು ತಮ್ಮ ದೇಶಕ್ಕೆ ಮರಳುವ ಮತ್ತು ಅವು ಬೆನಿನ್ ಪ್ರಜೆಗಳಲ್ಲಿ ಸೃಸ್ಟಿಸುವ ಸಂಚಲನವನ್ನು ಆಪ್ತವಾಗಿ ಕಟ್ಟಿಕೊಡುತ್ತಾರೆ. ಈ ಸಾಕ್ಷ್ಯಚಿತ್ರ ‘MUBI’ಯಲ್ಲಿ ಸ್ಟ್ರೀಮ್‌ ಆಗುತ್ತಿದೆ.

ನವೆಂಬರ್ 9, 2021. ಈ ದಿನ 26 ಬೆಲೆಬಾಳುವ ಕಲಾಕೃತಿಗಳು ಅಂದಿನ, ಅಂದರೆ 19ನೇ ಶತಮಾನದ ದಹೋಮಿ ಸಂಸ್ಥಾನಕ್ಕೆ (ಇಂದಿನ ಬೆನಿನ್ ಗಣರಾಜ್ಯ) ಪ್ಯಾರಿಸ್ಸಿನ ವಸ್ತುಸಂಗ್ರಹಾಲಯದಿಂದ ಪಯಣಿಸಿದವು. ಸಾವಿರಾರು (ಸುಮಾರು ಏಳು ಸಾವಿರ) ಕಲಾಕೃತಿಗಳನ್ನು ದಹೋಮಿ ಸಂಸ್ಥಾನದೊಂದಿಗಿನ 1892ರ ಯುದ್ಧದಲ್ಲಿ ಫ್ರೆಂಚರು ದೋಚಿದ್ದರು. ಯುದ್ಧದಲ್ಲಿ ಸೋತ ಧೀರ ದೊರೆ ಬೆಹಂಜಿನ್‌ನನ್ನು ಅಲ್ಜೇರಿಯ ದೇಶಕ್ಕೆ ಫ್ರೆಂಚರು ದೂಡಿ ತಮ್ಮ ವಸಾಹತನ್ನು ವಿಸ್ತರಿಸಿಕೊಂಡರು. ದೊರೆ ಬೆಹಂಜಿನ್‌ಗೂ ಮುಂಚೆ ದೊರೆ ಗೆಜೊ ಆಳ್ವಿಕೆಯಿತ್ತು (1818-58). ಓಯೋ ಸಂಸ್ಥಾನದ ಮೇಲೆ ಯುದ್ಧಮಾಡಿ ದಹೋಮಿ ಸಂಸ್ಥಾನದ ಸ್ವಾಯತ್ತತೆಯನ್ನು ಕಾಯ್ದು ದೇಶವನ್ನು ಮುನ್ನೆಡೆಸಿದ. ಒಂದು ಬಗೆಯಲ್ಲಿ ದೊರೆ ಗೆಜೊ ದೇಶದ ಆರ್ಥಿಕ ವ್ಯವಸ್ಥೆಗೆ ಸಮಗ್ರ ಬದಲಾವಣೆ ತಂದವನು. ಗುಲಾಮರನ್ನು ಮಾರಾಟ ಮಾಡುವ ವಹಿವಾಟನ್ನು ಬಿಟ್ಟು, ತಾಳೆ ಎಣ್ಣೆಯನ್ನು ರಫ್ತು ಮಾಡುವ ವ್ಯಾಪಾರಕ್ಕೆ ಕೈಹಚ್ಚಿದ. ಹಾಗಾಗಿ ಇಂದಿಗೂ ಬೆನಿನ್ ಜನತೆ ಅವನನ್ನು ಸ್ಮರಿಸಿಕೊಳ್ಳುತ್ತಾರೆ. ಇದು ಐತಿಹಾಸಿಕ ಹಿನ್ನೆಲೆ.

ನಿರ್ದೇಶಕಿ ಮಾಟಿ ಡಿಯಪ್ ಅವರು ಕಲಾಕೃತಿಗಳು ತಮ್ಮ ದೇಶಕ್ಕೆ ಮರಳುವ ಮತ್ತು ಅವು ಬೆನಿನ್ ಪ್ರಜೆಗಳಲ್ಲಿ ಸೃಸ್ಟಿಸುವ ಸಂಚಲನವನ್ನು ಸಾಕ್ಷ್ಯಚಿತ್ರವಾಗಿ ಕಟ್ಟಿಕೊಡುತ್ತಾರೆ. ಮರದಲ್ಲಿ ಕೆತ್ತಿದ ದೊರೆ ಗಿಜೋನ ಮೂರ್ತಿಯ/ಕಲಾಕೃತಿಗಳ ಸ್ವಗತಗಳೊಂದಿಗೆ ತನ್ನ ವ್ಯಾಖ್ಯೆಯನ್ನು ದಾಟಿಸುತ್ತಾ ಪಯಣದ ಚಿತ್ರಣಕ್ಕೆ ಮತ್ತೊಂದು ಆಯಮ ಕಲ್ಪಿಸುತ್ತಾರೆ. ದೊರೆ ಗೆಜೋನಾ ಸ್ವಗತವು ನಮ್ಮೊಂದಿಗೆ ತನ್ನೆಲ್ಲಾ ತಳಮಳಗಳನ್ನು, ಕನಸುಗಳನ್ನು ಹಂಚಿಕೊಳ್ಳುತ್ತಾ ಚಿತ್ರ ನೋಡುವ ಸಹೃದಯರಿಗೆ ಮುಖಾಮುಖಿಯಾಗುತ್ತದೆ. ಈ ಕಥನಕ್ರಮದ ತಂತ್ರಗಾರಿಕೆ ಸಾಕ್ಷ್ಯಚಿತ್ರದ ಒಟ್ಟಾರೆ ಸಂವಿಧಾನಕ್ಕೆ ಧಕ್ಕೆ ತಾರದೇ, ಬದಲಾಗಿ ಅರ್ಥವ್ಯಾಪ್ತಿಯನ್ನು ಸಮಷ್ಟಿಯಾಗಿ ಕಟ್ಟಿಕೊಡುತ್ತಾ, ಇಡೀ ಘಟನೆ ಒಂದು ದೃಶ್ಯರೂಪದ ವರದಿಯಾಗದೆ ಸಂವಹನದ ಸೇತುವೆಯಂತೆ ತೆರೆದುಕೊಳ್ಳುವ ಪರಿ ಅನನ್ಯ. ಘಟನಾವಳಿಗಳನ್ನು ಚಿತ್ರಿಸುವ ಕ್ರಮದಲ್ಲೂ ಹಾಗೂ ದೃಶ್ಯಗಳನ್ನು ಸಂಕಲಿಸುವ ಜಾಣ್ಮೆಯಲ್ಲೂ ನಿರ್ಭಾವ ತಾಳುವ ನಿರ್ದೇಶಕಿ, ಶಬ್ಧ, ಸ್ವಗತ ಸಂಭಾಷಣೆ ಮತ್ತು ಧ್ವನಿ ಸಂಯೋಜನೆಯಲ್ಲಿ, ಮೇರೆ ಮೀರಿ ಲೀಲಾಜಾಲವಾಗಿ ನಮ್ಮನ್ನು ಆವರಿಸಿಕೊಳ್ಳುತ್ತಾಳೆ.

ಛಾಯಾಗ್ರಾಹಕ ಜೋಸೆಫಿನ್ ತನ್ನೆಲ್ಲಾ ಜಾಣ್ಮೆಯನ್ನು ದೃಶ್ಯಸಂಯೋಜನೆಯಲ್ಲಿ ಹಿಡಿದಿಟ್ಟಿದ್ದಾನೆ. ಸಾಕ್ಷ್ಯಚಿತ್ರವನ್ನು ಚಿತ್ರೀಕರಿಸುವ ಸ್ಥಳ, ವೇಳೆ, ಒತ್ತಡಗಳ ನಡುವೆಯೂ ದೊರೆ ಗಿಜೋನ ಮೂರ್ತಿಯನ್ನು ಪೆಟ್ಟಿಗೆಯಲ್ಲಿ ಮಕಾಡೆಯಾಗಿ ಮಲಗಿಸಿ, ಅಲುಗದಂತೆ ಕಟ್ಟಿ ಮುಚ್ಚಳ ಮುಚ್ಚಿ ಮಳೆ ಹೊಡೆಯುವ ದೃಶ್ಯ, ಬಾಲಕ ಬೆನಿನ್ ನಗರದ ತಾತ್ಕಾಲಿಕ ವಸ್ತು ಸಂಗ್ರಹಾಲಯದಲ್ಲಿ ಬೆರಗಿನಿಂದ ಕಲಾಕೃತಿಗಳನ್ನು ವೀಕ್ಷಿಸುವ ದೃಶ್ಯ, ಅಂತೆಯೇ ಸಿಬ್ಬಂದಿ ಗಿಜೋನ ಮೂರ್ತಿಯ ಮುಂದೆ ನಿಂತು ಸಲ್ಲಿಸುವ ಮೌನ ಪ್ರಾರ್ಥನೆ, ಕಲಾಕೃತಿಯ ಒಳಕಿಂಡಿಯಿಂದ ಕಾಣಸಿಗುವ ವೀಕ್ಷಕರು, ಅರಸೊತ್ತಿಗೆ ಕಲಾಕೃತಿಗಳನ್ನು ಲೋಕಾರ್ಪಣೆ ಮಾಡಲು ಬರುವ ದೃಶ್ಯಗಳು, ನಗರದ ಮಾಂಟಾಜ್ ಮತ್ತು ಇತರೆ ದೃಶ್ಯಗಳು ರೂಪಕಗಳಂತೆ ಕಂಗೊಳಿಸುತ್ತವೆ.

ಇಡೀ ಚಿತ್ರ ಮುಕ್ತ ವರ್ಣ ಸಂಯೋಜನೆಯನ್ನು ಕಾಯ್ದಿಟ್ಟುಕೊಂಡಿದೆ. ಅದಕ್ಕೆ ಪೂರಕವಾಗಿ ಮಾಟಿ ಡಿಯಪ್ ಕೆಲವು ಅಲಂಕಾರಿಕ ಗಿಡಗಳ ಎಲೆಗಳ ದೃಶ್ಯ ರೂಪಕವನ್ನು ಕಟ್ಟುತ್ತಾ ಪಶ್ಚಿಮ ಆಫ್ರಿಕಾದ ಜನ ಧರಿಸುವ ಬಣ್ಣಬಣ್ಣದ ಪೋಷಾಕಿಗೆ ತಾಳೆ ಹಾಕುತ್ತಾಳೆ. ಕಥನಕ್ರಮದ ತಂತ್ರಗಾರಿಕೆಗೆ ಕಾವ್ಯಾತ್ಮಕ ಸ್ವರೂಪವನ್ನು ಸ್ವಗತ ನೀಡಿದೆ. ಉದಾಹರಣೆಗೆ, ‘ನಾನು ನನ್ನ ಕನಸುಗಳಲ್ಲೇ ಕಳೆದು ಹೋದೆ… ನಾನು ಪಯಣಿಸಿದ ಸಾಗರದ ನೀರಿನ ರುಚಿ ಇನ್ನೂ ನನ್ನ ನಾಲಿಗೆಯಲ್ಲಿದೆ… ನಾವು ಸಾವಿರಾರು ಸಂಖ್ಯೆಯಲ್ಲಿದ್ದರೂ ನಮ್ಮ ಗಾಯದ ಗುರುತು ಒಂದೇ… ಇಂದು ನನ್ನನ್ನು ನನ್ನ ದೇಶಕ್ಕೆ ಮರಳಲು ಆಯ್ಕೆ ಮಾಡಿದ್ದಾರೆ… ಆದರೆ ನನ್ನ ಹೆಸರನ್ನೇಕೆ ಕರೆಯುವುದಿಲ್ಲ. 26 ಎಂದಷ್ಟೇ ನನ್ನನ್ನು ಹೆಸರಿಸುತ್ತಾರೆ… 26 ಮನೆಗೆ ಮರಳು… ನಾನು ದೇಶ ಬಿಟ್ಟು ಬರಲಿಲ್ಲ…ಇಲ್ಲೇ ಇದ್ದೇನೆ…ನನ್ನ ಜನಗಳ ನಡುವೆ, ನಡೆಯುತ್ತಾ…’

ಕಲಾಕೃತಿಗಳು ಸ್ವದೇಶಕ್ಕೆ ಮರಳಿದ ಹಿನ್ನೆಲೆಯಲ್ಲಿ ಮಾಟಿ ಡಿಯಪ್ ಚಿತ್ರದ ಕೊನೆಗೆ ಒಂದು ಸಂವಾದವನ್ನು ಯುವ ಜನತೆಗಾಗಿ ಆಯೋಜಿಸಿದ್ದಾಳೆ. ಈ ಮುಕ್ತ ಸಂವಾದ ಪ್ರಸ್ತುತ ಆರ್ಥಿಕ, ಬೌಗೋಳಿಕ ಹಾಗೂ ರಾಜಕೀಯದ ಸ್ಥಿತಿಗತಿಗಳ ಬಗ್ಗೆ, ಯುವ ಜನತೆಯ ಆಶೋತ್ತರಗಳನ್ನು, ಬಡತನ, ದಾರಿದ್ರ್ಯದ ಕರಾಳ ಮುಖಗಳನ್ನೂ ನಿರಮ್ಮಳವಾಗಿ ದಾಟಿಸುತ್ತಾ ಪ್ರಸ್ತುತ ಘಟನೆಯ ಸಂಭ್ರಮದ ಕಾರಣಕ್ಕೆ ಉತ್ತರಗಳನ್ನು ಅನ್ವೇಷಿಸುವ ವೇದಿಕೆಯಾಗಿ ಬಳಸಿಕೊಳ್ಳುತ್ತಾಳೆ.

‘ದಹೋಮಿ’ ಸಾಕ್ಷ್ಯಚಿತ್ರ ಕೆಲವು ಕಲಾಕೃತಿಗಳನ್ನು ಮರಳಿಸುವ ಒಂದು ಸರಳ ಘಟನೆಯ ಚಿತ್ರವಾಗದೆ, ಹೊಸದೇ ಭಾಷ್ಯ ಬರೆದು spatial and temporal dimension ದಾಟಿ ಕಾಲವನ್ನು ಐತಿಹಾಸಿಕ ಹಿನ್ನೆಲೆಗೂ, ಭವಿಷ್ಯತ್ತಿನ ಮುನ್ನೆಲೆಗೂ ಹಿಗ್ಗಿಸಿ ಆಲೋಚನೆಗೆ ಹಚ್ಚುತ್ತದೆ. ಈ ಬರಹಗಾರ, ಕುತೂಹಲದಿಂದ ಆ ಕಲಾಕೃತಿಗಳ ಪಾಡೇನು, ಎಲ್ಲಿವೆ, ಎಂದುಕೊಂಡು ಅಂತರ್ಜಾಲದಲ್ಲಿ ಹುಡುಕಿದಾಗ ಸಿಕ್ಕಿದ್ದು ಅರಮನೆಯ ಉಗ್ರಾಣ! 2022ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿದ್ದ ಕಲಾಕೃತಿಗಳು ಈಗ ಅರಮನೆಯ ಉಗ್ರಾಣದಲ್ಲಿ ಸೆರೆಯಾಗಿವೆ. ಹೊಸ ವಸ್ತುಸಂಗ್ರಹಾಲಯ ಕಟ್ಟುವ ಯೋಜನೆಯನ್ನು ಪ್ರಭುತ್ವ ಮುಂದೂಡುತ್ತಲೇ ಇದೆ. Voices of treasure – ‘ನಾವು ಸಾವಿರಾರು ಸಂಖ್ಯೆಯಲ್ಲಿದ್ದರೂ ನಮ್ಮ ಗಾಯದ ಗುರುತು ಒಂದೇ… ನಾನು ದೇಶ ಬಿಟ್ಟು ಬರಲಿಲ್ಲ… ಇಲ್ಲೇ ಇದ್ದೇನೆ… ನನ್ನ ಜನಗಳ ನಡುವೆ’

LEAVE A REPLY

Connect with

Please enter your comment!
Please enter your name here