ಏಳು ಪಾತ್ರಗಳಿಗೂ ಏಳು ಮಜಲುಗಳು. ಏಳು ದೌರ್ಬಲ್ಯಗಳು. ಏಳು ಬಣ್ಣಗಳು. ಆದರೆ ಈ ಮಜಲುಗಳನ್ನು ನಿರೂಪಿಸಲು ಆಯ್ಕೆ ಮಾಡಿರುವ ಕುಂಚ ಮಾತ್ರ ಮೆಟ್ರೋ ಕುಂಚ. ಅಲ್ಟ್ರಾ ಮಾಡ್ರನ್ ಪ್ರಪಂಚದ ಚಿತ್ರಣ ನಮ್ಮ ಸಮಾಜದ ಕಥೆ ಎನಿಸುವಂತೆ ಎಲ್ಲೂ ಭಾಸವಾಗುವುದಿಲ್ಲ. ಬರೀ ಕುಡಿತ, ಸೆಕ್ಸ್, ಗೋಜಲು ಸಂಬಂಧಗಳು, ಪಾರ್ಟಿ ಕಲ್ಚರುಗಳನ್ನು ವೈಭವೀಕರಿಸುವ ವೆಬ್ ಸರಣಿಗಳ ಸಾಲಿಗೆ ಮತ್ತೊಂದು ಸೇರ್ಪಡೆ ‘ಜೀ ಕರ್ದಾ’.

ಮನಸ್ಸು ಹುಚ್ಚುಕುದುರೆ. ಲಗಾಮಿಲ್ಲದೆ ಓಡಲು ಬಿಟ್ಟರೆ ಏನಾಗಬಹುದು? ಲಗಾಮು ಹಾಕಿಸಿಕೊಳ್ಳಲು ಯಾರಿಗೂ ಇಷ್ಟವಿರಲ್ಲ. ಆದರೆ ನಮಗೆ ನಾವೇ ಲಗಾಮು ಹಾಕಿಕೊಳ್ಳಲು ಕಲಿಯದಿದ್ದರೆ ಒಂದಷ್ಟು ಪರಿಣಾಮಗಳಿಗೂ ಸಿದ್ಧವಾಗಿರಬೇಕು ಎನ್ನೋದು ಈ ಸರಣಿ ನೋಡಿದರೆ ತಿಳಿಯುತ್ತದೆ. ಏಳು ಜನ ಬಾಲ್ಯಸ್ನೇಹಿತರು. ಅರ್ಜುನ್, ರಿಷಬ್, ಶಾಹಿದ್, ಮೆಲ್ರಾಯ್, ಶೀತಲ್, ಲಾವಣ್ಯ, ಪ್ರೀತ್ ಬಾಲ್ಯದ ಹುಡುಗಾಟಿಕೆಯಲ್ಲಿ ಮೇಳವೊಂದರಲ್ಲಿ ಬಾಬಾ ಬಳಿ ಭವಿಷ್ಯ ಕೇಳಲು ಹೋಗುತ್ತಾರೆ. ಬಾಬಾ ಹೇಳಿದ ಭವಿಷ್ಯ ನಿಜವಾಗಿ 15 ವರ್ಷಗಳ ನಂತರ ತಮ್ಮನ್ನು ಹೇಗೆ ಹುಡುಕಿ ಬಂದು ಕಾಡುತ್ತದೆ ಎನ್ನುವ ಚಿತ್ರಣವೇ ‘ಜೀ ಕರ್ದಾ’. ಬಾಬಾ ಯಾವುದರ ಬಗ್ಗೆ ಎಚ್ಚರಿಸುತ್ತಾರೋ ಅವುಗಳನ್ನು ಹದಿಹರೆಯದಲ್ಲಿ ಗಂಭೀರವಾಗಿ ತೆಗೆದುಕೊಳ್ಳದ ಪರಿಣಾಮ ಈ ಏಳು ಸ್ನೇಹಿತರು ತಮ್ಮ ಮೂವತ್ತರಲ್ಲಿ ಒಂದಷ್ಟು ಸಂಧಿಗ್ಧಗಳಲ್ಲಿ ನಿಲ್ಲುವ ಮೂಲಕ ಸರಣಿ ಮುಕ್ತಾಯವಾಗುತ್ತದೆ.

15 ವರ್ಷಗಳ ಈ ಜೀವನಪಯಣದಲ್ಲಿ ಯಾರ ಯಾರ ಜೀವನದಲ್ಲಿ ಅವರುಗಳ ನಡುವೆ ಏನಾಗುತ್ತದೆ ಎನ್ನುವುದನ್ನು ಒಂದು ಮಾಡ್ರನ್ ಹಾಗೂ ಮೆಟ್ರೋ ಟಚ್ ಕೊಟ್ಟು ನಿರೂಪಿಸುತ್ತಾ ಹೋಗುತ್ತಾರೆ. ಒಂದೊಂದು ಪಾತ್ರಕ್ಕೂ ಒಂದೊಂದು ಶಕ್ತಿ ಮತ್ತು ಒಂದೊಂದು ದೌರ್ಬಲ್ಯ. ಅವರ ದೌರ್ಬಲ್ಯಗಳೇ ಅವರ ಶತ್ರುಗಳಾಗಿ ಅವರಿಗೆ ತೊಂದರೆ ನೀಡಬಹುದು ಎಂಬ ಬಾಬಾನ ನುಡಿಯಂತೆಯೇ ನಡೆಯುತ್ತದೆ.

ಪ್ರೇಮ ವಿವಾಹವಾದರೂ ಕೂಡುಕುಟುಂಬದಲ್ಲಿ ಇಕ್ಕಟ್ಟು ಜಾಗದಲ್ಲಿ ಹೊಂದಿಕೊಂಡು ಸಂಸಾರ ನಡೆಸಲು ಹೆಣಗಾಡುವ ಶೀತಲ್‌ಗೆ ತನ್ನ ಮತ್ತು ತನ್ನ ಗಂಡ ಇಬ್ಬರೇ ಸಣ್ಣ ಗೂಡು ಕಟ್ಟಿಕೊಳ್ಳುವ ಆಸೆ. ಜೊತೆಗೆ ಫ್ಯಾಷನ್ ಡಿಸೈನರ್ ಆಗುವ ತನ್ನ ಕನಸನ್ನು ಗಂಡನ ಮನೆಯ ಜಾಯಿಂಟ್ ಫ್ಯಾಮಿಲಿ ವ್ಯವಸ್ಥೆಯ ಇಕ್ಕಟ್ಟು ಸ್ಥಳ ಉಸಿರುಗಟ್ಟಿಸುತ್ತಾ ಇರುತ್ತದೆ. ಏಕಾಂತದ ಕ್ಷಣಗಳಿಗೆ ದಂಪತಿ ಪರದಾಡುವ ಸನ್ನಿವೇಶಗಳು ಎದುರಾಗುತ್ತಿರುತ್ತವೆ.

ಇನ್ನು ವೃತ್ತಿಯಲ್ಲಿ ಯಶಸ್ವಿಯಾಗಿದ್ದರೂ ತನ್ನ ಮತ್ತು ರಿಷಭ್‌ನ 15 ವರ್ಷಗಳ ಪ್ರೇಮವನ್ನು ಅರ್ಥಮಾಡಿಕೊಳ್ಳಲು ಹೆಣಗುವ ಲಾವಣ್ಯ ಮದುವೆ ಬೇಕೋ ಬೇಡವೋ ಎಂಬ ಗೊಂದಲದಲ್ಲೇ ನಲುಗುತ್ತಿರುತ್ತಾಳೆ. ಪ್ರೀತಿಯ ಬೆನ್ನತ್ತಿ ಹೋಗಿ ಅದು ಸಿಗದೇ ನಿರಾಶಳಾಗುವ ಪ್ರೀತ್ ಪ್ರಯತ್ನ ಮಾಡಿ ಮಾಡಿ ಹತಾಶೆಗೆ ಹೋಗಿರುತ್ತಾಳೆ. ತನ್ನ ಬಡತನದಿಂದ, ಕೆಟ್ಟ ಬಾಲ್ಯದ ನೆರಳಿನಿಂದ ಕೀಳರಿಮೆಗೆ ಸಿಕ್ಕು ಅದರಿಂದ ಹೊರಬರಲು ಹೋರಾಡುವ ಶಾಹಿದ್ ಗೆಳೆಯರ ನಡುವೆ ತನ್ನ ಐಡೆಂಟಿಟಿ ಹುಡುಕುತ್ತಾ ತನ್ನಲ್ಲೇ ಪಾತಾಳಕ್ಕೆ ಇಳಿಯುತ್ತಿರುತ್ತಾನೆ. ಖ್ಯಾತಿಯ ಉತ್ತುಂಗದಲ್ಲಿ ಇದ್ದರೂ ತಂದೆ ಯಾರು ಎಂದು ತಿಳಿಯದೇ ಒದ್ದಾಡುವ ಅರ್ಜುನ್ ತನ್ನ frustrationನಿಂದ ಹೊರಬರಲು ಒದ್ದಾಡುತ್ತಿರುತ್ತಾನೆ.ತನ್ನ ಜೊತೆಗಾರನ ಭಾವನಾತ್ಮಕ ಕಪಿಮುಷ್ಟಿಯಲ್ಲಿ ಸಿಕ್ಕು ಅವನಿಂದ ಬಿಡುಗಡೆ ಪಡೆಯಲು ಹವಣಿಸುವ ಅಸಹಾಯಕ ಪ್ರೇಮಿ ಮೆಲ್ ರಾಯ್ ಸಲಿಂಗ ಸಂಬಂಧಗಳ toxic ಎಮೋಷನಲ್ abuse ನ ಮಜಲುಗಳನ್ನು ಅನುಭವಿಸುತ್ತಾನೆ, ಲಾವಣ್ಯಳನ್ನು ಪೂರ್ತಿಯಾಗಿ ನಂಬಿ ಮೋಸಹೋಗುವ ರಿಷಬ್ ತನ್ನ ಮುಗ್ಧತೆಗೆ ತಾನೇ ಬಲಿಯಾಗುತ್ತಾನೆ.

ಹೀಗೆ ಏಳು ಪಾತ್ರಗಳಿಗೂ ಏಳು ಮಜಲುಗಳು. ಏಳು ದೌರ್ಬಲ್ಯಗಳು. ಏಳು ಬಣ್ಣಗಳು. ಆದರೆ ಈ ಮಜಲುಗಳನ್ನು ನಿರೂಪಿಸಲು ಆಯ್ಕೆ ಮಾಡಿರುವ ಕುಂಚ ಮಾತ್ರ ಮೆಟ್ರೋ ಕುಂಚ. ಅಲ್ಟ್ರಾ ಮಾಡ್ರನ್ ಪ್ರಪಂಚದ ಚಿತ್ರಣ ನಮ್ಮ ಸಮಾಜದ ಕಥೆ ಎನಿಸುವಂತೆ ಎಲ್ಲೂ ಭಾಸವಾಗುವುದಿಲ್ಲ. ಕಲಿಯುವ ವಯಸ್ಸಿನ 13 – 14ರ ಎಳೆಯ ಹೈಸ್ಕೂಲು ಮಕ್ಕಳ ಪ್ರೇಮಪ್ರಸಂಗಗಳನ್ನು ಅವಶ್ಯಕತೆಗಿಂತ ವೈಭವೀಕರಿಸಿ ತೋರಿಸಿ ಏನು ಸಂದೇಶ ಕೊಡಲು ಹೊರಟಿದ್ದಾರೆ ತಿಳಿಯುವುದಿಲ್ಲ. ಸ್ವೇಚ್ಚೆಯ ಪರಮಾವಧಿಗೆ ಬಿದ್ದ ಲಾವಣ್ಯಳ ತಾಯಿಯ ಪಾತ್ರ ಸುಮಾರು ಅಮೇರಿಕನ್ ಡ್ರಾಮಾಗಳ ಯಥಾವತ್ತು ಎನಿಸಿದ್ದು ಹೌದು. ಭಾರತೀಯ ಮದುವೆಗಳ ಸಂಗೀತ್ ಕಾರ್ಯಕ್ರಮದಲ್ಲಿ ಪೋಲ್ ಡ್ಯಾನ್ಸ್ ಇಡಿಸಿದ್ದು, ಮದುಮಗಳ ತಾಯಿಯೇ ಪೋಲ್ ಡ್ಯಾನ್ಸ್ ಮಾಡಲು ಹೋಗಿದ್ದು, ಹುಡುಗನ ಮನೆಯವರು ಅದಕ್ಕೆ ಅಸಮಾಧಾನ ವ್ಯಕ್ತಪಡಿಸಿದಾಗ ಹುಡುಗಿ ಅದನ್ನು ಸಮರ್ಥಿಸಿದ್ದು ಎಲ್ಲವೂ ಬಹಳ ಅತಿಯಾಯಿತು. ಮಹಿಳಾವಾದ ದಿಕ್ಕುತಪ್ಪುತ್ತಿದೆ ಎಂದು ದಿನೇ ದಿನೇ ಬಹಳ ತೀವ್ರವಾಗಿ ಅನ್ನಿಸುವುದು ಇಂಥ ಆಭಾಸಗಳಿಂದಲೇ. ಬರೀ ಕುಡಿತ, ಸೆಕ್ಸ್, ಗೋಜಲು ಸಂಬಂಧಗಳು, ಪಾರ್ಟಿ ಕಲ್ಚರುಗಳನ್ನು ವೈಭವೀಕರಿಸುವ ವೆಬ್ ಸರಣಿಗಳ ಸಾಲಿಗೆ ಮತ್ತೊಂದು ಸೇರ್ಪಡೆ ಈ ‘ಜೀ ಕರ್ದಾ’.

ಎಲ್ಲ ಪಾತ್ರಗಳಿಗೂ ಹೋಲಿಸಿದರೆ ತುಸು matured ಆಗಿ ಕೊನೆಯಲ್ಲಿ ಮನಸ್ಸಲ್ಲಿ ನಿಲ್ಲೋದು ಶಾಹಿದ್ ಪಾತ್ರ ಮಾತ್ರ. ಆ ಪಾತ್ರವನ್ನು ಸರಿಯಾಗಿ ಬೆಳೆಸಿದರೆ ಎರಡನೇ ಸರಣಿ ಸ್ವಲ್ಪ ಸಹ್ಯವಾಗಬಹುದು ಮತ್ತು ಆ ಪಾತ್ರಕ್ಕೆ ನ್ಯಾಯ ದೊರಕಿದಂತೆಯೂ ಆಗುತ್ತದೆ.

Previous articleಚಿತ್ರನಿರ್ದೇಶನಕ್ಕೆ ಡ್ಯಾನ್ಸ್‌ ಕೊರಿಯೋಗ್ರಾಫರ್‌ ಭೂಷಣ್‌ | ‘ಫೋರ್ಸ್‌’ ವೀಡಿಯೋ ಬಿಡುಗಡೆ
Next article‘EXTRA – Ordinary Man’ ಫಸ್‌ಲುಕ್‌ ಪೋಸ್ಟರ್‌ | ನಿತಿನ್‌ ನಟನೆಯ ನೂತನ ಸಿನಿಮಾ

LEAVE A REPLY

Connect with

Please enter your comment!
Please enter your name here