‘ರಥಾವರ’ ಖ್ಯಾತಿಯ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ನೂತನ ಸಿನಿಮಾ ‘ಚೌಕಿದಾರ್’ ನಾಯಕಿಯಾಗಿ ಧನ್ಯ ರಾಮಕುಮಾರ್ ಆಯ್ಕೆಯಾಗಿದ್ದಾರೆ. ಪೃಥ್ವಿ ಅಂಬಾರ್ ಹೀರೋ ಆಗಿ ನಟಿಸುತ್ತಿರುವ ಈ ಸಿನಿಮಾ ಕನ್ನಡ ಮಾತ್ರವಲ್ಲದೆ ಇತರೆ ಭಾಷೆಗಳಲ್ಲೂ ತೆರೆಕಾಣಲಿದೆ.
ಪೃಥ್ವಿ ಅಂಬಾರ್ ನಟನೆಯ ‘ಚೌಕಿದಾರ್’ ಸಿನಿಮಾದ ನಾಯಕಿಯಾಗಿ ಧನ್ಯ ರಾಮಕುಮಾರ್ ಆಯ್ಕೆಯಾಗಿದ್ದಾರೆ. ಮೊನ್ನೆಯಷ್ಟೇ ಚಿತ್ರದ ಪ್ರಮುಖ ಪಾತ್ರದಲ್ಲಿ ಬಹುಭಾಷಾ ನಟ ಸಾಯಿಕುಮಾರ್ ನಟಿಸುವ ಸುದ್ದಿಯನ್ನು ಚಿತ್ರತಂಡ ಹೇಳಿಕೊಂಡಿತ್ತು. ಇದೀಗ ನಾಯಕಿಯ ಪ್ರವೇಶವಾಗಿದೆ. ‘ನಿನ್ನ ಸನಿಹಕೆ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಯವಾಗಿದ್ದ ಧನ್ಯ ಇತ್ತೀಚೆಗಷ್ಟೇ ತೆರೆಕಂಡ ‘ಜಡ್ಜ್‌ಮೆಂಟ್’ ಚಿತ್ರದಲ್ಲಿ ನಟಿಸಿದ್ದರು. ಸದ್ಯ ಅವರೀಗ ತಮ್ಮ ‘ಕಾಲಾ ಪತ್ಥರ್’ ಸಿನಿಮಾದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ‘ಚೌಕಿದಾರ್’ ಬಹುಭಾಷೆಗಳಲ್ಲಿ ತೆರೆಕಾಣಲಿದೆ. ‘ಈವರೆಗೆ ಲವರ್ ಬಾಯ್ ಆಗಿ ಕಾಣಿಸಿಕೊಂಡಿರುವ ಪೃಥ್ವಿ ಅಂಬಾರ್ ಈ ಚಿತ್ರದಲ್ಲಿ ಆಕ್ಷನ್ ಮಾಡಲಿದ್ದಾರೆ. ಹಾಗೆಂದು ಇದು ಕಂಪ್ಲೀಟ್ ಆಕ್ಷನ್ ಸಿನಿಮಾವಲ್ಲ. ಪಕ್ಕ ಫ್ಯಾಮಿಲಿ ಎಂಟರ್‌ಟೇನರ್’ ಎನ್ನುತ್ತಾರೆ ನಿರ್ದೇಶಕರು.
ವಿದ್ಯಾ ಶೇಖರ್ ಎಂಟರ್‌ಟೇನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಡಾ ಕಲ್ಲಹಳ್ಳಿ ಚಂದ್ರಶೇಖರ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸಚಿನ್ ಬಸ್ರೂರು ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದು, ವಿ ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ ಹಾಡುಗಳಿಗೆ ಸಾಹಿತ್ಯ ಬರೆಯುತ್ತಿದ್ದಾರೆ. ಜುಲೈ ಮೂರನೇ ತಾರೀಖಿನಂದು ಬಂಡಿ ಮಹಾಕಾಳಿ ದೇಗುಲದಲ್ಲಿ ‘ಚೌಕಿದಾರ್’ ಸಿನಿಮಾದ ಮುಹೂರ್ತ ನೆರವೇರಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.