ಕನ್ನಡಕ್ಕೆ ಎರಡು ರಾಷ್ಟ್ರಪ್ರಶಸ್ತಿ ತಂದುಕೊಟ್ಟ ‘ಮಧ್ಯಂತರ’ ಕಿರುಚಿತ್ರ, ಸ್ಕ್ರೀನಿಂಗ್ ಆದೆಡೆಯೆಲ್ಲೆಲ್ಲಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಈ ಚಿತ್ರದ ನಿರ್ದೇಶಕ ದಿನೇಶ್ ಶೆಣೈ ನಿನ್ನೆ (Sep 18) ಖಾಸಗಿ ಪ್ರದರ್ಶನವೊಂದನ್ನು ಆಯೋಜಿಸಿದ್ದರು. ಚಿತ್ರ ವೀಕ್ಷಿಸಿದ ಸಿನಿಮಾರಂಗ ಹಾಗೂ ಇತರೆ ಕ್ಷೇತ್ರಗಳ ಅನೇಕರು ‘ಮಧ್ಯಂತರ’ವನ್ನು ಶ್ಲಾಘಿಸಿದರು.
‘ಮಧ್ಯಂತರ’ – ಕನ್ನಡಕ್ಕೆ ಎರಡು ರಾಷ್ಟ್ರಪ್ರಶಸ್ತಿಗಳನ್ನು ತಂದುಕೊಟ್ಟ ಕಿರುಚಿತ್ರ. ಇತ್ತೀಚಿನ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿಯಲ್ಲಿ ‘ಮಧ್ಯಂತರ’ ಎರಡು ಪ್ರಶಸ್ತಿಗಳೊಂದಿಗೆ ಕನ್ನಡಕ್ಕೆ ಗರಿ ಮೂಡಿಸಿತು. ನಿರ್ದೇಶಕ ದಿನೇಶ್ ಶೆಣೈ ‘ಅತ್ಯುತ್ತಮ ಚೊಚ್ಚಲ ನಿರ್ದೇಶನ’ಕ್ಕೆ ಪ್ರಶಸ್ತಿ ಪಡೆದರೆ, ಕಿರುಚಿತ್ರ ಸಂಕಲಿಸಿದ ಖ್ಯಾತ ಸಂಕಲನಕಾರ ಸುರೇಶ್ ಅರಸ್ ಅವರೂ ಗೌರವಕ್ಕೆ ಪಾತ್ರರಾದರು. ಇದೀಗ ಕಿರುಚಿತ್ರ ಹಲವೆಡೆ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸುತ್ತಿದೆ. ನಿರ್ದೇಶಕ ದಿನೇಶ್ ಶೆಣೈ ನಿನ್ನೆ (Sep 18) ಖಾಸಗಿ ಪ್ರದರ್ಶನವೊಂದನ್ನು ಆಯೋಜಿಸಿದ್ದರು. ಚಿತ್ರ ವೀಕ್ಷಿಸಿದ ಸಿನಿಮಾರಂಗ ಮತ್ತು ಇತರೆ ಕ್ಷೇತ್ರಗಳ ಅನೇಕರು ‘ಮಧ್ಯಂತರ’ಕ್ಕೆ ಮರುಳಾದರು.
39 ನಿಮಿಷ ಅವಧಿಯ ‘ಮಧ್ಯಂತರ’, ಸಿನಿಮಾ ವ್ಯಾಮೋಹಿ ಯುವಕರಿಬ್ಬರ ಕತೆ. ನಿರ್ದೇಶಕ ದಿನೇಶ್ ಶೆಣೈ ಅವರ ಸಿನಿಮಾ ವ್ಯಾಮೋಹವೂ ಈ ಪಾತ್ರಗಳ ಮೂಲಕ ಪ್ರೇಕ್ಷಕರಿಗೆ ಕಾಣಿಸುತ್ತದೆ. ಸ್ವತಃ ತಮ್ಮ ಅನುಭವಗಳಲ್ಲದೆ ನೋಡಿದ್ದು, ಕೇಳಿದ್ದು, ರೀಸರ್ಚ್ ಮಾಡಿದ ಹಲವು ಸಂಗತಿಗಳನ್ನು ಸೇರಿಸಿ ದಿನೇಶ್ ಅವರು ಚಿತ್ರಕಥೆ ಹೆಣೆದಿದ್ದಾರೆ. ಕಳೆದ 27 ವರ್ಷಗಳಿಂದ ಮನರಂಜನಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅವರಿಗೆ ನಾಸ್ಟಾಲ್ಜಿಯಾ ಬಗ್ಗೆ ವಿಶೇಷ ಆಸಕ್ತಿ. ಇದನ್ನೇ ಸರಳವಾಗಿ, ಆಪ್ತವಾಗಿ ಕಿರುಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ. ಸರಳತೆ, ಸಹಜತೆಯಿಂದಲೇ ‘ಮಧ್ಯಂತರ’ ನೋಡುವವರಿಗೆ ಆಪ್ತವಾಗುತ್ತದೆ.
1976ರಿಂದ 1985ರ ಕಾಲಘಟ್ಟದಲ್ಲಿ ನಡೆಯುವ ಕತೆಯಿದು. ರೆಟ್ರೋ ಫೀಲ್‌ಗಾಗಿ ದಿನೇಶ್ ತುಂಬಾ ಶ್ರಮವಹಿಸಿದ್ದಾರೆ. ಇದಕ್ಕಾಗಿ 16 ಎಂಎಂ ಕ್ಯಾಮೆರಾದಲ್ಲಿ ಕೊಡಾಕ್ ರೀಲ್ಸ್ ಬಳಸಿ ಚಿತ್ರೀಕರಣ ನಡೆಸಿ ನಂತರ ಡಿಜಿಟಲ್‌ಗೆ ಮಾಡಲಾಗಿದೆ. ದಿನೇಶ್ ಅವರು ಕಿರುಚಿತ್ರಕ್ಕೆ ಬರೆಯಲು ಶುರು ಮಾಡಿದ್ದು ಕೋವಿಡ್ ಅವಧಿಯಲ್ಲಿ. ದಿಲ್ಲಿಯಿಂದ ನಾಲ್ಕು ಬಾರಿ ಬೆಂಗಳೂರಿಗೆ ಬಂದು ಚಿತ್ರಕ್ಕೆ ಅಗತ್ಯವಿರುವ ರೀಸರ್ಚ್ ನಡೆಸಿದ್ದಾರೆ. ಸಾಕಷ್ಟು ಜನರನ್ನು ಭೇಟಿ ಮಾಡಿದ್ದಾರೆ. 70, 80ರ ದಶಕಗಳ ಚಿತ್ರಣವನ್ನು ಕಟ್ಟಿಕೊಡುವುದು ಸುಲಭವಲ್ಲ. ಈ ಹಂತದಲ್ಲಿ ಕನ್ನಡ ಚಿತ್ರರಂಗದ ಹಿರಿಯ ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಅವರಲ್ಲಿನ ಆ ಕಾಲಘಟ್ಟದ ಅಪೂರ್ವ ಫೋಟೊಗಳು ಅವರಿಗೆ ನೆರವಾಗಿವೆ. ಇನ್ನು, ಚಿತ್ರರಂಗದಲ್ಲಿ ಆ ಕಾಲಘಟ್ಟದಲ್ಲಿ ಕೆಲಸ ಮಾಡಿದ ತಂತ್ರಜ್ಞರನ್ನು ಭೇಟಿ ಮಾಡಿ ಮಾತನಾಡಿದ್ದಾರೆ.
ಚಿತ್ರನಿರ್ಮಾಣದಲ್ಲಿ ಸಮಾನ ಮನಸ್ಕ ಸ್ನೇಹಿತರು ಅವರಿಗೆ ಜೊತೆಯಾದರು. ‘ಮಧ್ಯಂತರ’ಕ್ಕೆ ಕೆಲಸ ಮಾಡಿದ ಹಿರಿಯ ಕಲಾನಿರ್ದೇಶಕ ಶಶಿಧರ ಅಡಪ ಅವರ ಸಲಹೆ – ಮಾರ್ಗದರ್ಶನ ದಿನೇಶ್ ಅವರಿಗೆ ವರವಾಯ್ತು. ಸಾಕಷ್ಟು ಪೂರ್ವ ತಯಾರಿ ಇದ್ದುದರಿಂದ ಹನ್ನೊಂದು ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಚಿತ್ರೀಕರಣದ ಸಮಯದಲ್ಲಿ ಅವರಿಗೆ ಸಾಕಷ್ಟು ಪ್ರಾಕ್ಟಿಕಲ್ ಸಮಸ್ಯೆಗಳು ಎದುರಾಗಿವೆ. 70ರ ದಶಕದ ವಸ್ತು, ಬಟ್ಟೆ, ಲೊಕೇಶನ್, ಸೆಟ್ ಪ್ರಾಪರ್ಟಿ ಹಾಗೂ ರೀಲ್ನಲ್ಲಿ ಚಿತ್ರೀಕರಣ ಮಾಡುತ್ತಿದ್ದರಿಂದ ಹೆಚ್ಚಿನ ಲೈಟ್ ವ್ಯವಸ್ಥೆ… ಹೀಗೆ ರೆಟ್ರೋ ಕತೆಯನ್ನು ಹೇಳುವ ಹಾದಿಯಲ್ಲಿ ಕಲಿಕೆಯೂ ನಡೆದಿದೆ. ವೀರೇಶ್ ಮತ್ತು ರಂಗಭೂಮಿ ಹಿನ್ನೆಲೆಯ ಅಜಯ್ ನೀನಾಸಂ ಮುಖ್ಯ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಸುನೀಲ್ ಬೋರ್ಕರ್ ಛಾಯಾಗ್ರಹಣ ಮಾಡಿದ್ದು, ಸಿದ್ಧಾಂತ್ ಮಾಥೂರ್ ಸಂಗೀತ ಸಂಯೋಜಿಸಿದ್ದಾರೆ.
ಶೂಟಿಂಗ್ ಮುಗಿದ ಮೇಲೆ. ರೀಲ್ಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ಮಾಡಲು ಬಹಳಷ್ಟು ಸಮಯ, ಹಣ ವ್ಯಯವಾಗಿದೆ. ರೆಟ್ರೊ ಸಿನಿಮಾ ಆದ್ದರಿಂದ ಕಲರ್ ಗ್ರೇಡಿಂಗ್ ಸಮಸ್ಯೆಯೂ ಎದುರಾಗಿದೆ. ಆಗ ಅತ್ಯುತ್ತಮ ಕಲರಿಸ್ಟ್ಗಳಲ್ಲಿ ಒಬ್ಬರಾದ ಕನ್ನಡಿಗ ನವೀನ್ ಶೆಟ್ಟಿ ಕಲರ್ ಗ್ರೇಡಿಂಗ್ ಮಾಡಿಕೊಟ್ಟಿದ್ದಾರೆ. ಅದಾದ ಬಳಿಕ ಭಾರತೀಯ ಸಿನಿಮಾದ ಶ್ರೇಷ್ಠ ಸಂಕಲನಕಾರರಲ್ಲೊಬ್ಬರಾದ ಕನ್ನಡಿಗ ಸುರೇಶ್ ಅರಸ್ ಚಿತ್ರವನ್ನು ಎಡಿಟ್ ಮಾಡಿದ್ದಾರೆ. ಅಂತಿಮವಾಗಿ ‘ಮಧ್ಯಂತರ’ ಸಿದ್ಧವಾಗಿದೆ. 2022ರಲ್ಲಿ ಗೋವಾ ಚಿತ್ರೋತ್ಸವದ ಭಾರತೀಯ ಪನೋರಮಾ ವಿಭಾಗದಲ್ಲಿ ಪ್ರದರ್ಶನಗೊಂಡ ಚಿತ್ರಕ್ಕೀಗ ಎರಡು ರಾಷ್ಟ್ರಪ್ರಶಸ್ತಿಗಳ ಗೌರವ! ಮುಂದಿನ ದಿನಗಳಲ್ಲಿ ಕಿರುಚಿತ್ರವನ್ನು ಫೀಚರ್ ಸಿನಿಮಾ ಆಗಿ ರೂಪಿಸುವುದು ದಿನೇಶ್ ಶೆಣೈ ಅವರ ಯೋಜನೆ. ಅವರೀಗ ಸಿನಿಮಾದ ಸಿದ್ಧತೆಯಲ್ಲಿದ್ದಾರೆ.