ನಟ ಉಪೇಂದ್ರ ಅವರು ‘ಹುಟ್ಟುಹಬ್ಬದ ಶುಭಾಶಯಗಳು’ ಸಿನಿಮಾದ ಟ್ರೈಲರ್‌ ಬಿಡುಗಡೆ ಮಾಡಿ ಶುಭ ಹಾರೈಸಿದರು. ನಾಗರಾಜ್‌ ಬೆತ್ತುರ್‌ ನಿರ್ದೇಶನದಲ್ಲಿ ದಿಗಂತ್‌ ಮತ್ತು ಕವಿತಾ ಗೌಡ ನಟಿಸಿರುವ ಸಿನಿಮಾ ಡಿಸೆಂಬರ್‌ 31ರಂದು ತೆರೆಕಾಣಲಿದೆ.

“ಇದು ನನ್ನ ಮೊದಲ ಚಿತ್ರ. ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿರುವುದರಿಂದ ಹೆಚ್ಚು ಕಥೆ ಹೇಳುವ ಹಾಗಿಲ್ಲ” ಎಂದರು ನಿರ್ದೇಶಕ ನಾಗರಾಜ್‌ ಬೆತ್ತುರ್‌. ಮೂಲತಃ ಎಂಜಿನಿಯರ್‌ ಆದ ಅವರ ‘ಹುಟ್ಟುಹಬ್ಬದ ಶುಭಾಶಯಗಳು’ ಸಿನಿಮಾ ಕನಸಿಗೆ ನಿರ್ಮಾಪಕ ಟಿ.ಆರ್‌.ಚಂದ್ರಶೇಖರ್‌ ಬಂಡವಾಳ ಹೂಡಿದ್ದಾರೆ. ಈ ಹಿಂದೆ ನಟ ಉಪೇಂದ್ರ ಅವರಿಗೆ ನಿರ್ಮಾಪಕ ಚಂದ್ರಶೇಖರ್‌ ‘ಬುದ್ಧಿವಂತ 2’ ಸಿನಿಮಾ ನಿರ್ಮಿಸಿದ್ದರು. ಇದೇ ವಿಶ್ವಾಸಕ್ಕೆ ಉಪೇಂದ್ರ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಚಿತ್ರದ ಟ್ರೈಲರ್‌ ಬಿಡುಗಡೆ ಮಾಡಿದರು. “ನಾನು ಈ ಸಂಸ್ಥೆಯ ‘ಬುದ್ದಿವಂತ 2’ ಚಿತ್ರದಲ್ಲಿ ನಟಿಸಿದ್ದೇನೆ. ಆದರೆ ನಿಜವಾದ ಬುದ್ಧಿವಂತರು ಎಂದರೆ ಚಿತ್ರದ ನಿರ್ಮಾಪಕರು. ವರ್ಷದ ಕೊನೆಗೆ ಬರುತ್ತಿರುವ ಈ ಚಿತ್ರಕ್ಕೆ ಒಳ್ಳೆಯದಾಗಲಿ. ಅದಕ್ಕೂ ಮುನ್ನ ಇಪ್ಪತ್ತೆಂಟರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಾಯಕ ಅವರಿಗೂ ಶುಭವಾಗಲಿ” ಎಂದು ಹಾರೈಸಿದರು ಉಪೇಂದ್ರ.

ನಿರ್ದೇಶಕರು ಹೇಳಿದಂತೆ ಟ್ರೈಲರ್‌ನಲ್ಲಿ ಸಸ್ಪೆನ್ಸ್‌ – ಥ್ರಿಲ್ಲರ್‌ ಅಂಶಗಳಿವೆ. ಕೊಲೆಯೊಂದರ ಸುತ್ತ ನಡೆಯುವ ಘಟನಾವಳಿಗಳ ಸುತ್ತ ಪಾತ್ರಗಳು ಮಾತನಾಡುತ್ತವೆ. ಬಹುದಿನಗಳ ನಂತರ ತೆರೆಕಾಣುತ್ತಿರುವ ತಮ್ಮ ಸಿನಿಮಾ ಕುರಿತು ನಟ ದಿಗಂತ್‌ ಎಕ್ಸೈಟ್‌ ಆಗಿದ್ದಾರೆ. ‘ಲಕ್ಷ್ಮೀ ಬಾರಮ್ಮ’ ಕಿರುತೆರೆ ಸರಣಿ ಖ್ಯಾತಿಯ ಕವಿತ ಗೌಡ ಚಿತ್ರದ ಹಿರೋಯಿನ್‌. “ನಮ್ಮ ಸಂಸ್ಥೆಯ ಮೊದಲ ಚಿತ್ರ ‘ಚಮಕ್’ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಿದ್ದೆವು. ಈಗ ಈ ಚಿತ್ರವನ್ನೂ ಇದೇ ತಿಂಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ” ಎಂದ ನಿರ್ಮಾಪಕ ಟ್ರೈಲರ್‌ ಬಿಡುಗಡೆಗೊಳಿಸಿದ ಉಪೇಂದ್ರರಿಗೆ ಧನ್ಯವಾದ ಅರ್ಪಿಸಿದರು. ನಿರ್ಮಾಪಕ ನಂದಕಿಶೋರ್‌, “ರಾಜ್ಯದಲ್ಲಿ ನಮ್ಮ ಚಿತ್ರಗಳಿಗೆ ಚಿತ್ರಮಂದಿರ ಸಿಗುತ್ತಿಲ್ಲ. ನಮಗೆ ಚಿತ್ರಮಂದಿರ ದೊರಕಿಸಿಕೊಡಿ” ಎಂದು ನಿರ್ಮಾಪಕ ನಂದಕಿಶೋರ್ ಮನವಿ ಮಾಡಿದರು. ಶ್ರೀಧರ್‌ ವಿ ಸಂಭ್ರಮ್‌ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

LEAVE A REPLY

Connect with

Please enter your comment!
Please enter your name here