ರೋಷನ್‌ ಆಂಡ್ರ್ಯೂಸ್‌ ನಿರ್ದೇಶನದಲ್ಲಿ ದುಲ್ಕರ್‌ ಸಲ್ಮಾನ್‌ ನಟಿಸಿರುವ ‘ಸೆಲ್ಯೂಟ್‌’ ಮಲಯಾಳಂ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಜನವರಿ 14ರಂದು ತೆರೆಕಾಣಬೇಕಿದ್ದ ಸಿನಿಮಾ ಕೋವಿಡ್‌ 3ನೇ ಅಲೆಯ ಭಯದಿಂದ ಮುಂದೂಡಲ್ಪಟ್ಟಿತ್ತು. ಈಗ ನಿರ್ಮಾಪಕರು ಮಾರ್ಚ್‌ 18ರಿಂದ ಚಿತ್ರವನ್ನು ನೇರವಾಗಿ ಓಟಿಟಿಗೆ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

ದುಲ್ಕರ್‌ ಸಲ್ಮಾನ್‌ ಮೊದಲ ಬಾರಿಗೆ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ನಟಿಸಿರುವ ‘ಸೆಲ್ಯೂಟ್‌’ ಮಲಯಾಳಂ ಸಿನಿಮಾದ ಟ್ರೈಲರ್‌ ಬಿಡುಗಡೆ ಮಾಡಿದೆ SonyLIV. ಮೊದಲು ಥಿಯೇಟರ್‌ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದ ಚಿತ್ರತಂಡ ಈಗ ಓಟಿಟಿಗೆ ಬರುತ್ತಿರುವುದರ ಬಗ್ಗೆ ನಿಖರ ಮಾಹಿತಿ ಸಿಗುತ್ತಿಲ್ಲ. ಟ್ರೈಲರ್‌ ನೋಡಿದರೆ ಚಿತ್ರದ ಕತೆಯ ಸುಳಿವೇನೂ ಸಿಗುವುದಿಲ್ಲ. ಪೊಲೀಸ್‌ ಅಧಿಕಾರಿಯೊಬ್ಬನ ಕಷ್ಟ – ಸುಖಗಳ ಸುತ್ತ ಹೆಣೆದಿರುವ ಕತೆಯಂತಿದೆ. ಪ್ರಾಮಾಣಿಕ ಪೊಲೀಸ್‌ ಅಧಿಕಾರಿ ವ್ಯವಸ್ಥೆಯ ದುರುಳುತನದಿಂದ ಇಲಾಖೆಯಿಂದ ವಜಾ ಆಗುತ್ತಾನೆ. ಮುಂದೆ ಸ್ವತಃ ತಾನೇ ಇನ್ವೆಸ್ಟಿಗೇಷನ್‌ ಕೈಗೊಂಡು ನ್ಯಾಯ ಒದಗಿಸುವ ಕತೆಯಿದು ಎಂದು ಮೇಲ್ನೋಟಕ್ಕೆ ತಿಳಿದುಬರುತ್ತದೆ.

‘ಸೆಲ್ಯೂಟ್‌’ ಚಿತ್ರಕ್ಕೆ ಜನಪ್ರಿಯ ಬಾಬ್ಬಿ – ಸಂಜಯ್‌ ಜೋಡಿ ಚಿತ್ರಕಥೆ ರಚಿಸಿದ್ಧಾರೆ. ಯಶಸ್ವೀ ಟ್ರಾಫಿಕ್‌, ಆಯಲಮ್‌ ನಿಜನಮ್‌, ಥಮ್ಮಿಲ್‌, ಮುಂಬಯಿ ಪೊಲೀಸ್‌, ಹೌ ಓಲ್ಡ್‌ ಆರ್‌ ಯೂ, ಉಯರೆ ಚಿತ್ರಗಳಿಗೆ ಈ ಜೋಡಿ ಚಿತ್ರಕಥೆ ರಚಿಸಿದೆ. ಮುಂಬಯಿ ಪೊಲೀಸ್‌ ನಂತರ ಈ ಜೋಡಿ ಚಿತ್ರಕಥೆ ರಚಿಸಿರುವ ಎರಡನೇ ಪೊಲೀಸ್‌ ಕತೆಯ ಕುರಿತ ಚಿತ್ರವಿದು. ‘ಸೆಲ್ಯೂಟ್‌’ ಚಿತ್ರದೊಂದಿಗೆ ನಿರ್ದೇಶಕ ರೋಷನ್‌ ಆಂಡ್ರ್ಯೂಸ್‌ ಮತ್ತು ನಟ ದುಲ್ಕರ್‌ ಮೊದಲ ಬಾರಿಗೆ ಜೊತೆಯಾಗಿದ್ಧಾರೆ. ಈ ಇನ್ವೆಸ್ಟಿಗೇಟಿವ್‌ ಡ್ರಾಮಾದ ಇತರೆ ಪ್ರಮುಖ ಪಾತ್ರಗಳಲ್ಲಿ ಡಯಾನಾ ಪೆಂಟಿ, ಮನೋಜ್‌ ಕೆ ಜಯನ್‌, ಲಕ್ಷ್ಮೀ ಗೋಪಾಲಸ್ವಾಮಿ, ಸಾನಿಯಾ ಅಯ್ಯಪ್ಪನ್‌ ಇದ್ದಾರೆ. ನಟ ದುಲ್ಕರ್‌ ಸಲ್ಮಾನ್‌ ತಮ್ಮ ವೇಫರರ್‌ ಫಿಲ್ಮ್ಸ್‌ ಬ್ಯಾನರ್‌ನಡಿ ಈ ಸಿನಿಮಾ ನಿರ್ಮಿಸಿದ್ದಾರೆ. ಮಾರ್ಚ್‌ 18ರಿಂದ SonyLIV ನಲ್ಲಿ ಸಿನಿಮಾ ಸ್ಟ್ರೀಮ್‌ ಆಗಲಿದೆ.

Previous articleನಾನ್‌ ಲೀನಿಯರ್‌ ನಿರೂಪಣೆಯ ‘I Am All Girls’; ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ ಸಿನಿಮಾ
Next articleಕಥೆ ಹೇಳುವ ಕನ್ನಡಿ…

LEAVE A REPLY

Connect with

Please enter your comment!
Please enter your name here