ರಾಜ್ ಮೋಹನ್ ನಿರ್ದೇಶನದ ‘ಫಾದರ್’ ಸಿನಿಮಾಗೆ ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಚಿತ್ರದಲ್ಲಿ ಪ್ರಕಾಶ್ ರೈ ಮತ್ತು ಡಾರ್ಲಿಂಗ್ ಕೃಷ್ಣ ತಂದೆ – ಮಗನಾಗಿ ಅಭಿನಯಿಸುತ್ತಿದ್ದಾರೆ. ಆರ್ ಚಂದ್ರು ನಿರ್ಮಾಣದ ಈ ಸಿನಿಮಾದ ನಾಯಕನಟಿ ಅಮೃತಾ ಅಯ್ಯಂಗಾರ್.
‘ಇದೊಂದು ಮನಸ್ಸಿಗೆ ಹತ್ತಿರವಾಗುವ ಕಥೆ. ತಂದೆ-ಮಗನ ಪ್ರೀತಿಯ ಜೊತೆಗೆ, ಇವತ್ತಿನ ತಂದೆ ಮಕ್ಕಳ ಸಂಬಂಧದ ಬಗ್ಗೆ ಹೇಳಲಾಗಿದೆ. ಕಥೆ ಕೇಳಿದಾಗ ನನಗೆ ಇದು ಇಂದಿಗೆ ಮುಖ್ಯವಾಗಿ ಬೇಕಾಗಿರುವ ಸಿನಿಮಾ ಎಂದೆನಿಸಿತು. ಇದೊಂದು ಕಾಡುವಂತಹ ಚಿತ್ರ’ ಎಂದು ತಮ್ಮ ಸಿನಿಮಾ ‘ಫಾದರ್’ ಬಗ್ಗೆ ಹೇಳುತ್ತಾರೆ ಪ್ರಕಾಶ್ ರೈ. ಚಿತ್ರದಲ್ಲಿ ಅವರು ತಂದೆ ಪಾತ್ರದಲ್ಲಿದ್ದರೆ ಡಾರ್ಲಿಂಗ್ ಕೃಷ್ಣ ಮಗನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆರ್ ಚಂದ್ರು ಅವರು ತಮ್ಮ RC ಬ್ಯಾನರ್‌ನಡಿ ನಿರ್ಮಿಸುತ್ತಿರುವ ಮೊದಲ ಚಿತ್ರವಿದು. ಈ ಹಿಂದೆ ಚಂದ್ರು ನಿರ್ದೇಶಿಸಿದ್ದ ‘ಕಬ್ಜ’ ಚಿತ್ರದಲ್ಲಿ ಪ್ರಕಾಶ್ ರೈ ನಟಿಸಬೇಕಿತ್ತಂತೆ. ‘ಕಾರಣಾಂತರಗಳಿಂದ ಆ ಚಿತ್ರದಲ್ಲಿ ನಟಿಸಲು ಸಾಧ್ಯವಾಗಲಿಲ್ಲ. ಚಂದ್ರು ದೊಡ್ಡ ಯೋಜನೆ ಹಾಕಿಕೊಂಡು ಒಂದೊಂದಾಗಿ ಸಿನಿಮಾಗಳನ್ನು ಕೈಗೆತ್ತಿಕೊಂಡಿದ್ದಾರೆ. ಇಂಥವರು ಉದ್ಯಮಕ್ಕೆ ಅಗತ್ಯ. ಅವರಿಗೆ ಶುಭವಾಗಲಿ’ ಎಂದು ಪ್ರಕಾಶ್ ರೈ ಹಾರೈಸಿದರು.
ನಟ ಡಾರ್ಲಿಂಗ್ ಕೃಷ್ಣ ಅವರಿಗೆ ಹಿರಿಯ ನಟ ಪ್ರಕಾಶ್ ರೈ ಅವರೊಂದಿಗೆ ನಟಿಸುತ್ತಿರುವ ಖುಷಿಯಿದೆ. ಸಿನಿಮಾ, ಪಾತ್ರದ ಬಗ್ಗೆ ಮಾತನಾಡುವ ಅವರು, ‘ನಾನು ಲಕ್ಕೀ ಮ್ಯಾನ್. ಯಾಕೆಂದರೆ ಒಳ್ಳೆಯ ಕಥೆಗಳೇ ನನ್ನ ಪಾಲಾಗುತ್ತಿವೆ. ನಾನು ಈ ಕಥೆ ಕೇಳಿದಾಗ, ಮೊದಲು ಇಷ್ಟಪಟ್ಟಿದ್ದು ಪತ್ನಿ ಮಿಲನಾ. ಕತೆ ಚೆನ್ನಾಗಿದ್ದು, ನಾನು ಒಪ್ಪಿಕೊಳ್ಳಲೇಬೇಕೆಂದು ಒತ್ತಾಯಿಸಿದಳು. ಇನ್ನು, ಭಾರತೀಯ ಚಿತ್ರರಂಗ ಕಂಡ ಅದ್ಭುತ ನಟ ಪ್ರಕಾಶ್ ರೈ ಅವರ ಜೊತೆ ನಟಿಸುವ ಆಸೆಯಿತ್ತು. ಅವರ ಜೊತೆ ಅಭಿನಯಿಸುವಾಗ ಭಯ ಆಗುತ್ತಿತ್ತು. ಎಷ್ಟೋ ಬಾರಿ ಅವರು ಅಭಿನಯಿಸುವುದನ್ನು ನೋಡುತ್ತಾ, ಪ್ರತಿಕ್ರಿಯೆ ಕೊಡುವುದನ್ನೇ ಮರೆಯುತ್ತಿದ್ದೆ’ ಎನ್ನುತ್ತಾರೆ.
ನಿರ್ಮಾಪಕ ಆರ್ ಚಂದ್ರು ತಮ್ಮ RC Studios ಬ್ಯಾನರ್‌ನಡಿ ಐದು ಸಿನಿಮಾಗಳನ್ನು ಘೋಷಿಸಿದ್ದಾರೆ. ‘ಫಾದರ್’ ಈ ಸರಣಿಯ ಮೊದಲ ಸಿನಿಮಾ. ತಮ್ಮ ಕನಸಿನ ಯೋಜನೆ ಬಗ್ಗೆ ಮಾತನಾಡುವ ಅವರು, ‘ಐದು ಬಿಗ್ ಬಜೆಟ್ ಸಿನಿಮಾ ನಿರ್ಮಾಣ ಮಾಡುತ್ತಿದ್ದೇನೆ. ಇದು ಸುಲಭವಲ್ಲ. ಸಿನಿಮಾ ಪ್ರೀತಿಯೇ ಇದಕ್ಕೆ ಕಾರಣ. ಫಾದರ್ ಒಂದು ಅದ್ಭುತ ಕಥೆ. ಇಂಥದ್ದೊಂದು ಕಂಟೆಂಟ್ ಸಿನಿಮಾ ಮಾಡಲು ಹೆಮ್ಮೆ ಎನಿಸುತ್ತದೆ. ನನ್ನ ನಿರ್ದೇಶನದ ‘ತಾಜಮಹಲ್’ ತರಹ ಎಮೋಷನ್ ಇರುವಂಥ ಚಿತ್ರವಿದು’ ಎನ್ನುತ್ತಾರೆ. ಚಿತ್ರೀಕರಣ ತಮ್ಮೂರಿನಲ್ಲಿ ನಡೆಯುತ್ತಿರುವ ಬಗ್ಗೆ ಚಿತ್ರದ ನಾಯಕನಟಿ ಅಮೃತಾ ಅಯ್ಯಂಗಾರ್ ಖುಷಿ ಪಡುತ್ತಾರೆ. ನಿರ್ದೇಶಕ ದಯಾಳ್ ಪದ್ಮನಾಭ್ ಅವರು ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ ಮೋಹನ್ ನಿರ್ದೇಶನದ ಚಿತ್ರಕ್ಕೆ ಸುಜ್ಞಾನ್ ಛಾಯಾಗ್ರಹಣ, ಗೌರ ಹರಿ ಸಂಗೀತ ನಿರ್ದೇಶನ, ರಘುನಾಥ್ ಸಂಕಲನ, ವಿನೋದ್ ಸಾಹಸ ನಿರ್ದೇಶನ ಹಾಗೂ ಮದನ್ ಹರಿಣಿ, ಸಂತೋಷ್ ಅವರ ನೃತ್ಯ ನಿರ್ದೇಶನವಿದೆ. ಮಂಜು ಮಾಂಡವ್ಯ ಸಿನಿಮಾಗೆ ಸಂಭಾಷಣೆ ರಚಿಸಿದ್ದಾರೆ.