‘ನಾನು ಮತ್ತು ಗುಂಡ’ ಸಿನಿಮಾ ನಂತರ ‘ಧಮಾಕಾ’ ಚಿತ್ರದಲ್ಲಿ ಹೀರೋ ಆಗಿ ತೆರೆಗೆ ಮರಳುತ್ತಿದ್ದಾರೆ ಹಾಸ್ಯನಟ ಶಿವರಾಜ್‌ ಕೆ.ಆರ್‌.ಪೇಟೆ. ಸದ್ದಿಲ್ಲದೆ ಚಿತ್ರೀಕರಣ ಮುಗಿಸಿಕೊಂಡಿರುವ ಸಿನಿಮಾದ ಟೀಸರ್‌ ಇಂದು ಬಿಡುಗಡೆಯಾಗಿದೆ.

ಪ್ರಸ್ತುತ ಸ್ಯಾಂಡಲ್‌ವುಡ್‌ನ ಜನಪ್ರಿಯ ಹಾಸ್ಯನಟರಲ್ಲಿ ಶಿವರಾಜ್‌ ಕೆ.ಆರ್‌.ಪೇಟೆ ಒಬ್ಬರು. ಈ ಹಿಂದೆ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದ ‘ನಾನು ಮತ್ತು ಗುಂಡ’ ಸಿನಿಮಾ ತೆರೆಗೆ ಬಂದಿತ್ತು. ಕೊಂಚ ಗಂಭೀರ ಪಾತ್ರದಲ್ಲಿ ಭಾವುಕ ಸನ್ನಿವೇಶಗಳೊಂದಿಗೆ ಪ್ರೇಕ್ಷಕರ ಕಣ್ಣಂಚಿನಲ್ಲಿ ನೀರು ತರಿಸಿದ್ದ ಶಿವರಾಜ್‌ ಅವರು ಇದೀಗ ‘ಧಮಾಕಾ’ ಚಿತ್ರದೊಂದಿಗೆ ಮತ್ತೆ ಹೀರೋ ಆಗಿದ್ದಾರೆ. ಆದರೆ ಅವರು ತಮ್ಮನ್ನು ತಾವು ಹೀರೋ ಎಂದು ಹೇಳಿಕೊಳ್ಳಲು ಇಷ್ಟಪಡುವುದಿಲ್ಲ. “ಕನ್ನಡದ ಎಲ್ಲಾ ಹೀರೋಗಳೊಂದಿಗೆ ಹಾಸ್ಯಪಾತ್ರದಲ್ಲಿ ನಟಿಸಬೇಕೆನ್ನುವುದು ನನ್ನ ಆಸೆ. ನಾನು ಒಂದು ಚಿತ್ರದ ಹೀರೋ ಎಂದು ಹೇಳಿಕೊಳ್ಳಲು ಇಚ್ಛಿಸುವುದಿಲ್ಲ. ಪ್ರಮುಖ ಪಾತ್ರಧಾರಿ ಎಂದು ಹೇಳಿಕೊಳ್ಳುತ್ತೇನಷ್ಟೆ. ‘ನಾನು ಮತ್ತು ಗುಂಡ’ ಚಿತ್ರದಲ್ಲಿ ಪ್ರೇಕ್ಷಕರನ್ನು ಅಳಿಸಿದ್ದೆ. ಇಲ್ಲಿ ಸಿನಿಮಾ ಪೂರಾ ನಗಿಸುವಂತಹ ಸನ್ನಿವೇಶಗಳಲ್ಲಿ ಕಾಣಿಸಿಕೊಂಡಿದ್ದೇನೆ” ಎನ್ನುತ್ತಾರವರು.

ನಿರ್ದೇಶಕ ಲಕ್ಷ್ಮೀ ರಮೇಶ್‌ ಅವರಿಗೆ ಸ್ವತಂತ್ರ್ಯ ನಿರ್ದೇಶಕರಾಗಿ ಇದು ಮೊದಲ ಸಿನಿಮಾ. ನಟ ಶಿವರಾಜ್‌ ಕೆ.ಆರ್‌.ಪೇಟೆ ಅವರನ್ನು ಗಮನದಲ್ಲಿಟ್ಟುಕೊಂಡು ಅವರು ಕತೆ ಮಾಡಿದ್ದಾರೆ. ಶಿವರಾಜ್‌ ಅವರಿಗೆ ಜೋಡಿಯಾಗಿ ನಟಿ ನಯನಾ ಇದ್ದಾರೆ. ವಿಶೇಷವೆಂದರೆ ಇವರಿಬ್ಬರೂ ‘ಕಾಮಿಡಿ ಕಿಲಾಡಿಗಳು’ ಶೋ ಪ್ರತಿಭೆಗಳು. ಈ ಶೋನಲ್ಲಿ ತೀರ್ಪುಗಾರರಾಗಿದ್ದ ಯೋಗರಾಜ್‌ ಭಟ್ಟರು ‘ಧಮಾಕಾ’ ಟೀಸರ್‌ಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಈ ವಿಶೇಷತೆಯೊಂದಿಗೆ ಟೀಸರ್‌ ಹೆಚ್ಚು ಇಷ್ಟವಾಗುತ್ತದೆ. ಸದ್ಯಕ್ಕೆ ಟೀಸರ್‌ನಲ್ಲಿ ಶಿವರಾಜ್‌ ಕೆ.ಆರ್‌.ಪೇಟೆ ಅವರ ಪಾತ್ರವಷ್ಟೇ ಪರಿಚಯವಾಗಿದೆ. ಮುಂದಿನ ದಿನಗಳಲ್ಲಿ ಹಾಡು, ಟ್ರೈಲರ್‌ನೊಂದಿಗೆ ಇತರೆ ಪಾತ್ರಗಳು ಸೇರಿದಂತೆ ಇತರೆ ಮಾಹಿತಿ ನೀಡುವುದು ಚಿತ್ರತಂಡದ ಯೋಜನೆ. “ಕಾಮಿಡಿ ಕಿಲಾಡಿಗಳು ಶೋನಲ್ಲಿ ನಯನಾ ಮತ್ತು ನನ್ನನ್ನು ಜೊತೆಯಾಗಿ ನೋಡಿದವರು ಬೆಳ್ಳಿತೆರೆ ಮೇಲೆ ಇಬ್ಬರೂ ಜೋಡಿಯಾಗಿ ನಟಿಸಿ ಎಂದು ಹೇಳುತ್ತಿದ್ದರು. ‘ಧಮಾಕಾ’ದಲ್ಲಿ ಮೊದಲ ಬಾರಿಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದೇವೆ. ಸಿದ್ದು ಮೂಲಿಮನಿ ಅವರು ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಕಾಮಿಡಿ ಜೊತೆ ಎಮೋಷನ್‌ ಕೂಡ ಇದ್ದು, ಒಳ್ಳೆಯ ಸಂದೇಶವೊಂದನ್ನು ಕನ್ವೇ ಮಾಡುತ್ತಿದ್ದೇವೆ” ಎನ್ನುತ್ತಾರೆ ಶಿವರಾಜ್‌ ಕೆ.ಆರ್‌.ಪೇಟೆ.

LEAVE A REPLY

Connect with

Please enter your comment!
Please enter your name here