ಕರ್ನಾಟಕದಲ್ಲಿ ಒಂದು ತಿಂಗಳ ಕಾಲ ಚಿತ್ರಮಂದಿರಗಳು ಮುಚ್ಚಲಿವೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ಇದು ಅಧಿಕೃತವಲ್ಲ. ಆದರೆ ಅಂಥದ್ದೊಂದು ಪರಿಸ್ಥಿತಿ ನಿರ್ಮಾಣವಾಗಿರುವುದಂತೂ ಹೌದು. ಈ ನಿಟ್ಟಿನಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದಾಗಿದೆ.
ಕರ್ನಾಟಕದಲ್ಲಿ ಚಿತ್ರಮಂದಿರಗಳು ಎರಡು ವಾರ, ತಿಂಗಳ ಮಟ್ಟಿಗೆ ಬಂದ್ ಆಗಲಿವೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆಯೇ? ಇಂಥದ್ದೊಂದು ಪರಿಸ್ಥಿತಿಗೆ ಚಿತ್ರರಂಗ ಬಂದದ್ದೇಕೆ? ಇದಕ್ಕೆ ಸ್ಟಾರ್ ಹೀರೋಗಳು ಹೊಣೆಯೇ? ಇದಕ್ಕೆ ಪರಿಹಾರ? ಹೀಗೆ ‘ಥಿಯೇಟರ್ ಬಂದ್’ ಹಿನ್ನೆಲೆಯಲ್ಲಿ ಹಲವು ಪ್ರಶ್ನೆಗಳು ಹುಟ್ಟುಕೊಂಡಿದ್ದವು. ಆದರೆ ‘ಥಿಯೇಟರ್ ಬಂದ್’ ಮಾಡುವುದಾಗಿ ಪ್ರದರ್ಶಕರು ಅಧಿಕೃತ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ವಾಣಿಜ್ಯ ಮಂಡಳಿಯಲ್ಲಿ ಒಂದು ಸಭೆ ನಡೆದಿರುವುದಂತೂ ಹೌದು. ಅಲ್ಲಿ ಚಿತ್ರಮಂದಿರಗಳು ಪ್ರೇಕ್ಷಕರ ಕೊರತೆ ಎದುರಿಸುತ್ತಿರುವ ಬಗ್ಗೆ ಗಂಭೀರ ಚರ್ಚೆ ನಡೆದಿದೆ. ಚಿತ್ರರಂಗದ ವಿವಿಧ ವಿಭಾಗಗಳ ಪ್ರಮುಖರು ಸೇರಿ ಪರಿಹಾರ ಕಂಡುಕೊಳ್ಳಬೇಕೆಂದು ಸಭೆಯಲ್ಲಿ ನಿರ್ಧಾರವಾಗಿದೆ. ಒಂದೊಮ್ಮೆ ಸಮಸ್ಯೆಗೆ ಸೂಕ್ತ ಪರಿಹಾರ ಸಿಗದಿದ್ದರೆ ಥಿಯೇಟರ್ ಬಂದ್ ಮಾಡುವ ನಿಲುವು ತೆಗೆದುಕೊಳ್ಳಲಿದ್ದಾರೆ.
ಈ ಬಗ್ಗೆ ಮಾತನಾಡುವ ಪ್ರದರ್ಶಕರು, ಚಿತ್ರಮಂದಿರ ಮಾಲೀಕರಾದ ಮೋಹನ್ ಬಾಬು, ‘ಈ ಕುರಿತಾಗಿ ಮೊನ್ನೆ ಸೋಮವಾರ (ಮೇ 20) ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆದಿದೆ. ಪ್ರದರ್ಶಕರು ಸದ್ಯ ತೀವ್ರತರವಾದ ಸಮಸ್ಯೆ ಎದುರಿಸುತ್ತಿದ್ದಾರೆ. ನಮ್ಮ ಥಿಯೇಟರ್‌ಗಳಿಗೆ ಸ್ಟಾರ್ ಹೀರೋಗಳ ಸಿನಿಮಾಗಳಿಲ್ಲ. ಚಿಕ್ಕ ಪುಟ್ಟ ಸಿನಿಮಾಗಳಿಗೆ ಜನ ಬರುತ್ತಿಲ್ಲ. ಮೂರು, ನಾಲ್ಕು, ಐದು.. ಹೀಗೆ ಬೆರಳೆಣಿಕೆಯಷ್ಟು ಜನರು ಬಂದರೆ ಥಿಯೇಟರ್ ನಡೆಸೋದಾದ್ರೂ ಹೇಗೆ? ಒಟ್ಟಿನಲ್ಲಿ ಸಮಸ್ಯೆ ಗಂಭೀರವಾಗಿದೆ’ ಎನ್ನುತ್ತಾರೆ. ಮೊನ್ನೆ ನಡೆದ ಸಭೆಯಲ್ಲಿ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ. ಸುರೇಶ್, ಪ್ರದರ್ಶಕರ ಸಂಘದ ಅಧ್ಯಕ್ಷ ಕೆ ವಿ ಚಂದ್ರಶೇಖರ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಹಾಗೂ ಚಿತ್ರರಂಗದ ಹಲವು ಪ್ರಮುಖರು ಸೇರಿ ಚರ್ಚೆ ನಡೆಸಿದ್ದಾರೆ.
ಸಭೆಯಲ್ಲಿ ಕನ್ನಡ ಚಿತ್ರರಂಗ ಪಸ್ತುತ ಸಂದರ್ಭದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ಚಿತ್ರರಂಗದ ವಿವಿಧ ವಿಭಾಗಗಳ ಪದಾಧಿಕಾರಿಗಳೆಲ್ಲರೂ ಸೇರಬೇಕು. ಮುಖ್ಯವಾಗಿ ಕಲಾವಿದರ ಕಡೆಯಿಂದ ಪ್ರಾತಿನಿಧ್ಯ ಇರಬೇಕು. ಎಲ್ಲರೂ ಸೇರಿ ಸಮಸ್ಯೆ ತಿಳಿಯಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಚಿತ್ರರಂಗ ಅವನತಿಯ ಹಾದಿ ಹಿಡಿಯುತ್ತದೆ ಎನ್ನುವ ಗಂಭೀರ ಚರ್ಚೆ, ಮಾತುಕತೆಗಳು ನಡೆದಿವೆ. ಬಹುಮುಖ್ಯವಾಗಿ ಥಿಯೇಟರ್‌ಗೆ ಜನರನ್ನು ಸೆಳೆಯುವ ಸ್ಟಾರ್ ಹೀರೋಗಳು ವರ್ಷಕ್ಕೆ ಎರಡು, ಮೂರು ಚಿತ್ರಗಳನ್ನು ಕೊಡಬೇಕೆನ್ನುವ ಮನವಿಯಿದೆ. ಇವುಗಳಿಗೆ ಸೂಕ್ತ ಪರಿಹಾರ ಸಿಗುವ ಸೂಚನೆ ಸಿಗದಿದ್ದರೆ ಥಿಯೇಟರ್ ಬಂದ್ ಮಾಡುವ ಮೂಲಕ ಚಿತ್ರರಂಗದ ಸಂಕಷ್ಟವನ್ನು ಮನವರಿಕೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.