‘ಮ್ಯಾನ್‌ ಆಫ್‌ ದಿ ಮ್ಯಾಚ್‌’ ಓಟಿಟಿಗೆಂದೇ ಬರೆದಿರುವ ಕತೆಯಂತಿದೆ. ಇಂಥದ್ದೊಂದು ಪ್ರಯೋಗಕ್ಕೆ ಅವರಿಗೆ ಬೆನ್ನುತಟ್ಟಿದ್ದು ನಟ ಪುನೀತ್‌ ರಾಜಕುಮಾರ್‌. ಚಿತ್ರದ ನಿರ್ಮಾಣದಲ್ಲಿ ಕೈಜೋಡಿಸಿ ಹೊಸ ಐಡಿಯಾ ರೂಪುಗೊಳ್ಳಲು ಕಾರಣರಾದರು. ಅಮೇಜಾನ್‌ ಪ್ರೈಮ್‌ನಲ್ಲಿ ‘ಮ್ಯಾನ್‌ ಆಫ್‌ ದಿ ಮ್ಯಾಚ್‌’ ಸ್ಟ್ರೀಮ್‌ ಆಗುತ್ತಿದ್ದು, ರಿಯಲಿಸ್ಟಿಕ್‌ ಮತ್ತು ಪ್ರಯೋಗಶೀಲತೆ ಇಷ್ಟಪಡುವ ವೀಕ್ಷಕರಿಗೆ ಸಿನಿಮಾ ಇಷ್ಟವಾಗುತ್ತದೆ.

‘ರಾಮಾ ರಾಮಾ ರೇ’, ‘ಒಂದಲ್ಲಾ ಎರಡಲ್ಲ’ ಸಿನಿಮಾಗಳಲ್ಲಿ ಬೆರಗು ಮೂಡಿಸಿದ್ದ ನಿರ್ದೇಶಕ ಸತ್ಯಪ್ರಕಾಶ್‌ ಸಿನಿಮಾ ‘ಮ್ಯಾನ್‌ ಆಫ್‌ ದಿ ಮ್ಯಾಚ್‌’ ಬಗ್ಗೆ ಸಹಜವಾಗಿಯೇ ನಿರೀಕ್ಷೆ ಇತ್ತು. ಸತ್ಯಪ್ರಕಾಶ್‌ ನಿರೀಕ್ಷೆ ಹುಸಿ ಮಾಡಿಲ್ಲ. ವಿಶಿಷ್ಟ ಪ್ರಯೋಗವೊಂದರ ಮೂಲಕ ತಮ್ಮ ನಿರ್ದೇಶನ ಪ್ರತಿಭೆಗೆ ಸಾಣೆ ಹಿಡಿದಿದ್ದಾರೆ. ಅಫ್‌ಕೋರ್ಸ್‌, ಮೊದಲೆರೆಡು ಫೀಚರ್‌ ಸಿನಿಮಾಗಳು ಥಿಯೇಟರ್‌ ರಿಲೀಸ್‌ಗೆಂದೇ ತಯಾರಾಗಿ ರೂಪುಗೊಂಡಿದ್ದ ಚಿತ್ರಗಳು. ‘ಮ್ಯಾನ್‌ ಆಫ್‌ ದಿ ಮ್ಯಾಚ್‌’ ಓಟಿಟಿಗೆಂದೇ ಬರೆದಿರುವ ಕತೆಯಂತಿದೆ. ಇಂಥದ್ದೊಂದು ಪ್ರಯೋಗಕ್ಕೆ ಅವರಿಗೆ ಬೆನ್ನುತಟ್ಟಿದ್ದು ನಟ ಪುನೀತ್‌ ರಾಜಕುಮಾರ್‌. ಚಿತ್ರದ ನಿರ್ಮಾಣದಲ್ಲಿ ಕೈಜೋಡಿಸಿ ಹೊಸ ಐಡಿಯಾ ರೂಪುಗೊಳ್ಳಲು ಅಪ್ಪು ಕಾರಣರಾದರು. ಈ ಮೂಲಕ ಸತ್ಯಪ್ರಕಾಶ್‌ ಕನಸು ಸಾಕಾರಗೊಂಡಿತು.

ಸಿನಿಮಾವೊಂದರ ಆಡಿಷನ್‌ ಸುತ್ತ ನಡೆಯುವ ಕತೆ. ಪ್ರಮುಖ ಪಾತ್ರಧಾರಿಗಳಾದ ನಟರಾಜ್‌, ಧರ್ಮಣ್ಣ, ವೀಣಾ ಸುಂದರ್‌, ಸುಂದರ್‌ ಇವರೆಲ್ಲಾ ಅವರವರಾಗಿಯೇ ಕಾಣಿಸಿಕೊಂಡಿದ್ದಾರೆ. ನಟನಾಗಿದ್ದ ನಟರಾಜ್‌ ಸಿನಿಮಾ ನಿರ್ದೇಶಕನಾಗಿದ್ದಾನೆ ಎನ್ನುವುದು, ನಟನಾಗಿ ಹೆಸರು ಮಾಡುತ್ತಿರುವ ಧರ್ಮಣ್ಣ ಸಿನಿಮಾ ನಿರ್ಮಾಣ ಮಾಡಲು ಹೊರಡುವುದು, ಪೋಷಕ ಪಾತ್ರಧಾರಿಗಳಾಗಿ ವೀಣಾ – ಸುಂದರ್‌ ದಂಪತಿ ನಟಿಸುವುದು… ಇವರೊಂದಿಗೆ ನಾಲ್ಕಾರು ರಂಗಭೂಮಿ ಕಲಾವಿದರಿದ್ದಾರೆ. ಇವರೆಲ್ಲರನ್ನೂ ಒಂದು ಶೂಟಿಂಗ್‌ ಫ್ಲೋರ್‌ನಲ್ಲಿ ಆಡಿಷನ್‌ ನೆಪದಲ್ಲಿ ಸೇರಿಸಿ ಚಿತ್ರಕಥೆ ಹೆಣೆದು ಸಿನಿಮಾ ಮಾಡಿರುವುದು ನಿರ್ದೇಶಕರ ಜಾಣ್ಮೆ.

ಹೆಸರು, ಹಣ ಗಳಿಕೆಗೆ ಅವಕಾಶವಾದಿಗಳಾಗುವ ವ್ಯಕ್ತಿಗಳನ್ನು ಪ್ರತಿನಿಧಿಸುತ್ತಾನೆ ಕಥಾನಾಯಕ ನಟರಾಜ್‌. ಹಾಗೆ ನೋಡಿದರೆ ಇಲ್ಲಿ ಕಥಾನಾಯಕನಿಲ್ಲ, ಕಥೆಯೇ ನಾಯಕ. ನಟರಾಜ್‌ ಅವರದ್ದು ಪ್ರಮುಖ ಪಾತ್ರ ಎಂದು ಹೇಳಬಹುದು. ತನ್ನ ಐಡಿಯಾಗಳನ್ನು ಎಕ್ಸಿಗ್ಯೂಟ್‌ ಮಾಡುವ ಹಾದಿಯಲ್ಲಿ ಇತರೆ ಜನರಿಗಾಗುವ ಅನ್ಯಾಯ, ನಷ್ಟದ ಬಗ್ಗೆ ಆತನಿಗೆ ಕಿಂಚಿತ್ತೂ ಗಮನವಿಲ್ಲ. ಕೃತ್ರಿಮ ಮನಸ್ಸಿನ ವ್ಯಕ್ತಿ. ಆತನ ಸ್ನೇಹಿತನೇ ಆಗಿರುವ ಚಿತ್ರ ನಿರ್ಮಿಸುತ್ತಿರುವ ಧರ್ಮಣ್ಣ ಪಕ್ಕಾ ವ್ಯವಹಾರದ ಮನುಷ್ಯ. ಉಳಿದಂತೆ ಆಡಿಷನ್‌ನಲ್ಲಿ ಪಾಲ್ಗೊಳ್ಳಲು ಬರುವ ಹತ್ತಾರು ಮಂದಿ ಕನಸುಗಳನ್ನು ಹೊತ್ತು ಬಂದಿರುವ ಪಾತ್ರಗಳು. ಇವರೆಲ್ಲರ ಮಧ್ಯೆ ನಿರ್ದೇಶಕರು ಗಾಂಧಿ ಪಾತ್ರವೊಂದನ್ನು ಸೃಷ್ಟಿಸಿದ್ದಾರೆ. ಈ ಪಾತ್ರ ಉಪಮೆಯಂತೆ ಬಳಕೆಯಾಗಿದ್ದು, ಲೌಕಿಕ ಬದುಕಿನ ಜಂಜಾಟದಲ್ಲಿನ ಮಂದಿಯ ಕಪಟತನ, ದುರುಳುತನ, ಮುಗ್ಧತೆ, ಪ್ರೀತಿ, ದ್ವೇಷ, ರೋಷಾವೇಷಗಳನ್ನು ಪಾತ್ರಗಳ ಮುಖಾಮುಖಿಯೊಂದಿಗೆ ಪ್ರೇಕ್ಷಕರಿಗೆ ಮನವರಿಕೆ ಮಾಡಿಕೊಡುತ್ತದೆ. ಚಿತ್ರದಲ್ಲಿ ನಡೆಯುವ ಗಾಂಧಿನಗರದ ಕತೆಗೂ, ಸ್ಯಾಂಡಲ್‌ವುಡ್‌ನ ಗಾಂಧಿನಗರಕ್ಕೂ ಸಾಕಷ್ಟು ಸಾಮ್ಯತೆಗಳಿವೆ!

ಶೂಟಿಂಗ್‌ ಫ್ಲೋರ್‌ ಮತ್ತು ಕೆಲವು ಮಿನಿ ಸೆಟ್‌ಗಳಲ್ಲಿ ಇಡೀ ಸಿನಿಮಾದ ಕತೆಯನ್ನು ಹೇಳುವುದು ಸುಲಭಸಾಧ್ಯವಲ್ಲ. ಈ ಮಿತಿಯಲ್ಲಿ ಪ್ರಯೋಗ ಮಾಡಬೇಕೆಂದೇ ನಿರ್ದೇಶಕ ಸತ್ಯ ಸಿನಿಮಾ ಮಾಡಿದ್ದಾರೆ. ಈ ಹಿಂದಿನ ಅವರ ಎರಡೂ ಸಿನಿಮಾಗಳಲ್ಲಿ ಜೊತೆಯಾಗಿದ್ದ ವಾಸುಕಿ ವೈಭವ್‌ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಈ ಸಿನಿಮಾದೊಳಗಿನ ಸಿನಿಮಾಗೂ ಅವರೇ ಮ್ಯೂಸಿಕ್‌ ಡೈರೆಕ್ಟರ್‌! ಅವರ ಕೆಲಸ ಅಚ್ಚುಕಟ್ಟಾಗಿದೆ. ಪ್ರಮುಖ ಕಲಾವಿದರಾಗಿ ನಟರಾಜ್‌ ಮತ್ತು ಧರ್ಮಣ್ಣ ಅವರದ್ದು ಅತ್ಯುತ್ತಮ ನಟನೆ. ಅಂದುಕೊಂಡದ್ದನ್ನು ಸಾಧಿಸಲು ಯಾವ ಹಂತಕ್ಕೂ ಆಲೋಚಿಸುವ ಚಿತ್ರನಿರ್ದೇಶಕನಾಗಿ ನಟರಾಜ್‌ ಪಾತ್ರದಲ್ಲಿ ತಲ್ಲೀನತೆಯಿಂದ ತೊಡಗಿಸಿಕೊಂಡಿದ್ದಾರೆ. ಕೆಲವೆಡೆ ಪಾತ್ರಗಳಿಗೆ ಸಂಭಾಷಣೆ ಹೆಚ್ಚಾಯ್ತು ಎಂದುಕೊಳ್ಳುತ್ತಿದ್ದಾಗ ಧರ್ಮಣ್ಣ ಅವರ ಮಾತು, ಟೈಮಿಂಗ್‌ ಸನ್ನಿವೇಶಗಳನ್ನು ತಿಳಿಯಾಗಿಸುತ್ತದೆ.

ಈ ಚಿತ್ರದ ಮೂಲಕ ರಂಗಭೂಮಿ ಪ್ರತಿಭೆಗಳಾದ ಅಥರ್ವ ಪ್ರಕಾಶ್‌, ಮಯೂರಿ ನಟರಾಜ್‌, ಬೃಂದಾ ವಿಕ್ರಂ, ಶ್ರೀ ದತ್ತಾ ಮತ್ತಿತರರು ಬೆಳ್ಳಿತೆರೆಗೆ ಪರಿಚಯವಾಗಿದ್ದಾರೆ. ಸಿನಿಮಾ ಸೇರುವ ಉಮೇದಿನಿಂದ ಆಡಿಷನ್‌ಗೆ ಬರುವ ಇವರ ಪಾತ್ರಗಳೊಂದಿಗೆ ಪ್ರೇಕ್ಷಕರು ತಮ್ಮನ್ನು ತಾವು ಕಂಡುಕೊಳ್ಳಬಹುದು. ಪ್ರಸ್ತುತ ಪ್ಯಾನ್‌ ಇಂಡಿಯಾ ಕಾನ್ಸೆಪ್ಟ್‌ ಸಿನಿಮಾ ಸುದ್ದಿಗಳ ಮಧ್ಯೆ ‘ಮ್ಯಾನ್‌ ಆಫ್‌ ದಿ ಮ್ಯಾಚ್‌’, ಪ್ರಯೋಗ, ನಿರ್ದೇಶಕರ ಆಲೋಚನೆಯಿಂದ ಗಮನ ಸೆಳೆಯುತ್ತದೆ. ಅಮೇಜಾನ್‌ ಪ್ರೈಮ್‌ನಲ್ಲಿ ‘ಮ್ಯಾನ್‌ ಆಫ್‌ ದಿ ಮ್ಯಾಚ್‌’ ಸ್ಟ್ರೀಮ್‌ ಆಗುತ್ತಿದ್ದು, ರಿಯಲಿಸ್ಟಿಕ್‌ ಮತ್ತು ಪ್ರಯೋಗಶೀಲತೆ ಇಷ್ಟಪಡುವ ವೀಕ್ಷಕರಿಗೆ ಸಿನಿಮಾ ಇಷ್ಟವಾಗುತ್ತದೆ.

LEAVE A REPLY

Connect with

Please enter your comment!
Please enter your name here