ಚಿತ್ರನಿರ್ದೇಶಕ ಸಿಂಪಲ್ ಸುನಿ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಸಿನಿಮಾದ ನೂತನ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಅಭಿಷೇಕ್ ಎಂ ನಿರ್ದೇಶನದಲ್ಲಿ ದೀಕ್ಷಿತ್ ಶೆಟ್ಟಿ ಮತ್ತು ಬೃಂದಾ ಆಚಾರ್ಯ ನಟಿಸುತ್ತಿರುವ ಚಿತ್ರವಿದು. ಬ್ಯಾಂಕ್ ದರೋಡೆ ಮಾಡಲು ಹೊರಟವರ ಸುತ್ತ ಹೆಣೆದ ಹಾಸ್ಯ ಕತೆಯಿದು.
ದೀಕ್ಷಿತ್ ಶೆಟ್ಟಿ ಮತ್ತು ಬೃಂದಾ ಆಚಾರ್ಯ ನಟನೆಯ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಸಿನಿಮಾದ ನೂತನ ಪೋಸ್ಟರ್ ಬಿಡುಗಡೆಯಾಗಿದೆ. ಸಿಂಪಲ್ ಸುನಿ ಅವರೊಂದಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಅಭಿಷೇಕ್ ಎಂ ಸ್ವತಂತ್ರ್ಯ ನಿರ್ದೇಶನದ ಮೊದಲ ಚಿತ್ರವಿದು. ಈ ಹಿಂದೆ ಸುನಿ ನಿರ್ದೇಶನದ ‘ಸಿಂಪಲ್ ಆಗಿ ಒಂದ್ ಲವ್ಸ್ಟೋರಿ’, ‘ಬಹುಪರಾಕ್’ ಮತ್ತು ‘ಆಪರೇಷನ್ ಅಲಮೇಲಮ್ಮ’ ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ ಹಾಗೂ ಕೆಲವು ಸಿನಿಮಾಗಳಿಗೆ ಸಂಕಲನ ಮಾಡಿದ ಅನುಭವ ಅಭಿಷೇಕ್ ಅವರಿಗಿದೆ. ‘ಪಿನಾಕ’ VFX ಸ್ಟುಡಿಯೋ ಹೊಂದಿರುವ ಅಭಿಷೇಕ್ ಎಂ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ನಿರ್ದೇಶನದೊಂದಿಗೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಬ್ಯಾಂಕ್ವೊಂದನ್ನು ದರೋಡೆ ಮಾಡಲು ಹೊರಟವರ ಸುತ್ತ ಹೆಣೆಯಲಾದ ಹಾಸ್ಯ ಪ್ರಧಾನ ಕಥಾಹಂದರವಿದು.
‘ರಂಗಿ ತರಂಗ’, ‘ಅವನೇ ಶ್ರೀಮನ್ನಾರಾಯಣ’ ಸಿನಿಮಾಗಳ ಖ್ಯಾತಿಯ ನಿರ್ಮಾಪಕ ಹೆಚ್ ಕೆ ಪ್ರಕಾಶ್ ನಿರ್ಮಿಸುತ್ತಿರುವ ಚಿತ್ರವಿದು. ದಿಯಾ , ದಸರಾ (ತೆಲುಗು), KTM ಹಾಗೂ ಬ್ಲಿಂಕ್ ಸಿನಿಮಾಗಳ ಮೂಲಕ ಹೆಸರು ಮಾಡಿರುವ ದೀಕ್ಷಿತ್ ಶೆಟ್ಟಿ ತೆಲುಗು ಚಿತ್ರರಂಗದಲ್ಲೂ ಪರಿಚಿತರು. ಹಾಗಾಗಿ ಈ ಚಿತ್ರವನ್ನು ತೆಲುಗಿನಲ್ಲೂ ರಿಲೀಸ್ ಮಾಡುವುದು ನಿರ್ಮಾಪಕರ ಯೋಜನೆ. ಬೆಂಗಳೂರು, ತುಮಕೂರು ಹಾಗು ಚಿತ್ರದುರ್ಗ ಸುತ್ತ ಬಹುಪಾಲು ಚಿತ್ರೀಕರಣ ನಡೆದಿದೆ. ಮುಂದಿನ ತಿಂಗಳಿನೊಳಗೆ ಚಿತ್ರೀಕರಣ ಮುಕ್ತಾಯವಾಗಲಿದೆ. ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಅಭಿಷೇಕ್ ಜಿ ಕಾಸರಗೋಡು ಛಾಯಾಗ್ರಹಣ, ರಘು ಮೈಸೂರು ಕಲಾ ನಿರ್ದೇಶನ, ಭೂಷಣ್ ಮಾಸ್ಟರ್ ನೃತ್ಯ ಸಂಯೋಜನೆ ಚಿತ್ರಕ್ಕಿದೆ. ಸಾಧುಕೋಕಿಲ, ಗೋಪಾಲ ಕೃಷ್ಣ ದೇಶಪಾಂಡೆ, ಉಷಾ ಭಂಡಾರಿ, ಭರತ್, ವಿಶ್ವನಾಥ್, ಹರೀಶ್ ಸಮಷ್ಟಿ, ಅಶ್ವಿನ್ ರಾವ್ ಪಲ್ಲಕ್ಕಿ, ಶ್ರೇಯಸ್ ಶರ್ಮಾ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.