ಸಿನಿಮಾಗಳ ರೀ ರಿಲೀಸ್ ಈಗ ಟ್ರೆಂಡ್ ಆಗಿದೆ. ಹೊಸ ಸಿನಿಮಾಗಳ ರಿಲೀಸ್ ನಡುವಿನ ಅಂತರವನ್ನು ಕಡಿಮೆ ಮಾಡಲು ಮತ್ತು ಥಿಯೇಟರ್ ಆಕ್ಯುಪೆನ್ಸಿಯನ್ನು ಕಾಪಾಡಿಕೊಳ್ಳಲು ಸಿನಿಮಾಗಳನ್ನು ರೀ-ರಿಲೀಸ್ ಮಾಡಲಾಗುತ್ತದೆ. ಈ ವಿಧಾನವು ಪ್ರೇಕ್ಷಕರಿಗೆ ದೊಡ್ಡ ಪರದೆಯ ಮೇಲೆ ಹಳೇ ಸಿನಿಮಾಗಳನ್ನು ಆಸ್ವಾದಿಸುವ ಅವಕಾಶವನ್ನು ಒದಗಿಸುವುದಲ್ಲದೆ, ಸ್ಟಾರ್ ನಟರ ಹೊಸ ಸಿನಿಮಾ ರಿಲೀಸ್ ಕೊರತೆಯಿರುವ ಅವಧಿಯಲ್ಲಿ ಮಲ್ಟಿಪ್ಲೆಕ್ಸ್‌ಗಳಿಗೆ ಜನರು ಬರುವಂತೆ ಮಾಡುತ್ತವೆ.
ನಮ್ಮ ಕಾಲದ ಸಿನಿಮಾಗಳನ್ನು ನೀವು ನೋಡಬೇಕಿತ್ತು. ಅದರಲ್ಲಿನ ರೊಮ್ಯಾನ್ಸ್, ಕತೆ ಅದೆಷ್ಟು ಚಂದವಾಗಿರುತ್ತಿತ್ತು. ಆ ಸಿನಿಮಾಗಳ ಹಾಡುಗಳು ಈಗಲೂ ನೆನಪಿದೆ. ಆದರೆ ಈಗ ಬರುವ ಸಿನಿಮಾಗಳು ನೆನಪಿನಲ್ಲಿ ಉಳಿಯುವುದೇ ಕಡಿಮೆ. ಪ್ರತೀ ಜನರೇಷನ್ ತಮ್ಮ ಹಿಂದಿನ ಜನರೇಷನ್‌ನಿಂದ ಈ ಒಂದು ಮಾತನ್ನು ಕೇಳಿರುತ್ತದೆ. ಎಲ್ಲರಿಗೂ ಅವರವರ ಕಾಲದಲ್ಲಿ ಬಂದ ಸಿನಿಮಾಗಳೇ ಬೆಸ್ಟ್ ಆಗಿರುತ್ತವೆ. ಅದರಲ್ಲೂ ಹಳೇ ಸಿನಿಮಾಗಳು ಬಾಲ್ಯ, ಯೌವನ, ಗೆಳೆತನ, ಪ್ರೀತಿ, ವಿರಹ ಹೀಗೆ ಬದುಕಿನ ಹಲವು ಸಂಗತಿಗಳನ್ನು ನೆನಪಿಸುವಂಥವು. ನಾಸ್ಟಾಲ್ಜಿಯಾ ಯಾರಿಗೆ ಇಷ್ಟವಾಗಲ್ಲ ಹೇಳಿ? ಸಿನಿಮಾದವರು ಇದನ್ನೇ ಬಂಡವಾಳ ಮಾಡಿಕೊಂಡು ಹಳೇ ಸಿನಿಮಾಗಳನ್ನು ಮತ್ತೆ ಬಿಡುಗಡೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಸಿನಿಮಾ ಥಿಯೇಟರ್‌ಗಳಲ್ಲಿ ಹೊಸ ಸಿನಿಮಾಗಳು ಇಲ್ಲದೇ ಇದ್ದಾಗ ಅಥವಾ ಥಿಯೇಟರ್ ಖಾಲಿ ಹೊಡೆಯುತ್ತಿದ್ದರೆ ಜನರನ್ನು ಚಿತ್ರಮಂದಿರಕ್ಕೆ ಕರೆ ತರುವುದಕ್ಕಾಗಿ ಹಳೇ ಸಿನಿಮಾಗಳನ್ನು ಪ್ರದರ್ಶಿಸುವುದುಂಟು. ಅದೇ Movie Rerelease ಟ್ರೆಂಡ್. 2024ರಲ್ಲಿ ಬಾಲಿವುಡ್‌ನ ಹಲವಾರು ಸಿನಿಮಾಗಳು ರೀ-ರಿಲೀಸ್ ಆಗಿ ಸಿನಿಮಾ ಪ್ರೇಮಿಗಳನ್ನು ಚಿತ್ರಮಂದಿರಕ್ಕೆ ಕರೆತಂದಿವೆ. ವೀರ್-ಝಾರಾ, ಲೈಲಾ ಮಜ್ನೂ, ರಾಕ್ ಸ್ಟಾರ್, ಜಬ್ ವೀ ಮೆಟ್, ತುಂಬಾಡ್ ಮೊದಲಾದ ಜನಪ್ರಿಯ ಚಿತ್ರಗಳು ಮತ್ತೊಮ್ಮೆ ಬಿಡುಗಡೆಯಾಗಿ ಯಶಸ್ಸನ್ನೂ ಕಂಡಿವೆ.
‘ಲೈಲಾ ಮಜ್ನು’ ಸಿನಿಮಾಕ್ಕೆ ಚಿತ್ರಕತೆ ಬರೆದಿದ್ದ ಇಮ್ತಿಯಾಜ್ ಅಲಿ, ಸಿನಿಮಾಗಳ ರೀ-ರಿಲೀಸ್ ಟ್ರೆಂಡ್ ಬಗ್ಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ‘ಕ್ಲಾಸಿಕ್ ಸಿನಿಮಾಗಳನ್ನು ಮತ್ತೆ ಮರಳಿ ತರುತ್ತಿರುವುದು ಒಳ್ಳೆಯ ಬೆಳವಣಿಗೆ. ಮೊದಲ ಬಾರಿ ನೀರಸ ಪ್ರತಿಕ್ರಿಯೆ ದೊರೆತ ಸಿನಿಮಾಗಳು ರೀ-ರಿಲೀಸ್ ಆದಾಗ ಅದ್ಭುತ ಪ್ರತಿಕ್ರಿಯೆ ಪಡೆಯುತ್ತಿರುವುದು ಕಂಡು ಖುಷಿಯಾಗುತ್ತದೆ. ಒಳ್ಳೆಯ ಸಿನಿಮಾಗಳು ಎಂದೆಂದಿಗೂ ಉಳಿಯುತ್ತವೆ ಎಂದು ನನಗೆ ಅನಿಸುತ್ತದೆ’ ಎಂದಿದ್ದಾರೆ. ಕ್ಲಾಸಿಕ್ ಜಾನಪದ ಕತೆ ಲೈಲಾ ಮಜ್ನೂವಿನ ಆಧುನಿಕ ರೂಪಾಂತರವಾದ ಇದು, 2018ರಲ್ಲಿ ಬಿಡುಗಡೆಯಾದಾಗ ಬಾಕ್ಸ್ ಆಫೀಸ್‌ನಲ್ಲಿ ನೀರಸ ಪ್ರತಿಕ್ರಿಯೆ ಗಳಿಸಿತ್ತು. ಆದರೆ ಓಟಿಟಿಗೆ ಬಂದಾಗ ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅವಿನಾಶ್ ತಿವಾರಿ ಮತ್ತು ತ್ರಿಪ್ತಿ ಧಿಮ್ರಿ ನಟನೆಯ ಈ ಸಿನಿಮಾ ರೀ-ರಿಲೀಸ್ ಆದಾಗ 11 ಕೋಟಿ ಗಳಿಸಿತ್ತು.
ಅದೇ ವೇಳೆ ಸೋಹಮ್ ಶಾ ನಿರ್ಮಾಣ, ರಾಹಿ ಅನಿಲ್ ಬಾರ್ವೆ ಮತ್ತು ಆನಂದ್ ಗಾಂಧಿ ನಿರ್ದೇಶನದ ಸಿನಿಮಾ ‘ತುಂಬಾಡ್’, ಸ್ಟಾರ್ ನಟರು ಯಾರೂ ಇಲ್ಲದೆ ಕತೆಯಿಂದಲೇ ಗೆದ್ದ ಸಿನಿಮಾ. 2017ರಲ್ಲಿ ಇದು ಬಿಡುಗಡೆಯಾದಾಗ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಗಳಿಕೆಯಲ್ಲಿ ಹಿಂದುಳಿದಿತ್ತು. ಆದರೆ ಇದೇ ಸಿನಿಮಾ ಈ ವರ್ಷ ಮತ್ತೊಮ್ಮೆ ಬಿಡುಗಡೆಯಾದಾಗ ಮೊದಲು ಗಳಿಸಿದ್ದಕ್ಕಿಂತ ಮೂರು ಪಟ್ಟು ಹೆಚ್ಚು ಹಣ ಗಳಿಸಿದೆ.
ಈ ಸಿನಿಮಾಗಳ ಜತೆಗೆ ಮೈನೆ ಪ್ಯಾರ್ ಕಿಯಾ, ಕಲ್ ಹೋ ನಾ ಹೋ, ಕರಣ್ ಅರ್ಜುನ್, ಪರ್ದೇಸ್, ರೆಹನಾ ಹೈ ತೇರೆ ದಿಲ್ ಮೇ, ಗ್ಯಾಂಗ್ಸ್ ಆಫ್ ವಾಸೇಪುರ್, ದಿಲ್‌ವಾಲೇ ದುಲ್ಹನಿಯಾ ಲೇ ಜಾಯೇಂಗೆ, ಚಕ್ ದೇ ಇಂಡಿಯಾ, ಯೇ ಜವಾನಿ ಹೈ ದಿವಾನಿ, ಹಮ್ ಆಪ್ಕೆ ಹೈ ಕೌನ್ ಕೂಡಾ ರೀ-ರಿಲೀಸ್ ಆಗಿವೆ. ”ಒಬ್ಬ ಚಿತ್ರ ನಿರ್ಮಾಪಕನಾಗಿ ‘ಕರುಣ್ ಅರ್ಜುನ್’ಸಿನಿಮಾ ನನಗೆ ಹೊಸ ಪ್ರಯೋಗ. ಇದು ಪುನರ್ಜನ್ಮದ ಕತೆ ಹೇಳುವ ಕಾರಣ ಈಗಿನ ಪೀಳಿಗೆ ಇದನ್ನು ಯಾವ ರೀತಿ ಸ್ವೀಕರಿಸುತ್ತಾರೋ ಎಂಬುದು ನನಗೆ ಚಿಂತೆಯಾಗಿತ್ತು. ಇಂಥಾ ಸಿನಿಮಾಗಳು ಪ್ರಸ್ತುತ ಪೀಳಿಗೆಯ ಸಿನಿಪ್ರಿಯರ ಮನಸ್ಥಿತಿಯನ್ನು ಅಳೆಯಲು ಸಹಾಯ ಮಾಡುತ್ತದೆ’ ಎಂದಿದ್ದರು ರಾಕೇಶ್ ರೋಷನ್ .
Gap Fillers! | ಹೊಸ ಸಿನಿಮಾಗಳ ರಿಲೀಸ್ ನಡುವಿನ ಅಂತರವನ್ನು ಕಡಿಮೆ ಮಾಡಲು ಮತ್ತು ಥಿಯೇಟರ್ ಆಕ್ಯುಪೆನ್ಸಿಯನ್ನು ಕಾಪಾಡಿಕೊಳ್ಳಲು ಸಿನಿಮಾಗಳನ್ನು ರೀ-ರಿಲೀಸ್ ಮಾಡಲಾಗುತ್ತದೆ. ಈ ವಿಧಾನವು ಪ್ರೇಕ್ಷಕರಿಗೆ ದೊಡ್ಡ ಪರದೆಯ ಮೇಲೆ ಹಳೇ ಸಿನಿಮಾಗಳನ್ನು ಆಸ್ವಾದಿಸುವ ಅವಕಾಶವನ್ನು ಒದಗಿಸುವುದಲ್ಲದೆ, ಸ್ಟಾರ್ ನಟರ ಹೊಸ ಸಿನಿಮಾ ರಿಲೀಸ್ ಕೊರತೆಯಿರುವ ಅವಧಿಯಲ್ಲಿ ಮಲ್ಟಿಪ್ಲೆಕ್ಸ್‌ಗಳಿಗೆ ಜನರು ಬರುವಂತೆ ಮಾಡುತ್ತವೆ. ‘ಹಳೇ ಸಿನಿಮಾಗಳನ್ನು ಮತ್ತೊಮ್ಮೆ ಬಿಡುಗಡೆ ಮಾಡುವುದು ಥಿಯೇಟರ್ ತುಂಬಿಸಲು ಮತ್ತು ಹೊಸ ಸಿನಿಮಾ ರಿಲೀಸ್ ಇಲ್ಲದೇ ಇದ್ದಾಗ ಪ್ರೇಕ್ಷಕರನ್ನು ಥಿಯೇಟರ್‌ಗೆ ಬರುವಂತೆ ಮಾಡುವ ವಿಧಾನವಾಗಿದೆ’ ಎನ್ನುತ್ತಾರೆ ಮೀರಜ್ ಎಂಟರ್‌ಟೇನ್‌ಮೆಂಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅಮಿತ್ ಶರ್ಮಾ.
ಭಾರತದಲ್ಲಿ, ರೀ-ರಿಲೀಸ್ ಆಗುವ ಸಿನಿಮಾದ ಟಾರ್ಗೆಟ್ ಆಡಿಯನ್ಸ್ ನಗರದ ಸಿನಿಪ್ರೇಮಿಗಳೇ ಆಗಿರುತ್ತಾರೆ. ವಿಶೇಷವಾಗಿ ಮಹಾನಗರಗಳಲ್ಲಿ ನಾಸ್ಟಾಲ್ಜಿಯಾ ಮತ್ತು ದೊಡ್ಡ ಪರದೆಯ ಅನುಭವದ ಆಕರ್ಷಣೆಯು ವೀಕ್ಷಕರನ್ನು ಮತ್ತೆ ಚಿತ್ರಮಂದಿರಗಳತ್ತ ಸೆಳೆಯುತ್ತದೆ. ‘ಇಲ್ಲಿ ಸಿನಿಮಾ ನೋಡುವವರು ಮಿಲೇನಿಯಲ್ಸ್ ಮತ್ತು Gen Z. ಮಿಲೇನಿಯಲ್ಸ್‌ಗೆ ಇಂಥಾ ಸಿನಿಮಾಗಳು ನಾಸ್ಟಾಲ್ಜಿಯಾ ಆಗಿದ್ದರೆ Gen Zಗಳಿಗೆ ಇದು ಕುತೂಹಲವನ್ನುಂಟು ಮಾಡುವ ಸಂಗತಿ. ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಸಿನಿಮಾಗಳು ಸುಲಭವಾಗಿ ಲಭ್ಯವಿದ್ದರೂ ಸಹ, ರೀ-ರಿಲೀಸ್ ಯಶಸ್ಸು ಈ ಆಕರ್ಷಣೆಯನ್ನು ಒತ್ತಿಹೇಳುತ್ತದೆ’ ಅಂತಾರೆ ಇಂಡಿಯಾ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಕಮಲ್ ಗಿಯಾನ್‌ಚಂದಾನಿ. ‘ರೀ-ರಿಲೀಸ್ ಚಿತ್ರಗಳು ಮುಖ್ಯವಾಗಿ ನಗರ ಕೇಂದ್ರಗಳನ್ನು ಗುರಿಯಾಗಿಸಿಕೊಂಡಿದ್ದರೂ, ಗ್ರಾಮೀಣ ಪ್ರದೇಶಗಳಲ್ಲಿ ಅವುಗಳ ಆಕರ್ಷಣೆ ಸೀಮಿತವಾಗಿರಬಹುದು’ ಎಂದು ವಿಶ್ಲೇಷಕ ತರಣ್ ಆದರ್ಶ್ ಅಭಿಪ್ರಾಯಪಟ್ಟಿದ್ದಾರೆ.
ರೀ-ರಿಲೀಸ್ ಟ್ರೆಂಡ್ ಹೊಸತಲ್ಲ | ಚಿತ್ರಗಳನ್ನು ಮರು-ಬಿಡುಗಡೆ ಮಾಡುವ ಪ್ರವೃತ್ತಿ ಬಾಲಿವುಡ್‌ಗೆ ಹೊಸದಲ್ಲ. 70, 80 ಮತ್ತು 90 ರ ದಶಕಗಳಲ್ಲಿ ಮದರ್ ಇಂಡಿಯಾ, ಮೊಘಲ್-ಎ-ಆಜಮ್, ಶೋಲೆ ಮತ್ತು ಆಂಖೇ ಸಿನಿಮಾಗಳು ಪ್ರೇಕ್ಷಕರ ಬೇಡಿಕೆ ಮೇರೆಗೆ ಮತ್ತೆ ರಿಲೀಸ್ ಆಗಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಲ್ಲಿ ಇಳಿಕೆ ಮತ್ತು ಆಸಕ್ತಿದಾಯಕ ಹೊಸ ಚಲನಚಿತ್ರಗಳ ಕೊರತೆ ನೀಗಿಸಲು ಮರು ಬಿಡುಗಡೆ ಪ್ರವೃತ್ತಿ ಶುರುವಾಯಿತು. ಈ ಪ್ರವೃತ್ತಿ ದೊಡ್ಡ ಪ್ರಮಾಣದಲ್ಲಿ ಆದಾಗ ಪ್ರದರ್ಶಕರು ಮತ್ತು ಥಿಯೇಟರ್ ಮಾಲೀಕರು ‘ನಾಸ್ಟಾಲ್ಜಿಯಾ ಶೋ’ನ ಕಮರ್ಷಿಯಲ್ ಸಾಧ್ಯತೆಯತ್ತ ನೋಡತೊಡಗಿದರು.
‘ನಮ್ಮ ರೀ-ರಿಲೀಸ್ ತಂತ್ರವು ಆರಂಭದಲ್ಲಿ ಒಂದು ಪ್ರಯೋಗವಾಗಿಯೂ ಎರಡು ಸಿನಿಮಾಗಳ ರಿಲೀಸ್ ನಡುವಿನ ಅಂತರವನ್ನು ತುಂಬುವ ಮಾರ್ಗವಾಗಿ ಪ್ರಾರಂಭವಾಯಿತು. ಆದಾಗ್ಯೂ, ನಾವು ರಾಕ್‌ಸ್ಟಾರ್, ಜಬ್ ವಿ ಮೆಟ್ ಮತ್ತು ತುಂಬಾಡ್‌ನಂಥಾ ಐಕಾನಿಕ್ ಸಿನಿಮಾಗಳನ್ನು ಮರು-ಬಿಡುಗಡೆಗಳಿಗಾಗಿ ಕ್ಯುರೇಟ್ ಮಾಡಲು ಪ್ರಾರಂಭಿಸಿದಾಗ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಈ ರೀ-ರಿಲೀಸ್ ಟ್ರೆಂಡ್ ಈಗ ಪೀಳಿಗೆಗಳನ್ನು ಒಂದುಗೂಡಿಸುವ ಪ್ರಬಲ ಮಾರ್ಗವೂ, ಸಿನಿಪ್ರಿಯರಿಗೆ ನೆನಪುಗಳನ್ನು ಮೆಲುಕು ಹಾಕುವ ಅವಕಾಶವಾಗಿದೆ. ಇದು ಮೊದಲ ಬಾರಿಗೆ ವೀಕ್ಷಕರಿಗೆ ದೊಡ್ಡ ಪರದೆಯ ಮೇಲೆ ಕ್ಲಾಸಿಕ್‌ಗಳನ್ನು ಅನುಭವಿಸುವ ಅವಕಾಶವನ್ನು ನೀಡುತ್ತದೆ ಮತ್ತು ನಾಸ್ಟಾಲ್ಜಿಕ್ ಅಭಿಮಾನಿಗಳಿಗೆ ಅಮೂಲ್ಯವಾದ ನೆನಪುಗಳನ್ನು ಮೆಲುಕು ಹಾಕುವ ಅವಕಾಶವನ್ನು ನೀಡುತ್ತದೆ’ ಅಂತಾರೆ ಪಿವಿಆರ್ ಐನಾಕ್ಸ್‌ನ ಪ್ರಮುಖ ತಂತ್ರಜ್ಞೆ ನಿಹಾರಿಕಾ ಬಿಜ್ಲಿ.
‘ಹಳೆಯ ಚಲನಚಿತ್ರಗಳ ಟಿಕೆಟ್ ಬೆಲೆ ಹೊಸ ಚಲನಚಿತ್ರಗಳಿಗಿಂತ ತುಂಬಾ ಕಡಿಮೆ. 2024ರಲ್ಲಿ ಸರಾಸರಿ ಶೇ. 26 ರಷ್ಟು ಚಿತ್ರಗಳ ಮರು ಬಿಡುಗಡೆಯಾಗಿದೆ. ಹೊಸ ಸಿನಿಮಾಗಳು ಕಡಿಮೆ ಇರುವ ಈ ಅವಧಿಯಲ್ಲಿ ಸಿನಿಮಾಗಳನ್ನು ಮರು ಬಿಡುಗಡೆ ಮಾಡುವುದನ್ನು ಮುಂದುವರಿಸುವುದು ಅರ್ಥಪೂರ್ಣವಾಗಿದೆ’ ಎಂಬುದು ಸಿನೆಪೊಲಿಸ್ ಇಂಡಿಯಾದ ಕಮರ್ಷಿಯಲ್ ಮುಖ್ಯಸ್ಥ ಆಶಿಶ್ ಮಿಶ್ರಾ ಅಭಿಪ್ರಾಯ.
ಸಿನಿಮಾಗಳ ವಾರ್ಷಿಕೋತ್ಸವ ಆಚರಿಸಿ ಅವುಗಳನ್ನು ಬಿಡುಗಡೆ ಮಾಡುವುದು ಕೂಡಾ ರೀ-ರಿಲೀಸ್ ಟ್ರೆಂಡ್‌ನ ಭಾಗವಾಗಿದೆ. ರಣ್‌ಬೀರ್ ಕಪೂರ್ ನಟನೆಯ ‘ವೇಕ್ ಅಪ್ ಸಿದ್’ ಸಿನಿಮಾದ 15ನೇ ವಾರ್ಷಿಕೋತ್ಸವದ ಅಂಗವಾಗಿ ಅದನ್ನು ಮತ್ತೆ ರಿಲೀಸ್ ಮಾಡಲಾಗಿತ್ತು. ಇತ್ತೀಚೆಗೆ ರಾಜ್ ಕಪೂರ್ ಅವರ 100ನೇ ಜನ್ಮದಿನಾಚರಣೆ ಪ್ರಯುಕ್ತ ಅವರ ಕೆಲವು ಸಿನಿಮಾಗಳನ್ನು ಪ್ರದರ್ಶಿಸಲಾಗಿತ್ತು. ಕರೀನಾಕಪೂರ್ ತಮ್ಮ ವೃತ್ತಿಜೀವನದಲ್ಲಿ 25 ವರ್ಷ ಪೂರೈಸಿದಾಗ ಪಿವಿಆರ್ ಸಿನಿಮಾಸ್ ,ವಿಶೇಷ ಸಿನಿಮೋತ್ಸವ ಆಚರಿಸುವ ಮೂಲಕ ಕರೀನಾಳ ಹಿಟ್ ಸಿನಿಮಾಗಳ ರೀ-ರಿಲೀಸ್ ಮಾಡಿತ್ತು.
ರೀ-ರಿಲೀಸ್‌ನಲ್ಲಿ ಹಣ ಮಾಡಿದ films | 2024ರಲ್ಲಿ ರೀ-ರಿಲೀಸ್ ಆದ ಸಿನಿಮಾಗಳ ಪೈಕಿ ಅತೀ ಹೆಚ್ಚು ಗಳಿಸಿದ ಚಿತ್ರ ‘ತುಂಬಾಡ್’. ಕೇವಲ ₹5ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರ 2017ರಲ್ಲಿ ರಿಲೀಸ್ ಆದಾಗ ₹15 ಕೋಟಿಗಳಿಸಿತ್ತು. ಆದರೆ ಮರುಬಿಡುಗಡೆಯಾದಾಗ ಗಳಿಸಿದ್ದು ₹38 ಕೋಟಿ. ರೀ-ರಿಲೀಸ್ ಮೂಲಕ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ ವಿಜಯ್ ಅಭಿನಯದ ‘ಗಿಲ್ಲಿ’ ಸಿನಿಮಾ ₹26 ಕೋಟಿ ಗಳಿಸಿತ್ತು. ಅದೇ ವೇಳೆ ರಣ್‌ಬೀರ್ ಕಪೂರ್ ನಟನೆಯ ‘ರಾಕ್ ಸ್ಟಾರ್’ ₹10.50 ಕೋಟಿ, ಶಾರುಖ್ ಖಾನ್ ನಟನೆಯ ‘ಕಲ್ ಹೋ ನ ಹೋ’ ₹2.50 ಕೋಟಿ, ಚಿರಂಜೀವಿ ನಟನೆಯ ‘ಇಂದ್ರ’ ₹3.20 ಕೋಟಿ ಗಳಿಸಿತ್ತು. 6 ಸಿನಿಮಾಗಳು ರೀ-ರಿಲೀಸ್ ಆದಾಗ ಲಕ್ಷಕ್ಕಿಂತಲೂ ಹೆಚ್ಚು ಟಿಕೆಟ್ ಮಾರಾಟ ಕಂಡಿದ್ದವು, ‘ಕಲ್ ಹೋ ನ ಹೋ’ ಸಿನಿಮಾ 1 ಲಕ್ಷಕ್ಕೂ ಹೆಚ್ಚು ಟಿಕೆಟ್ ಮಾರಾಟ ಕಂಡರೆ ‘ರಾಕ್ ಸ್ಟಾರ್’ ಸಿನಿಮಾದ 3 ಲಕ್ಷ ಟಿಕೆಟ್ ಮಾರಾಟವಾಗಿದೆ. ‘ಗಬ್ಬರ್ ಸಿಂಗ್’ ಸಿನಿಮಾ 2.10 ಲಕ್ಷ , ‘ಮುರಾರಿ’ 2.58 ಲಕ್ಷ ಟಿಕೆಟ್ ಮಾರಾಟ ಕಂಡರೆ ‘ಗಿಲ್ಲಿ’ ಸಿನಿಮಾದ 4 ಲಕ್ಷ ಮತ್ತು ‘ತುಂಬಾಡ್’ ಸಿನಿಮಾದ 10.25 ಲಕ್ಷ ಟಿಕೆಟ್ ಗಳು ಮಾರಾಟವಾಗಿವೆ.
ಪ್ರಾದೇಶಿಕ ಸಿನಿಮಾಗಳ ರೀ-ರಿಲೀಸ್ | ಬಾಕ್ಸ್ ಆಫೀಸ್ ಇಂಡಿಯಾ ದತ್ತಾಂಶದ ಪ್ರಕಾರ, 20 ವರ್ಷಗಳ ನಂತರ ಮರು ಬಿಡುಗಡೆಯಾದ ‘ಗಿಲ್ಲಿ’ ಚಿತ್ರವು 30 ಕೋಟಿ ರೂ. ಸಂಗ್ರಹಿಸಿದೆ. ಐಎಂಡಿಬಿ ಪ್ರಕಾರ, ಮರು ಬಿಡುಗಡೆಯಾದ ಒಂಬತ್ತನೇ ದಿನದಂದು ‘ಗಿಲ್ಲಿ’ ಸಿನಿಮಾ, ರಜನಿಕಾಂತ್ ಅಭಿನಯದ ‘ಲಾಲ್ ಸಲಾಮ್’ ಚಿತ್ರದ ಗಳಿಕೆಯನ್ನು ಮೀರಿಸಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯದ ‘ದೇವದೂತನ್’ ಮಲಯಾಳಂ ಚಿತ್ರವನ್ನು 4K ರೀಮಾಸ್ಟರ್ ಮಾಡಿ ಜುಲೈ 26ರಂದು ಮರು ಬಿಡುಗಡೆ ಮಾಡಲಾಯಿತು. ಇದು ಜಾಗತಿಕ ಮಟ್ಟದಲ್ಲಿ 5.2 ಕೋಟಿ ಗಳಿಸಿದೆ. 1993ರ ಹಿಟ್ ಚಿತ್ರ ‘ಮಣಿಚಿತ್ರತಾಳ್’ ಕೂಡಾ 4K ರೀಮಾಸ್ಟರ್ಡ್ ಆಗಿ ರೀ-ರಿಲೀಸ್ ಆಗಿತ್ತು. ಮೊದಲ ಬಾರಿ ಬಿಡುಗಡೆಯಾದಾಗ ಬಾಕ್ಸ್ ಆಫೀಸಿನಲ್ಲಿ 7 ಕೋಟಿ ಗಳಿಸಿದ್ದ ಈ ಸಿನಿಮಾ ರೀ-ರಿಲೀಸ್ ಆದ ಮೊದಲ ದಿನವೇ 50 ಲಕ್ಷ ಗಳಿಸಿತ್ತು. ಕನ್ನಡದಲ್ಲಿ ಕರಿಯ, ಓಂ, ಉಪೇಂದ್ರ, A, ನವಗ್ರಹ, ಶಾಸ್ತ್ರಿ, ಜಾಕಿ, ಅಂಜನೀಪುತ್ರ, ಪವರ್ ಸ್ಟಾರ್, ವಿಷ್ಣು ವರ್ಧನ್ ನಟನೆಯ ಕೃಷ್ಣಾ ನೀ ಬೇಗನೆ ಬಾರೋ, ಸಂಗೊಳ್ಳಿ ರಾಯಣ್ಣ ಸೇರಿದಂತೆ ಹಲವುಸ ಇನಿಮಾಗಳು ರೀ-ರಿಲೀಸ್ ಆಗಿವೆ. 2024ರಲ್ಲಿ ಪುನೀತ್ ರಾಜಕುಮಾರ್ ಮತ್ತು ದರ್ಶನ್ ಅಭಿನಯದ ಹೆಚ್ಚು ಸಿನಿಮಾಗಳು ರೀ ರಿಲೀಸ್ ಆದವು.
ರೀ-ರಿಲೀಸ್ ಆದ ಸಿನಿಮಾಗಳ ಪೈಕಿ ಹಿಂದಿ ಸಿನಿಮಾಗಳ ಸಂಖ್ಯೆ ಜಾಸ್ತಿ. ಇತ್ತೀಚೆಗೆ ಬಿಡುಗಡೆಯಾಗುವ ಸಿನಿಮಾಗಳ ಸಂಖ್ಯೆಯೂ ಕಡಿಮೆಯಾಗಿದೆ. ಸ್ಟಾರ್ ನಟರ ಸಿನಿಮಾಗಳು ಇಲ್ಲದೇ ಇರುವುದು, ಬಿಗ್ ಬಜೆಟ್ ಚಿತ್ರಗಳ ನಡುವೆ ಸಿಕ್ಕಾಪಟ್ಟೆ ಅಂತರವಿರುವುದು ಕೂಡಾ ಥಿಯೇಟರ್‌ನಲ್ಲಿ ಪ್ರೇಕ್ಷಕರ ಕೊರತೆಗೆ ಕಾರಣವಾಗುತ್ತದೆ. ಸ್ಟಾರ್ ನಟರ ಸಿನಿಮಾ ಅಥವಾ ಬಹುನಿರೀಕ್ಷಿತ ಚಿತ್ರಗಳು ಬಿಡುಗಡೆಯಾಗುವುದಕ್ಕೆ ಹೆಚ್ಚಿನ ಸಮಯ ತೆಗೆದುಕೊಂಡರೆ ಆ ಗ್ಯಾಪ್ ತುಂಬುವುದಕ್ಕಾಗಿ ಹಳೇ ಚಿತ್ರಗಳನ್ನು ಬಿಡುಗಡೆ ಮಾಡಲಾಗುತ್ತದೆ. ಈಗಿನ ಸಿನಿಮಾಗಳು ಚಿತ್ರೀಕರಣಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿರುವುದು ಕೂಡಾ ಸಿನಿಮಾಗಳ ಬಿಡುಗಡೆ ವಿಳಂಬಕ್ಕೆ ಕಾರಣವಾಗುತ್ತದೆ. ಹಾಗೆ ನೋಡಿದರೆ ಮಲಯಾಳಂ ಸಿನಿಮಾರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಹೊಸ ಹೊಸ ಸಿನಿಮಾಗಳು ಬರುತ್ತಲೇ ಇರುತ್ತವೆ. ಆದರೆ ಬಾಲಿವುಡ್‌ನಲ್ಲಿ ಸ್ಟಾರ್ ನಟರ ಸಿನಿಮಾಗಳು ಬರದೇ ಇರುವಾಗ ಅಥವಾ ಸಿನಿಮಾಗಳು ಫ್ಲಾಪ್ ಆದಾಗ ಜನರನ್ನು ಆಕರ್ಷಿಸಲು ಹಳೇ ಸಿನಿಮಾಗಳ ರೀ-ರಿಲೀಸ್ ಅನಿವಾರ್ಯವಾಗಿ ಬಿಡುತ್ತದೆ.
2025 ರಲ್ಲಿಯೂ ಮುಂದುವರಿಯಲಿದೆಯೇ ಈ ಟ್ರೆಂಡ್? | ‘2024ರಲ್ಲಿ ಬ್ಲಾಕ್‌ಬಸ್ಟರ್‌ಗಳು ಇರಲಿಲ್ಲ, ಆದ್ದರಿಂದ ಸಿನಿಮಾಗಳು ರೀ-ರಿಲೀಸ್ ಆದಾಗ ಜನರು ಥಿಯೇಟರ್‌ಗೆ ಬಂದರು. ಆದರೆ 2025ನಲ್ಲಿ ಬಹುನಿರೀಕ್ಷಿತ ಚಿತ್ರಗಳ ಬಿಡುಗಡೆ ಇರುವುದರಿಂದಾಗಿ ಈ ವರ್ಷದಂತೆ ಹೆಚ್ಚಿನ ಸಂಖ್ಯೆಯಲ್ಲಿ ರೀ-ರಿಲೀಸ್ ಇಲ್ಲದಿರಬಹುದು. ಹೊಸ ಚಿತ್ರಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕರೆ ರೀ-ರಿಲೀಸ್ ಅವಕಾಶ ಕಡಿಮೆ’ ಎಂದು ಮಿಶ್ರಾ ಹೇಳಿದ್ದಾರೆ.