‘RRR’ ಸಿನಿಮಾ ಮೂಲಕ ನಿರ್ದೇಶಕ ರಾಜಮೌಳಿ ಮತ್ತೆ ಸದ್ದು ಮಾಡುತ್ತಿದ್ದಾರೆ. ಚಿತ್ರದ ಪ್ರೊಮೋಷನ್‌ಗೆಂದು ಬಂದಿದ್ದ ಅವರು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು. ಈ ಪ್ರಶ್ನೋತ್ತರದಲ್ಲಿ ಸಿನಿಮಾ ಕುರಿತ ಅವರ ನಿಲುವು, ಗ್ರಹಿಕೆಗಳು ವ್ಯಕ್ತವಾದವು.

ಎಮೊಷನ್ಸ್‌ ಇಲ್ಲದಿದ್ದರೆ ಸಿನಿಮಾ ಪ್ರೇಕ್ಷಕರಿಗೆ ಕನೆಕ್ಟ್‌ ಆಗುವುದಿಲ್ಲ ಎಂದು ಬಲವಾಗಿ ನಂಬಿರುವ ನಿರ್ದೇಶಕ ರಾಜಮೌಳಿ. ಈ ಹಿಂದಿನ ಅವರ ಎಲ್ಲಾ ಚಿತ್ರಗಳ ಯಶಸ್ಸಿನ ಹಿನ್ನೆಲೆಯಲ್ಲಿ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸುತ್ತಾರೆ. ಸದೃಢ ಕತೆ ಮತ್ತು ಪಾತ್ರಗಳಲ್ಲಿ ಪ್ರೇಕ್ಷಕರು ಒಳಗೊಳ್ಳುವಂತೆ ನಿರೂಪಿಸುವುದು ಮುಖ್ಯ ಎನ್ನುತ್ತಾರವರು. ಈಗ ‘RRR’ ಸಿನಿಮಾ ಸಂದರ್ಭದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದು ಹೀಗೆ…

ನಿಮ್ಮ ಸಿನಿಮಾ ಕೆರಿಯರ್‌ನಲ್ಲಿ ನೀವು ಫೇಲ್ಯೂರ್‌ ನೋಡಿಯೇ ಇಲ್ಲ. ನಿಮ್ಮ ಸಕ್ಸಸ್‌ ಸೀಕ್ರೇಟ್‌ ಏನು?

ಊಹೂಂ, ನನ್ನ ಸಕ್ಸಸ್‌ ಸೀಕ್ರೇಟ್‌ ಖಂಡಿತ ನನಗೆ ಗೊತ್ತಿಲ್ಲ. ನಾನು ನನ್ನ ಪ್ರತೀ ಚಿತ್ರವನ್ನೂ ಮೊದಲ ಸಿನಿಮಾ ಎಂದೇ ಭಾವಿಸಿ ಶುರು ಮಾಡುತ್ತೇನೆ. ಚಿತ್ರಕ್ಕೆ ಕೆಲಸ ಮಾಡುವ ಮುನ್ನ ಏನು ಬರೆಯುತ್ತೀವೋ, ಏನು ಆಲೋಚಿಸುತ್ತೇವೋ, ಏನೆಲ್ಲಾ ಎಮೋಷನ್ಸ್‌ ಬೇಕು ಅಂದುಕೊಂಡಿರುತ್ತೇವೋ ಅದು ಪಾತ್ರಗಳ ಮೂಲಕ ಪ್ರೇಕ್ಷಕರಿಗೆ ಕನ್ವೇ ಆಗಬೇಕು. ಬಹುಶಃ ಪಾತ್ರಧಾರಿಗಳ ಆಯ್ಕೆಯಲ್ಲಿ ನಾನು ಯಶಸ್ಸು ಕಂಡಿರಬಹುದು. ಈ ಚಿತ್ರದಲ್ಲಿ ಉತ್ತಮ ಕಲಾವಿದರು ನನ್ನ ಚಿತ್ರದ ಭಾಗವಾಗಿದ್ದಾರೆ. ಅಲಿಯಾ ತುಂಬಾ ಪ್ರಮುಖವಾದ ಪಾತ್ರ ಮಾಡಿದ್ದಾರೆ. ರಾಮ್‌ ಚರಣ್‌ ಮತ್ತು ಜ್ಯೂನಿಯರ್‌ ಎನ್‌ಟಿಆರ್‌ ಪಾತ್ರಗಳನ್ನು ಕಂಟ್ರೊಲ್‌ ಮಾಡುವ, ಒಗ್ಗೂಡಿಸುವ, ಸೇತುವಾಗಿ ಕೆಲಸ ಮಾಡುವಲ್ಲಿ ಅಲಿಯಾ ಅವರ ಪ್ರತಿಭೆ ಕೆಲಸ ಮಾಡಲಿದೆ. ಬಹುಶಃ ಕಲಾವಿದರ ಆಯ್ಕೆ ನನ್ನ ಯಶಸ್ಸಿನ ಸೀಕ್ರೇಟ್‌ಗಳಲ್ಲೊಂದು ಎನಿಸುತ್ತದೆ.

ನಿಮ್ಮ ಸಿನಿಮಾಗಳಲ್ಲಿ ಸಿಗ್ನೆಚರ್‌ ಕಮರ್ಷಿಯಲ್‌ ಎಲಿಮೆಂಟ್ಸ್‌ ಇರುತ್ತವೆ. ಇವನ್ನು ಮೊದಲೇ ಆಲೋಚಿಸಿರುತ್ತೀರೋ? ಇಲ್ಲ ಕತೆಯ ಭಾಗವಾಗಿ ಇವುಗಳ ಹೆಣಿಗೆ ಇರುತ್ತದೆಯೋ?

ಓಕೆ, ಮೊದಲು ಒಂದು ಬೇಸಿಕ್‌ ಥಾಟ್‌ ನನ್ನಲ್ಲಿ ಬರುತ್ತದೆ. ಅಲ್ಲಿಂದ ಒಂದು ಸಿನಿಮಾದ ರೂಪುರೇಷೆಗೆ ಚಾಲನೆ ಸಿಗುತ್ತದೆ. ಈ ಕತೆಯನ್ನು ತೆರೆಯ ಮೇಲೆ ಸಮರ್ಪಕವಾಗಿ ನಾನು ಎಕ್ಸಿಗ್ಯೂಟ್‌ ಮಾಡಲು ಸಾಧ್ಯವಾಗುತ್ತದೆಯೇ ಎಂದು ಆಲೋಚಿಸುತ್ತೇನೆ. ಇದಕ್ಕಾಗಿ ಸುಮಾರು ಎರಡು, ಮೂರು ವರ್ಷಗಳ ನನ್ನ ಅಮೂಲ್ಯ ಸಮಯ ಕೊಡುತ್ತಿದ್ದೇನೆ ಎನ್ನುವುದು ನನ್ನ ಮನಸ್ಸಿನಲ್ಲಿರುತ್ತದೆ. ಇವೆಲ್ಲಾ ಆಲೋಚನೆಗಳಿಗೆ ಉತ್ತರ ಸಿಕ್ಕಿದ ನಂತರ ಬರವಣಿಗೆ ಕೆಲಸ ಶುರುವಾಗುತ್ತದೆ. ಸಿಗ್ನೇಚರ್‌ ಎಲಿಮೆಂಟ್ಸ್‌ ಕತೆಯ ಭಾಗವಾಗಿಯೇ ಇರುತ್ತವೆ. ಅಲ್ಲಿ ನನಗೆ ಎಮೋಷನ್ಸ್‌ ಮುಖ್ಯ. ವಿಥೌಟ್‌ ಎಮೋಷನ್ಸ್‌ ಏನೇ ಮಾಡಿದರೂ ವರ್ಕ್‌ ಆಗೋಲ್ಲ. ‘RRR’ನ ಹಳ್ಳಿ ನಾಟು ಸಾಂಗ್‌ ಒಂದು ಮಾಸ್‌ ನಂಬರ್‌. ಅಲ್ಲಿಯೂ ತುಂಬಾ ಎಮೋಷನ್ಸ್‌ ಇವೆ. ವಿಥೌಟ್‌ ಎಮೋಷನ್ಸ್‌ ಖಂಡಿತಾ ಸಿನಿಮಾ ಆಗೋಲ್ಲ.

ಸ್ವಾತಂತ್ರ್ಯ ಹೋರಾಟಗಾರರಾದ ಕೊಮರಮ್ ಭೀಮ್‌ ಮತ್ತು ಅಲ್ಲೂರಿ ಸೀತಾರಾಮರಾಜು ಅವರ ಪ್ರೇರಣೆ ಚಿತ್ರಕ್ಕಿದೆ ಎಂದಿದ್ದೀರಿ…

ಹೌದು, ಇವರ ಹೋರಾಟದ ಕಿಚ್ಚು ನಮ್ಮ ಸಿನಿಮಾದ ಆತ್ಮ. ಆದರೆ ಅವರ ನಿಜಬದುಕಿನ ಒಂದೇ ಒಂದು ಘಟನೆಯೂ ನನ್ನ ಚಿತ್ರದಲ್ಲಿ ಅಳವಡಿಕೆಯಾಗಿಲ್ಲ. ಇದು ಸಂಪೂರ್ಣ ಫಿಕ್ಷನ್‌. ತಮ್ಮ ನೆಲಕ್ಕಾಗಿ ಸ್ವಾಭಿಮಾನದಿಂದ ಹೋರಾಟ ನಡೆಸುವ ಅವರ ಕಿಚ್ಚು, ಅವರ ಇನ್ಸ್‌ಪಿರೇಷನ್‌ ನಮ್ಮ ಸಿನಿಮಾಗೆ ಪ್ರೇರಣೆ.

ಸುಂದರ ನಟಿ ಅಲಿಯಾ ಭಟ್‌ ನಿಮ್ಮ ಚಿತ್ರದಲ್ಲಿದ್ದಾರೆ. ಅವರಿಗೆಂದು ಚಿತ್ರದಲ್ಲಿ ಲವ್‌ಸ್ಟೋರಿ ಸೃಷ್ಟಿ ಮಾಡಿದ್ರಾ?

ನವರಸಗಳಲ್ಲಿ ಲವ್‌, ಆಂಗರ್‌, ಫ್ಯಾಂಟಸಿ, ಹ್ಯೂಮರ್‌ ಎಲ್ಲವೂ ಚಿತ್ರದಲ್ಲಿ ಕಾಣಿಸಬೇಕು. ಸುಂದರ ನಟಿ ತಾರಾಬಗಳದಲ್ಲಿದ್ದಾರೆ ಎನ್ನುವ ಕಾರಣಕ್ಕೆ ನಾನು ಲವ್‌ ಟ್ರ್ಯಾಕ್‌ ಹಾಕುವುದಿಲ್ಲ. ಸ್ಟೋರಿ ಅದನ್ನು ಡಿಮಾಂಡ್‌ ಮಾಡಬೇಕು. ಒಂದೊಮ್ಮೆ ಬೇಕೆಂದೇ ಅಂತಹ ಸನ್ನಿವೇಶಗಳನ್ನು ಸೃಷ್ಟಿಸುತ್ತಾ ಹೋದರೆ ಸ್ಟೋರಿ ಟೆಲ್ಲಿಂಗ್‌ಗೆ ಎಫೆಕ್ಟ್‌ ಆಗುತ್ತೆ. ಅಫ್‌ಕೋರ್ಸ್‌, ಪ್ರೇಕ್ಷಕರ ಡಿಮಾಂಡ್‌, ಅವರ ಎಕ್ಸ್‌ಪೆಕ್ಟೇಷನ್‌ ನನಗೆ ತುಂಬಾ ತುಂಬಾ ಮುಖ್ಯ. ಅದೇ ವೇಳೆ ನನಗೆ ನಿರ್ದೇಶಕನಾಗಿ ಸ್ಟೋರಿ ನಿರೂಪಿಸುವುದು ಹೆಚ್ಚು ಮುಖ್ಯವಾಗಬೇಕು.

‘RRR’ ಚಿತ್ರವನ್ನು ಇತರೆ ಭಾಷೆಗಳಿಗೆ ಡಬ್‌ ಮಾಡಿ ರಿಲೀಸ್‌ ಮಾಡಬೇಕು ಎನ್ನುವಾಗ ನಿಮ್ಮ ಥಾಟ್‌ ಪ್ರೊಸೆಸ್‌ ಏನಿತ್ತು?

ಈ ಹಿಂದೆ ‘ಬಾಹುಬಲಿ’ ಚಿತ್ರವನ್ನು ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಮಾಡಿದ್ದೆವು. ಮಲಯಾಳಂ ಮತ್ತು ಹಿಂದಿ ಭಾಷೆಗಳಿಗೆ ಸಿನಿಮಾ ಡಬ್‌ ಮಾಡಿ ಬಿಡುಗಡೆಯಾಗಿತ್ತು. ಆಗ ನನಗೆ ಕನ್ನಡದಲ್ಲೇಕೆ ಡಬ್‌ ಮಾಡಿಲ್ಲ ಎನ್ನುವ ಸಾಕಷ್ಟು ಕಾಮೆಂಟ್‌ಗಳು ಬಂದಿದ್ದವು. ಆದರೆ ಆಗ ಕನ್ನಡಕ್ಕೆ ಡಬ್‌ ಮಾಡಲು ಇಲ್ಲಿ ಪೂರಕ ವಾತಾವರಣ ಇರಲಿಲ್ಲ. ಹಾಗಾಗಿ ನಾವು ಕನ್ನಡದಲ್ಲಿ ಡಬ್‌ ಮಾಡಲು ಆಲೋಚಿಸಲಿಲ್ಲ. ಇನ್ನು ‘RRR’ ಚಿತ್ರವನ್ನು ಕರ್ನಾಟಕದಲ್ಲಿ ಒಂದು ವರ್ಗ ಮೂಲ ತೆಲುಗು ಭಾಷೆಯಲ್ಲೇ ನೋಡಲು ಇಚ್ಛಿಸುತ್ತಾರೆ. ಇನ್ನೊಂದು ವರ್ಗ ಕನ್ನಡದಲ್ಲಿ ವೀಕ್ಷಿಸಲು ಅಪೇಕ್ಷೆ ಪಡುತ್ತಾರೆ. ಹಾಗಾಗಿ ಡಬ್‌ ಮಾಡಿ ತರುತ್ತಿದ್ದೇವೆ. ಈ ಡಬ್ಬಿಂಗ್‌ ಪ್ರೊಸೆಸ್‌ನಲ್ಲಿ ತುಂಬಾ ಎಚ್ಚರಿಕೆ ವಹಿಸಿದ್ದೇವೆ. ಪದಬಳಕೆ, ಪ್ರನೌನ್ಸಿಯೇಷನ್‌.. ವಿಚಾರದಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡಲಾಗಿದೆ. ಒಂದೊಮ್ಮೆ ಇಲ್ಲಿನ ದೊಡ್ಡ ಹೀರೋ ತಪ್ಪಾಗಿ ಕನ್ನಡ ಮಾತಾಡಿದರೆ ಅದು ಗಣನೆಗೆ ಬರುವುದಿಲ್ಲ. ಆದರೆ ತೆಲುಗು ಹೀರೋಗಳು ತಪ್ಪು ಕನ್ನಡ ಮಾತನಾಡಿದರೆ ಅದನ್ನು ಬೆರಳು ಮಾಡಿ ತೋರಿಸುತ್ತಾರೆ. ಹಾಗಾಗಿ ತುಂಬಾ ಕೇರ್‌ ತೆಗೆದುಕೊಂಡಿದ್ದೇವೆ. ಟ್ರೈಲರ್‌ನಲ್ಲಿ ಅದರ ರಿಸಲ್ಟ್‌ ಕಾಣಿಸುತ್ತಿದೆ. ಆದಾಗ್ಯೂ ಕೆಲವು ಮನುಷ್ಯ ಸಹಜ ತಪ್ಪುಗಳ ಆಗಬಹುದು. ಆ ತಪ್ಪುಗಳನ್ನು ಮುಂದಿನ ಸಿನಿಮಾಗಳಲ್ಲಿ ಸರಿಪಡಿಸಿಕೊಳ್ಳುತ್ತೇವೆ.

ತೆಲುಗು ಚಿತ್ರರಂಗದ ಎರಡು ದೊಡ್ಡ ಕುಟುಂಬಗಳ ಹೀರೋಗಳನ್ನು ತೆರೆಗೆ ತರುವಲ್ಲಿ ನಿಮಗಿದ್ದ ಒತ್ತಡ, ಸವಾಲುಗಳೇನು?

ಹೌದು, ಇಬ್ಬರೂ ಎರಡು ಸಾಂಪ್ರದಾಯಿಕ ಸೂಪರ್‌ಸ್ಟಾರ್‌ ಫ್ಯಾಮಿಲಿಗಳಿಂದ ಬಂದ ಹೀರೋಗಳು. ಎರಡು ಕುಟುಂಬಗಳ ಹೀರೋಗಳ ಅಭಿಮಾನಿಗಳಲ್ಲೂ ರೈವಲ್ರೀ ಇದೆ. ಇಬ್ಬರನ್ನೂ ಒಟ್ಟಿಗೇ ತರುವುದು ನಿಜಕ್ಕೂ ಸವಾಲು. ಅದೃಷ್ಟವೆಂದರೆ ಇವೆಲ್ಲದರ ಮಧ್ಯೆ ತೆರೆಯಾಚೆಗೂ ಅವರಿಬ್ಬರೂ ತುಂಬಾ ಒಳ್ಳೆಯ ಸ್ನೇಹಿತರು. ಅದು ನನಗೆ ಪ್ಲಸ್‌ ಪಾಯಿಂಟ್‌ ಆಯ್ತು. ಅವರ ಫ್ರೆಂಡ್‌ಶಿಪ್‌ ಅನ್ನು ಸ್ಕ್ರೀನ್‌ ಮೇಲೆ ತರುವುದು ಸುಲಭವಾಯ್ತು. ಇಬ್ಬರಿಗೂ ಹಾರ್ಡ್‌ಕೋರ್‌ ಫ್ಯಾನ್‌ ಫಾಲೋಯಿಂಗ್‌ ಇದೆ. ಟ್ರೈಲರ್‌ ನೋಡಿದ ಇಬ್ಬರು ಹೀರೋಗಳ ಅಭಿಮಾನಿಗಳು ಇಬ್ಬರನ್ನೂ ಮೆಚ್ಚಿಕೊಂಡಿದ್ದಾರೆ. ಅಲ್ಲಿ ಇಬ್ಬರ ಮಧ್ಯೆಯ ಎಮೋಷನ್‌ ವರ್ಕ್‌ ಆಗಿದೆ.

ದೊಡ್ಡ ಹೀರೋಗಳು, ಬಜೆಟ್‌, ತಾಂತ್ರಿಕತೆ… ಇದ್ದರೆ ಸಿನಿಮಾವೊಂದನ್ನು ಗೆಲ್ಲಿಸಬಹುದೇ? ನಿಜಕ್ಕೂ ಸಿನಿಮಾದ ಸಕ್ಸಸ್‌ ಪಾಯಿಂಟ್‌ ಏನು?

ಎಮೋಷನ್‌ ಸಿನಿಮಾದ ಸಕ್ಸಸ್‌ ಪಾಯಿಂಟ್‌. ‘RRR’ನಲ್ಲಿ ಇಬ್ಬರು ಪ್ಯಾನ್‌ ಇಂಡಿಯಾ ಸ್ಟಾರ್‌ಗಳು, ಬಾಲಿವುಡ್‌ನ ಅಲಿಯಾ ಭಟ್‌ ಇದ್ದಾರೆ. ದೊಡ್ಡ ಬಜೆಟ್‌, ವಿಶ್ಯುಯಲ್‌ ಎಪೆಕ್ಟ್‌.. ಇವೆಲ್ಲಾ ಪ್ರೆಕ್ಷಕರನ್ನು ಥಿಯೇಟರ್‌ಗೆ ಕರೆತರಲು ನೆರವಾಗಬಹುದು. ಆದರೆ ಒಮ್ಮೆ ಥಿಯೇಟರ್‌ ಒಳಗೆ ಕುಳಿತು ಲೈಫ್‌ ಆಫ್‌ ಆಗಿ ತೆರೆ ಮೇಲೆ ಸಿನಿಮಾ ಮೂಡಿದರೆ ಇವೆಲ್ಲವೂ ಪ್ರೇಕ್ಷಕರ ಮನಸ್ಸಿನಿಂದ ಮಾಯವಾಗುತ್ತವೆ. ಅಲ್ಲಿ ಅವರು ಪಾತ್ರಗಳನ್ನು ನೋಡುತ್ತಾರೆ. ಅಲ್ಲೂರಿ ಸೀತಾರಾಮರಾಜು, ಕೊಮರಮ್ ಭೀಮ, ಸೀತಾ ಪಾತ್ರಗಳನ್ನು ನೋಡತೊಡಗುತ್ತಾರೆ. ಅಂತಿಮವಾಗಿ ಪಾತ್ರಗಳು ಪ್ರೇಕ್ಷಕರಿಗೆ ಕನ್ವಿನ್ಸ್‌ ಆಗಬೇಕು. ಎಮೋಷನ್ಸ್‌ ಕನೆಕ್ಟ್‌ ಆಗಬೇಕು. ಆಗ ಸಿನಿಮಾ ಗೆಲ್ಲುತ್ತದೆ.

ಕತೆ ವಿಚಾರದಲ್ಲಿ ನಿಮ್ಮ ತಂದೆ ವಿಜಯೇಂದ್ರಪ್ರಸಾದ್‌ ನಿಮ್ಮ ನೆರವಿಗೆ ಬರುತ್ತಾರೆ. ಸಿನಿಮಾ ರೂಪುಗೊಳ್ಳುವಲ್ಲಿ ಅವರ ಪಾತ್ರ ಎಷ್ಟಿರುತ್ತದೆ?

ಆಬ್ವಿಯಸ್ಲೀ, ಅವರು ಸಿನಿಮಾದ ಆತ್ಮ. ಪ್ರೇಕ್ಷಕರಿಗೆ ತೆರೆಯ ಮೇಲೆ ಕತೆ ನೋಡಲ್ಲ. ಎಮೋಷನ್ಸ್‌ ಫೀಲ್‌ ಮಾಡ್ತಾ ಇರ್ತಾರೆ. ಆದರೆ ಸ್ಟೋರಿ ರೈಟರ್‌ ಚಿತ್ರದ ಬ್ಯಾಕ್‌ಬೋನ್‌. ದೊಡ್ಡ ಕಟ್ಟಡ ಸುಂದರವಾಗಿ ಕಾಣಿಸುತ್ತದೆ ಎಂದರೆ ಅದು ನಿರ್ಮಾಣವಾಗಲು ಸದೃಢ ಬೇಸ್‌ಮೆಂಟ್‌ ತುಂಬಾ ಮುಖ್ಯ. ಹೀಗೇ ಇರಬೇಕೆಂದು ಕತೆಯ ವಿಚಾರದಲ್ಲಿ ಮಾರ್ಪಾಟಿಗಾಗಿ ನಾನು ಅವರಿಗೆ ತುಂಬಾ ಕಾಟ ಕೊಟ್ಟಿದ್ದೇನೆ.

ಇತರೆ ಭಾಷೆಯ ಚಿತ್ರವೊಂದನ್ನು ಡಬ್‌ ಮಾಡಿ ಬಿಡುಗಡೆ ಮಾಡುವುದು ಅಲ್ಲಿನ ಚಿತ್ರೋದ್ಯಮಕ್ಕೆ ಪೂರಕವೋ? ಮಾರಕವೋ?

ಯಾವುದೇ ಸಿನಿಮಾದ ಗೆಲುವು ಅಲ್ಲಿನ ಚಿತ್ರೋದ್ಯಮದ ಮೇಲೆ ಪಾಸಿಟೀವ್‌ ಇಂಪ್ಯಾಕ್ಟ್‌ ಮಾಡುತ್ತದೆ ಎಂದೇ ನಾನು ನಂಬಿದ್ದೇನೆ. ಆಂಧ್ರದಲ್ಲಿ ವಿವಿಧ ಭಾಷೆಗಳ ಸಿನಿಮಾಗಳು ಡಬ್‌ ಆಗಿ ಬಿಡುಗಡೆಯಾಗುತ್ತವೆ. ಇದು ದಶಕಗಳಿಂದ ನಡೆಯುತ್ತಲೇ ಇದೆ. ಇತರೆ ಸಿನಿಮಾಗಳ ಕಾಂಪಿಟೇಷನ್‌ನಿಂದ ನಾವು ಇನ್ನೂ ಒಳ್ಳೆಯ ಸಿನಿಮಾಗಳನ್ನು ಮಾಡುತ್ತೇವೆ. ಮಾರುಕಟ್ಟೆ ದೊಡ್ಡದಾಗುತ್ತದೆ. ಏಕಾನಮಿ, ಫೈನಾನ್ಷಿಯಲ್‌, ಕ್ರಿಯೇಟಿವ್‌… ಎಲ್ಲಾ ವಿಚಾರಗಳಲ್ಲಿ ಸಿನಿಮಾದ ಯಶಸ್ಸು ಪಾಸಿಟೀವ್‌ ಇಂಪ್ಯಾಕ್ಟ್‌ ಮಾಡುತ್ತದೆ ಎನ್ನುವುದು ನನ್ನ ನಂಬುಗೆ.

https://youtu.be/_7kEpALVNsY

LEAVE A REPLY

Connect with

Please enter your comment!
Please enter your name here