‘ಬಾಹುಬಲಿ’ ಖ್ಯಾತಿಯ ಚಿತ್ರನಿರ್ದೇಶಕ ರಾಜಮೌಳಿ ಇಂದು 48ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಟಾಲಿವುಡ್ ಮತ್ತು ಬಾಲಿವುಡ್ ತಾರೆಯರು ಸೋಷಿಯಲ್ ಮೀಡಿಯಾ ಮೂಲಕ ಅವರಿಗೆ ಶುಭ ಕೋರಿದ್ದಾರೆ.
ತೆಲುಗು ಸಿನಿಮಾಗಳ ಮೂಲಕ ಚಿತ್ರನಿರ್ದೇಶನ ಆರಂಭಿಸಿದ ರಾಜಮೌಳಿ ‘ಬಾಹುಬಲಿ’ ಸರಣಿ ಸಿನಿಮಾಗಳ ಮೂಲಕ ಜಾಗತಿಕವಾಗಿ ಗುರುತಿಸಿಕೊಂಡರು. ಇದೀಗ ಅವರ ನಿರ್ದೇಶನದಲ್ಲಿ ತಯಾರಾಗುತ್ತಿರುವ ಬಹು ತಾರಾಗಣದ ‘RRR’ ಚಿತ್ರ ಸುದ್ದಿಯಲ್ಲಿದೆ. ಪೀರಿಯಡ್ ಡ್ರಾಮಾ ಕಥಾವಸ್ತುವಿನ ಈ ಸಿನಿಮಾ 2022ರ ಜನವರಿಯಲ್ಲಿ ತೆರೆಕಾಣಲಿದೆ. ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರಾಜಮೌಳಿ ಅವರಿಗೆ ‘RRR’ ತಂಡದ ಕಲಾವಿದರು ಟ್ವೀಟ್‌ಗಳ ಮೂಲಕ ಶುಭ ಹಾರೈಸಿದ್ದಾರೆ. “‘ಮಾಸ್ಟರ್ ಸ್ಟೋರಿಟೆಲ್ಲರ್‌ಗೆ ಹುಟ್ಟುಹಬ್ಬದ ಶುಭ ಹಾರೈಕೆಗಳು! ನಿಮ್ಮ ಚಿತ್ರದಲ್ಲಿ ನಟಿಸುತ್ತಿರುವುದು ಗೌರವದ ವಿಷಯ. ಜಗತ್ತಿನ ಸುಖ-ಸಂತೋಷಗಳೆಲ್ಲಾ ನಿಮ್ಮದಾಗಲಿ” ಎಂದು ಅಲಿಯಾ ಟ್ವೀಟ್ ಮಾಡಿದ್ದಾರೆ.
ಬಾಲಿವುಡ್ ನಟ ಅಜಯ್ ದೇವಗನ್, “ಹುಟ್ಟುಹಬ್ಬದ ಶುಭಾಶಯಗಳು ರಾಜಮೌಳಿಗಾರು. ನಿಮ್ಮೊಂದಿಗೆ ಕೆಲಸ ಮಾಡಿದ್ದು ಸದಾ ಕಾಲ ನನ್ನ ಮನಸ್ಸಿನಲ್ಲುಳಿದಿದೆ. ನಿಮ್ಮೊಂದಿಗೆ ಕೆಲಸ ಮಾಡುತ್ತಾ ಸಾಕಷ್ಟು ಕಲಿತಿದ್ದೇನೆ” ಎಂದು ಸಂದೇಶ ಹಾಕಿದ್ದಾರೆ.
ಚಿತ್ರದ ಹೀರೋಗಳಾದ ರಾಮ್‌ಚರಣ್ ತೇಜಾ ಮತ್ತು ಜ್ಯೂನಿಯರ್ ಎನ್‌ಟಿಆರ್ ಟ್ವಿಟರ್ ಖಾತೆಗಳಲ್ಲಿ ರಾಜಮೌಳಿಯವರಿಗೆ ಶುಭಕೋರಿದ್ದಾರೆ. “ನಿಮ್ಮ ಸರಳತೆ ಮತ್ತು ತಂಡವನ್ನು ಮುನ್ನಡೆಸುವ ನಿಮ್ಮ ಸ್ಥೈರ್ಯ ನನಗೆ ಮಾದರಿ” ಎಂದು ರಾಮ್‌ಚರಣ್ ತೇಜಾ ಹೇಳಿದ್ದಾರೆ. ನಟಿ ಶ್ರಿಯಾ ಶರಣ್ ಸೇರಿದಂತೆ ಹಲವರು ಟ್ವಿಟರ್, ಇನ್‌ಸ್ಟಾಗ್ರಾಂ ಮೂಲಕ ರಾಜಮೌಳಿಗೆ ಶುಭಹಾರೈಸಿದ್ದಾರೆ.