Online betting ಆಪ್‌ಗಳನ್ನು ಪ್ರೊಮೋಟ್ ಮಾಡುವ ಹಲವು ಸಿನಿಮಾ ತಾರೆಯರ ವಿರುದ್ಧ ತೆಲಂಗಾಣ ಪೊಲೀಸರು FIR ದಾಖಲಿಸಿದ್ದಾರೆ. ಖ್ಯಾತ ನಟರಾದ ರಾಣಾ ದಗ್ಗುಬಾತಿ, ವಿಜಯ್ ದೇವರಕೊಂಡ, ಪ್ರಕಾಶ್ ರಾಜ್, ನಟಿಯರಾದ ಲಕ್ಷ್ಮಿ ಮಂಚು, ಪ್ರಣೀತ ಸೇರಿದಂತೆ ಹಲವರು ಈ ಪಟ್ಟಿಯಲ್ಲಿದ್ದಾರೆ.
Online betting ಆಪ್‌ಗಳನ್ನು ಪ್ರೊಮೋಟ್ ಮಾಡುವ ಹಲವು ಸಿನಿಮಾ ತಾರೆಯರಿಗೆ FIR ರೂಪದಲ್ಲಿ ಛೀಮಾರಿ ಬಿದ್ದಿದೆ. ಬಿಸ್ನೆಸ್ ಮ್ಯಾನ್ ಫಣೀಂದ್ರ ಶರ್ಮ ಎನ್ನುವವರ ದೂರು ಆಧರಿಸಿ ಹೈದರಾಬಾದ್‌ನ ಮಿಯಾಪುರ್ ಪೊಲೀಸ್ ಸ್ಟೇಷನ್‌ನಲ್ಲಿ ತಾರೆಯರ ಮೇಲೆ FIR ದಾಖಲಾಗಿದೆ. Public Gambling Act 1867ರ ಅನ್ವಯ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ‘ಯುವಕರೊಂದಿಗೆ ಸಂವಾದ ನಡೆಸುವಾಗ, ಸಿನಿಮಾ ತಾರೆಯರ ಪ್ರೊಮೋಷನ್‌ನಿಂದ ಪ್ರೇರಿತರಾಗಿರುವುದಾಗಿ ಅವರು ಹೇಳುತ್ತಿದ್ದಾರೆ. ಸಿನಿಮಾ ಸೆಲೆಬ್ರಿಟಿಗಳು Appಗಳನ್ನು ಪ್ರೊಮೋಟ್ ಮಾಡಲು ದುಬಾರಿ ಸಂಭಾವನೆ ಪಡೆಯುತ್ತಿದ್ದಾರೆ. ಆದರೆ ಇದರಿಂದ ಪ್ರೇರಿತರಾದವರು ಕಷ್ಟಪಟ್ಟು ಗಳಿಸಿದ ಹಣವನ್ನು ಬೆಟ್ಟಿಂಗ್‌ನಲ್ಲಿ ಹೂಡಿ ಕಳೆದುಕೊಳ್ಳುತ್ತಿದ್ದಾರೆ’ ಎನ್ನುವುದು ದೂರಿನಲ್ಲಿ ದಾಖಲಾಗಿದೆ.
ತಾರೆಯರಾದ ವಿಜಯ್ ದೇವರಕೊಂಡ, ರಾಣಾ ದಗ್ಗುಬಾತಿ, ಪ್ರಕಾಶ್ ರಾಜ್, ಲಕ್ಷ್ಮೀ ಮಂಚು, ಪ್ರಣೀತಾ, ನಿಧಿ ಅಗರ್‌ವಾಲ್, ಅನನ್ಯಾ ನಾಗೆಲ್ಲಾ, ಸಿರಿ ಹನುಮಂತು, ಶ್ರೀಮುಖಿ, ವರ್ಷಿಣಿ ಸೌಂದರ್‌ರಾಜನ್ ಸೇರಿದಂತೆ ಮತ್ತೆ ಕೆಲವರು ಈ ಪಟ್ಟಿಯಲ್ಲಿದ್ದಾರೆ. TS Gaming Act, IT Act, Section 66(D) Information Technology Act ಅಡಿ ದೂರುಗಳು ದಾಖಲಾಗಿವೆ. ‘ಸಿನಿಮಾದವರ ಪ್ರೇರಣೆಯಿಂದ ಮಧ್ಯಮ, ಕೆಳಮಧ್ಯಮ ವರ್ಗದ ಕುಟುಂಬದವರು ಆನ್‌ಲೈನ್ ಬೆಟ್ಟಿಂಗ್ ದಾಸರಾಗಿ ಹಣ ಕಳೆದುಕೊಳ್ಳುತ್ತಿದ್ದಾರೆ. ಸಾರ್ವಜನಿಕ ಹಿತಾಸಕ್ತಿಯಿಂದ ಪ್ರಕರಣ ಕೈಗೆತ್ತಿಕೊಂಡು ಮುನ್ನಡೆಸುತ್ತಿದ್ದೇವೆ’ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.