ಕನ್ನಡ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಕಿರುಕುಳ ಸೇರಿದಂತೆ ಸಮಸ್ಯೆಗಳ ಅಧ್ಯಯನಕ್ಕೆ ಸಮಿತಿ ನೇಮಿಸುವಂತೆ FIRE (ಫಿಲ್ಮ್‌ ಇಂಡಸ್ಟ್ರಿ ಫಾರ್‌ ರೈಟ್ಸ್‌ & ಈಕ್ವಾಲಿಟಿ) ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಸಿನಿಮಾರಂಗ ಸೇರಿದಂತೆ ವಿವಿಧ ಕ್ಷೇತ್ರಗಳ 150ಕ್ಕೂ ಹೆಚ್ಚು ಜನರು ಈ ಅರ್ಜಿಗೆ ಸಹಿ ಹಾಕಿದ್ದಾರೆ.

ಮಲಯಾಳಂ ಚಿತ್ರರಂಗದಲ್ಲಿನ ಮಹಿಳೆಯರ ಮೇಲಿನ ದೌರ್ಜನ್ಯ ಕುರಿತು ಹೇಮಾ ಸಮಿತಿ ವರದಿ ಸಾಕಷ್ಟು ಸದ್ದು ಮಾಡುತ್ತಿದೆ. ಕನ್ನಡ ಚಿತ್ರರಂಗದಲ್ಲೂ ಇಂಥದ್ದೊಂದು ಅಧ್ಯಯನ ನಡೆಯಲಿ ಎಂದು FIRE (ಫಿಲ್ಮ್‌ ಇಂಡಸ್ಟ್ರಿ ಫಾರ್‌ ರೈಟ್ಸ್‌ & ಈಕ್ವಾಲಿಟಿ) ಸರ್ಕಾರಕ್ಕೆ ಮನವಿ ಮಾಡಿದೆ. ಪ್ರಸ್ತುತ ಚಿತ್ರನಿರ್ದೇಶಕಿ ಕವಿತಾ ಲಂಕೇಶ್‌ ಅವರು FIRE ಅಧ್ಯಕ್ಷೆಯಾಗಿದ್ದಾರೆ. ಕನ್ನಡ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಕಿರುಕುಳ ಸೇರಿದಂತೆ ಸಮಸ್ಯೆಗಳ ಅಧ್ಯಯನಕ್ಕೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸುವಂತೆ FIRE ಅರ್ಜಿ ಸಲ್ಲಿಸಿದೆ. ಈ ಅರ್ಜಿಗೆ ಸಿನಿಮಾರಂಗ ಸೇರಿದಂತೆ ವಿವಿಧ ಕ್ಷೇತ್ರಗಳು 153 ಜನರು ಸಹಿ ಹಾಕಿ ಬೆಂಬಲ ಸೂಚಿಸಿದ್ದಾರೆ. FIRE ಅರ್ಜಿಯಲ್ಲಿನ ಒಕ್ಕಣಿ ಈ ಕೆಳಗಿನಂತಿದೆ…

‘ಚಲನಚಿತ್ರೋದ್ಯಮದ ಆಂತರಿಕ ದೂರುಗಳ ಸಮಿತಿ (ICC) ಸ್ಥಾಪಿಸುವಲ್ಲಿ FIRE ಸಂಸ್ಥೆ ಪ್ರಮುಖ ಪಾತ್ರ ವಹಿಸಿದೆ. ಲೈಂಗಿಕ ಕಿರುಕುಳದ ಸಂತ್ರಸ್ತರನ್ನು ನಮ್ಮ ಸಂಸ್ಥೆ ಬೆಂಬಲಿಸುತ್ತಲೇ ಬಂದಿದೆ. ಸದ್ಯ ಸಿನಿಮಾರಂಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರಿಗೆ ಸುರಕ್ಷಿತವಾದ ವಾತಾವರಣವನ್ನು ನೀಡುವುದಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯವಾದ ಅಂಶವೆಂದು ನಾವು ಭಾವಿಸುತ್ತೇವೆ. ಈ ಹಿನ್ನೆಲೆಯಲ್ಲಿ ಕೆಳಕಂಡ ಅಂಶಗಳನ್ನು ಪರಿಶೀಲಿಸುವುದಕ್ಕಾಗಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸುವಂತೆ ನಾವು ಕರ್ನಾಟಕ ಸರ್ಕಾರವನ್ನು ಕೇಳುತ್ತಿದ್ದೇವೆ.

1) ಲೈಂಗಿಕ ಕಿರುಕುಳ ಸೇರಿದಂತೆ ಕನ್ನಡ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ತನಿಖೆ ಮಾಡುವುದು.
2) ಚಿತ್ರೋದ್ಯಮದಲ್ಲಿ ಎಲ್ಲಾ ಮಹಿಳೆಯರಿಗೂ ಸುರಕ್ಷಿತವಾದ ಮತ್ತು ನ್ಯಾಯಯುತವಾದ ವಾತಾವರಣ ಸೃಷ್ಟಿಸಲು ಅದಕ್ಕೆ ತಕ್ಕ ಪಾಲಿಸಿಗಳನ್ನು ರಚಿಸುವುದು.

ಈ ಸಮಿತಿಯ ನೇತೃತ್ವ ವಹಿಸಲು ತಮ್ಮ ವೃತ್ತಿಜೀವನದುದ್ದಕ್ಕೂ ಲಿಂಗ ಸಮಾನತೆಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರನ್ನು ನೇಮಿಸುವಂತೆ ನಾವು ಸೂಚಿಸುತ್ತೇವೆ. ಈ ಪ್ರಕ್ರಿಯೆಯಲ್ಲಿ ಸರ್ಕಾರಕ್ಕೆ ನಮ್ಮ ನೆರವು ಅಗತ್ಯವಾದಲ್ಲಿ FIRE ಸಂಸ್ಥೆಯು ಸಹಾಯ ನೀಡಲು ಸಿದ್ಧವಾಗಿದೆ. ಈ ವರದಿಯನ್ನು 3 ತಿಂಗಳುಗಳ ಒಳಗಾಗಿ ಪೂರ್ಣಗೊಳಿಸಬೇಕೆಂದು FIRE ಸಂಸ್ಥೆ ವಿನಂತಿಸಿಕೊಳ್ಳುತ್ತದೆ. ಅದರ ವಿವರಗಳನ್ನು ಮತ್ತು ಫಲಿತಾಂಶವನ್ನು ಶೀಘ್ರವಾಗಿ ಸಾರ್ವಜನಿಕಗೊಳಿಸಬೇಕೆಂದು ನಾವು ಬಯಸುತ್ತೇವೆ’

ತನಿಖೆಗೆ ಅಗತ್ಯವಾದಲ್ಲಿ ಸಹಾಯ ಮಾಡಲು, ಸಂಪರ್ಕ ಕೊಂಡಿಯಾಗಿರಲು FIRE ಸಂಸ್ಥೆ ಸಿದ್ಧವಾಗಿದೆ ಎಂದು ಸಿನಿಮಾರಂಗ ಸೇರಿದಂತೆ ವಿವಿಧ ಕ್ಷೇತ್ರಗಳ 153 ಜನರ ಸಹಿ ಇರುವ ಮನವಿ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.

LEAVE A REPLY

Connect with

Please enter your comment!
Please enter your name here