ಅಳು, ನಗು, ಹಾಸ್ಯ, ಕೋಪ ಎಲ್ಲವೂ ಇಲ್ಲಿದೆ, ಥೇಟ್ ನಮ್ಮ ನಿಮ್ಮ ಮನೆಯಲ್ಲಿ ಆಗುವ ಜಗಳಗಳಂತೆ ಇಲ್ಲಿಯೂ ಜಗಳಗಳಿವೆ. ಅದಕ್ಕಿಂತ ಹೆಚ್ಚು ಇಲ್ಲಿ ನವಿರಾದ ಪ್ರೇಮ, ಸಂಬಂಧಗಳ ನಡುವಿನ ನಂಬಿಕೆಗಳಿವೆ. ಸರಳವಾದ ಕತೆಯೊಂದಿಗೆ ಸಾಮಾನ್ಯ ಬದುಕಿನ ಸಮಸ್ಯೆಯೊಂದನ್ನು ಹೇಗೆ ಪರಿಣಾಮಕಾರಿಯಾಗಿ ತೋರಿಸಬಹುದು ಎನ್ನುವುದಕ್ಕೆ ಉದಾಹರಣೆ – ‘ಗುಡ್‌ನೈಟ್’. ಡಿಸ್ನೀಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ ತಮಿಳು ಸಿನಿಮಾ.
ಮನುಷ್ಯ ಬದುಕಿನ ಸಾಮಾನ್ಯ ಸಮಸ್ಯೆಗಳು ಅಥವಾ ಸಾಮಾನ್ಯ ಜನರ ಸಮಸ್ಯೆಗಳನ್ನು ಹೇಳುವ ಸಿನಿಮಾಗಳನ್ನು ನೋಡಿದಾಗ, ಅರೇ ನಮ್ಮ ಬದುಕಿನಲ್ಲಿಯೂ ಹೀಗೆ ಆಗಿದೆಯಲ್ಲವಾ ಎಂದು ಅನಿಸದೇ ಇರದು. ಅಂಥ ಸಿನಿಮಾಗಳ ಪಟ್ಟಿಗೆ ಸೇರ್ಪಡೆಯಾಗುವ ಸಿನಿಮಾ ತಮಿಳಿನ ‘ಗುಡ್ ನೈಟ್’. ಇದು ಈಗ ಡಿಸ್ನೀ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ವಿನಾಯಕ್ ಚಂದ್ರಶೇಖರನ್ ಅವರ ಚೊಚ್ಚಲ ನಿರ್ದೇಶನದ ಈ ಚಿತ್ರ ಮಧ್ಯಮ ವರ್ಗದ ಕುಟುಂಬದಲ್ಲಿನ ಯುವಕನ ಗೊರಕೆ ಸಮಸ್ಯೆಗಳ ಕುರಿತು ಕತೆ ಹೇಳುತ್ತದೆ. ಗಟ್ಟಿಯಾಗಿ ಗೊರಕೆ ಹೊಡೆಯುವ ನಾಯಕ, ಹೆಸರು ಮೋಹನ್. ಐಟಿ ಕಂಪನಿಯಲ್ಲಿ ಕೆಲಸ, ಚಿಕ್ಕದಾಗಿ ಚೊಕ್ಕವಾಗಿರುವ ಮನೆ, ಅಕ್ಕ-ಭಾವ, ಅಮ್ಮ, ಇಂಜಿನಿಯರಿಂಗ್ ಕೋರ್ಸ್ ಮುಗಿಸಿ ಸಪ್ಲಿಮೆಂಟರಿ ಪರೀಕ್ಷೆ ಬರೆಯಲು ಸಿದ್ಧತೆ ನಡೆಸುತ್ತಿರುವ ತಂಗಿ. ಇದ್ದುದರಲ್ಲಿ ಖುಷಿಯಾಗಿ ಅಷ್ಟೇನೂ ಸಮಸ್ಯೆಗಳೇನೂ ಇಲ್ಲ ಎಂದು ಸಾಗುವ ಬದುಕಿನಲ್ಲಿ ಮೋಹನನ ಒಂದೇ ಒಂದು ಸಮಸ್ಯೆ ಗೊರಕೆ!
ಕಣ್ಣು ಮುಚ್ಚಿ ನಿದ್ದೆ ಹೋದರೆ ಗಟ್ಟಿಯಾಗಿ ಗೊರಕೆ ಹೊಡೆದೇ ನಿದ್ದೆ. ಹತ್ತಿರದಲ್ಲಿರುವವರಿಗೆ ನಿದ್ದೆ ಹತ್ತಲ್ಲ. ಅಷ್ಟೇ ಯಾಕೆ ಈತನ ಗೊರಕೆಯಿಂದ ಕೆಳಗಿನ ಮನೆಯ ಹೆಂಗಸಿಗೂ ನಿದ್ದೆ ಮಾಡಲು ಆಗುತ್ತಿಲ್ಲ ಎಂಬ ದೂರು. ಕಚೇರಿಯಲ್ಲಿ ಈತನಿಗೆ ಮೋಟಾರ್ ಮೋಹನ್ ಎಂಬ ಅಡ್ಡ ಹೆಸರು. ಈತನ ಗೊರಕೆ ಬಗ್ಗೆ ಲೇವಡಿ ಮಾಡದವರಿಲ್ಲ, ಗೊರಕೆಯಿಂದಾಗಿಯೇ ತಾನು ಇಷ್ಟಪಟ್ಟಿದ್ದ ಹುಡುಗಿ ಕೂಡಾ ಈತನ ಪ್ರೇಮ ನಿವೇದನೆಯನ್ನು ತಿರಸ್ಕರಿಸುತ್ತಾಳೆ.
ಅದರ ನೋವಿನಿಂದ ಹೊರ ಬರುವುದಕ್ಕಾಗಿ ಪ್ರಯತ್ನಿಸುತ್ತಿರುವಾಗ ಆತನ ಕಣ್ಣಿಗೆ ಬಿದ್ದ ಹುಡುಗಿ ಅನು (ಮೀತಾ ರಘುನಾಥ್). ಹೆಚ್ಚು ಮಾತನಾಡದ ಸೌಮ್ಯ ಸ್ವಭಾವದ, ಅನಾಥೆ ಈಕೆ. ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿರುವ ಅನು, ಬಾಡಿಗೆಗಿರುವ ಮನೆ ಮಾಲೀಕರ ಮನೆಗೆ ಮೋಹನ್, ತನ್ನ ಭಾವನೊಂದಿಗೆ ಬಂದಿದ್ದಾಗ ಅನುವನ್ನು ನೋಡುತ್ತಾನೆ. ಅನುವಿನ ಮುದ್ದಿನ ನಾಯಿ ಅಸ್ವಸ್ಥಗೊಂಡಾಗ ಅದನ್ನು ಆಸ್ಪತ್ರೆಗೆ ಕರೆದೊಯ್ಯಲು ಮೋಹನ್ ಸಹಾಯ ಮಾಡುತ್ತಾನೆ. ಪರಿಚಯ ಸ್ನೇಹವಾಗಿ ಆ ಸ್ನೇಹ ಮದುವೆ ಸಂಬಂಧದೊಂದಿಗೆ ಅವರನ್ನು ಒಂದಾಗಿಸುತ್ತದೆ.
ಆದರೆ ಗೊರಕೆ ಅಲ್ಲಿಯೂ ಸಮಸ್ಯೆ ಸೃಷ್ಟಿಸುತ್ತದೆ. ಈತನ ಗೊರಕೆಯಿಂದಾಗಿ ಆಕೆ ನಿದ್ದೆ ಕಳೆದುಕೊಂಡು ಅಸ್ವಸ್ಥಳಾಗುತ್ತಾಳೆ. ಎಲ್ಲವೂ ಈ ಗೊರಕೆಯಿಂದಲೇ ಆಗಿದ್ದು, ಹೇಗಾದರೂ ಮಾಡಿ ಅದನ್ನು ನಿಲ್ಲಿಸಲೇಬೇಕು ಎಂದು ಮೋಹನ್ ಎಲ್ಲ ರೀತಿಯ ಪ್ರಯತ್ನ ಮಾಡುತ್ತಾನೆ. ಒಂದು ಕೋಣೆಯಲ್ಲಿ ಜತೆಯಾಗಿ ಮಲಗುತ್ತಿದ್ದ ದಂಪತಿ ಬೇರೆ ಬೇರೆ ಕೋಣೆಯಲ್ಲಿ ಮಲಗುತ್ತಾರೆ, ಚಿಕ್ಕ ಸಮಸ್ಯೆಗಳು ದೊಡ್ಡದಾಗುತ್ತಾ ಹೋಗುತ್ತದೆ.
ಎಲ್ಲ ಸಮಸ್ಯೆಗೆ ತಾನೇ ಕಾರಣಳೆಂದು ತನ್ನನ್ನೇ ದೂಷಿಸುವ ಅನು. ಅವಳನ್ನು ಅತಿಯಾಗಿ ಪ್ರೀತಿಸುವ ಮೋಹನ್. ಇಬ್ಬರ ದಾಂಪತ್ಯದಲ್ಲಿನ ಮಾತು ಮೌನವಾಗುತ್ತದೆ. ಆದರೆ ಇಬ್ಬರ ನಡುವಿನ ಪ್ರೀತಿ ಅವರನ್ನು ಒಂದಾಗಿಸುತ್ತದೆ. ಗೊರಕೆ ಹೆಚ್ಚು ಕಡಿಮೆ ಪ್ರತಿ ಮನೆಯಲ್ಲೂ ಇರುವ ಸಮಸ್ಯೆ. ನಾವೆಲ್ಲರೂ ಜೋರಾಗಿ ಗೊರಕೆ ಹೊಡೆಯುವ ಕುಟುಂಬದ ಸದಸ್ಯರು ಅಥವಾ ಸಂಬಂಧಿಕರನ್ನು ಹೊಂದಿದ್ದೇವೆ. ‘ಗುಡ್ ನೈಟ್’ ಸಿನಿಮಾ ಗೊರಕೆಯಿಂದಾಗುವ ಸಮಸ್ಯೆ, ಸಂಘರ್ಷಗಳನ್ನು, ಆಧುನಿಕ ಸಂಬಂಧಗಳಲ್ಲಿನ ಅಭದ್ರತೆಗಳು ಮತ್ತು ಸಂವಹನದ ಕೊರತೆಯನ್ನು ತುಂಬಾ ಸೂಕ್ಷ್ಮವಾಗಿ ತೋರಿಸಿದೆ.
ಮದುವೆಯ ನಂತರ, ಮೋಹನ್ ಮತ್ತು ಅನು ತಮ್ಮ ಪ್ರಮುಖ ಸಮಸ್ಯೆಗಳನ್ನು ನಿಭಾಯಿಸಲು ಹೇಗೆ ಹೆಣಗಾಡುತ್ತಾರೆ ಎಂಬುದು ಆಧುನಿಕ ಸಂಬಂಧಗಳಲ್ಲಿ ಹೆಚ್ಚಿನ ಯುವಕರು ತಮ್ಮ ಸಮಸ್ಯೆಗಳನ್ನು ಹೇಗೆ ಎದುರಿಸುತ್ತಾರೆ ಎಂಬುದನ್ನು ತೋರಿಸುತ್ತದೆ. ಇಲ್ಲಿ ಮೋಹನ್ ಅಳುತ್ತಾನೆ, ಗಂಡಸು ಅಳಬಾರದು ಎಂಬ ಯಾವುದೇ ನಿರ್ಬಂಧ ಇಲ್ಲಿಲ್ಲ. ಮೂಢನಂಬಿಕೆಗಳನ್ನು ದೂರ ತಳ್ಳಿ, ಇದು ನಮ್ಮ ಬದುಕು ಎಂದು ಹೇಳುವ ಹೆಣ್ಣು ದನಿ ಇಲ್ಲಿದೆ, ಏನೇ ಸಮಸ್ಯೆ ಬಂದರೂ ಜತೆಯಾಗಿ ನಿಲ್ಲುವ ಕುಟುಂಬವನ್ನು ನೋಡುವಾಗ ಖುಷಿಯಾಗುತ್ತದೆ.
ಇಲ್ಲಿನ ಪ್ರತಿ ಪಾತ್ರವು ಅಚ್ಚುಕಟ್ಟಾಗಿ ತಮ್ಮ ಕೆಲಸವನ್ನು ನಿರ್ವಹಿಸಿದ್ದಾರೆ. ರಮೇಶ್ ತಿಲಕ್, ಬಾಲಾಜಿ ಶಕ್ತಿವೇಲ್ ಮತ್ತು ರೈಚೆಲ್ ರೆಬೆಕಾ ಸೇರಿದಂತೆ ಇತರ ನಟರು ಉತ್ತಮವಾಗಿ ನಟಿಸಿದ್ದಾರೆ. ಮಣಿಕಂಠನ್ ಎಲ್ಲ ರೀತಿಯಲ್ಲಿಯೂ ಮೇಲುಗೈ ಸಾಧಿಸುತ್ತಾರೆ. ಸಂಭಾಷಣೆ, ಅಭಿವ್ಯಕ್ತಿ ಅಥವಾ ಬಾಡಿ ಲಾಂಗ್ವೇಜ್ ಆಗಿರಲಿ ಮಣಿಕಂಠನ್ ಸಾಮಾನ್ಯ ದೃಶ್ಯಗಳನ್ನು ಮತ್ತೊಂದು ಹಂತಕ್ಕೆ ಏರಿಸಲು ಸಹಾಯ ಮಾಡಿದ್ದಾರೆ. ಅಳು, ನಗು, ಹಾಸ್ಯ, ಕೋಪ ಎಲ್ಲವೂ ಇಲ್ಲಿದೆ, ಥೇಟ್ ನಮ್ಮ ನಿಮ್ಮ ಮನೆಯಲ್ಲಿ ಆಗುವ ಜಗಳಗಳಂತೆ ಇಲ್ಲಿಯೂ ಜಗಳಗಳಿವೆ. ಅದಕ್ಕಿಂತ ಹೆಚ್ಚು ಇಲ್ಲಿ ನವಿರಾದ ಪ್ರೇಮ, ಸಂಬಂಧಗಳ ನಡುವಿನ ನಂಬಿಕೆಗಳಿವೆ. ಒಟ್ಟಿನಲ್ಲಿ ‘ಗುಡ್ ನೈಟ್’ ಸರಳವಾದ ಕತೆಯೊಂದಿಗೆ ಸಾಮಾನ್ಯ ಬದುಕಿನ ಸಮಸ್ಯೆಯೊಂದನ್ನು ಹೇಗೆ ಪರಿಣಾಮಕಾರಿಯಾಗಿ ತೋರಿಸಬಹುದು ಎನ್ನುವುದಕ್ಕೆ ಉದಾಹರಣೆಯಾಗಿದೆ.