ಸಮರ್ಜಿತ್ ಲಂಕೇಶ್ ಮತ್ತು ಸಾನ್ಯಾ ಅಯ್ಯರ್ ನಟನೆಯ ‘ಗೌರಿ’ ಸಿನಿಮಾದ ರಿಲೀಸ್ ಡೇಟ್ ಘೋಷಣೆಯಾಗಿದೆ. ಇಂದ್ರಜಿತ್ ಲಂಕೇಶ್ ನಿರ್ದೇಶನದ ಚಿತ್ರವಿದು. ಪ್ರೊಮೋಷನ್ ತಂತ್ರಗಳಿಂದ ಸುದ್ದಿಯಾಗುತ್ತಿರುವ ಸಿನಿಮಾ ಬಗ್ಗೆ ಗಾಂಧಿನಗರದಲ್ಲಿ ಸಾಕಷ್ಟು ನಿರೀಕ್ಷೆ ಇದೆ.
ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಗೌರಿ’ ಲವ್ – ಆಕ್ಷನ್ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಆಗಸ್ಟ್ 15ರ ವರಮಹಾಲಕ್ಷ್ಮಿ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಮಾಡಲು ಇಂದ್ರಜಿತ್ ಲಂಕೇಶ್ ನಿರ್ಧರಿಸಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಲು ಇಂದ್ರಜಿತ್ ಲಂಕೇಶ್, ರಾಜಾಜಿನಗರದ ವಿದ್ಯಾವಿಹಾರ (ಎಂಇಎಸ್ ಮ್ಯಾನೇಜ್‌ಮೆಂಟ್) ಕಾಲೇಜಿನಲ್ಲಿ ಅದ್ಧೂರಿ ಸಮಾರಂಭ ಆಯೋಜಿಸಿದ್ದರು. ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ಸಮಾರಂಭಕ್ಕೆ ಸಾಕ್ಷಿಯಾಗಿದ್ದು ವಿಶೇಷ. ಈ ಸಂದರ್ಭದಲ್ಲಿ ಮಾತನಾಡಿದ ಇಂದ್ರಜಿತ್ ಲಂಕೇಶ್, ‘ನಮ್ಮ ಚಿತ್ರತಂಡ ಕರ್ನಾಟಕದಾದ್ಯಂತ ಸಂಚಾರ ಮಾಡುತ್ತಿದೆ. ಆ ಊರಿನ ಮಾಧ್ಯಮದವರು ಹಾಗೂ ಸಿನಿಪ್ರಿಯರು ನೀಡುತ್ತಿರುವ ಪ್ರೋತ್ಸಾಹಕ್ಕೆ ಮನ ತುಂಬಿ ಬಂದಿದೆ. ಹಾಡುಗಳ ಮೂಲಕ ಈಗಾಗಲೇ ಜನರನ್ನು ತಲುಪಿರುವ ಚಿತ್ರ ಇದೇ ಅಗಸ್ಟ್ 15 ರಂದು ಬಿಡುಗಡೆಯಾಗುತ್ತಿದೆ. ವರಮಹಾಲಕ್ಷ್ಮೀ, ಸ್ವತಂತ್ರ ದಿನಾಚರಣೆ, ರಕ್ಷಾ ಬಂಧನ ಹೀಗೆ ಆಗ ಸಾಲು ಸಾಲು ರಜಾ ದಿನಗಳಿವೆ. ಒಬ್ಬ ಪ್ರೇಕ್ಷಕನಾಗಿ ಸಿನಿಮಾ ನೋಡಿದಾಗ ನನಗೆ ಬಹಳ ಇಷ್ಟವಾಯಿತು. ಜನರಿಗೆ ನಮ್ಮ ಚಿತ್ರ ಮೆಚ್ಚುಗೆಯಾಗಲಿದೆ’ ಎಂದಿದ್ದಾರೆ.
ಇಂದ್ರಜಿತ್ ಅವರ ಹಿರಿಯ ಪುತ್ರ ಸಮರ್ಜಿತ್ ಲಂಕೇಶ್ ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ‘ಪುಟ್ಟಗೌರಿ ಮದುವೆ’ ಕಿರುತೆರೆ ಸರಣಿ ಖ್ಯಾತಿಯ ಸಾನಿಯಾ ಅಯ್ಯರ್ ನಾಯಕಿಯಾಗಿ ನಟಿಸಿರುವ ಚಿತ್ರಕ್ಕೆ ಪ್ರತಿಭಾವಂತ ತಂತ್ರಜ್ಞರು ಕೆಲಸ ಮಾಡಿದ್ದಾರೆ. ‘ಅಪ್ಪ ಹೇಳಿದ ಹಾಗೆ ಹೋದ ಕಡೆಯಲ್ಲಾ ನಮ್ಮ ಚಿತ್ರಕ್ಕೆ ಪಾಸಿಟಿವ್ ರೆಸ್ಪಾನ್ಸ್ ಸಿಗುತ್ತಿದೆ. ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ನನ್ನ ಹಲವು ವರ್ಷಗಳ ಶ್ರಮಕ್ಕೆ ಉತ್ತರ ಸಿಗುವ ದಿನ ಹತ್ತಿರ ಬಂದಿದೆ’ ಎಂದು ತಮ್ಮ ಸಿನಿಮಾ ಕುರಿತು ಮಾತನಾಡುತ್ತಾರೆ ಸಮರ್ಜಿತ್ ಲಂಕೇಶ್. ‘ಆಗಸ್ಟ್ 15, ನನ್ನ ಕನಸು ನನಸಾಗುವ ದಿನ. ಈ ದಿನಕ್ಕಾಗಿ ಕಾಯುತ್ತಿದ್ದೇನೆ’ ಎನ್ನುವ ನಾಯಕನಟಿ ಸಾನ್ಯಾ ಅಯ್ಯರ್ ಅವಕಾಶ ಕಲ್ಪಿಸಿದ ಇಂದ್ರಜಿತ್ ಲಂಕೇಶ್ ಅವರಿಗೆ ಧನ್ಯವಾದ ಹೇಳುತ್ತಾರೆ.