ಕನ್ನಡ ಸಿನಿಮಾ ನಿರ್ಮಾಪಕ, ವಿತರಕ ಮತ್ತು ಪ್ರದರ್ಶಕ ಕೆ ಸಿ ಎನ್‌ ಮೋಹನ್‌ (63 ವರ್ಷ) ನಿಧನರಾಗಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಮೈಲುಗಲ್ಲು ಎನಿಸಿದ ಹತ್ತಾರು ಸಿನಿಮಾಗಳ ನಿರ್ಮಾಪಕರು ಕೆ ಸಿ ಎನ್‌ ಗೌಡ್ರು. ಅವರ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಮೂಲಕ ಹಲವಾರು ಕಲಾವಿದರು ಹಾಗೂ ತಂತ್ರಜ್ಞರು ಚಿತ್ರರಂಗದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಇವರ ಕಿರಿಯ ಪುತ್ರ ಕೆ ಸಿ ಎನ್‌ ಮೋಹನ್‌ ಅವರೂ ಚಿತ್ರನಿರ್ಮಾಣ, ವಿತರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬೆಂಗಳೂರಿನ ಆಯಕಟ್ಟಿನ ಪ್ರದೇಶದಲ್ಲಿರುವ ನವರಂಗ್‌ ಮತ್ತು ಊರ್ವಶಿ ಚಿತ್ರಮಂದಿರಗಳ ಮಾಲೀಕರು. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಮೋಹನ್‌ ಇಂದು ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ. ನಾಳೆ ಬೆಳಗ್ಗೆ ಅವರ ಅಂತ್ಯಸಂಸ್ಕಾರ ನಡೆಯಲಿದೆ.

ರಾಮರಾಜ್ಯದಲ್ಲಿ ರಾಕ್ಷಸರು, ಜಯಸಿಂಹ, ಧರ್ಮಯುದ್ಧ, ಭಲೇ ಚತುರ, ಜ್ಯೂಲಿ… ಕೆ ಸಿ ಎನ್‌ ಮೋಹನ್‌ ನಿರ್ಮಾಣದ ಕೆಲವು ಪ್ರಮುಖ ಸಿನಿಮಾಗಳು. ಅವರ ಸಂಸ್ಥೆ ನಿರ್ಮಿಸಿದ ರಮ್ಯ ಅಭಿನಯದ ‘ಜ್ಯೂಲಿ’ ಚಿತ್ರವನ್ನು ಕೆ ಸಿ ಎನ್‌ ಮೋಹನ್‌ ಅವರ ಪತ್ನಿ ಪೂರ್ಣಿಮಾ ನಿರ್ದೇಶಿಸಿದ್ದರು. ಮೃತರು ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನನ್ನು ಅಗಲಿದ್ದಾರೆ. ಕೆ ಸಿ ಎನ್‌ ಮೋಹನ್‌ ಅವರ ಪತ್ನಿ ಪೂರ್ಣಿಮಾ ಕೆಲ ವರ್ಷಗಳ ಹಿಂದೆ ಹೃದಯಾಘಾತದಿಂದ ನಿಧನರಾಗಿದ್ದರು. ಕೆ ಸಿ ಎನ್‌ ಮೋಹನ್‌ ಅವರ ಹಿರಿಯ ಸಹೋದರ ಕೆ ಸಿ ಎನ್‌ ಚಂದ್ರು ತಮ್ಮ 69ನೇ ವಯಸ್ಸಿನಲ್ಲಿ 2021ರ ಜೂನ್‌ನಲ್ಲಿ ಇಹಲೋಕ ತ್ಯಜಿಸಿದ್ದರು. ಕೆ ಸಿ ಎನ್‌ ಮೋಹನ್‌ ಅವರ ನಿಧನಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಚಿತ್ರರಂಗದ ಹಲವರು ಸಂತಾಪ ಸೂಚಿಸಿದ್ದಾರೆ.

Previous articleಸುಷ್ಮಿತಾ ಸೇನ್‌ ‘ತಾಲಿ’ ಮೋಷನ್‌ ಟೀಸರ್‌ | JioCinemaದಲ್ಲಿ ಸ್ಟ್ರೀಮ್‌ ಆಗಲಿದೆ ಸರಣಿ
Next articleTHE DEMON WAR BEGINS | ಸುದೀಪ್‌ ನೂತನ ಸಿನಿಮಾ ಕ್ಯಾರಕ್ಟರ್‌ ಟೀಸರ್‌

LEAVE A REPLY

Connect with

Please enter your comment!
Please enter your name here