ಗಂಗಾಧರ್ ಸಾಲಿಮಠ ನಿರ್ದೇಶನದಲ್ಲಿ ವಿಜಯ ರಾಘವೇಂದ್ರ ನಟಿಸಿದ ‘ಗ್ರೇ ಗೇಮ್ಸ್’ ಸಿನಿಮಾ 25 ದಿನಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ನಿರ್ಮಾಪಕ ಆನಂದ್ ಮುಗದ್ ಅವರು ಚಿತ್ರತಂಡದ ಎಲ್ಲರಿಗೂ ನೆನಪಿನ ಕಾಣಿಕೆ ನೀಡಿ ಧನ್ಯವಾದ ಹೇಳಿದ್ದಾರೆ.
‘ಸಿನಿಮಾ ತೆರೆಕಂಡು ಎರಡು ವಾರಗಳು ಪ್ರದರ್ಶನ ಕಂಡ ಮೇಲೆ ಮಾತನಾಡಿದರೆ ಹೆಚ್ಚು ವಿಷಯ ಇರುತ್ತದೆ ಅನಿಸುತ್ತಿತ್ತು. ಆ ಸಂದರ್ಭ ಈಗ ಬಂದಿದೆ. ಚಿತ್ರವನ್ನು ಜನ ಮೆಚ್ಚಿಕೊಂಡಿದ್ದಾರೆ’ ಎಂದು ‘ಗ್ರೇ ಗೇಮ್ಸ್’ ಗೆಲುವಿಗೆ ಸಂತಸ ವ್ಯಕ್ತಪಡಿಸಿದರು ನಟ ವಿಜಯ ರಾಘವೇಂದ್ರ. ಆನಂದ್ ಮುಗದ್ ನಿರ್ಮಾಣದ, ಪ್ರಶಸ್ತಿ ವಿಜೇತ ‘ಆಯನ’ ಸಿನಿಮಾ ಖ್ಯಾತಿಯ ಗಂಗಾಧರ್ ಸಾಲಿಮಠ ನಿರ್ದೇಶನದ ಚಿತ್ರ ಯಶಸ್ವೀ ಇಪ್ಪತ್ತೈದು ದಿನಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ನಿರ್ಮಾಪಕರು ಚಿತ್ರತಂಡದವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಈ ಚಿತ್ರದ ಮೂಲಕ ವಿಜಯ ರಾಘವೇಂದ್ರ ಅವರ ಅಕ್ಕನ ಮಗ ಜೈ ಬೆಳ್ಳಿತೆರೆಗೆ ಪರಿಚಯವಾಗಿದ್ದಾರೆ. ಇಂಥದ್ದೊಂದು ವಿಶಿಷ್ಟ ಕತೆಯ ಸಿನಿಮಾದಲ್ಲಿ ನಟಿಸಲು ಅವಕಾಶ ಮಾಡಿಕೊಟ್ಟದ್ದಕ್ಕಾಗಿ ಜೈ ನಿರ್ಮಾಪಕರಿಗೆ ಧನ್ಯವಾದ ಹೇಳಿದರು.
ನಿರ್ದೇಶಕ ಗಂಗಾಧರ್ ಸಾಲಿಮಠ ಮಾತನಾಡಿ, ‘ಇಂದಿಗೂ ನಮ್ಮ ಚಿತ್ರ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧೆಡೆ 26 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ನಾವು ಏನೇ ಪ್ರಚಾರ ಮಾಡಿದರು, ಜನರಿಂದ ನಮ್ಮ ಚಿತ್ರದ ಬಗ್ಗೆ ಬರುವ ಅಭಿಪ್ರಾಯವೇ ಅಂತಿಮ. ಅವರು ಚಿತ್ರದ ಬಗ್ಗೆ ಒಬ್ಬರಿಂದ ಒಬ್ಬರಿಗೆ ಹೇಳುತ್ತಿರುವುದರಿಂದ ನಮ್ಮ ಚಿತ್ರ ಇಪ್ಪತ್ತೈದು ದಿನಗಳವರೆಗೂ ಪ್ರದರ್ಶನ ಕಾಣಲು ಸಾಧ್ಯವಾಗುತ್ತಿದೆ. ಚಿತ್ರದ ಗೆಲುವನ್ನು ಸಾಧ್ಯವಾಗಿಸಿದ ಪ್ರೇಕ್ಷಕರಿಗೆ ಹಾಗೂ ಚಿತ್ರತಂಡಕ್ಕೆ ಧನ್ಯವಾದ’ ಎಂದರು. ‘ಸಿನಿಮಾ ಮಾಡುವುದು ನನ್ನ ಕನಸಾಗಿತ್ತು. ಅದು ನನಸಾಗಿದೆ. ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ’ ಎನ್ನುವುದು ನಿರ್ಮಾಪಕ ಆನಂದ್ ಮುಗದ್ ಅವರ ಮಾತು. ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸಿರುವ ನಟಿ ಭಾವನಾ ರಾವ್ ಚಿತ್ರತಂಡಕ್ಕೆ ಧನ್ಯವಾದ ಹೇಳಿದರು.