ಯುವ ನಟ-ನಟಿಯರ ಭಿನ್ನ ಕಥಾಹಂದರದ ‘ಹೊಂದಿಸಿ ಬರೆಯಿರಿ’ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಸಿನಿಮಾತಂಡ ಪರಿಸರ ಜಾಥಾ ಮೂಲಕ ಪ್ರಚಾರಕಾರ್ಯ ಶುರುಮಾಡಿದೆ. ಟೀಸರ್ ಮೂಲಕ ಸುದ್ದಿಯಾಗಿರುವ ಸಿನಿಮಾದ ಮೊದಲ ಹಾಡು ಇದೇ ತಿಂಗಳ 24ಕ್ಕೆ ಬಿಡುಗಡೆಯಾಗಲಿದೆ.
ಸಿನಿಮಾವೊಂದನ್ನು ಪೂರ್ಣಗೊಳಿಸುವುದು ಒಂದು ಸವಾಲಾದರೆ ಪ್ರಚಾರ ನಡೆಸಿ ಅದನ್ನು ಥಿಯೇಟರ್‌ಗೆ ತರುವುದು ಮತ್ತೊಂದು ಸವಾಲು. ಚಿತ್ರತಂಡದವರು ನಾನಾ ಬಗೆಯಲ್ಲಿ ಪ್ರಮೋಷನ್ ಮಾಡುತ್ತಾರೆ. ‘ಹೊಂದಿಸಿ ಬರೆಯಿರಿ’ ಸಿನಿಮಾ ಟೀಂ ಸಾಮಾಜಿಕ ಕಾಳಜಿಯ ಯೋಜನೆಯೊಂದಿಗೆ ಪ್ರಚಾರ ಕಾರ್ಯಕ್ಕೆ ಮುಂದಡಿ ಇಟ್ಟಿದೆ. ಪರಿಸರ ದಿನದ ಅಂಗವಾಗಿ ಬಿಎನ್ಎಂಐಟಿ ಕಾಲೇಜು ಏರ್ಪಡಿಸಿದ್ದ ಸೈಕಲ್ ಜಾಥಾದಲ್ಲಿ ಚಿತ್ರದ ತಾರೆಯರಾದ ಪ್ರವೀಣ್ ತೇಜ್ , ನವೀನ್ ಶಂಕರ್ , ಐಶಾನಿ ಶೆಟ್ಟಿ, ಸಂಯುಕ್ತ ಹೊರನಾಡು, ಭಾವನಾ ರಾವ್, ಅರ್ಚನಾ ಜೋಯಿಸ್, ಅನಿರುದ್ಧ್ ಆಚಾರ್ಯ, ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಪಾಲ್ಗೊಂಡಿದ್ದಾರೆ. ಈ ಭಾನುವಾರ ಹಮ್ಮಿಕೊಳ್ಳುತ್ತಿರುವ We Run for cause ಮ್ಯಾರಾಥಾನ್‌ನಲ್ಲಿಯೂ ಸಿನಿಮಾ ತಂಡ ಭಾಗಿಯಾಗಲಿದೆ. ಈ ಮೂಲಕ ಗ್ರಾಮೀಣ ಮಕ್ಕಳ ಶಿಕ್ಷಣಕ್ಕಾಗಿ ಹೊಂದಿಸಿ ಬರೆಯಿರಿ ಬಳಗ ಕೈ ಜೋಡಿಸಲಿದೆ.
ಟೀಸರ್ ಮೂಲಕ ಸುದ್ದಿಯಾಗಿರುವ ಸಿನಿಮಾದ ಮೊದಲ ಹಾಡು ಇದೇ ತಿಂಗಳ 24ಕ್ಕೆ ಬಿಡುಗಡೆಯಾಗಲಿದೆ. ಕಾಲೇಜ್ ಫ್ರೊಫೆಸರ್ ಆಗಿದ್ದ ರಾಮೇನಹಳ್ಳಿ ಜಗನ್ನಾಥ ‘ಹೊಂದಿಸಿ ಬರೆಯಿರಿ’ಗೆ ಆಕ್ಷನ್ ಕಟ್ ಹೇಳಿದ್ದು, ವಿದ್ಯಾರ್ಥಿ ಜೀವನ, ಕಾಲೇಜು ನಂತರದ ಜೀವನದ ಏರಿಳಿತದ 12 ವರುಷಗಳ ಸುದೀರ್ಘ ಕಥಾಹಂದರ ಹೊಂದಿದೆ ಸಿನಿಮಾ. ಪ್ರವೀಣ್ ತೇಜ್, ನವೀನ್ ಶಂಕರ್, ಶ್ರೀಮಹದೇವ್, ಭಾವನಾರಾವ್ ಸಂಯುಕ್ತ ಹೊರನಾಡು, ಐಶಾನಿ ಶೆಟ್ಟಿ, ಅರ್ಚನಾ ಜೋಯಿಸ್, ಅನಿರುದ್ದ್ ಆಚಾರ್ಯ ಸೇರಿದಂತೆ ಹಲವು ಪ್ರತಿಭೆಗಳು ನಟಿಸಿದ್ದಾರೆ. ಸದ್ಯ ಚಿತ್ರಕ್ಕೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆದಿವೆ. ಮಾಸ್ತಿ, ಪ್ರಶಾಂತ್ ರಾಜಪ್ಪ ಮತ್ತು ಜಗನ್ನಾಥ್ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ‘ಗುಳ್ಟು’ ಚಿತ್ರಕ್ಕೆ ಸಿನಿಮಾಟೋಗ್ರಫಿ ಮಾಡಿದ್ದ ಶಾಂತಿ ಸಾಗರ್ ಈ ಚಿತ್ರದ ಛಾಯಾಗ್ರಾಹಕ. ಜೋ ಕೋಸ್ಟ ಸಂಗೀತ, ಕೆ ಕಲ್ಯಾಣ್, ಹೃದಯಶಿವ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ.