ನಿರ್ದೇಶಕ ನಿತಿನ್‌ ಕೃಷ್ಣಮೂರ್ತಿ ಚಿತ್ರಕಥೆ ಮೇಲೆ ಚೆನ್ನಾಗಿ ಕೆಲಸ ಮಾಡಿದ್ದಾರೆ. ಹಾಗಾಗಿ ಸಿನಿಮಾ ಹಳಿತಪ್ಪಿಲ್ಲ. ಹುಡುಗರ ತುಂಟಾಟ, ಪೋಲಿತನದ ಮಧ್ಯೆ ಕೆಲವು ಸೂಕ್ಷ್ಮಗಳನ್ನೂ ಹೇಳಲು ಅವರು ಯತ್ನಿಸಿದ್ದಾರೆ. ಸಿನಿಮಾದಲ್ಲಿ ಪ್ರಮುಖವಾಗಿ ಗಮನ ಸೆಳೆಯುವುದು ಛಾಯಾಗ್ರಹಣ ಮತ್ತು ಸಂಭಾಷಣೆ. ಕೆಲವೊಮ್ಮೆ ಸಂಭಾಷಣೆ ಅತಿಯಾಯ್ತು ಎನಿಸಲೂಬಹುದು.

ಪ್ರೋಮೋಗಳ ಮೂಲಕವೇ ಸುದ್ದಿಯಲ್ಲಿದ್ದ ‘ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಕುತೂಹಲ ಹುಟ್ಟುಹಾಕಿತ್ತು. ಸಿನಿಮಾ ಮಾಡಿರುವ ಹೊಸ ಹುಡುಗರು ಪ್ರೋಮೋಗಳಲ್ಲಿ ತಮ್ಮ ಕ್ರಿಯಾಶೀಲತೆ ಮೆರೆದಿದ್ದರು. ಈಗ ಸಿನಿಮಾ ಥಿಯೇಟರ್‌ಗೆ ಬಂದಿದ್ದು ಹಾಸ್ಟೆಲ್‌ ಹುಡುಗರು ತರ್ಲೆ, ತುಂಟತನ, ಪೋಲಿತನದಿಂದ ಚಿತ್ರವನ್ನು ಕಟ್ಟಿದ್ದಾರೆ. ಕತೆ ಪುಟ್ಟದಾಗಿದ್ದರೂ ಲವಲವಿಕೆಯ ನಟನೆ, ಚುರುಕು ಸಂಭಾಷಣೆ, ಮೇಕಿಂಗ್‌ನಿಂದ ಸಿನಿಮಾ ಎಂಗೇಜಿಂಗ್‌ ಆಗಿದೆ. ಪ್ರೇಕ್ಷಕರನ್ನು ನಗಿಸುವುದೇ ಪ್ರಮುಖ ಉದ್ದೇಶವಾಗಿರುವುದರಿಂದ ಇಲ್ಲಿ ಲಾಜಿಕ್‌ ಹುಡುಕುವಂತಿಲ್ಲ. ಹಾಗೆಯೇ ಕೆಲವು ಸಂಭಾಷಣೆಗಳಿಗೆ ಅರ್ಥವನ್ನೂ ಹುಡುಕುತ್ತಾ ಕೂರುವಂತಿಲ್ಲ!

ನಟಿ ರಮ್ಯ ಉಪನ್ಯಾಸಕಿಯಾಗಿ ಕಾಲೇಜಿಗೆ ಎಂಟ್ರಿ ಕೊಡುವ ಸೀನ್‌ನೊಂದಿಗೆ ಸಿನಿಮಾ ಶುರುವಾಗುತ್ತದೆ. ಈ ಸೀನ್‌ಗೆ ಕಾಲೇಜು ಹುಡುಗರ ಪೋಲಿತನ ಪರಿಚಯಿಸುವ ಉದ್ದೇಶವಷ್ಟೇ ಇದ್ದಂತಿದೆ. ಏಕೆಂದರೆ ರಮ್ಯ ಕತೆಯ ಭಾಗವಾಗಿಲ್ಲ. ಆದರೆ ಚಿತ್ರಕಥೆಗೆ ತಿರುವು ಸಿಗಬಹುದಾದೆಡೆಯೆಲ್ಲಾ ರಮ್ಯರ ವೀಡಿಯೋ ತುಣುಕುಗಳು ಬಳಕೆಯಾಗಿವೆ. ಕತೆಯ ಮಧ್ಯೆ ರಮ್ಯ ಬಂದಾಗಲೆಲ್ಲಾ ಥಿಯೇಟರ್‌ನಲ್ಲಿ ಯುವಕರು ‘ಓ’ ಎಂದು ಕೂಗುತ್ತಾರೆ. ಅಲ್ಲಿಗೆ ನಿರ್ದೇಶಕರ ಉದ್ದೇಶ ಈಡೇರಿದಂತಾಗಿದೆ! ಆದರೆ ರಮ್ಯರ ಈ ವೀಡಿಯೋ ಕ್ಲಿಪಿಂಗ್‌ಗಳನ್ನು ಇನ್ನಷ್ಟು ಪ್ರೊಫೆಷನಲ್‌ ಆಗಿ ಚಿತ್ರಿಸಿ ಬಳಸಿಕೊಳ್ಳಬಹುದಿತ್ತು ಎನಿಸದೇ ಇರದು.

ಹಾಸ್ಟೆಲ್‌ ಹುಡುಗ ಅಜಿತ್‌ಗೆ ಸಿನಿಮಾ ಮಾಡುವ ಹುಚ್ಚು. ಅದಕ್ಕೆ ಪೂರ್ವತಯಾರಿ ಎನ್ನುವಂತೆ ಆತನೊಂದು ಶಾರ್ಟ್‌ ಫಿಲ್ಮ್‌ ಮಾಡಬೇಕಿದೆ. ಇದಕ್ಕಾಗಿ ಕ್ಯಾಮೆರಾಮನ್‌ಗೂ ತನ್ನ ಕೋಣೆಯಲ್ಲಿ ಜಾಗ ಮಾಡಿಕೊಟ್ಟಿದ್ದಾನೆ. ಈ ಕ್ಯಾಮೆರಾಮನ್‌ಗೆ ಎಲ್ಲರನ್ನೂ, ಎಲ್ಲದನ್ನೂ ಸೆರೆಹಿಡಿಯುವ ಹುಕಿ. ಇಂಥ ಸ್ನೇಹಿತನ ಜೊತೆ ಅಜಿತ್‌ ವಿಚಿತ್ರ ಐಡಿಯಾಗಳೊಂದಿಗೆ ಕಿರುಚಿತ್ರವೊಂದನ್ನು ರೂಪಿಸಲು ಹೊರಡುತ್ತಾನೆ. ಇದರಲ್ಲಿ ಆತನ ಹಾಸ್ಟೆಲ್‌ ಸ್ನೇಹಿತರೂ ಪಾತ್ರಗಳೇ. ಶಾರ್ಟ್‌ ಫಿಲ್ಮ್‌ ಶೂಟ್‌ ಮಾಡುವ ಹಾದಿಯಲ್ಲಿ ಏನೆಲ್ಲಾ ಎಡವಟ್ಟುಗಳಾಗುತ್ತವೆ ಎನ್ನುವುದು ಕಥಾಹಂದರ. ನಿರ್ದೇಶಕ ನಿತಿನ್‌ ಕೃಷ್ಣಮೂರ್ತಿ ಚಿತ್ರಕಥೆ ಮೇಲೆ ಚೆನ್ನಾಗಿ ಕೆಲಸ ಮಾಡಿದ್ದಾರೆ. ಹಾಗಾಗಿ ಸಿನಿಮಾ ಹಳಿತಪ್ಪಿಲ್ಲ.

ಸಿನಿಮಾದಲ್ಲಿ ಮುಖ್ಯವಾಗಿ ಗಮನ ಸೆಳೆಯುವುದು ಛಾಯಾಗ್ರಹಣ ಮತ್ತು ಸಂಭಾಷಣೆ. ಕೆಲವೊಮ್ಮೆ ಸಂಭಾಷಣೆ ಅತಿಯಾಯ್ತು ಎನಿಸಲೂಬಹುದು. ಆದರೆ ಹಾಸ್ಟೆಲ್‌ ಆವರಣದಲ್ಲೇ ನಡೆಯುವ ಕತೆಯಾದ್ದರಿಂದ ಸಂಭಾಷಣೆಯಿಂದಲೇ ಇದನ್ನು ಸರಿದೂಗಿಸುವ ಸವಾಲು ನಿರ್ದೇಶಕರಿಗಿತ್ತೇನೋ? ಪಾತ್ರಗಳೂ ಹೆಚ್ಚು, ಮಾತುಗಳೂ ಹೆಚ್ಚು. ವಿವಿಧ ಪ್ರದೇಶಗಳಿಂದ ಹಾಸ್ಟೆಲ್‌ಗೆ ಬಂದ ವಿದ್ಯಾರ್ಥಿಗಳು ಆಡುವ ಅವರವರ ನೆಲದ ಸ್ಲ್ಯಾಂಗ್‌, ಸಂಭಾಷಣೆಯ ಏಕತಾನತೆಯ ಅಪಾಯ ತಪ್ಪಿಸಿದೆ. ಇಲ್ಲಿ ಕೆಲವೊಮ್ಮೆ ನಿರ್ದೇಶಕರು ಪಾತ್ರಗಳಿಂದ ಪೋಲಿ ಮಾತುಗಳನ್ನೂ ಆಡಿಸುತ್ತಾರೆ. ಫ್ಯಾಮಿಲಿ ಆಡಿಯನ್ಸ್‌ ಹಿತದೃಷ್ಟಿಯಿಂದ ಇಂತಹ ಒಂದಷ್ಟು ಮಾತುಗಳಿಗೆ ಅವರು ಕತ್ತರಿ ಹಾಕಬಹುದಿತ್ತು.

ಛಾಯಾಗ್ರಾಹಕ ಅರವಿಂದ ಕಶ್ಯಪ್‌ ಚಿತ್ರದಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಿದ್ದಾರೆ. ಸಿನಿಮಾದೊಳಗೊಂದು ಸಿನಿಮಾ ನಡೆಯುವ ಕತೆಯಲ್ಲಿ ಕ್ಯಾಮೆರಾ ಕೆಲಸಕ್ಕೆ ಹೆಚ್ಚಿನ ಸವಾಲುಗಳಿರುತ್ತವೆ. ಅದರ ಜೊತೆ ಅರವಿಂದ್‌ ಅವರು ಇಲ್ಲಿ ಒಂದಷ್ಟು ಹೊಸತನದ ಶಾಟ್ಸ್‌ಗಳನ್ನೂ ಇಟ್ಟಿದ್ದಾರೆ. ಸಿನಿಮಾದೊಳಗೆ ಶೂಟ್‌ ಆಗುವ ಕಿರುಚಿತ್ರದ ಕ್ಯಾಮೆರಾಮನ್‌ ಕೂಡ ಅವರೇ. ಹಾಸ್ಟೆಲ್‌ನ ಎಲ್ಲಾ ಕೋಣೆಗಳ ಚಟುವಟಿಕೆಗಳನ್ನು ಒಮ್ಮೆಗೇ ಸ್ಕ್ರೀನ್‌ನಲ್ಲಿ ಹಿಡಿದಿಡುವ ಅವರ ಐಡಿಯಾ ಚೆನ್ನಾಗಿ ವರ್ಕ್‌ ಆಗಿದೆ. ಛಾಯಾಗ್ರಾಹಕರ ಕೆಲಸಕ್ಕೆ ಎಲ್ಲೂ ಚ್ಯುತಿ ಆಗದಂತೆ ಸನ್ನಿವೇಶಗಳನ್ನು ಪೋಣಿಸಿ ಚೆಂದಗಾಣಿಸಿದ ಸಂಕಲನಕಾರ ಮತ್ತು ಸಂಗೀತ ನಿರ್ದೇಶಕರ ಕೆಲಸಕ್ಕೂ ಮೆಚ್ಚುಗೆ ಸಲ್ಲಬೇಕು.

ಇಡಿಯಾಗಿ ಚಿತ್ರಕ್ಕೊಂದು ವೇಗವಿದೆ. ಹೆಚ್ಚು ಪಾತ್ರ, ಅತಿಯಾದ ಮಾತು, ಲವಲವಿಕೆಯ ನಟನೆ ಜೊತೆಗೆ ಥ್ರಿಲ್ಲರ್‌ – ಕಾಮಿಡಿ ಜಾನರ್‌ಗೆ ಅಗತ್ಯವಾಗಿದ್ದ ವೇಗವನ್ನು ಕಾಯ್ದುಕೊಳ್ಳಲು ನಿರ್ದೇಶಕರು ಶ್ರಮಿಸಿದ್ದಾರೆ. ಆದಾಗ್ಯೂ ದ್ವಿತಿಯಾರ್ಧದ ಮೊದಲ ಒಂದಷ್ಟು ನಿಮಿಷಗಳು ಎಳೆದಂತೆ ಭಾಸವಾಗುತ್ತದೆ. ಹುಡುಗರ ತುಂಟಾಟ, ಹೊಡೆದಾಟಗಳ ಮಧ್ಯೆ ಕೆಲವು ಸೂಕ್ಷ್ಮಗಳನ್ನೂ ಹೇಳಲು ಯತ್ನಿಸಿದ್ದಾರೆ. ಚಿತ್ರದಲ್ಲಿ ಕಿರುಚಿತ್ರದ ಪಾತ್ರಗಳಾಗುವ ಹುಡುಗರು ಹಾಗೂ ವಾರ್ಡನ್‌ ಪಾತ್ರದಲ್ಲಿ ಮಂಜುನಾಥ್‌ ನಾಯಕ್‌ ಸೊಗಸಾಗಿ ನಟಿಸಿದ್ದಾರೆ. ನಿರ್ದೇಶಕರೇ ನಟಿಸಿರುವ ‘ಜೀನಿ’ ಪಾತ್ರ, ಅವರ ಜೊತೆಗಿರುವ ಎರಡು ವಿಚಿತ್ರ ಪಾತ್ರಗಳೂ ಮಜವಾಗಿವೆ. ನಟರಾದ ರಿಷಭ್‌ ಶೆಟ್ಟಿ ಮತ್ತು ಶೈನ್‌ ಶೆಟ್ಟಿ, ನಿರ್ದೇಶಕ ಪವನ್‌ ಕುಮಾರ್‌ ಅತಿಥಿಗಳಾಗಿ ಬಂದುಹೋಗುತ್ತಾರೆ. ಸೃಜನಶೀಲ ಹುಡುಗರ ಹೊಸತನದ ಸಿನಿಮಾ ಯುವ ಮನಸ್ಸುಗಳಿಗೆ ಹಿಡಿಸುವುದರಲ್ಲಿ ಸಂಶಯವಿಲ್ಲ.

LEAVE A REPLY

Connect with

Please enter your comment!
Please enter your name here