ಮೂರನೇ ಸೀಸನ್‌ನಲ್ಲೇ ಈ ಕಥೆ ಮುಕ್ತಾಯವಾಗುತ್ತದೆ ಎಂದು ವೀಕ್ಷಕರು ಭಾವಿಸಿದ್ದರು. ಇಲ್ಲ, ಮತ್ತೂ ಆರು ಎಪಿಸೋಡಿನ ನಾಲ್ಕನೇ ಸೀಸನ್ ಮಾಡಿ ಎಲ್ಲ ಚಿಕ್ಕ ಪುಟ್ಟ ಉಪಕಥೆಗಳಿಗೂ ತಾರ್ಕಿಕ ಅಂತ್ಯ ಕಾಣಿಸಿ ಈ ಸಲ ಕೊನೆಗೂ ಮುಗಿಸಿದ್ದಾರೆ. ‘Jack Ryan’ ವೆಬ್ ಸರಣಿ ಅಮೇಜಾನ್ ಪ್ರೈಮ್ ವೀಡಿಯೋದಲ್ಲಿ ಸ್ಟ್ರೀಮ್ ಆಗುತ್ತಿದೆ.
ಜನಪ್ರಿಯ ಪತ್ತೇದಾರಿ ಲೇಖಕ ಟಾಮ್ ಕ್ಲಾನ್ಸಿ ಸೃಷ್ಟಿಸಿದ ಕಾದಂಬರಿಗಳ ನಾಯಕ Jack Ryan. ಮೊದಮೊದಲು ಸಿನಿಮಾಗಳಲ್ಲಿ ಒರಿಜಿನಲ್ ಕತೆಯಂತೆಯೇ CIA ಸಂಸ್ಥೆಯ ಅನಲಿಸ್ಟ್ ಆದರೂ, ತನ್ನ ವೃತ್ತಿ ವ್ಯಾಪ್ತಿಯ ಹೊರಗಿನ ಜವಾಬ್ದಾರಿ ಹೊರುವ ವ್ಯಕ್ತಿ. ಮಾದಕ ದ್ರವ್ಯ ಸಾಗಣಿಕೆ, ಉಗ್ರವಾದ, ಅಂತರರಾಷ್ಟ್ರೀಯ ರಾಜಕೀಯ ಹತ್ಯೆ ಜಾಲ, ವಾಣಿಜ್ಯ ಭಯೋತ್ಪಾದನೆ – ಇವುಗಳಿಂದ ದೇಶವನ್ನು ರಕ್ಷಿಸುವ ಹೀರೋ. ಆತನಿಗೆ ಪತ್ನಿ ಡಾಕ್ಟರ್ ಕೇಥಿಯ ನೆರವು ಸಿಗುತ್ತದೆ. ಆಗ ನಟ ಹ್ಯಾರಿಸನ್ ಫೋರ್ಡ್ ಈ ಪಾತ್ರದಲ್ಲಿ ಖ್ಯಾತರಾಗಿದ್ದರು. ಅನಂತರ ‘ಸಮ್ ಆಫ್ ಆಲ್ ಫಿಯರ್ಸ್’ ಚಿತ್ರದಲ್ಲಿ ನಾಯಕನಾಗಿ ಬೆನ್ ಅಫ್ಲೆಕ್ ನಟಿಸಿದ್ದರು. ಈ ಸಿನಿಮಾಗೂ ಮೆಚ್ಚುಗೆ ಸಿಕ್ಕಿತು. ಅದರ ನಂತರ ಈ ನಾಯಕನ ಸಾಹಸಗಳು ಎಷ್ಟು ಯಶಸ್ವಿಯಾದವೆಂದರೆ ಇನ್ನೂ ಒಂದು ಅದೇ ನಾಯಕನ ಪಾತ್ರದ ಚಿತ್ರ – ‘ಶ್ಯಾಡೋ ರೆಕ್ರೂಟ್’ ಸಹ ಬಂದಿತು.
ಆದರೆ, ಲೇಖಕ ಟಾಮ್ ಕ್ಲಾನ್ಸಿ ನಿಧನರಾದ ಮೇಲೆ ಈ ಸರಣಿಯನ್ನು ಮುಂದುವರೆಸಿದ ಕಿರುತೆರೆ ನಿರ್ಮಾಪಕರು ಪಾತ್ರದ ಹೆಸರನ್ನು ಮಾತ್ರ ಇಟ್ಟುಕೊಂಡು ಅವನನ್ನು ಆ್ಯಕ್ಷನ್ ಹೀರೋ ಆಗಿ ಬದಲಿಸಿಬಿಟ್ಟರು! ಆ ನಂತರ ಜಾನ್ ಕ್ರಾಸಿನ್ಸ್ಕಿ ಎಂಬ ನಟನ ಅಭಿನಯದಲ್ಲಿ ಇದುವರೆಗೆ 4 ಸೀಸನ್ ಥ್ರಿಲ್ಲರ್ ವೆಬ್ ಸರಣಿಯನ್ನೇ ನಿರ್ಮಿಸಿದ್ದು ಒಟ್ಟಾರೆ 30 ಎಪಿಸೋಡುಗಳಿವೆ. ಇದಕ್ಕೆ ‘Tom Clancy’s Jack Ryan’ ಎಂದೇ ಹೆಸರು.
ಮೊದಲು ಎರಡು ಸೀಸನ್‌ಗಳಲ್ಲಿ ಪಾತ್ರಧಾರಿಗಳನ್ನು ಪರಿಚಯಿಸಿ ಅವನಿಗೆ ಹೊಸ ಹೊಸ ಯೋಜನೆ, ಅಸೈನ್‌ಮೆಂಟ್‌ಗಳನ್ನು ನೀಡಲಾಗುತ್ತದೆ. ಅವನು ದೇಶ ವಿದೇಶಗಳಲ್ಲೆಲ್ಲ ಸುತ್ತುತ್ತಾ ಖದೀಮ ಕಳ್ಳ ಕಾಕರನ್ನೂ, ಉಗ್ರರನ್ನೂ ಹಿಡಿಯುತ್ತಾ ತಾನೂ ಗಾಯಗೊಳ್ಳುತ್ತಾ ಹೇಗೋ ಕೊನೆಗೆ ಯಶಸ್ವಿಯಾಗುತ್ತಲೇ ಇರುತ್ತಾನೆ. ಮೂರನೇ ಸೀಸನ್‌ನಲ್ಲೇ ಈ ಕಥೆ ಮುಕ್ತಾಯವಾಗುತ್ತದೆ ಎಂದಿದ್ದೆ. ಇಲ್ಲ, ಮತ್ತೂ ಆರು ಎಪಿಸೋಡಿನ ನಾಲ್ಕನೇ ಸೀಸನ್ ಮಾಡಿ ಎಲ್ಲ ಚಿಕ್ಕ ಪುಟ್ಟ ಉಪಕಥೆಗಳಿಗೂ ತಾರ್ಕಿಕ ಅಂತ್ಯ ಕಾಣಿಸಿ ಈ ಸಲ ಕೊನೆಗೂ ಮುಗಿಸಿದ್ದಾರೆ.
ನನಗೆ ಮೊದಲ 3 ಸೀಸನ್‌ಗಳೇ ಹೆಚ್ಚು ಪ್ರಿಯವಾದವು. ಕೊನೆಯ ಸೀಸನ್ ಸ್ವಲ್ಪ ಚರ್ವಿತಚರ್ವಣ ಎನಿಸಿತು. ಹೇಳಲು ಹೊಸದೇನೂ ಇರಲಿಲ್ಲ. ಮತ್ತದೇ ಡ್ರಗ್ ಸ್ಮಗ್ಲರ್, ಉಗ್ರವಾದಿಗಳು, ದೇಶದ ಒಳಶತ್ರುಗಳಾದ ಹಿರಿಯ ಅಧಿಕಾರಿಗಳ, ರಾಜಕಾರಣಿಗಳ ದ್ರೋಹ- ಕೊನೆಗೆ ಜೀವನ್ಮರಣದ ಹೋರಾಟ, ಅವರೆಲ್ಲ ಸಿಕ್ಕಿ ಬೀಳುವುದು… ಇದನ್ನೆಲ್ಲಾ ಆಗಲೇ ನೋಡಿದ್ದೆವಲ್ಲಾ ಎನಿಸಿತು. ಈ ಸಾಹಸಿ ನಾಯಕ ಜಾನ್ ಕ್ರಾಸಿನ್ಸ್ಕಿ ಇನ್ನೂ ಬೇರೆ ಪಾತ್ರಗಳನ್ನು ಮಾಡಲು ಇಚ್ಛಿಸಿದ್ದರಿಂದ ಅವನಿಗಂತೂ ಇದರಿಂದ ಬಿಡುಗಡೆಯಾಯಿತಂತೆ. ಮತ್ತೆ ಇನ್ಯಾರನ್ನೋ ತೆಗೆದುಕೊಂಡು ಇನ್ನೊಂದು ಇದೇ ಪಾತ್ರದ ಸರಣಿ ಸೀಸನ್ ಮಾಡುತ್ತಾರಾ? ನೋಡಬೇಕು!