ಹಿಜಾಬ್‌ಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ನಡೆಯುತ್ತಿರುವ ಗಲಾಟೆಗಳಿಗೆ ಈ ಚಿತ್ರದಲ್ಲಿನ ಕೆಲವು ದೃಶ್ಯ, ಸಂಭಾಷಣೆಗಳು ಉತ್ತರವಾಗುತ್ತವೆ. ಚಿತ್ರದ ಕ್ಲೈಮ್ಯಾಕ್ಸ್‌ ಭಿನ್ನವಾಗಿದ್ದಿದ್ದರೆ ಚಿತ್ರಕ್ಕೆ ಬೇರೆಯದ್ದೇ ಆಯಾಮ ಸಿಗುತ್ತಿತ್ತೇನೋ? – ‘ಮಿಯಾವ್‌’ ಮಲಯಾಳಂ ಸಿನಿಮಾ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಮೇಲ್ನೋಟಕ್ಕೆ ಈ ಸಿನಿಮಾ ಕಾಮಿಡಿ ಫ್ಯಾಮಿಲಿ ಡ್ರಾಮಾ ಎನಿಸಿದರೂ ಆಂತರ್ಯದಲ್ಲಿ ಸಂದೇಶಗಳು ಅಡಕವಾಗಿವೆ. ‘ಹೆಣ್ಣಿಗೆ ಹೇಗೆ ಮರ್ಯಾದೆ ಕೊಡಬೇಕು ಅನ್ನೋದನ್ನು ಕಲಿ’ ಎಂದು ಪತ್ನಿ ತನ್ನ ಗಂಡನಿಗೆ ಕಿವಿಮಾತು ಹೇಳುವಂತಿದೆ. ‘ನೀನು ನಿನಗಿಷ್ಟ ಆಗೋ ಹಾಗೆ ಬದುಕು ಗುರೂ. ಇತರರು ಅವರಿಗಿಷ್ಟ ಆಗೋ ಹಾಗೆ ಬದುಕಲಿ ಬಿಡು. ಬೇರೆಯವರ ನಂಬಿಕೆಗೂ ಮರ್ಯಾದೆ ಕೊಡು. ಈ ಸಣ್ಣ ಸಹಾನುಭೂತಿಯೊಂದನ್ನು ಬೆಳೆಸಿಕೊಂಡು ನೋಡು, ಈ ಜಗತ್ತು ಎಷ್ಟು ಸುಂದರವಾಗಿ ಕಾಣುತ್ತೆ’ ಎನ್ನುವ ಸಂದೇಶವನ್ನೂ ಗುರುತಿಸಬಹುದು. ಇಂತಹ ಹತ್ತಾರು ಸೂಕ್ಷ್ಮ ವಿಚಾರಗಳ ಕುರಿತಾದ ತೀಕ್ಷ್ಣ ಸಂಭಾಷಣೆಯ ದೃಶ್ಯಗಳನ್ನು ಈ ಸಿನಿಮಾದಲ್ಲಿ ಕಾಣಬಹುದು. ಧರ್ಮಗಳ ಕುರಿತ ಮಾತುಗಳ ನಂತರದ ದೃಶ್ಯವೊಂದರ ಸಂಭಾಷಣೆ ಮನಸ್ಸಿಗೆ ನಾಟುತ್ತದೆ. ‘ಶೂ ಯಾಕೆ ಇಲ್ಲಿ ಬಿಟ್ಟಿದ್ದಿಯಾ, ಎತ್ಕೊಂಡೋಗಿ ಆಚೆ ಇಡು’ ಎಂದು ಸಿಂಬಾಲಿಕ್‌ ಆಗಿ ಹೇಳುವ ಉಪ ದೃಶ್ಯ ನಿರ್ದೇಶಕರ ಬುದ್ಧಿವಂತಿಕೆಯೋ ಅಥವಾ ಪ್ರೇಕ್ಷಕನ ಗ್ರಹಿಕೆಯೋ ಗೊತ್ತಿಲ್ಲ. ಆದರೆ ಈ ದೃಶ್ಯದ ಕಟ್ಟೋಣ ಪ್ರಭಾವಶಾಲಿಯಾಗಿದೆ.

ಸಾಮಾನ್ಯವಾಗಿ ಗಂಡ – ಹೆಂಡತಿಯ ಜಗಳಗಳಲ್ಲಿ, “ನಿನಗೇನು ಆರಾಮಾಗಿ ಮನೇಲಿರ್ತೀಯ. ಹೊರಗ್ಹೋಗಿ ದುಡಿಯೋನು ನಾನು. ಕಷ್ಟ ಪಡೋನು ನಾನು. ನನಗ್‌ ಗೊತ್ತು, ಸಂಪಾದನೆ ಮಾಡೋದರ ಕಷ್ಟ. ಖರ್ಚು ಮಾಡೋ ನಿನಗೆಲ್ಲಿ ಗೊತ್ತಾಗ್ಬೇಕು ದುಡ್ಡಿನ ಬೆಲೆ…” ಎಂದು ಗಂಡನ ಮೂದಲಿಕೆ ಕೇಳಿಸುತ್ತದೆ. ಆದರೆ ಅವಳಿಗೆ ಎಷ್ಟು ಕೆಲಸಗಳಿರುತ್ತವೆ? ಏನೆಲ್ಲಾ ಜವಾಬ್ದಾರಿಗಳಿರುತ್ತವೆ? ಅನ್ನೋ ಒಂದಷ್ಟು ವಿಚಾರಗಳನ್ನು ಈ ಸಿನಿಮಾದಲ್ಲಿ ಅಚ್ಚುಕಟ್ಟಾಗಿ ವ್ಯಾಖ್ಯಾನಿಸಿದ್ದಾರೆ. ಹಿಜಾಬ್‌ಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ನಡೆಯುತ್ತಿರುವ ಗಲಾಟೆಗಳಿಗೆ ಈ ಚಿತ್ರದಲ್ಲಿನ ಕೆಲವು ದೃಶ್ಯ, ಸಂಭಾಷಣೆಗಳು ಉತ್ತರವಾಗುತ್ತವೆ. ಚಿತ್ರದ ಕ್ಲೈಮ್ಯಾಕ್ಸ್‌ ಭಿನ್ನವಾಗಿದ್ದಿದ್ದರೆ ಚಿತ್ರಕ್ಕೆ ಬೇರೆಯದ್ದೇ ಆಯಾಮ ಸಿಗುತ್ತಿತ್ತೇನೋ? ‘ಇದು ಫ್ಯಾಮಿಲಿ ಡ್ರಾಮಾ, ಹ್ಯಾಪಿ ಎಂಡಿಂಗ್‌ ಇರಲಿ’ ಎನ್ನುವ ಸದಾಶಯದೊಂದಿಗೆ ಸಿನಿಮಾ ಮುಗಿಸಿದಂತಿದೆ ನಿರ್ದೇಶಕರು.

ದಸ್ತಕೀರ್‌ ಮದ್ಯಮವರ್ಗದ ಕುಟುಂಬದ ಯಜಮಾನ. ಆತ ಗಲ್ಫ್‌ ದೇಶದ ನಗರವೊಂದರಲ್ಲಿನ ಸೂಪರ್‌ ಮಾರ್ಕೆಟ್‌ ಮಾಲೀಕ. ಆತನಿಗೆ ಮೂವರು ಮಕ್ಕಳು. ದಸ್ತಕೀರ್‌ಗೆ ಬೆಕ್ಕು ಎಂದರೆ ಆಗದು. ದಸ್ತಕೀರ್‌ ಪತ್ನಿ ಸುಲೇಖಾ ಮನೆಯ ಖರ್ಚುವೆಚ್ಚಗಳ ನಿರ್ವಹಣೆ ಕುರಿತಾಗುವ ಮಾತಿನ ಚಕಮಕಿಯಲ್ಲಿ ಮನನೊಂದು ಮನೆಯಿಂದ ದೂರಾಗಿ ತವರು ಸೇರುತ್ತಾಳೆ. ಮಕ್ಕಳನ್ನು ಬಿಟ್ಟು ದೂರವಾಗುವುದು ಅವಳಿಗೂ ಇಷ್ಟವಿಲ್ಲ. ಇದು ಮಕ್ಕಳ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರಬಹುದು ಎನ್ನುವ ಅರಿವು ಆಕೆಗಿದೆ. ಮನೆಯನ್ನು ನಡೆಸುವುದು ಸುಲಭವಲ್ಲ ಎಂದು ಗಂಡನಿಗೆ ಮನವರಿಕೆ ಮಾಡಿಸಲು ದೂರವಿರುವುದು ಒಳ್ಳೆಯದೆಂದು ಗಟ್ಟಿ ನಿರ್ಧಾರ ಮಾಡುತ್ತಾಳೆ.

ನಿತ್ಯ ವೀಡಿಯೋ ಕಾಲ್‌ನಲ್ಲಿ ಮಕ್ಕಳೊಂದಿಗೆ ಮಾತಾಡುವುದಲ್ಲದೆ ಮನಸ್ಸಾದಾಗ ಗಂಡನ ಯೋಗಕ್ಷೇಮವನ್ನೂ ವಿಚಾರಿಸಿಕೊಳ್ಳುತ್ತಾಳೆ ಸುಲೇಖಾ. ಆದರೆ ಗಂಡ ಬುದ್ಧಿ ಕಲಿಯುವವರೆಗೂ ಮನೆಗೆ ವಾಪಸಾಗೋಲ್ಲ ಎನ್ನುವುದು ಆಕೆಯ ದೃಢ ನಿರ್ಧಾರ. ಹೀಗೆ ನಿತ್ಯ ಕೆಲಸದ ಜಂಜಾಟ, ಮಕ್ಕಳ ಊಟ – ತಿಂಡಿ, ಓದು, ಅಂಗಡಿ ಕೆಲಸಗಳೆಂದು ದಸ್ತಕೀರ್‌ ಹೈರಾಣಾಗುತ್ತಾನೆ. ಮನೆಯ ಸದಸ್ಯನೊಬ್ಬನಂತಿರುವ ಚಾಲಕ ಚಂದ್ರೇಟನ್‌ ಸಹಕರಿಸಿದರೂ ಮುಗಿಯದಂತಹ ಕೆಲಸಗಳು. ದಸ್ತಕೀರ್‌ಗೆ ಕುಟುಂಬದ ಜವಾಬ್ದಾರಿ, ಒತ್ತಡಗಳು ಅರಿವಾಗುತ್ತವೆ. ನಂತರದಲ್ಲಿ ಹೇಗಾದರೂ ಹೆಂಡತಿಯ ಮನವೊಲಿಸುವ ಪ್ರಯತ್ನ ನಡೆಯುತ್ತದಾದರೂ ತಪ್ಪೊಪ್ಪಿಕೊಳ್ಳಲು ಅವನಿಗೆ ಇಗೋ ಅಡ್ಡಿಯಾಗುತ್ತದೆ. ಹಾಗೆ ಅವನಲ್ಲಿ, ಇವಳಿಲ್ಲಿ ಎಂದು ಕತೆ ಮುಂದುವರೆಯುತ್ತದೆ.

ಕಡೆಗೆ ಮನೆಗೊಬ್ಬಳು ಮನೆಕೆಲಸದಾಕೆಯನ್ನು ನೇಮಿಸಿಕೊಳ್ಳಬೇಕು ಎನ್ನುವ ನಿರ್ಧಾರವಾಗುತ್ತದೆ. ದಸ್ತಕೀರ್‌ ಅದೃಷ್ಟಕ್ಕೆ ಒಳ್ಳೆಯ ಮನೆಗೆಲಸದಾಕೆಯೇ ಸಿಗುತ್ತಾಳೆ. ನಿಷ್ಠೆ, ಪ್ರಾಮಾಣಿಕತೆಯಿಂದ ತನ್ನ ಕಾರ್ಯ ನಿರ್ವಹಿಸುತ್ತಾ ಎಲ್ಲರ ಮನಗೆಲ್ಲುತ್ತಾಳೆ. ಹೀಗೆ, ತಾನಿಲ್ಲದೆಯೂ ಮನೆ ಅಚ್ಚುಕಟ್ಟಾಗಿ ನಡೆಯುತ್ತಿರುವುದು ಮತ್ತು ಮನೆಗೆಲಸದಾಕೆಯು ಸುಂದರವಾಗಿರುವುದು ಸುಲೇಖಾಗೆ ಇರುಸುಮುರುಸಾಗುವಂತೆ ಬಿಂಬಿತವಾಗುತ್ತದೆ. ಚಿತ್ರಕಥೆಯಲ್ಲಿ ಸುಲೇಖಾ – ದಸ್ತಗೀರ್‌ ಹೇಗೆ ದಂಪತಿಯಾದರು ಎನ್ನುವುದು, ಮನೆಗೆಲಸದವಳ ಪಾಸ್‌ಪೋರ್ಟ್‌ ಎಕ್ಸ್‌ಪೈರಿ ಆಗಿರುವಂಥದ್ದು, ದಸ್ತಕೀರ್‌ನ ಕಾಲೇಜಿನ ಗೆಳೆಯ ಗೆಳತಿಯರ ಪುನರ್ಮಿಲನದಲ್ಲಿ ನಡೆಯುವಂತಹ ಸನ್ನಿವೇಶಗಳು, ಎಲ್ಲಾ ಉಪಕತೆಗಳಂತೆ ಜೊತೆಯಲ್ಲಿ ಸಾಗುತ್ತವೆ. ಚಿತ್ರದಲ್ಲಿ ಬೆಕ್ಕು ಕೂಡ ಒಂದು ಪಾತ್ರವಾಗಿದೆ. ದೃಶ್ಯವೊಂದರಲ್ಲಿ ಪ್ರೇಕ್ಷಕರಲ್ಲಿ ಕರುಣಾರಸ ಹುಟ್ಟುವಂತೆ ಮಾಡುತ್ತದೆ. ನಿರ್ದೇಶಕರು ಇಲ್ಲಿ ಬೆಕ್ಕನ್ನು ಮೆಟಫರ್‌ನಂತೆ ಬಳಕೆ ಮಾಡಿದ್ದಾರೆ.

ಕಾಲೇಜು ದಿನಗಳಲ್ಲಿ ಎಲ್ಲರೂ ದಾಸ್ತೋಸ್ಕಿ ಎಂದು ಕರೆಯುತ್ತಿದ್ದ, ಹೊರಾಟಗಳಲ್ಲಿ ಭಾಗಿಯಾಗುತ್ತಿದ್ದಂತಹ, ಧರ್ಮ ಎನ್ನುವುದು ನಶೆ ಎನ್ನುತ್ತಿದ್ದ ಕಾಮ್ರೇಡ್‌ ಈಗ ಹೇಗೆ ಕ‌ರ್ಮಠ ಮುಸ್ಲಿಮನಾಗಿದ್ದಾನೆ ಎಂಬುದನ್ನು ನೋಡಿ ಗೆಳೆಯರೆಲ್ಲರೂ ಆಶ್ಚರ್ಯ ಪಡುತ್ತಾರೆ. ಅವನನ್ನು ಅನುಮಾನಿಸುತ್ತಾರೆ. ನಂತರ ನಡೆಯುವ ಸನ್ನಿವೇಶ ಚಿತ್ರದ ವೇಗ ಹೆಚ್ಚಿಸುತ್ತಾ ಪ್ರೇಕ್ಷಕರನ್ನು ರೋಮಾಂಚನಗೊಳಿಸುತ್ತದೆ. ಹೀಗೆ ಸಾಗುತ್ತಾ, ಸುಲೇಖಾ ಮನೆಗೆ ಅನಿವಾರ್ಯವಲ್ಲ ಮತ್ತು ಹಿಂತಿರುಗುವ ಅಗತ್ಯವಿಲ್ಲ ಎನ್ನುವಂತೆ ಬಿಂಬಿತವಾಗುತ್ತಲೇ ಕೊನೆಯ ಹಂತ ತಲುಪುತ್ತದೆ. ಆದರೆ ಕೊನೆಯಲ್ಲಿ ಆಗುವುದೇ ಬೇರೆ. ಕೊನೆಯಲ್ಲಿ ದಂಪತಿಗಳು ಸಮಸ್ಯೆಯನ್ನು ಒಟ್ಟಿಗೆ ಕೂತು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಪ್ರೇಕ್ಷಕ ನಿರೀಕ್ಷಿಸುತ್ತಾನೆ. ಆದರೆ ಆ ನಿಟ್ಟಿನ ಎಲ್ಲ ಚಿಂತನೆಗಳನ್ನು ತಳ್ಳಿ ಹಾಕಿ ಪ್ರೀತಿ ಗೆಲ್ಲುತ್ತದೆ ಎಂಬಂತೆ ಕ್ಲೈಮ್ಯಾಕ್ಸ್‌ ನಿಭಾಯಿಸಿದ್ದಾರೆ.

ಮಕ್ಕಳನ್ನು ಬೆಳೆಸುವ ರೀತಿ, ಮಕ್ಕಳಿಗೆ ತಂದೆ ತೋರುವ ಪ್ರೀತಿಯ ದೃಶ್ಯಗಳು ಖುಷಿ ಕೊಡುತ್ತವೆ. ಇತರೆ ಧರ್ಮಗಳು ಮತ್ತು ಸಮುದಾಯಗಳ ಸಹಿಷ್ಣುತೆ ಮತ್ತು ಮಕ್ಕಳಲ್ಲಿ ಜಾತಿ ಧರ್ಮದ ಬಗ್ಗೆ ಮೂಡಬೇಕಾದ ಭಾವೈಕ್ಯತೆ, ಮಾಲೀಕ ಮತ್ತು ಕಾರ್ಮಿಕರ ನಡುವೆಯ ಸಂಬಂಧ, ವ್ಯಾಪಾರದಲ್ಲಿ ಇರಬೇಕಾದ ನಂಬಿಕೆ, ನಿಜವಾದ ಪ್ರೀತಿ ಸ್ನೇಹ ಹಾಗೂ ಮಹಿಳೆಯ ಸ್ಥಾನವನ್ನು ಜನರು ಹೇಗೆ ಪರಿಗಣಿಸುತ್ತಾರೆ ಎಂಬ ಸಮಸ್ಯೆಗಳ ಕುರಿತು ಆರೋಗ್ಯಕರವಾಗಿ ಚಿತ್ರದಲ್ಲಿ ಚರ್ಚೆಗೆ ಒಳಪಡಿಸಿದ್ದಾರೆ. ವಿಸ್ತಾರವಾಗಿ ವಿವರಿಸಿರುವ ಕೆಲವು ದೃಶ್ಯಗಳು ಅನಗತ್ಯ ಎನಿಸಿದರೂ, ಚಿತ್ರದ ನಂತರ ಅವು ಅಪ್ರಯೋಜಕ ಎನಿಸುವುದಿಲ್ಲ. ಏಕೆಂದರೆ ಅಲ್ಲಿ ಚರ್ಚೆಯಾಗಿರುವ ವಿಷಯಗಳು ಬದುಕಿಗೆ ಮತ್ತು ಸಮಾಜಕ್ಕೆ ಬೇಕಾಗುವಂಥವು ಎನಿಸುತ್ತದೆ.

ಇದು ಗಲ್ಫ್‌ ದೇಶದ Ras ALKhaimah ನಗರದಲ್ಲಿ ನೆಲೆ ನಿಂತಿರುವ ಮಲಯಾಳಿ ಕುಟುಂಬವೊಂದರ ಕತೆ. ಹಾಗಾಗಿ ಸಂಪೂರ್ಣ ಚಿತ್ರೀಕರಣ Ras Al Khaimah ನಲ್ಲೇ ನಡೆದಿದೆ. ಪ್ರೇಕ್ಷಕರು ಮನಸೂರೆಗೊಳ್ಳುವಂತಹ ಸುಂದರ ಪರ್ವತ ಶ್ರೇಣಿ ಮತ್ತು ರಸ್ತೆಗಳು ಕಾಣಿಸುತ್ತವೆ. ಕಲಾವಿದರ ಅಭಿನಯ, ಛಾಯಾಗ್ರಹಣ, ಸಂಗೀತ ಸಂಯೋಜನೆ ಸೇರಿದಂತೆ ತಾಂತ್ರಿಕ ವರ್ಗದ ಕೆಲಸಗಳು ಅಚ್ಚುಕಟ್ಟಾಗಿವೆ. ಮನೆ ಮಂದಿ ಒಟ್ಟಿಗೆ ಕುಳಿತು ನೋಡಬಹುದಾದ ಸಿನಿಮಾ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

LEAVE A REPLY

Connect with

Please enter your comment!
Please enter your name here