ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲೊಂದು ‘ಕಲ್ಕಿ 2898 AD’. ಅಮಿತಾಭ್‌ ಬಚ್ಚನ್‌, ಕಮಲ ಹಾಸನ್‌ ಪ್ರಭಾಸ್‌ ನಟನೆಯ ಚಿತ್ರದಲ್ಲಿ ಹಲವು ವಿಶೇಷತೆಗಳಿವೆ. ಒಂದೊಂದಾಗಿ ಸಿನಿಮಾದ ಪಾತ್ರಗಳು ರಿವೀಲ್‌ ಆಗುತ್ತಿವೆ. ನಾಡಿದ್ದು ಮೇ 22ರಂದು ಚಿತ್ರದ ಮತ್ತೊಂದು ಪಾತ್ರ ‘ಬುಜ್ಜಿ’ ಬಗ್ಗೆ ಮಾಹಿತಿ ಸಿಗಲಿದೆ.

ಇತ್ತೀಚೆಗಷ್ಟೇ ‘ಕಲ್ಕಿ 2898 AD’ ಸಿನಿಮಾದಲ್ಲಿನ ನಟ ಅಮಿತಾಭ್‌ ಬಚ್ಚನ್‌ ಅವರ ಪಾತ್ರದ ಅನಾವರಣಗೊಂಡಿತ್ತು. ಅಶ್ವತ್ಥಾಮನಾಗಿ ಅವರ ಪಾತ್ರದ ಪರಿಚಯಿಸುವ ಟೀಸರ್‌ ಹಿಂದಿ, ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಇಂಗ್ಲೀಷ್‍ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿತ್ತು. ಇದೀಗ ಚಿತ್ರದ ‘ಬುಜ್ಜಿ’ ಪಾತ್ರದ ಬಗ್ಗೆ ಚರ್ಚೆ ಶುರುವಾಗಿದೆ. ಈ ಪಾತ್ರ ವ್ಯಕ್ತಿಯೋ ಇಲ್ಲವೇ ರೋಬೋಟ್‌ ಇರಬಹುದೇ ಎಂದು ಸಿನಿಪ್ರಿಯರು ಆಲೋಚಿಸುತ್ತಿದ್ದಾರೆ. ಚಿತ್ರತಂಡ ಈ ಪಾತ್ರ ಪರಿಚಯಕ್ಕಾಗಿ ಬಿಟ್ಟಿರುವ ‘ಬಿಲ್ಡ್‌ ಅಪ್‌’ ವೀಡಿಯೋ ಇಂತಹ ಗೊಂದಲ ಸೃಷ್ಟಿಸಿದೆ! ‘From Skratch: Building A Superstar’ ಹೆಸರಿನ ಈ ವೀಡಿಯೋದಲ್ಲಿ ಬುಜ್ಜಿಯ ಕುರಿತು ಪರಿಚಯ ಮಾಡಿಕೊಡಲಾಗಿದೆ.

2020ರ ಜೂನ್‍ನಲ್ಲಿ ಅಂಥದ್ದೊಂದು ಪಾತ್ರದ ಸೃಷ್ಠಿ ಹೇಗಾಯಿತು ಎಂದು ಪ್ರಾರಂಭವಾಗುವುದರಿಂದ, ಅಂತಿಮವಾಗಿ ಅದು ಹೇಗೆ ರೂಪುಗೊಂಡಿತು ಎಂಬುದನ್ನು ಈ ವೀಡಿಯೋದಲ್ಲಿ ತೋರಿಸಲಾಗಿದೆ. ಭೈರವನ ಅಚ್ಚುಮೆಚ್ಚಿನ ಗೆಳೆಯನ ಕುರಿತು ಸಾಕಷ್ಟು ಬಿಲ್ಡ್‌ ಅಪ್‌ ನೀಡಲಾಗಿದ್ದು, ಈ ಐದನೇ ಸೂಪರ್‍ ಸ್ಟಾರ್‍ ಯಾರಿರಬಹುದು ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮನೆಮಾಡಿದೆ. ಬುಜ್ಜಿ ಯಾರು ಎಂಬ ಪ್ರಶ್ನೆಗೆ, ಎರಡು ನಿಮಿಷ 22 ಸೆಕೆಂಡ್‍ನ ಈ ವೀಡಿಯೋದಲ್ಲಿ ಚಿತ್ರಕ್ಕೆ ದುಡಿದ ಹಲವು ತಂತ್ರಜ್ಞರು ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ. ಈ ಬುಜ್ಜಿ ಯಾರು ಎಂದು ತಿಳಿಯಲು ಮೇ 22ರವರೆಗೂ ಕಾಯಬೇಕಿದೆ. ‘ಕಲ್ಕಿ 2898 AD’ ಬಿಡುಗಡೆಗೆ ಇನ್ನು ಕೇವಲ ಎರಡು ತಿಂಗಳಷ್ಟೇ ಬಾಕಿ ಇದೆ. ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಬೆಟ್ಟದಷ್ಟು ನಿರೀಕ್ಷೆ ಇಟ್ಟಿದ್ದಾರೆ. ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಚಿತ್ರದ ಇಬ್ಬರು ನಾಯಕಿಯರು. ವೈಜಯಂತಿ ಮೂವೀಸ್ ಬ್ಯಾನರ್‌ನಡಿ ಅಶ್ವಿನಿ ದತ್‍ ನಿರ್ಮಿಸುತ್ತಿರುವ ಚಿತ್ರವನ್ನು ನಾಗ್‍ ಅಶ್ವಿನ್‍ ನಿರ್ದೇಶಿಸುತ್ತಿದ್ದಾರೆ. ಸಿನಿಮಾ ಜೂನ್‍ 27ರಂದು ಬಿಡುಗಡೆಯಾಗಲಿದೆ.

LEAVE A REPLY

Connect with

Please enter your comment!
Please enter your name here