‌’ಲೈಗರ್‌’ ಚಿತ್ರದ ನಂತರ ನಿರ್ದೇಶಕ ಪುರಿ ಜಗನ್ನಾಥ್‌ ಮತ್ತು ನಟ ವಿಜಯ್‌ ದೇವರಕೊಂಡ ಮತ್ತೊಂದು ಸಿನಿಮಾ ಮಾಡಲಿದ್ದಾರೆ. ಈ ಚಿತ್ರಕ್ಕೆ ದೇವರಕೊಂಡ ಅವರಿಗೆ ಜೋಡಿಯಾಗಿ ಜಾಹ್ನವಿ ಕಪೂರ್‌ ನಾಯಕಿಯಾಗಿ ನಟಿಸುವುದು ಖಾತ್ರಿಯಾಗಿದೆ.

ಟಾಲಿವುಡ್‌ನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್‌ ಸದ್ಯ ‘ಲೈಗರ್‌’ ಹಿಂದಿ – ತೆಲುಗು ದ್ವಿಭಾಷಾ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ವಿಜಯ್‌ ದೇವರಕೊಂಡ ಹೀರೋ ಆಗಿರುವ ಈ ಬಾಕ್ಸಿಂಗ್‌ ಡ್ರಾಮಾ ಚಿತ್ರದ ನಾಯಕಿಯಾಗಿ ಜಾಹ್ನವಿ ಕಪೂರ್‌ ನಟಿಸಬೇಕಿತ್ತು. ಆಗ ಜಾಹ್ನವಿ ಇತರೆ ಚಿತ್ರಗಳಲ್ಲಿ ಬ್ಯುಸಿಯಾಗಿದ್ದುದರಿಂದ ಡೇಟ್ಸ್‌ ಸಮಸ್ಯೆ ಎದುರಾಯ್ತು. ಕೊನೆಗೆ ಅನನ್ಯಾ ಪಾಂಡೆ ಚಿತ್ರದ ನಾಯಕಿಯಾದರು. ‘ಲೈಗರ್‌’ ಚಿತ್ರದ ನಂತರ ವಿಜಯ್‌ ದೇವರಕೊಂಡ ಅವರಿಗೆ ಪುರಿ ಜಗನ್ನಾಥ್‌ ಮತ್ತೊಂದು ಸಿನಿಮಾ ನಿರ್ದೇಶಿಸಲಿದ್ದು, ಚಿತ್ರದ ನಾಯಕಿಯಾಗಿ ನಟಿಸಲು ಜಾಹ್ನವಿ ಒಪ್ಪಿದ್ದಾರೆ. ಇದು ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ತಯಾರಾಗಲಿದೆ. ಹಿಂದೊಮ್ಮೆ ಸಂದರ್ಶನವೊಂದರಲ್ಲಿ ನಟಿ ಜಾಹ್ನವಿ ಅವರು ವಿಜಯ್‌ ದೇವರಕೊಂಡ ಕುರಿತಂತೆ ಅಪಾರ ಮೆಚ್ಚುಗೆಯ ಮಾತುಗಳನ್ನಾಡಿದ್ದರು. “ಭಾರತದ ಪ್ರಸ್ತುತ ಯುವಹೀರೋಗಳ ಪೈಕಿ ವಿಜಯ್‌ ದೇವರಕೊಂಡ ತಮ್ಮ ಫೇವರೆಟ್‌ ಹೀರೋ” ಎಂದಿದ್ದರು. ಈಗ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ.

ನಟಿ ಜಾಹ್ನವಿ ಕಪೂರ್‌ ಸದ್ಯ ‘ಮಿಸ್ಟರ್‌ ಅಂಡ್‌ ಮಿಸೆಸ್‌ ಮಹೀ’ ಹಿಂದಿ ಸಿನಿಮಾ ಚಿತ್ರೀಕರಣದಲ್ಲಿದ್ದಾರೆ. ರಾಜಕುಮಾರ್‌ ರಾವ್‌ ಚಿತ್ರದ ಹೀರೋ. ಇಂದು ಜಾಹ್ನವಿ ತಮ್ಮ ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ಫಸ್ಟ್‌ಲುಕ್‌ ಶೇರ್‌ ಮಾಡಿದ್ದಾರೆ. ಚಿತ್ರದಲ್ಲಿ ಆಕೆ ಕ್ರಿಕೆಟರ್‌ ಪಾತ್ರ ನಿರ್ವಹಿಸುತ್ತಿದ್ದಾರೆ. ನಟ ರಾಜಕುಮಾರ್‌ ರಾವ್‌ ಅವರೊಂದಿಗೆ ಜಾಹ್ನವಿಗೆ ಇದು ಎರಡನೇ ಸಿನಿಮಾ. ಈ ಹಿಂದೆ ತೆರೆಕಂಡಿದ್ದ ಇವರಿಬ್ಬರ ‘ರೂಹಿ’ ಬಾಕ್ಸ್‌ಆಫೀಸ್‌ನಲ್ಲಿ ವಿಫಲವಾಗಿತ್ತು. ಕರಣ್‌ ಜೋಹರ್‌ ನಿರ್ಮಾಣದ ಚಿತ್ರವನ್ನು ಶರಣ್‌ ಶರ್ಮಾ ನಿರ್ದೇಶಿಸುತ್ತಿದ್ದಾರೆ. 2022ರ ಅಕ್ಟೋಬರ್‌ 7ಕ್ಕೆ ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here