ಬಿ ಎಂ ಗಿರಿರಾಜ್‌ ನಿರ್ದೇಶನದ ‘ರಾಮರಸ’ ಸಿನಿಮಾಗೆ ಕಾರ್ತೀಕ್‌ ಮಹೇಶ್‌ ಹೀರೋ ಆಗಿ ನಟಿಸಲಿದ್ದಾರೆ. ನಟ ಸುದೀಪ್‌ ಅವರು ನಾಯಕನಟನನ್ನು ಪರಿಚಯಿಸುವ ವೀಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಗುರು ದೇಶಪಾಂಡೆ ನಿರ್ಮಾಣದ ಈ ಸಿನಿಮಾದಲ್ಲಿ ‘ಜಿ ಅಕಾಡೆಮಿ’ಯಲ್ಲಿ ನಟನೆ ಕಲಿತಿರುವ ಹದಿನಾರು ಪ್ರತಿಭೆಗಳು ನಟಿಸುತ್ತಿದ್ದಾರೆ.

‘Winner ಅಂತ ಕೈ ಹಿಡಿದು ಎತ್ತಿದ್ರು. ಈಗ ನನ್ನ ಮುಂದಿನ ಸಿನಿಮಾಗೆ ಕೈ ಹಿಡಿದಿದ್ದಾರೆ. ಬೆನ್ನು ತಟ್ಟಿದ್ದಾರೆ. ನನ್ನ ಇಂಟ್ರೊಡಕ್ಷನ್‌ಗೆ ಬಂದು ಆಶೀರ್ವದಿಸಿದ್ದಾರೆ’ ಪ್ರೀತಿಯ ಮಾತುಗಳನ್ನಾಡಿದ್ದಾರೆ. ಒಂದಷ್ಟು ವರ್ಷಗಳ ಹಿಂದೆ ಇದೆಲ್ಲ ಸಾಧ್ಯವೇ ಎಂದೆನಿಸಿತ್ತು. ಕನಸು ಕಂಡರೆ ನನಸಾಗುವವರೆಗೂ ಕೆಲಸ ಮಾಡಿದರೆ ಎಲ್ಲವೂ ಸಾಧ್ಯ. ಕಿಚ್ಚ sir ನಿಮ್ಮ ಈ ಪ್ರೀತಿಗೆ ನಾನು ಸದಾ ಋಣಿ’ ಎಂದು ನಟ ಕಾರ್ತೀಕ್‌ ಮಹೇಶ್‌ ತಮ್ಮ Instagram ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅವರೀಗ ‘ರಾಮರಸ’ ಸಿನಿಮಾದ ಹೀರೋ. ಗುರುದೇಶಪಾಂಡೆ ನಿರ್ಮಿಸಿ, ಬಿ ಎಂ ಗಿರಿರಾಜ್‍ ನಿರ್ದೇಶಿಸುತ್ತಿರುವ ‘ರಾಮರಸ’ ಸಿನಿಮಾ ಇತ್ತೀಚೆಗಷ್ಟೇ ಘೋಷಣೆಯಾಗಿತ್ತು. ಈ ಚಿತ್ರದಲ್ಲಿ ಖ್ಯಾತ ನಟರೊಬ್ಬರು ನಾಯಕನಾಗಿ ನಟಿಸಲಿದ್ದಾರೆ ಎನ್ನಲಾಗಿತ್ತು. ಈಗ ‘ರಾಮರಸ’ ಚಿತ್ರಕ್ಕೆ Bigg Boss 10ನೇ ಸೀಸನ್‌ ವಿನ್ನರ್‌ ಕಾರ್ತಿಕ್ ಮಹೇಶ್ ಚಿತ್ರದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಇತ್ತೀಚಿಗೆ ನಡೆದ ಸಮಾರಂಭದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಾಯಕನಟನನ್ನು ಪರಿಚಯಿಸುವ ವಿಶೇಷ ವಿಡಿಯೋ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸುದೀಪ್‍, ‘ನಾನು Bigg Boss ಕಾರ್ಯಕ್ರಮವನ್ನು ಎಷ್ಟು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದೇನೆ. ಆದರೆ, ಪ್ರತಿ ಸೀಸನ್‍ನಲ್ಲೂ ಒಬ್ಬ ಹೊಸ ಹೀರೋ ಹುಟ್ಟಿಕೊಳ್ಳುತ್ತಿದ್ದಾನೆ. ಶೋ ಗೆದ್ದ ಮೇಲೆ ಕಾರ್ತಿಕ್ ಅವರಿಗೆ ಒಳ್ಳೆಯ ಅವಕಾಶಗಳು ಬರುತ್ತಿವೆ‌. ಕಾರ್ತಿಕ್ ಸರಿಯಾದ ಹಾದಿಯಲ್ಲಿದ್ದಾರೆ. ಪ್ಯಾಷನೇಟ್‍ ಜನರು ಅವರ ಜೊತೆಯಾಗಿದ್ದಾರೆ. ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಿ’ ಎಂದು ಹಾರೈಸಿದರು. ನಿರ್ಮಾಪಕ ಗುರು ದೇಶಪಾಂಡೆ ನಿರ್ಮಾಣದ ಶೈಲಿ ಹಾಗೂ ನಿರ್ದೇಶಕ ಗಿರಿರಾಜ್ ಅವರ ಕಾರ್ಯವೈಖರಿಯನ್ನು ಸುದೀಪ್ ಮುಕ್ತಕಂಠದಿಂದ ಶ್ಲಾಘಿಸಿದರು.

ಹೀರೋ ಕಾರ್ತಿಕ್‍ ಮಹೇಶ್‍, ‘ಮೊದಲಿನಿಂದಲೂ ನನಗೆ ಸುದೀಪ್ ಸರ್ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಅವರಿಗೆ ಹಾಗೂ ಈ ಚಿತ್ರದಲ್ಲಿ ಅವಕಾಶ ಕೊಟ್ಟ ನಿರ್ಮಾಪಕರಿಗೆ, ನಿರ್ದೇಶಕರಿಗೆ ಧನ್ಯವಾದಗಳು. ಒಳ್ಳೆಯ ತಂಡದೊಂದಿಗೆ ಕೆಲಸ ಮಾಡುತ್ತಿರುವ ಖುಷಿಯಿದೆ. ಸುದೀಪ್ ಅವರ ಮೇಲೆ ನನಗೆ ವಿಶೇಷ ಪ್ರೀತಿ ಹಾಗೂ ಗೌರವ. ಹಾಗಾಗಿ “ಬಿಗ್ ಬಾಸ್” ಫಿನಾಲೆಯಲ್ಲಿ ಅವರು ನನಗೆ ಕೊಟ್ಟಿದ್ದ ಡ್ರೆಸ್ ಹಾಕಿಕೊಂಡು ಬಂದಿದ್ದೇನೆ’ ಎಂದರು. ‘ಪ್ರತಿಯೊಬ್ಬ ನಿರ್ದೇಶಕನಿಗೂ ಗುರು ದೇಶಪಾಂಡೆ ಅವರಂತಹ‌ ನಿರ್ಮಾಪಕರು ಸಿಗಬೇಕು.‌ ಅವರಿಗೆ ಸಿನಿಮಾ ಮೇಲೆ ತುಂಬಾ ಪ್ರೀತಿ. ಅದ್ಧೂರಿಯಾಗಿ ಮೂಡಿಬಂದಿರುವ ನಾಯಕನ ಪರಿಚಯದ ವಿಶೇಷ ವಿಡಿಯೋ ಇದಕ್ಕೆ ಸಾಕ್ಷಿ’ ಎನ್ನುವುದು ನಿರ್ದೇಶಕ ಗಿರಿರಾಜ್‌ ಅವರ ಮಾತು. ಚಿತ್ರಕ್ಕೆ ಬಿ ಜೆ ಭರತ್ ಸಂಗೀತ, ಎ ವಿ ಕೃಷ್ಣಕುಮಾರ್ ಮತ್ತು ಅರ್ಜುನ್‍ ಕಿಟ್ಟು ಸಂಕಲನವಿದೆ. ‘ಜಿ ಅಕಾಡೆಮಿ’ಯಲ್ಲಿ ನಟನೆ ಕಲಿತಿರುವ ಹದಿನಾರು ಪ್ರತಿಭೆಗಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here