ಕಥೆ ಇಲ್ಲಿ ನೆಪವಷ್ಟೆ. ಅಸಲಿಗೆ ಕಥೆಯ ತಿರುಳೇ ಬೇರೆ. ಒಬ್ಬ ಬೇಜವಾಬ್ದಾರಿಯುತ ರಾಜನ ಆಡಳಿತ, ತಂದೆಯ ಕರ್ತವ್ಯ, ಮನುಷ್ಯ ಗೆಲುವಿನ ಹಂಬಲದಲ್ಲಿ ಕಳೆದುಕೊಳ್ಳುವ ನೆಮ್ಮದಿ, ಮನುಷ್ಯ ಸಂಬಂಧಗಳ ಮೌಲ್ಯ, ನಿಜವಾದ ಪ್ರೀತಿ ಪ್ರೇಮ ಹಾಗೂ ಶಿಖರ್‌ವತಿಯ ನಿಧಿಯ ರಹಸ್ಯ ಎಲ್ಲವನ್ನೂ ಹದವಾಗಿ ಹೆಣೆದು ಹಾಸ್ಯಮಯವಾಗಿ ಹೇಳಿರುವಂತಹ ಒಂದು ಅತ್ಯುತ್ತಮ ಪ್ರಯತ್ನವಿದು. ‘ಕೌನ್‌ ಬನೇಗಿ ಶಿಖರ್‌ವತಿ’ ಸರಣಿ ZEE5ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಶಿಖರ್‌ವತಿ ಒಂದು ಊರು. ಆ ಊರಲ್ಲೊಂದು ಮಹಲು. ಅಲ್ಲೊಬ್ಬ ಇಳಿವಯಸ್ಸಿನ ರಾಜ. ಆತ ರಾಜಮರ್ಯಾದೆಯೊಂದಿಗೆ ಏಕಾಂಗಿಯಾಗಿ ಬದುಕಿದ್ದಾನೆ. ಆ ರಾಜನಿಗೀಗ ಯಾವುದೇ ರೀತಿಯ ಆದಾಯ ಇಲ್ಲ. ಕಳೆದ ಹಲವು ವರ್ಷಗಳಿಂದ ಸಂಪತ್ತಿನ ತೆರಿಗೆ ಕೂಡ ಭರಿಸಿಲ್ಲ. ಸರ್ಕಾರ ಹಲವಾರು ಬಾರಿ ನೋಟಿಸ್ಕೊಟ್ಟು ಸಾಕಾಗಿ ಈಗ ಅರಮನೆಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಯೋಜನೆ ಹಾಕಿಕೊಂಡಿದೆ.

ಮೃತ್ಯುಂಜಯ ಶಿಖರ್‌ವತಿ ರಾಜನಿಗೆ ದೇವಯಾನಿ, ಗಾಯತ್ರಿ, ಕಾಮಿನಿ, ಉಮಾ ನಾಲ್ಕು ಹೆಣ್ಣು ಮಕ್ಕಳಿದ್ದರೂ ಆ ಇಳಿವಯಸ್ಸಿನಲ್ಲಿ ಆ ದೊಡ್ಡ ಅರಮನೆಯಲ್ಲಿ ಏಕಾಂಗಿಯಾಗಿರುವ ಕಾರಣ, ಅವನ ಹುಚ್ಚಾಟಗಳು. ಈ ರಾಜನ ಹುಚ್ಚಾಟ ಒಂದೆರಡಾದರೂ ಅವುಗಳ ರೂಪಗಳು ಹಲವು. ತನ್ನ ಮಕ್ಕಳಿಗೆ ವಿಶೇಷವಾಗಿ ಏನಾದರು ಕೊಡಬೇಕು ಅಂದರೂ ಅಥವಾ ಅವರಿಗೇ ಬೇಕು ಅನಿಸಿದರು ಅವರು ಅದಕ್ಕೆ ರಾಯಲ್ ಗೇಮ್ ಆಡಿ ಗೆದ್ದೇ ಗಳಿಸಿಕೊಳ್ಳಬೇಕು ಅಷ್ಟೇ!

ರಾಣಿ ಮೃಣಾಲಿನಿ ತೀರಿಕೊಂಡಿದ್ದಾಳೆ. ರಾಜ ನಾಲ್ಕೂ ಮಕ್ಕಳನ್ನು ಪ್ರೀತಿಯಿಂದಲೇ ಸಾಕಿ, ಸಲಹಿದ್ದಾನೆ. ಆದರೆ ಅವರ ಬಾಲ್ಯದಿಂದಲೂ ರಾಯಲ್ ಗೇಮ್ ಆಟಗಳನ್ನು ಆಡಿಸುತ್ತಲೇ ಅವರಿಗೇ ಬೇಕಾದನ್ನು ಪೂರೈಸುತ್ತಾ ಬಂದಿರುತ್ತಾನೆ. ಆ ಆಟಗಳ ಸೋಲು – ಗೆಲುವಿನ ನಡುವೆ ಮಕ್ಕಳಲ್ಲಿ ಹುಟ್ಟಿಕೊಂಡ ನಿರಾಶೆ ಮತ್ತು ಗರ್ವ ದ್ವೇಷಕ್ಕೆ ತಿರುಗಿರುತ್ತದೆ. ಮಕ್ಕಳು ಬೆಳೆದು ಯೌವನಾವಸ್ಥೆಗೆ ಬಂದರೂ ರಾಜನ ಹುಚ್ಚಾಟದ ಆಟಗಳು ಮುಂದುವರಿಯುತ್ತಲೇ ಎಲ್ಲರ ನಡುವೆ ಭಿನ್ನಾಭಿಪ್ರಾಯ ಉಂಟಾಗುತ್ತದೆ. ಪರಸ್ಪರರನ್ನು ಕಂಡರೆ ಈರ್ಷೆ. ಒಂದು ದಿನ ರಾಜನೊಂದಿಗಿನ ಕಿತ್ತಾಟದಿಂದ ಸಂಭವಿಸುವ ಘಟನೆಯಿಂದಾಗಿ ಮಕ್ಕಳೆಲ್ಲ ಮೌನ ಮುರಿದು, ಈ ಆಟಗಳ ಜೊತೆ ಬದುಕಲು ಸಾಧ್ಯವಿಲ್ಲವೆಂದು ನೇರವಾಗಿ ಹೇಳಿ ಎಲ್ಲರೂ ದೂರವಾಗುತ್ತಾರೆ.

ಹೀಗೆ ಎಲ್ಲರನ್ನೂ ಕಳೆದುಕೊಂಡಿರುವ ರಾಜನಿಗೆ ಈಗ ಅರಮನೆಯನ್ನೂ ಕಳೆದುಕೊಳ್ಳುವ ಸಂದರ್ಭ ಎದುರಾಗಿದ್ದರೂ ನಿರ್ಲಕ್ಷ್ಯದಿಂದಿದ್ದಾನೆ. ಅರಮನೆಯ ಲೆಕ್ಕಾಚಾರ, ರಾಜನ ಯೋಗಕ್ಷೇಮ ಎಲ್ಲವನ್ನೂ ನಿಭಾಯಿಸುತ್ತಿರುವ ಒಬ್ಬ ವಿಶ್ವಾಸಾರ್ಹ ರಾಜಸಹಾಯಕ ಮಂತ್ರಿಯಂತಿರುವ ಮಿಶ್ರಾ ರಾಜನಿಗೆ ತಿಳಿಹೇಳುತ್ತಾನೆ. “ಎಲ್ಲವನ್ನೂ ಕಳ್ಕೊಂಡಿದ್ದೀರಿ. ಇನ್ನಾದರೂ ಉಳಿಸಿಕೊಳ್ಳುವ ಬಗ್ಗೆ ಆಲೋಚಿಸಿ. ಇದು ನಿಮ್ಮ ಅರಮನೆ. ನಿಮ್ಮ ಮಕ್ಕಳ ಮನೆ” ಎಂದು ಎಚ್ಚರಿಸುತ್ತಾನೆ. ಆಗ ರಾಜ, “ಬೇಕಾದರೆ ಅವರೇ ಬಂದು ಉಳಿಸಿಕೊಳ್ಳಲಿ” ಎನ್ನುತ್ತಾನೆ. ಈ ಸೂಕ್ಷ್ಮಗಳನ್ನು ಗ್ರಹಿಸುವ ಮಿಶ್ರಾ, “ಹೌದು ಈ ಸಮಸ್ಯೆ ನಿಮ್ಮದಷ್ಟೆ ಅಲ್ಲ, ಅವರದೂ ಕೂಡ. ಎಲ್ಲರನ್ನು ಬರ ಹೇಳುವುದಕ್ಕೆ ಅಪ್ಪಣೆ ಕೊಡಿ ಹೇಗಾದರೂ ಉಳಿಸಿಕೊಳ್ಳೊಣ” ಎನ್ನುತ್ತಾನೆ.

ಆದರೆ, ಅದು ಸುಲಭಕ್ಕೆ ಆಗುವ ಕೆಲಸವಲ್ಲ. ಆರು ವರ್ಷಗಳಿಂದ ದೂರವಾಗಿರುವ ಮಕ್ಕಳು ಹಠ ಹಾಗು ಭಿನ್ನಾಭಿಪ್ರಾಯದಿಂದ ತಂದೆಯೊಂದಿಗೆ ಮಾತು ಬಿಟ್ಟಿದ್ದಾರೆ. ಎಲ್ಲರೂ ಅವರವರ ಬದುಕಿನಲ್ಲಿ, ತಮ್ಮ ಕನಸುಗಳಲ್ಲಿ ಕಳೆದು ಹೋಗಿದ್ದಾರೆ. ಜೊತೆಗೆ ಅವರುಗಳಿಗೆ ಅವರದ್ದೇ ಆದ ಸಮಸ್ಯೆಗಳಿವೆ. ಈಗ ಅವರನ್ನು ಕರೆತರುವುದಕ್ಕೆ ಮಿಶ್ರಾ ತನ್ನ ಬುದ್ದಿವಂತಿಕೆಯಿಂದ ರಾಜನಿಗೆ ಉಪಾಯ ಹೇಳಿ ಒಪ್ಪಿಸುತ್ತಾನೆ. “ಎಲ್ಲರನ್ನೂ ಬೇಟಿಯಾಗಿ ಮಹಾರಾಜರು ಈಗ ಆಸ್ತಿಯ ಉತ್ತರಾಧಿಕಾರಿ ಯಾರೆಂಬುದನ್ನು ತೀರ್ಮಾನಿಸಿ ನಿರ್ಧಾರ ಪ್ರಕಟಿಸುವವರಿದ್ದಾರೆ” ಎನ್ನುವ ನೆಪ ಹೇಳಿ ನಾಲ್ಕು ಜನ ಮಕ್ಕಳನ್ನ ಅರಮನೆಗೆ ಬರುವಂತೆ ಮಾಡುತ್ತಾನೆ. ಮುಂದೆ ಶಿಖರ್‌ವತಿ ಅರಮನೆ ಉಳಿಯುತ್ತದೆಯೇ? ನಾಲ್ವರು ಯುವರಾಣಿಯರಲ್ಲಿ ಆಸ್ತಿ ಯಾರಿಗೆಲ್ಲಾ ಒಲಿಯುತ್ತದೆ?

ಈ ವೆಬ್‌ ಸರಣಿಯ ಮೊದಲ ಎಪಿಸೋಡ್‌ ನೋಡಿದಾಗಲೇ ಎಲ್ಲರಿಗೂ ಸುಲಭವಾಗಿ ಮೇಲೇಳಿದಷ್ಟು ಅರ್ಥವಾಗಿಬಿಡುತ್ತದೆ. ಕಥೆ ಇಲ್ಲಿ ನೆಪವಷ್ಟೆ. ಅಸಲಿಗೆ ಕಥೆಯ ತಿರುಳೇ ಬೇರೆ. ಒಬ್ಬ ಬೇಜವಾಬ್ದಾರಿಯುತ ರಾಜನ ಆಡಳಿತ, ತಂದೆಯ ಕರ್ತವ್ಯ, ಮನುಷ್ಯ ಗೆಲುವಿನ ಹಂಬಲದಲ್ಲಿ ಕಳೆದುಕೊಳ್ಳುವ ನೆಮ್ಮದಿ, ಮನುಷ್ಯ ಸಂಬಂಧಗಳ ಮೌಲ್ಯ, ನಿಜವಾದ ಪ್ರೀತಿ ಪ್ರೇಮ ಹಾಗೂ ಶಿಖರ್‌ವತಿಯ ನಿಧಿಯ ರಹಸ್ಯ ಎಲ್ಲವನ್ನೂ ಹದವಾಗಿ ಹೆಣೆದು ಹಾಸ್ಯಮಯವಾಗಿ ಹೇಳಿರುವಂತಹ ಒಂದು ಅತ್ಯುತ್ತಮ ಪ್ರಯತ್ನವಿದು.

ಕಾಮ, ಕ್ರೌರ್ಯ ಎಳ್ಳಷ್ಟೂ ಇಲ್ಲದಂತಹ ಸದಭಿರುಚಿಯ ವೆಬ್‌ ಸರಣಿ. ಕಾಮ, ಕ್ರೌರ್ಯ ಹೊರತಾಗಿಯೂ ಮನುಷ್ಯನ ಮನಃಶಾಂತಿಯನ್ನು ಕದಡುವಂತಹ ಭೀತಿ, ಮೋಹ, ಕ್ರೋಧ, ಮದ, ಮಾತ್ಸರ್ಯಗಳಂತಹ ಗುಣ ವಿಶೇಷಣಗಳನ್ನಿಲ್ಲಿ ನಾವು ಗುರುತಿಸಬಹುದು. ಅತ್ಯುತ್ತಮ ಸಂಭಾಷಣೆ ಎಂದು ಪ್ರತ್ಯೇಕಿಸಿ ಹೇಳಬಹುದಾದ ಮಾತುಗಳಿಂದ ಕೂಡಿದೆ. ಎಲ್ಲಾ ಕಂತುಗಳು ಒಂದಕ್ಕಿಂತ ಒಂದು ಮನರಂಜಿಸುತ್ತಾ ಕುತೂಹಲ ಕೆರಳಿಸುತ್ತಾ ನೋಡಿಸಿಕೊಳ್ಳುತ್ತವೆ.

ಇಂದಿನ ಕಾಲಘಟ್ಟದಲ್ಲಿ ನಮ್ಮ ಸುತ್ತಲೂ ಎನ್ನುವುದೇಕೆ.. ನಾವೇ ಕಳೆದು ಹೋಗಿರುವಂತಹ ಸೋಷಿಯಲ್‌ ಮೀಡಿಯಾ ಫೋಬಿಯಾಗೆ ಕೈಗನ್ನಡಿಯಂತಿದೆ ಕೆಲವು ದೃಶ್ಯಗಳು. ಪ್ರತಿ ಸಂಚಿಕೆಯಲ್ಲಿಯೂ ಮನರಂಜನೆಯಿದೆ. ಮಿಶ್ರಾ ಪಾತ್ರ ಮೊದಲೆರಡು ಸಂಚಿಕೆಯಲ್ಲಿ ಭರಪೂರ ರಂಜಿಸುತ್ತದೆ. ಇಲ್ಲಿರುವ ಪ್ರತಿಯೊಂದು ಪಾತ್ರಗಳಿಗೂ ಅವುಗಳದ್ದೇ ಆದ ಆಸೆ, ಕನಸುಗಳಿವೆ. ಅದೇ ರೀತಿಯ ಗೊಂದಲಗಳೂ ಇವೆ.

ಈ ವೆಬ್‌ ಸರಣಿಯನ್ನು ಬರೀ ನೋಡುವುದಲ್ಲದೆ ಅರ್ಥೈಸಿಕೊಂಡು ನಾಲ್ಕು ರಾಣಿಯರು ಅಥವಾ ಆ ರಾಜ ಯಾವುದೇ ಪಾತ್ರ ನಿಮಗೆ ಕನೆಕ್ಟ್ ಆಗಬಹುದು. ‘ಪದ್ಮಾಸನ’ ಎನ್ನುವಂತ ಪುಟಾಣಿ ಪಾತ್ರ ನಮ್ಮ ನಿಮ್ಮೊಳಗಿರುವ ಅನೇಕ ಗೊಂದಲಗಳನ್ನು ನಿವಾರಿಸಬಹುದು. ರಾಜ, ರಾಣಿ, ಅರಮನೆ ಎಂದ ಮಾತ್ರಕ್ಕೆ ಇದು ಒಂದು ರಾಜ್ಯದ ಅಥವಾ ಪ್ರಾಂತ್ಯದ ಕಾಲಮಾನದ ಕಥೆಯಲ್ಲ. ಸಮಕಾಲೀನ ಜಗತ್ತನ್ನೂ ಒಳಗೊಳ್ಳುವ ಯೂನಿವರ್ಸಲ್‌ ವೆಬ್‌ ಸರಣಿ ಎನ್ನಬಹುದು. ಮನಸ್ಸಿಗೆ ಸಂಬಂಧಿಸಿದ ಹತ್ತಾರು ವಿಷಯಗಳು ವಿವಿಧ ರೀತಿಯಲ್ಲಿ ಪ್ರಸ್ತಾಪವಾಗುತ್ತವೆ.

ತಾಂತ್ರಿಕವಾಗಿ ಸರಣಿ ಅಚ್ಚುಕಟ್ಟಾಗಿ ಮೂಡಿ ಬಂದಿದೆ. ಹಿನ್ನೆಲೆ ಸಂಗೀತ ಮನಸೂರೆಗೊಳಿಸುವಂತಿದೆ. ಅರಮನೆ, ರಾಜ, ರಾಣಿಯರನ್ನು ಛಾಯಾಗ್ರಾಹಕರೂ ಅಂದವಾಗಿ ಚಿತ್ರಿಸಿದ್ದಾರೆ. ರಾಣಿಯರ ಬಾಲ್ಯದ ನೆನಪುಗಳನ್ನು ಅತ್ಯುತ್ತಮವಾಗಿ ಕಟ್ಟಿದ್ದಾರೆ. ಪಾತ್ರ ವರ್ಗದಲ್ಲಿ ನಾಸಿರುದ್ದೀನ್‌ ಷಾ, ರಘುವೀರ್‌ ಯಾದವ್‌, ಲಾರಾ ದತ್ತಾ, ಚಾರು ಶಂಕರ್‌, ಅನನ್ಯಾ ಸಿಂಗ್, ಕೃತಿಕ ಕಮ್ರಾ, ಸೋಹಾ ಅಲಿ ಖಾನ್, ಅನುರಾಗ್‌ ಸಿನ್ಹಾ ಮುಂತಾದವರಿದ್ದಾರೆ. ಎಲ್ಲರೂ ಪಾತ್ರಗಳನ್ನು ಅತ್ಯುತ್ತಮವಾಗಿ ನಿಭಾಯಿಸಿದ್ದಾರೆ. ಬಾಲನಟಿ ಅಲಿಶಾ ಕೈರೆ ಅವಳದ್ದು ವಾವ್ ಎನ್ನುವಂತಹ ನಟನೆ.

ಇದೊಂದು ಮನೆಮಂದಿಯೆಲ್ಲ ಒಟ್ಟಿಗೆ ಕುಳಿತು ನೋಡಬಹುದಾದ ವೆಬ್‌ ಸರಣಿ ಎನ್ನುವುದಕ್ಕೆ ಹಲವಾರು ಕಾರಣಗಳಿವೆ. ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡು, ಮತ್ತೊಮ್ಮೆ ಓದಬೇಕು ಎನಿಸುವ ಪುಸ್ತಕ, ಮತ್ತೆ ನೋಡಬೇಕೆನಿಸುವಂತಹ ಸಿನಿಮಾದಂತೆ ಈ ಸರಣಿಯೂ ಮತ್ತೆ ನೋಡಿಸಿಕೊಳ್ಳುವ ಗುಣವಿದೆ. ಈ ಸರಣಿ ನೋಡಿದ ನಂತರ ನಿಮ್ಮ ಸುತ್ತಮುತ್ತ ನವಿಲೆಲ್ಲೋ ಕೂಗಿದಂತಹ ಅನುಭವವಾದರೆ ಅದು ‘ಕೌನ್‌ ಬನೇಗಿ ಶಿಖರ್‌ವತಿ’ ಎಫೆಕ್ಟ್‌!

LEAVE A REPLY

Connect with

Please enter your comment!
Please enter your name here