ಗೌರಿ ಸಾವಂತ್ ಅವರ ಜೀವನವನ್ನು ಚಿತ್ರಿಸುವಾಗ ಸುಶ್ಮಿತಾ ಸೇನ್ ಅವರು ಗಟ್ಟಿಗಿತ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಇದು ಒಳಗೊಳ್ಳುವಿಕೆಯ ಸಮಯ. ಮುಖ್ಯವಾಗಿ ಅವನು / ಅವಳು ಯಾವುದೇ ಲಿಂಗದವರಾಗಿದ್ದರೂ ಕೆಲಸ ಮಾಡಲು ಮತ್ತು ಶಿಕ್ಷಣ ಪಡೆಯಲು ಎಲ್ಲಾ ಸ್ವಾತಂತ್ರ್ಯವನ್ನು ನೀಡುವ ಸಮಯ. ಇದು ಅವರಿಗಾಗಿ ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವಿಸುವ ಸಮಯ ಎಂಬುದನ್ನು ಗಟ್ಟಿಯಾಗಿಯೇ ಹೇಳಿದೆ ‘ತಾಲಿ’. JioCinemaದಲ್ಲಿ ಸ್ಟ್ರೀಮ್ ಆಗುತ್ತಿದೆ ಸರಣಿ.
ಅರ್ಜುನ್ ಸಿಂಗ್ ಬರನ್ ಮತ್ತು ಕಾರ್ತಿಕ್ ಡಿ ನಿಶಾಂದರ್ ರಚನೆ, ರವಿ ಜಾಧವ್ ನಿರ್ದೇಶಿಸಿರುವ ಟ್ರಾನ್‌ಜೆಂಡರ್ ಹಕ್ಕುಗಳ ಕಾರ್ಯಕರ್ತೆ ಗೌರಿ ಸಾವಂತ್ ಜೀವನ ಆಧಾರಿತ ವೆಬ್ ಸಿರೀಸ್ ‘ತಾಲಿ’ (ಚಪ್ಪಾಳೆ). 6 ಕಂತುಗಳ ಈ ಸರಣಿಯಲ್ಲಿ ಸುಶ್ಮಿತಾ ಸೇನ್ ಅವರು ಗೌರಿ ಸಾವಂತ್ ಪಾತ್ರವನ್ನು ನಿರ್ವಹಿಸಿದ್ದು, Jio ಸಿನಿಮಾದಲ್ಲಿ ಸರಣಿ ಸ್ಟ್ರೀಮ್ ಆಗುತ್ತಿದೆ. ಪ್ರತಿಯೊಂದು ಸಂಚಿಕೆಯೂ ಗೌರಿ ಸಾವಂತ್ ಅವರ ಜೀವನದ ಪ್ರಮುಖ ತಿರುವುಗಳನ್ನು ತೋರುತ್ತದೆ. ಗಣೇಶ ಗೌರಿಯಾಗುವ ಕತೆ ಇದು. ಹೆಣ್ಣಿನಂತೆ ಆಗುವ ಬಯಕೆ ಗಣೇಶನದ್ದಾದರೆ ಪೊಲೀಸ್ ಆಗಿರುವ ಅಪ್ಪನಿಗೆ (ನಂದು ಮಾಧವ್) ಮಗನನ್ನು ಗಂಡಸು ಮಾಡುವ ಹಠ. ಹದಿಹರೆಯದಲ್ಲಿ ದೈಹಿಕ ಬದಲಾವಣೆಗಳನ್ನು ಗಮನಿಸುತ್ತಲೇ ಇರುವ ಅಪ್ಪ, ಮಗನ ಮುಖದಲ್ಲಿ ಕೂದಲು ಬೆಳೆದು ಬರುತ್ತಿರುವುದನ್ನು ನೋಡಿ ಖುಷಿ ಪಡುತ್ತಾನೆ. ವೈದ್ಯರ ಬಳಿ ಕರೆದೊಯ್ದು ಮಗನಿಗೆ ಚಿಕಿತ್ಸೆ ಕೊಡಿಸುತ್ತಾನೆ. ಆದರೆ ಇದ್ಯಾವುದೂ ಗಣೇಶ, ಗೌರಿಯಾಗುವುದನ್ನು ತಡೆಯುವುದಿಲ್ಲ.
ತನ್ನ ಸಮುದಾಯವನ್ನು ತೃತೀಯಲಿಂಗಿ ಎಂದು ಗುರುತಿಸಲು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲು ಗೌರಿ ಹುಡುಗನ ದೇಹದಲ್ಲಿ ಹಂಬಲಿಸುವ ಹುಡುಗಿಯಿಂದ ಟ್ರಾನ್ಸ್‌ವುಮನ್ ಆಗಿ ಬದಲಾದಾಗ ಆಕೆಯ ಪ್ರಪಂಚದ ಒಳಗೆ ಮತ್ತು ಹೊರಗಿನ ಶತ್ರು ಶಕ್ತಿಗಳನ್ನು ಎದುರಿಸಬೇಕಾಗುತ್ತದೆ. ಒಂದೆಡೆ, ಪಿಂಪ್‌ಗಳು ಮತ್ತು ವೇಶ್ಯಾಗೃಹ-ಪಾಲಕರು ಇದ್ದಾರೆ. ಮತ್ತೊಂದೆಡೆ, ಸ್ವಯಂ ನಿಯೋಜಿತ ಪಾಲಕರು ಅಥವಾ ಸಾಂಪ್ರದಾಯಿಕತೆ ಮತ್ತು ಅಧಿಕಾರದ ಸ್ಥಾನದಲ್ಲಿರುವ ಜನರು. ಕುಹಕ, ಲೇವಡಿಗಳು ಮಾತ್ರವಲ್ಲ ಸಾಲು ಸಾಲು ಅವಮಾನಗಳು ಎದುರಾಗುತ್ತದೆ. ತನ್ನ ಲಿಂಗದ ಗುರುತನ್ನು ಪ್ರತಿಪಾದಿಸುವ ಕಡೆಗೆ ಗೌರಿಯ ಪ್ರಯಾಣ ಹೇಳುವಾಗ ನಾಟಕೀಯ ಸನ್ನಿವೇಶಗಳನ್ನು ತುರುಕಲಾಗಿದೆ. ಆಕೆಗೆ ಸ್ನೇಹಿತರೂ ಶತ್ರುಗಳೂ ಸಾಕಷ್ಟು ಇರುತ್ತಾರೆ. ಅವಳ ನೆಟ್‌ವರ್ಕ್ ದೊಡ್ಡದಾಗುತ್ತಿದ್ದಂತೆ ಮತ್ತು ಅವಳ ಖ್ಯಾತಿಯು ಹರಡುತ್ತಿದ್ದಂತೆ, ಟ್ರಾನ್ಸ್‌ಜೆಂಡರ್‌ಗಳ ಕಾನೂನು ಹಕ್ಕುಗಳನ್ನು ಭದ್ರಪಡಿಸುವ ಗುರಿಯತ್ತ ಆಕೆ ಮುನ್ನಡೆಯುತ್ತಾಳೆ.
ನಿರೂಪಣೆಯ ಬಗ್ಗೆ ಹೇಳುವುದಾದರೆ ‘ತಾಲಿ’ಯಲ್ಲಿ ಚಿಕ್ಕ ಸಂಚಿಕೆ ಮಾಡಿ ಕತೆಯನ್ನು ಎಳೆಯಲಾಗಿದೆ. ಆದರೆ ತೃತೀಯ ಲಿಂಗಿ ಸಮುದಾಯವು ವಾಸಿಸುವ ಮತ್ತು ಅವರ ಜೀವನದ ಮಹತ್ತರ ಸಂಗತಿಗಳನ್ನು ಪ್ರೇಕ್ಷಕರಿಗೆ ತಿಳಿಸುವ ಬಗ್ಗೆ ಹೆಚ್ಚು ವಿವರಗಳನ್ನು ತೋರಿಸುವಲ್ಲಿ ಸ್ಕ್ರಿಪ್ಟ್ ವಿಫಲವಾಗಿದೆ. ಕ್ಷಿತಿಜ್ ಪಟವರ್ಧನ್ ಅವರ ಚಿತ್ರಕಥೆಯಲ್ಲಿ, ಗೌರಿ ಸಾವಂತ್ ಅವರು ಸಮುದಾಯಕ್ಕೆ ತಳ್ಳಲ್ಪಟ್ಟ ಸಮುದಾಯದ ಪರವಾಗಿ ನಡೆಸಬೇಕಾದ ಹೋರಾಟದ ಸ್ವರೂಪವನ್ನು ಮುನ್ನೆಲೆಗೆ ತರುವಲ್ಲಿ ಉತ್ಪ್ರೇಕ್ಷೆ ತೋರಿಸಿಲ್ಲ. ಹೆಚ್ಚಿನ ಸಂಗತಿಗಳನ್ನು ತುಂಬಾ ಸಂಯಮದಿಂದ ತೋರಿಸಲಾಗಿದೆ. ಅದೇ ವೇಳೆ ಕುಟುಂಬ, ಸಮಾಜ, ಸಮುದಾಯ ಮತ್ತು ನೆಲದ ಕಾನೂನುಗಳೊಂದಿಗೆ ಗೌರಿಯ ಹೋರಾಟಗಳ ಸ್ಪಷ್ಟ ಅಂಶಗಳನ್ನೂ ಇದು ನೀಡುತ್ತಿಲ್ಲ.
‘ತಾಲಿ’ಯಲ್ಲಿ ಸುಶ್ಮಿತಾ ಸೇನ್ ತಮ್ಮ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಅವರ ಹಾವಭಾವಗಳು, ನೇರ, ದಿಟ್ಟವಾಗಿ ಮಾತನಾಡುವ ಶೈಲಿ ಎಲ್ಲದಕ್ಕೂ ಫುಲ್ ಮಾರ್ಕ್ಸ್. ಗೌರಿಯವರ ಅರ್ಜಿಯು ವಿಚಾರಣೆಗೆ ಮುನ್ನ ಭಾರತದ ಸರ್ವೋಚ್ಚ ನ್ಯಾಯಾಲಯದ ಹೊರಗೆ ನಡೆಯುವ ಮಾತುಕತೆಯೊಂದಿಗೆ ‘ತಾಲಿ’ ಆರಂಭವಾಗುತ್ತದೆ. ನಿರೂಪಣೆಯು ಪ್ರಸ್ತುತ ಮತ್ತು ಅವಳ ಬಾಲ್ಯದ ಕತೆ ಹೇಳುತ್ತಾ ಹಿಂದಕ್ಕೆ ಮತ್ತು ಮುಂದಕ್ಕೆ ಚಲಿಸುತ್ತದೆ. ಗೌರಿ, ಪತ್ರಕರ್ತೆ (ಮಾಯಾ ರಾಚೆಲ್ ಮೆಕ್‌ಮಾನಸ್) ಜೊತೆಗಿನ ಸಂಭಾಷಣೆಯಿಂದ ಕತೆ ತೆರೆಯುತ್ತಾ ಹೋಗುತ್ತದೆ . ಇದು ಗಣೇಶ್ – ಗೌರಿ ರೂಪಾಂತರವನ್ನು ಬಹಿರಂಗಪಡಿಸುವ ಫ್ಲ್ಯಾಷ್‌ಬ್ಯಾಕ್‌ಗಳ ಸರಣಿಗೆ ಕಾರಣವಾಗುವ ಚೌಕಟ್ಟಿನ ಸಾಧನ. ಶಾಲೆಯಲ್ಲಿ ಒಬ್ಬ ಶಿಕ್ಷಕ ಗಣೇಶನಿಗೆ ಜೀವನದಲ್ಲಿ ಏನಾಗಬೇಕೆಂದು ಕೇಳುತ್ತಾರೆ. ನಾನು ತಾಯಿಯಾಗಲು ಬಯಸುತ್ತೇನೆ ಎಂಬ ಉತ್ತರ ಬರುತ್ತದೆ. ಆಗ ಶಿಕ್ಷಕ ಬಾಲಕನ ಬಾಯ್ಮುಚ್ಚಿಸಿ ಹುಡುಗರು ತಾಯಂದಿರಾಗಲು ಸಾಧ್ಯವಿಲ್ಲ, ಅವರು ಹೇಳುತ್ತಾರೆ. ಮುಂದೊಂದು ದಿನ ತಾಯಿಯಾಗುವ ಗಣೇಶ್‌ನ ಬಯಕೆ ಅವಳ ವ್ಯಕ್ತಿತ್ವದ ವಿಕಾಸದ ಕೇಂದ್ರಬಿಂದುವಾಗುತ್ತದೆ.
ಮತ್ತೊಂದು ನಿರ್ಣಾಯಕ ದೃಶ್ಯದಲ್ಲಿ ಟ್ರಾನ್ಸ್ ಜೆಂಡರ್ ಮಹಿಳೆ ನರ್ಗಿಸ್ (ಶೀತಲ್ ಕಾಳೆ), ಸಲಿಂಗಕಾಮಿ ಹಕ್ಕುಗಳ ಕಾರ್ಯಕರ್ತ (ಅಂಕುರ್ ಭಾಟಿಯಾ) ಕರೆದ ಸಭೆಯಲ್ಲಿ ಮಾತಿಗೆ ಮಾತು ಬೆಳೆದು ಹೊರಗೆ ನಡೆಯುತ್ತಾರೆ. ನಿಜವಾಗಿಯೂ ನಿನಗೆ ನಮ್ಮ ಕಷ್ಟ ಅರ್ಥವಾಗಬೇಕಾದರೆ, ನಮಗಾಗಿ ನೀನು ದನಿಯೆತ್ತಬೇಕೆಂದಿದ್ದರೆ ಹೆಣ್ಣಾಗಿ ನೋಡು, ಹೆಣ್ಣಾಗಿಯೇ ಬಾ ಎಂದು ನರ್ಗಿಸ್ ಸವಾಲು ಹಾಕುತ್ತಾಳೆ. ಇದು ಗಣೇಶ್‌ನನ್ನು ಚಿಂತನೆಗೆ ಹಚ್ಚುತ್ತದೆ. ತಾನು ಹೆಣ್ಣಾಗಬೇಕು ಎಂಬ ಆಸೆಗೆ ಆಗ ರೆಕ್ಕೆ ಪುಕ್ಕ ಬೆಳೆಯುತ್ತದೆ. ಆಪರೇಷನ್ ತುಂಬಾ ಕಷ್ಟದ್ದು ಆಗಿದ್ದರೂ ಲಿಂಗ ಪರಿವರ್ತನೆ ಪ್ರಕ್ರಿಯೆ ನಂತರದ ಕಾರ್ಯಗಳನ್ನು ಚುಟುಕಾಗಿ ಹೇಳಿ ಮುಗಿಸಲಾಗಿದೆ.
ರವಿ ಜಾಧವ್ ನಿರ್ಭೀತಿಯಿಂದ ಸಾಮಾಜಿಕ ಅಸೂಕ್ಷ್ಮತೆ ಮೇಲೆ ಕನ್ನಡಿ ಹಿಡಿದಿದ್ದಾರೆ. ಜಾಧವ್‌ನ ಚೊಚ್ಚಲ ಚಲನಚಿತ್ರ ‘ನಟರಂಗ್’ನಲ್ಲಿ (2009) ಲಿಂಗ ಸಂವಾದದ ವಿಷಯವನ್ನು ‘ತಾಲಿ’ಯಲ್ಲಿ ಮುಂದುವರಿಸಿದ್ದಾರೆ. ‘ತಾಲಿ’ ಬರೀ ಹೋರಾಟದ ಕತೆಯನ್ನು ಹೇಳುವುದರ ಜತೆ ಮನರಂಜನೆಯನ್ನೂ ನೀಡುತ್ತದೆ. ತನ್ನ ಸ್ನೇಹಿತೆಯ ದೇಹವನ್ನು ಮುಟ್ಟಲು ನಿರಾಕರಿಸುವ ಆಸ್ಪತ್ರೆಯ ಕೆಲಸಗಾರರೊಂದಿಗೆ ಗೌರಿಯ ಜಗಳ, ಶಸ್ತ್ರಚಿಕಿತ್ಸೆಯ ನಂತರದ ಗೌರಿಗೆ ಆಕೆ ತಂದೆ ಅವರು ‘ಕಳೆದುಕೊಂಡ’ ಮಗನ ಅಂತಿಮ ವಿಧಿಗಳನ್ನು ನಡೆಸುವುದು ಮನಸ್ಸಿನಲ್ಲಿ ತಳಮಳವನ್ನುಂಟು ಮಾಡುತ್ತದೆ. ಆಕೆ ತನ್ನ ಸಹೋದರಿಯನ್ನು ಭೇಟಿಯಾಗಿ ಆಡುವ ಮಾತುಗಳು ಪ್ರೇಕ್ಷಕರನ್ನು ಭಾವುಕರನ್ನಾಗಿ ಮಾಡುತ್ತದೆ. ಪ್ರತಿ ಸಂಚಿಕೆಯು ಈಕೆಯ ಬದುಕಿನ ಪ್ರಯಾಣದ ಹಾದಿಯನ್ನು ಸ್ಕೋರ್ ಮಾಡಲು ಸಂಗೀತದ ಮಧ್ಯಂತರವನ್ನು ಹೊಂದಿದೆ.
ಗೌರಿಯ ಬಾಲ್ಯದ ಪಾತ್ರ ನಿರ್ವಹಿಸಿದ ಕೃತಿಕಾ ದೇವ್ ನಟನೆ ಮಚ್ಚಲೇಬೇಕು. ‘ತಾಲಿ’ಯಲ್ಲಿನ ವಿಶೇಷತೆ ಏನೆಂದರೆ ಈ ಹಿಂದೆ ಟ್ರಾನ್ಸ್‌ಜೆಂಡರ್ ಪಾತ್ರಗಳನ್ನು ವ್ಯಂಗ್ಯಚಿತ್ರದಂತೆ ಮತ್ತು ಪೆದ್ದುಪೆದ್ದಾಗಿ ತಲೆಯಲ್ಲಾಡಿಸಿ ಹೌದಪ್ಪ ಪಾತ್ರಗಳಲ್ಲಿ ನೋಡಿದ್ದೇವೆ. ಆದರೆ ಈ ಬಾರಿ, ಗೌರಿ ಸಾವಂತ್ ಅವರ ಜೀವನವನ್ನು ಚಿತ್ರಿಸುವಾಗ ಸುಶ್ಮಿತಾ ಸೇನ್ ಅವರು ಗಟ್ಟಿಗಿತ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಇದು ಒಳಗೊಳ್ಳುವಿಕೆಯ ಸಮಯ. ಮುಖ್ಯವಾಗಿ ಅವನು / ಅವಳು ಯಾವುದೇ ಲಿಂಗದವರಾಗಿದ್ದರೂ ಕೆಲಸ ಮಾಡಲು ಮತ್ತು ಶಿಕ್ಷಣ ಪಡೆಯಲು ಎಲ್ಲಾ ಸ್ವಾತಂತ್ರ್ಯವನ್ನು ನೀಡುವ ಸಮಯ. ಇದು ಅವರಿಗಾಗಿ ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವಿಸುವ ಸಮಯ ಎಂಬುದನ್ನು ಗಟ್ಟಿಯಾಗಿಯೇ ಹೇಳಿದೆ ‘ತಾಲಿ’.