ಮರೆವು ಒಂದು ವರ. ನಮ್ಮ ಬದುಕಿನಲ್ಲಿ ಅಗತ್ಯವಿಲ್ಲದೇ ಇದ್ದುದನ್ನು ಮರೆತು ಬಿಡಬೇಕು. ಇಲ್ಲವೇ ಮರೆತಂತೆ ನಟಿಸಿ ಮುಂದೆ ಹೋಗಬೇಕು. ಅಪ್ಪ- ಮಗನ ಸಂಬಂಧ, ಸಹಾನುಭೂತಿ, ವಿಶ್ವಾಸದ ಕತೆ ಹೇಳುವ ಮಿಸ್ಟರಿ- ಥ್ರಿಲ್ಲರ್ ‘ಕಿಷ್ಕಿಂದಾ ಕಾಂಡಂ’ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
ಕಿಷ್ಕಿಂದಾ ಎಂದು ಕೇಳಿದಾಗ ನಮ್ಮ ಕಣ್ಣೆದುರಿಗೆ ಬರುವುದು ರಾಮಾಯಣದ ವಾನರ ರಾಜ್ಯ. ಅದೊಂದು ಕಾಡು, ಆ ಕಾಡಿನೊಳಗೊಂದು ಮನೆ. ಮನೆಯ ಸುತ್ತಮುತ್ತ ಮಂಗಗಳ ಸಾಮ್ರಾಜ್ಯ. ಆ ಮನೆಯಲ್ಲಿ ಒಂದು ಕುಟುಂಬವಿದೆ, ನಿವೃತ್ತ ಸೇನಾಧಿಕಾರಿ ಅಪ್ಪು ಪಿಳ್ಳೆಯದ್ದು. ಅಪ್ಪು ಪಿಳ್ಳೆಯ ಮಗ ಅಜಯ ಚಂದ್ರನ್ ಎಂಬ ಅಜಯನ್. ಅಜಯನ್‌ನ್ನು ಮದುವೆಯಾಗಿ ಆ ಕುಟುಂಬಕ್ಕೆ ಬರುವ ಹೆಣ್ಣು ಅಪರ್ಣಾ. ಅಜಯನ್‌ನದ್ದು ಎರಡನೇ ಮದುವೆ. ಮೊದಲ ಹೆಂಡತಿ ಪ್ರವೀಣ ಕ್ಯಾನ್ಸರ್‌ನಿಂದ ಸಾವಿಗೀಡಾಗಿರುತ್ತಾಳೆ. ಆ ದಾಂಪತ್ಯದಲ್ಲಿ ಹುಟ್ಟಿದ ಮಗ ಚಚ್ಚು ನಾಪತ್ತೆಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಯುತ್ತಲೇ ಇದೆ.
ಅಪ್ಪು ಪಿಳ್ಳೆಯ ಮನೆಯಲ್ಲಿ ಪರವಾನಗಿಯುಳ್ಳ ಪಿಸ್ತೂಲ್ ಒಂದಿತ್ತು. ಅದೀಗ ಕಾಣೆಯಾಗಿದೆ. ಊರಲ್ಲಿ ಚುನಾವಣೆ ಇದ್ದ ಕಾರಣ ಪಿಸ್ತೂಲ್/ಗನ್ ಪೊಲೀಸ್ ಠಾಣೆಗೆ ಹಾಜರುಪಡಿಸಬೇಕು. ಆದರೆ ಎರಡ್ಮೂರು ವರ್ಷಗಳಿಂದ ನಾಪತ್ತೆಯಾಗಿರುವ ಪಿಸ್ತೂಲನ್ನು ತರುವುದಾದರೂ ಎಲ್ಲಿಂದ?. ಅರಣ್ಯ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ಅಜಯನ್, ಅಪರ್ಣಾಳನ್ನು ಮದುವೆಯಾಗಿ ಮನೆಗೆ ಕರೆತರುವ ದಿನವೇ ಮನೆಯಲ್ಲಿ ಪೊಲೀಸರು ಪಿಸ್ತೂಲ್‌ಗಾಗಿ ಹುಡುಕಾಡುತ್ತಾರೆ. ಇತ್ತ ಅಪ್ಪು ಪಿಳ್ಳೆಗೆ ವಯೋಸಹಜ ಮರೆವು ಬೇರೆ ಇದೆ. ಮನೆಯಲ್ಲಿರುವ ಇತರ ವಸ್ತುಗಳನ್ನು ಮಂಗಗಳು ಕಬಳಿಸುವಂತೆ ಪಿಸ್ತೂಲನ್ನು ಕೂಡಾ ಅವುಗಳೇ ಹೊತ್ತು ಕೊಂಡು ಹೋಗಿದ್ದರೆ?
ನಾಪತ್ತೆಯಾದ ಪಿಸ್ತೂಲ್, ಅಪ್ಪು ಪಿಳ್ಳೆಯ ಸಿಡಿಮಿಡಿ ಸ್ವಭಾವ.. ಈ ಮನೆಯಲ್ಲಿ ನಡೆಯುತ್ತಿರುವುದಾದರೂ ಏನು? ಎಂಬ ಕುತೂಹಲ ಅಪರ್ಣಾಳಿಗೆ. ಆಕೆ ಮನೆಯಲ್ಲಿನ ಪ್ರತಿಯೊಂದು ಚಲನೆಯನ್ನೂ ತುಂಬಾ ಸೂಕ್ಷ್ಮವಾಗಿ ನೋಡುತ್ತಾ, ತನ್ನ ಮನಸ್ಸಿನಲ್ಲಿರುವ ಶಂಕೆಗಳಿಗೆ ಸಾಕ್ಷ್ಯಗಳನ್ನು ಸಂಗ್ರಹಿಸುವಲ್ಲಿ ತೊಡಗುತ್ತಾಳೆ. ಮುದ್ದಿನ ಮಗ ಚಚ್ಚು ನಾಪತ್ತೆಯಾಗಿದ್ದಾನೆ. ಬೇರೆ ಯಾವುದೋ ಊರಲ್ಲಿ ಮಗುವಿನ ಡೆಡ್ ಬಾಡಿ ಸಿಕ್ಕಿದೆ ಎಂಬ ಮಾಹಿತಿ ಬಂದಾಗ ಪ್ರವೀಣಾಳ ತಮ್ಮ ಪ್ರಶೋಬ್ ಮತ್ತು ಪತಿ ಅಜಯನ್ ಜತೆ ಅಪರ್ಣಾ ಕೂಡಾ ಜತೆಯಾಗುತ್ತಾಳೆ. ಆದರೆ ಅಲ್ಲಿದ್ದದ್ದು ಚಚ್ಚುವಿನ ಮೃತದೇಹವಾಗಿರಲಿಲ್ಲ. ಮತ್ತೆ ಹುಡುಕಾಟ ಮುಂದುವರಿಕೆ.
ಅಪ್ಪು ಪಿಳ್ಳೆಗೆ ಮರೆವು ಇದೆ. ಆತನನ್ನು ಭೇಟಿ ಮಾಡಲು ಗೆಳೆಯರು ಬಂದರೂ ಅವರು ಯಾರು? ಏನು? ಎತ್ತ ಎಂಬುದರ ಬಗ್ಗೆ ಆತ ನೋಟ್ ಮಾಡಿಕೊಂಡಿರುತ್ತಾನೆ. ಆತನ ಕೋಣೆಗೆ ಯಾರೂ ಪ್ರವೇಶಿಸುವಂತಿಲ್ಲ. ಅಲ್ಲಿ ಎಲ್ಲದಕ್ಕೂ ಪುಟ್ಟ ಪುಟ್ಟ ನೋಟ್‌ಗಳಿವೆ. ಆತ ನೆನಪಿಟ್ಟುಕೊಳ್ಳಬೇಕಾದದನ್ನು ಬರೆದಿಡುತ್ತಾನೆ, ಬೇಡದೇ ಇರುವುದನ್ನು ಸುಡುತ್ತಾನೆ. ಇದೊಂಥರಾ ವಿಚಿತ್ರ ಸ್ವಭಾವವೆಂದು ಅಪರ್ಣಾ ಹೇಳಿದಾಗ,ಅವರನ್ನು ರೋಗಿಯಂತೆ ಕಾಣಲಾಗುವುದಿಲ್ಲ. ಅವರನ್ನು ನೀನು ಸಂದೇಹದಿಂದ ನೋಡುವಂತೆ ನನಗೆ ನೋಡಲಾಗುವುದಿಲ್ಲ. ಯಾಕೆಂದರೆ ಅವರು ನನ್ನ ಅಪ್ಪ ಎಂದು ಅಜಯನ್ ಕಣ್ಣೀರಾಗುತ್ತಾನೆ.
ಕಾಣೆಯಾದ ಪಿಸ್ತೂಲ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಾ ಅಪ್ಪು ಪಿಳ್ಳೆಗೆ ಪಿಸ್ತೂಲ್ ಕೊಟ್ಟ ವರ್ಷ, ಅವರು ಪರವಾನಗಿ ನವೀಕರಣ ಮಾಡಿದ್ದು ಯಾವಾಗ ಹೀಗೆ ಎಲ್ಲ ಮಾಹಿತಿ ಕಲೆ ಹಾಕಲಾಗುತ್ತದೆ. ಅಪ್ಪು ಪಿಳ್ಳೆಗೆ ಮರೆವಿನ ಕಾಯಿಲೆ ಇದೆ ಎಂಬುದಕ್ಕೆ ಕುಟುಂಬದ ಬಳಿ ಮೆಡಿಕಲ್ ರಿಪೋರ್ಟ್ ಇದೆ. ಮಾನಸಿಕ ಸ್ವಾಸ್ಥ್ಯ ಇಲ್ಲದೇ ವ್ಯಕ್ತಿಗೆ ನಾವು ಗನ್ ಕೊಟ್ಟಿದ್ದೇವೆ ಎಂಬುದು ದಾಖಲೆಯಿಂದ ಬಯಲಾದ ಕೂಡಲೇ ಪೊಲೀಸರಿಗೂ ಸಂಕಷ್ಟ. ಒಂದು ವೇಳೆ ಆ ಗನ್ ದುರ್ಬಳಕೆಯಾದರೆ ಅದರ ಪರಿಣಾಮವನ್ನು ಪೊಲೀಸರೂ ಅನುಭವಿಸಬೇಕಾಗುತ್ತದೆ. ಇದೊಂಥರಾ ಜಗಿದು ನುಂಗಲೂ ಆಗದೇ, ಹೊರಗೆ ಉಗುಳಲೂ ಆಗದ ಪರಿಸ್ಥಿತಿ!
ಇದೆಲ್ಲದರ ನಡುವೆ ಹಲವು ಘಟನೆಗಳು ನಡೆದು ಹೋಗುತ್ತವೆ. ಒಂದಿನ ಅಪ್ಪು ಪಿಳ್ಳೆ ಬೇರೆಯವರಿಗೆ ಮಾರಿದ್ದ ಜಮೀನಿನಲ್ಲಿ ಕೆಲಸಗಾರರು ಗುಂಡಿ ಅಗೆಯುವಾಗ ಅಸ್ಥಿಪಂಜರವೊಂದು ಸಿಕ್ಕಿ ಬಿಡುತ್ತದೆ. ಮೊದಲಿಗೆ ಅದು ಮನುಷ್ಯನ ಅಸ್ಥಿಪಂಜರವೆಂದು ಹೇಳಿದರೂ ಪರೀಕ್ಷೆ ನಡೆಸಿದಾಗ ಅದು ಮಂಗನ ಅಸ್ಥಿಪಂಜರವೆಂಬುದು ಗೊತ್ತಾಗುತ್ತದೆ. ಆ ಮಂಗ ಸತ್ತಿದ್ದು ಗುಂಡೇಟಿನಿಂದ, ಅದೂ ಮೂರು ವರ್ಷದ ಹಿಂದೆ. ಆ ಬುಲೆಟ್ ಅಪ್ಪು ಪಿಳ್ಳೆಯ ಪಿಸ್ತೂಲ್‌ನದ್ದು!
ಅಪ್ಪು ಪಿಳ್ಳೆಗೆ ಊರಿನಲ್ಲಿನ ಜನರೊಂದಿಗೆ ಒಡನಾಟ ಕಡಿಮೆ. ಆತನ ಹಳೆಯ ಗೆಳೆಯನೊಬ್ಬನಿದ್ದಾನೆ ಹೆಸರು ಸುಮದತ್ತನ್. ಮೊದಲು ನಕ್ಸಲ್ ಆಗಿದ್ದವ, ಆಗ ಕಳ್ಳಭಟ್ಟಿ ಮಾರಿ ಬದುಕುತ್ತಿದ್ದಾನೆ. ಪೊಲೀಸರಿಗೆ ಅವನ ಮೇಲೂ ಕಣ್ಣು. ತನ್ನ ಬದುಕಿನಲ್ಲಿ ನಡೆದ ಘಟನೆಗಳನ್ನು ಮತ್ತೆ ನೆನಪಿಸಿಕೊಳ್ಳಲು ಅಪ್ಪು ಪಿಳ್ಳ ಸುಮದತ್ತನ್‌ನ್ನು ಭೇಟಿ ಮಾಡಿರುತ್ತಾನೆ. ಇದು ಹಲವಾರು ಸಂಶಯಗಳಿಗೂ ಕಾರಣವಾಗಿರುತ್ತದೆ.
ಮಗ ಚಚ್ಚು ನಾಪತ್ತೆಯಾಗಿದ್ದು ಹೇಗೆ? ಎಂಬ ಪ್ರಶ್ನೆಯನ್ನಿಟ್ಟುಕೊಂಡೇ ಅಪರ್ಣಾ ಹಲವಾರು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಮುಂದಾಗುತ್ತಾಳೆ. ಹೆಂಡತಿ ಪ್ರವೀಣಳಿಗೆ ಚಿಕಿತ್ಸೆ ನಡೆಯುತ್ತಿದ್ದ ಹೊತ್ತಲ್ಲಿ ಮಗುವಿನತ್ತ ಹೆಚ್ಚು ಗಮನ ಹರಿಸಲು ಸಾಧ್ಯವಾಗಲಿಲ್ಲ. ಮಗುವನ್ನು ಅಪ್ಪನ ಬಳಿ ಬಿಟ್ಟು ಹೋಗುತ್ತಿದ್ದದ್ದು. ಪ್ರವೀಣಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮರಳಿ ಬಂದಾಗ ಮಗ ನಾಪತ್ತೆಯಾಗಿರುವುದು ಗೊತ್ತಾಗಿದ್ದು ಎಂದು ಅಜಯನ್ ಕತೆ ಹೇಳಿದ್ದ. ಹಾಗಾದರೆ ಅಜ್ಜ ಮತ್ತು ಮೊಮ್ಮಗನ ಸಂಬಂಧ ಹೇಗಿತ್ತು? ಎಂಬುದು ಮುಂದಿನ ಪ್ರಶ್ನೆ.
ಸುಮದತ್ತನಲ್ಲಿ ಈ ಬಗ್ಗೆ ಕೇಳಿದಾಗ, ಚಚ್ಚು ಅಜ್ಜನ ಪಿಸ್ತೂಲಿನಿಂದ ಮಂಗನನ್ನು ಸಾಯಿಸಿದ ಘಟನೆ ಗೊತ್ತಾಗುತ್ತದೆ. ಮಂಗನನ್ನು ಗುಂಡಿಟ್ಟು ಸಾಯಿಸುವುದು ದೊಡ್ಡ ಅಪರಾಧ. ಅದಕ್ಕಾಗಿ ಅಜ್ಜ ಮೊಮ್ಮಗನಿಗೆ ಚೆನ್ನಾಗಿ ಥಳಿಸಿದ್ದರು. ಮಂಗನ ಹೆಣವನ್ನು ಗುಂಡಿ ತೋಡಿ ಮಣ್ಣು ಮಾಡಿದ್ದು ನಾನೇ ಅಂತಾನೆ ಸುಮದತ್ತ.
ಇದರ ನಡುವೆಯೇ ಕಾಡಿನಲ್ಲಿರುವ ಮಂಗನ ಕೈಯಲ್ಲಿ ಪಿಸ್ತೂಲ್ ಇರುವ ಫೋಟೊವೊಂದು ಪೊಲೀಸರಿಗೆ ಸಿಕ್ಕಿ ಬಿಡುತ್ತದೆ. ಇದು ನಿಮ್ಮ ಮನೆಯಿಂದ ನಾಪತ್ತೆಯಾದ ಪಿಸ್ತೂಲ್ ಆಗಿರಬಹುದೇ ಎಂದು ಕೇಳಿದಾಗ ಅಪ್ಪು ಪಿಳ್ಳೆ ಹೂಂ ಅಂತಾರೆ. ಪೊಲೀಸರು ಮತ್ತಷ್ಟು ವಿಚಾರಣೆ ನಡೆಸಲು ಪೊಲೀಸ್ ಠಾಣೆಯಲ್ಲಿರಿಸಿಕೊಂಡಾಗ ಅಪರ್ಣಾ ಅಪ್ಪು ಪಿಳ್ಳೆಯ ಕೋಣೆಯಲ್ಲಿ ಹುಡುಕಾಟ ನಡೆಸುತ್ತಾಳೆ. ಅಲ್ಲಿ ಆಕೆಗೆ ಪಿಸ್ತೂಲ್ ಸಿಕ್ಕಿಬಿಡುತ್ತದೆ. ಅಲ್ಲಿಯವರೆಗೆ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸುವಾಗ ಪಿಸ್ತೂಲ್‌ನಿಂದ ಎರಡು ಗುಂಡು ನಾಪತ್ತೆಯಾಗಿದೆ ಎಂದು ಅಪ್ಪು ಪಿಳ್ಳೆ ಬರೆದಿರುವ ನೋಟ್ ಅಪರ್ಣಾಳ ಕೈಗೆ ಸಿಕ್ಕಿಬಿಡುತ್ತದೆ. ಒಂದು ಗುಂಡು ಮಂಗನನ್ನು ಸಾಯಿಸಿದೆ, ಇನ್ನೊಂದು?
ಅಂದು ಅಜ್ಜನ ಕೈಯಿಂದ ಪೆಟ್ಟು ತಿಂದು ನೊಂದುಕೊಂಡ ಮಗು ಮನೆ ಬಿಟ್ಟು ಹೋಯಿತೇ? ಹಾಗೆ ಹೋಗಿದ್ದಾದರೆ ಎಲ್ಲಿಗೆ? ಮಗು ನಾಪತ್ತೆಯಾದ ದಿನಾಂಕಕ್ಕೂ ಪೊಲೀಸರಿಗೆ ದೂರು ನೀಡಿದ ದಿನಾಂಕಕ್ಕೂ ವ್ಯತ್ಯಾಸವಿದೆ. ಮಗು ನಾಪತ್ತೆಯಾದ ಕೂಡಲೇ ಪೊಲೀಸರಿಗೆ ಯಾಕೆ ಮಾಹಿತಿ ನೀಡಿಲ್ಲ? ಈ ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದು ಅಪರ್ಣಾ ಗಂಡನಲ್ಲಿ ಕೇಳಿದಾಗ ಅಜಯನ್ ಹೇಳುವ ಹಲವಾರು ಸಂಗತಿಗಳು ಬೆಳಕಿಗೆ ಬಂದು ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುತ್ತವೆ. ಅದೇ ವೇಳೆ ಅಪ್ಪ- ಮಗನ ನಡುವಿನ ಸಂಬಂಧದ ಸೂಕ್ಷ್ಮಗಳು, ಸಹಾನುಭೂತಿ, ಅರ್ಥೈಸುವಿಕೆ ನಮ್ಮ ಕಣ್ಣು ಒದ್ದೆಯಾಗಿಸುತ್ತವೆ.
2019ರಲ್ಲಿ ‘ಕಕ್ಷಿ: ಅಮ್ಮಿಣಿಪಿಳ್ಳ’ ಎಂಬ ಸಿನಿಮಾ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ ದಿಂಜಿತ್ ಅಯತ್ತಾನ್, ‘ಕಿಷ್ಕಿಂದಾ ಕಾಂಡಂ’ ಮೂಲಕ ಮಿಸ್ಟರಿ- ಥ್ರಿಲ್ಲರ್‌ವೊಂದನ್ನು ಪ್ರೇಕ್ಷಕರಿಗೆ ನೀಡಿ ರಂಜಿಸಿದ್ದಾರೆ, ಅಪ್ಪು ಪಿಳ್ಳೆ ಪಾತ್ರದಲ್ಲಿ ವಿಜಯ ರಾಘವನ್ ಮನೋಜ್ಞ ಅಭಿನಯದ ಮೂಲಕ ಗಮನ ಸೆಳೆದರೆ, ಅಜಯನ್ ಪಾತ್ರದಲ್ಲಿ ಆಸಿಫ್ ಅಲಿ ಮನಸೂರೆಗೊಳ್ಳುತ್ತಾರೆ. ಅಪರ್ಣಾ ಪಾತ್ರದಲ್ಲಿ ಸಹಜವಾಗಿ ನಟಿಸಿರುವ ಅಪರ್ಣಾ ಬಾಲಮುರಳಿ, ಸುಮದತ್ತನ್ ಆಗಿ ನಟಿಸಿರುವ ಜಗದೀಶ್ ಸಿನಿಮಾಕ್ಕೆ ಜೀವ ತುಂಬಿದ್ದಾರೆ. ಇನ್ನುಳಿದಂತೆ ಅಶೋಕನ್, ಮೇಜರ್ ರವಿ, ಕೊಟ್ಟಾಯಂ ರಮೇಶ್, ಬಿಲಾಸ್ ಚಂದ್ರಹಾಸನ್, ಮಾಸ್ಟರ್ ಆರವ್, ಜಿಬಿನ್ ಗೋಪಿನಾಥ್ ಮುಂತಾದವರು ತಾರಾಗಣದಲ್ಲಿದ್ದಾರೆ.
ಬಹುಲ್ ರಮೇಶ್ ಕಥೆ, ಚಿತ್ರಕಥೆ ಬರೆದಿದ್ದು, ಮುಜೀಬ್ ಮಜೀದ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಗುಡ್‌ವಿಲ್ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಜೋಬಿ ಜಾರ್ಜ್ ಈ ಚಿತ್ರವನ್ನು ನಿರ್ಮಿಸಿದ್ದು, ಸಿನಿಮಾ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿದೆ.