ಜಾತಿ ವ್ಯವಸ್ಥೆಯ ಸೂಕ್ಷ್ಮಗಳು, ಮಹಿಳಾವಾದದ ಬೇರುಗಳು ಮಲಯಾಳಂ ಚಿತ್ರರಂಗ ಚಿತ್ರಿಸುವಷ್ಟು ಗಟ್ಟಿಯಾಗಿ‌ ಬೇರಾವ ಸಿನಿ ರಂಗವೂ ತೋರಿಸುವುದಿಲ್ಲ ಎಂಬುದು ಒಂದು ವರ್ಗದ ವಾದ. ಅದು‌ ಸದಾ ಗೆಲ್ಲುವ ವಾದವಲ್ಲ ಎಂಬುದನ್ನು ಮಹಿಳೆಯ ನಿರ್ದೇಶನದಲ್ಲೇ ಆ ಎರಡೂ ವಿಭಾಗಗಳು ಎಡವಿದಾಗ ‘ಪುಳು’ (ಹುಳ ಎಂಬ ಅರ್ಥ) ನಿರ್ಮಾಣವಾಗಿದೆ. ಮಮ್ಮುಟ್ಟಿ ಅಭಿನಯದ ಈ‌ ಚಿತ್ರ ನೇರವಾಗಿ Sony Livನಲ್ಲಿ ಬಿಡುಗಡೆಯಾಗಿ ಸ್ಟ್ರೀಂ ಆಗುತ್ತಿದೆ.

ಲಾಕ್‌ಡೌನ್ ಅವಧಿಯಲ್ಲಿ ಮಲಯಾಳಂ ಸಿನಿಮಾಗಳು ಒಟಿಟಿಯಲ್ಲಿ ಭಾರಿ ಪ್ರಮಾಣದ ವೀಕ್ಷಕರನ್ನು ಸೆಳೆದವು. ಭಾಷೆಯ‌ ಗಡಿ ಮೀರಿ ಸಿನಿಮಾ ನೋಡುವ ಹವ್ಯಾಸವಿರುವ ಕನ್ನಡಿಗರು ಹೃತ್ಪೂರ್ವಕವಾಗಿ ಮಲಯಾಳಿ ಸರಕನ್ನು ಸ್ವೀಕರಿಸಿದರು. ಹಾಗಾಗಿ ಮಲಯಾಳಿ ಸೂಪರ್ ಸ್ಟಾರ್ ಮಮ್ಮುಟ್ಟಿ ಸಿನಿಮಾವೊಂದು ಪ್ರಥಮ ಬಾರಿಗೆ ನೇರ ಒಟಿಟಿ‌ ಮೂಲಕ‌ ಬಿಡುಗಡೆಯಾದಾಗ ಅದರದ್ದೊಂದು ವಿಮ‌ರ್ಶೆ‌ ಔಚಿತ್ಯಪೂರ್ಣ.

‘ಪುಳು’ವಿನ ಕತೆಗೆ ಸ್ಫೂರ್ತಿ ಮಹಾಭಾರತದಲ್ಲಿ ಬರುವ ಪರೀಕ್ಷಿತ‌ ಮಹಾರಾಜನ ಕತೆ. ಅಭಿಮನ್ಯು ಹಾಗೂ ಉತ್ತರೆಯ ಮಗ ರಾಜ ಪರೀಕ್ಷಿತ. ಆತ ಶಕ್ತಿಶಾಲಿಯಷ್ಟೇ ಅಲ್ಲ ಬಹು ಬುದ್ಧಿವಂತ ಕೂಡ. ಆದರೆ ಬುದ್ಧಿಯನ್ನು ಕೊಪದ ಕೈಗೆ ಕೊಟ್ಟು ಕೆಟ್ಟವ. ಪಾಂಡವರ ನಂತರ ಹಸ್ತಿನಾಪುರದ ಗದ್ದುಗೆ ಏರಿದ ಪರೀಕ್ಷಿತ ಒಮ್ಮೆ ಸಮೀಕ್ಷ ಮಹರ್ಷಿಯನ್ನು ಕಾಣಲು ಆಶ್ರಮಕ್ಕೆ ಭೇಟಿ ನೀಡುತ್ತಾನೆ. ಧ್ಯಾನಸ್ಥ ಸಮೀಕ್ಷ ಮಹರ್ಷಿ ಪರೀಕ್ಷಿತನ ಆಗಮನ ಗಮನಿಸುವುದಿಲ್ಲ. ಆದಾಗ್ಯೂ ಮಹರ್ಷಿಗಳು ಧ್ಯಾನಾವಸ್ಥೆಯಿಂದ ಹೊರಬರುತ್ತಾರೆ ಎಂಬ ನಿರೀಕ್ಷೆಯಲ್ಲಿ ಪರೀಕ್ಷಿತ ಕಾಯುತ್ತಾನೆ. ಮಹರ್ಷಿ ಕದಲುವುದಿಲ್ಲ. ಕಾದೂ ಕಾದು ತಾಳ್ಮೆ ಕಳೆದುಕೊಂಡ ಪರೀಕ್ಷಿತ‌ ಹೊರಡಲು ಅನುವಾಗುತ್ತಾನೆ. ಸುಮ್ಮನೇ ಹೋಗಿದ್ದಿದ್ದರೆ‌ ಖರೆ, ಆದರೆ ಸಿಟ್ಟು ನೆತ್ತಿಗೇರಿತ್ತಲ್ಲ, ಹಾಗಾಗಿ ಕೋಪದ ಭರದಲ್ಲಿ ಅಲ್ಲಿದ್ದ ಒಂದು ಸತ್ತ ಹಾವನ್ನೆತ್ತಿ ಸಮೀಕ್ಷನ ಕೊರಳಿಗೆ ಸುತ್ತಿಬಿಡುತ್ತಾನೆ.

ಇದನ್ನು ಕಂಡು ಸಮೀಕ್ಷನ ಮಗ ಶೃಂಗಿಗೆ ಕಸಿವಿಸಿಯಾಗುತ್ತದೆ. ಇನ್ನೊಂದು ವಾರದಲ್ಲಿ ಹಾವು ಕಚ್ಚಿಯೇ ನೀನು ಸಾಯುತ್ತೀಯ ಎಂದು ಶೃಂಗಿ ಪರೀಕ್ಷಿತನಿಗೆ ಶಾಪ ನೀಡುತ್ತಾನೆ. ಅವನನ್ನು ಕಚ್ಚಿ ವಿಷವೇರಿಸಿ ಸಾಯಿಸುವ ಜವಾಬ್ದಾರಿಯನ್ನು ಸರ್ಪರಾಜ ತಕ್ಷಕ ವಹಿಸಿಕೊಳ್ಳುತ್ತಾನೆ. ಆದರೆ ಪರೀಕ್ಷಿತ ಅಷ್ಟು ಸುಲಭಕ್ಕೆ ಸೋಲೊಪ್ಪುವವನಲ್ಲ‌. ಹಾವಿನ ಕಡಿತದಿಂದ ತಪ್ಪಿಸಿಕೊಳ್ಳಲು ರಾಜ್ಯಪಾಲನೆಯ ಕೆಲಸವನ್ನು ಮೊದಲು ಬಿಡುತ್ತಾನೆ. ಮಗ ಜನಮೇಜಯನನ್ನು ಪಟ್ಟದಲ್ಲಿ ಕೂರಿಸಿ ತಾನು ಸುಭದ್ರ ಕೋಟೆಯೊಳಗೆ‌ ಸೇರುತ್ತಾನೆ. ಇಂಥ ಪರಿಸ್ಥಿತಿಯಲ್ಲಿ ಪರೀಕ್ಷಿತನನ್ನು ಕೊಲ್ಲುವಲ್ಲಿ ತಕ್ಷಕ ಆರು ಬಾರಿ ವಿಫಲನಾಗುತ್ತಾನೆ. ಕೊನೆಗೆ ಹುಳದ ರೂಪ ಧರಿಸಿ ಹಣ್ಣಿನೊಳಗೆ ಸೇರುತ್ತಾನೆ ತಕ್ಷಕ. ತನ್ನ ಸುಭದ್ರ ಕೋಟೆಯೊಳಗೆ ಫಲ ಸೇವನೆ ವೇಳೆ ಆ ಹಣ್ಣನ್ನು ಕಚ್ಚಿದ ಕೂಡಲೇ ಹುಳದ ರೂಪದ ಸರ್ಪರಾಜ ತನ್ನ ನಿಜರೂಪ ತಾಳಿ ಪರೀಕ್ಷಿತನ್ನು ಕೊಲ್ಲುತ್ತಾನೆ.

‘ಪುಳು’ವಿನಲ್ಲಿ ಕುಟ್ಟನ್ (ಮಮ್ಮುಟ್ಟಿ) ಪರೀಕ್ಷಿತನಂತೆ ಗರ್ವಿಷ್ಟ ಮತ್ತು ಕೋಪಿಷ್ಟ. ತನ್ನ ಕಾರನ್ನು ಹಿಂದೆ ಸರಿಸಿ ನಿಲ್ಲಿಸುವಾಗ ಆ ಜಾಗದಲ್ಲಿ ಇದ್ದ ನಾಯಿಯನ್ನು ಸೆಕ್ಯುರಿಟಿ ಗಾರ್ಡ್ ಓಡಿ ಬಂದು ಜಾಗ ಕದಲಿಸದಿದ್ದರೆ ಅದು‌ ಕಾರಿನಡಿಗೆ ಬೀಳುತ್ತಿತ್ತು. ಕುಟ್ಟನ್ ಅದನ್ನೆಲ್ಲ ಗಮನಿಸದ ನಿವೃತ್ತ ಪೊಲೀಸ್. ಪತ್ನಿಯ ಸಾವಿನ ನಂತರ ಇನ್ನೊಂದು ಮದುವೆಯಾಗಲು ಒಲ್ಲದ ಆತ ಮಗನ ಪಾಲಿಗೆ ಶಿಸ್ತಿನ ಪೋಷಕ. ಶಾಲೆಯಿಂದ ಬಂದ‌ ಮಗ ಬೂಟನ್ನು ಸ್ಟ್ಯಾಂಡಲ್ಲಿಯೇ‌ ಸರಿಯಾಗಿ ಇಡಬೇಕು. ಯೂನಿಫಾರ್ಮನ್ನು ತೆಗೆದು‌ ತೊಳೆಯುವ ಬಟ್ಟೆ ಹಾಕುವ ಬುಟ್ಟಿಯಲ್ಲೇ ಸರಿಯಾಗಿ ಹಾಕಬೇಕು. ಯಾರ್ಯಾರೋ ಮಕ್ಕಳ ಜತೆ ಆಡುತ್ತಾ ಸಮಯ ಹಾಳು ಮಾಡಬಾರದು ಎಂಬೆಲ್ಲ ನಿಯಮಗಳನ್ನು‌ ಮಗನ ಮೇಲೆ ಹೇರುವಾತ.

ಇವೆಲ್ಲ ವಿವರಗಳು ಕುಟ್ಟನ್‌ ವ್ಯಕ್ತಿತ್ವ ಚಿತ್ರಣಕ್ಕಾಗಿ. ಅವನ ಮೇಲೆ ಈ ಹಿಂದೆಯೇ ಒಬ್ಬ ಗುಂಡು ಹಾರಿಸಿರುತ್ತಾನೆ. ಹೀಗಿದ್ದಾಗ ಒಂದು ದಿನ ವ್ಯವಹಾರ‌ ನಿಮಿತ್ತ ರೆಸಾರ್ಟ್‌ಗೆ ಹೋಗಿರುತ್ತಾನೆ. ಅಲ್ಲಿ‌ ಸಂಜೆ ಸ್ನಾನದ ವೇಳೆ ಮೂರ್ಛೆ ತಪ್ಪುತ್ತಾನೆ. ವೈದ್ಯರು ಪರೀಕ್ಷಿಸಿ ನೋಡಿದಾಗ ದೇಹದಲ್ಲಿ ಕಾರ್ಬನ್ ಮೋನಾಕ್ಸೈಡ್ ಅಂಶ ಪತ್ತೆಯಾಗುತ್ತದೆ. ಅರ್ಥಾತ್ ಅದೊಂದು ವ್ಯವಸ್ಥಿತ‌‌ ಕೊಲೆ ಸಂಚು. ಎರಡನೇ ಬಾರಿ ಲಿಫ್ಟಿನಲ್ಲಿ ವಿಷಾನಿಲ ಸ್ಪ್ರೇ ಮಾಡಿ‌ ಕೊಲ್ಲುವ ಪ್ರಯತ್ನ ನಡೆಯುತ್ತದೆ.

ಆತನ ಸಂಶಯ ಅದೇ ಅಪಾರ್ಟ್‌ಮೆಂಟಿನಲ್ಲಿ ಬಂದು ವಾಸವಿರುವ‌ ತಂಗಿಯ ಗಂಡನ ಮೇಲೆ ನೆಡುತ್ತದೆ. ಕುಟ್ಟನ್ ಬ್ರಾಹ್ಮಣ, ತಂಗಿ‌ ಶೂದ್ರನನ್ನು ಮದುವೆಯಾಗಿದ್ದ ಕಾರಣ ಅವಳ ಜತೆಗೆ ಇವನಿಗೆ ಮಾತಿಲ್ಲ. ಭಾವ ಕೇಪಿ‌ ಪ್ರತಿಭಾವಂತ ನಾಟಕ ಕಲಾವಿದ. ಇಂಥ ವಾತಾವರಣದಲ್ಲಿ ಜಾತಿಗಳ ನಡುವಿನ ಕಂದಕದ ಪ್ರಸ್ತಾಪ ಆಗಾಗ್ಗೆ ಬರುತ್ತದೆ. ಎರಡನೆಯ ಕೊಲೆ ಯತ್ನದ ನಂತರ ಆತ ಉಬ್ಬಸಕ್ಕಾಗಿ ಬಳಸುವ ಮಾಸ್ಕ್‌ನ ಔಷಧದಲ್ಲಿ ವಿಷ ಪತ್ತೆಯಾಗುತ್ತದೆ. ಪರೀಕ್ಷಿತ ಮಹಾರಾಜನಂತೆಯೇ ಕೋಪದ‌ ಕೈಗೆ ಬುದ್ಧಿ ಕೊಡುವ‌ ಕುಟ್ಟನ್ ತಂಗಿ-ಭಾಮೈದರಿಬ್ಬರನ್ನೂ ಕೊಂದೇ ಬಿಡುತ್ತಾನೆ. ಈ ಎಲ್ಲವುಗಳಿಂದ ದೂರವಾಗಿ ತನ್ನ ಊರಿನಲ್ಲಿ ಅಮ್ಮನ ಜತೆ ಕಾಲ ಕಳೆಯಲು ಹೋದಾಗ ತಕ್ಷಕನಂತೆ ಕೊಲೆಗಾರ ಅಲ್ಲಿಗೆ ಬಂದು ಕುಟ್ಟನ್‌ನ ಬಲಿ ಪಡೆಯುತ್ತಾನೆ. ಸಮೀಕ್ಷನ ಮಗ ಶೃಂಗಿಯಂತೆ ಆ ಕೊಲೆಗಾರನ ಕೋಪಕ್ಕೆ‌ ಆತನ ತಂದೆಯ ಜತೆಗಿನ ಕುಟ್ಟನ್ ಸಂಬಂಧ ಕಾರಣ. ಕೊಲೆಗಾರನ ತಂದೆ ಕಬೀರನನ್ನು ಕುಟ್ಟನ್ ಪೊಲೀಸ್ ಸೇವೆಯಲ್ಲಿದ್ದಾಗ ಬಾಂಬ್ ಸ್ಫೋಟದ ಕೇಸಲ್ಲಿ ಬಂಧಿಸಿರುತ್ತಾನೆ. ಎಂಟು ವರ್ಷ ಜೈಲುವಾಸ ಅನುಭವಿಸಿದ ಆತ ಜೈಲಲ್ಲೇ ಕೊನೆ ಉಸಿರೆಳೆದಿರುತ್ತಾನೆ.

ಓದುವಾಗ ಥ್ರಿಲ್ಲರ್ ಅಂಶವಿರುವ ಕತೆಯ ಥ್ರಿಲ್ಲಿಂಗ್ ಅಂಶಗಳನ್ನೆಲ್ಲ ಸಿನಿಮಾದ ನಿಧಾನಗತಿ‌ ಕೊಂದಿದೆ. ನಡುನಡುವೆ ಬರುವ ಪರೀಕ್ಷಿತ ಮಹಾರಾಜನ ಕತೆ ಕಲಾತ್ಮಕವೇನೋ‌ ಹೌದು. ಆದರೆ ಅದರ ಔಚಿತ್ಯ ಸಿನಿಮಾ ನೋಡುವ ಹೊತ್ತಿಗೆ ತಾಳೆಯಾಗುವುದಿಲ್ಲ. ಕೆಳಜಾತಿಯ ಮೇಲೆ‌‌‌‌‌ ಮೇಲ್ವರ್ಗದ ದಬ್ಬಾಳಿಕೆಯನ್ನು‌ ಹೇಳುವ ಪ್ರಯತ್ನ ಅಲ್ಲಲ್ಲಿ‌ ನಡೆದಿದೆ. ಆದರೆ ಆರಂಭದಲ್ಲೇ ಸಬ್ ರಿಜಿಸ್ಟ್ರಾರ್‌ಗೆ ಕಪಾಳಮೋಕ್ಷ ಮಾಡುವ ಕಲಾವಿದ ಕೇಪಿ ತಾನೇ ಜಾತಿನಿಂದನೆ ಕೇಸು ದಾಖಲಿಸುತ್ತೇನೆ ಎಂದು ಬ್ಲ್ಯಾಕ್‌ಮೇಲ್ ಮಾಡುವ ಸಂದರ್ಭದಲ್ಲಿ ಯಾರ‌‌‌ ಮೇಲೆ ಯಾರ ದಬ್ಬಾಳಿಕೆ ಎಂಬ ಗೊಂದಲ ಕಾಡುತ್ತದೆ. ತಂಗಿ ಭಾರತಿಯನ್ನು ಕುಟ್ಟನ್‌ನ ಮೂಲ ಮನೆಯಲ್ಲೇ ಕೇಪಿ ಕೈ ಹಿಡಿದು ಎದೆಯುಬ್ಬಿಸಿ ಸ್ಲೋ ಮೋಶನ್ನಲ್ಲಿ ಬರುವ ದೃಶ್ಯ‌ ನಿರ್ದೇಶಕಿ ಜಾತೀಯತೆಗೆ ಹೊಡೆದ ಸೆಡ್ಡು. ಆದರೆ ಸುಶಿಕ್ಷಿತೆ ಹಾಗೂ ಜಾತಿಯನ್ನೂ ಮೀರಿ‌ ಮದುವೆಯಾದ ಭಾರತಿ ಗಂಡನ ಹಿಂದೆ ಹೆಜ್ಜೆ ಹಾಕಿದರೆ ಗಂಡನ ಆಶ್ರಯದೊಳಗೆ ಬಂಧಿಯಾದಂತೆ ಎಂಬುದು ಸ್ವತಃ ಮಹಿಳೆಯಾದ ರತೀನಾ ಗಮನಕ್ಕೆ ಬರಲಿಲ್ಲ.

ಎಪ್ಪತ್ತರ ಪ್ರಾಯದ ಮಮ್ಮುಟ್ಟಿಯ ತಂಗಿಯ ಪಾತ್ರಕ್ಕೆ ನಲವತ್ತರ ಪಾರ್ವತಿ (ಭಾರತಿ ಪಾತ್ರಧಾರಿ) ಹೆಂಡತಿಯಾಗಿ ಇಪ್ಪತ್ತೈದೂ ಆಗಿರದ ಆತ್ಮೀಯಾ ರಂಜನ್ ಆಯ್ಕೆಯೇ ಪುರುಷ ಪ್ರಧಾನ ಸೂಪರ್ ಸ್ಟಾರ್ ಗಿರಿಯ ಪೋಷಣೆ ಎಂಬ ಪ್ರಶ್ನೆ ನಿರ್ದೇಶಕಿಗೆ ಮೂಡಲಿಲ್ಲ. ಮಮ್ಮುಟ್ಟಿಯ ಅಭಿನಯ ಪ್ರಕಾಶಿಸುವ ಹೊರತಾಗಿ ಇತರೆ ನಟ-ನಟಿಯರ ಸಾಮರ್ಥ್ಯ ಒರೆಗೆ ಹಚ್ಚಲು‌ ಚಿತ್ರಕಥೆಯಲ್ಲಿ ಆಸ್ಪದವೇ ಇಲ್ಲ. ಮೌನವನ್ನೇ ಹೆಚ್ಚಾಗಿ ಆಶ್ರಯಿಸಿ ಬರೆದ ಸಂಭಾಷಣೆಕಾರನಿಗೆ ಈ ಸಿನಿಮಾ ಅತಿ ಸುಲಭದ ಕೆಲಸ ಕೊಟ್ಟಿದೆ. ದೃಶ್ಯಂ, ಬ್ರೋ ಡ್ಯಾಡಿಯಂಥ ಸಿನಿಮಾಗಳಲ್ಲಿ‌ ಮೋಹನ್‌ಲಾಲ್ ತಂದೆಯ ಪಾತ್ರದಲ್ಲಿ ರಂಜಿಸಿದ್ದರೆ, ತಂದೆಯ ಪಾತ್ರದಲ್ಲೇ ಮಮ್ಮುಟ್ಟಿ ಪ್ರೇಕ್ಷನನ್ನು ಬೋರು ಹೊಡೆಸಿ ಬೋರಲು ಬೀಳಿಸುತ್ತಾರೆ. ಥ್ರಿಲ್ಲರ್ ಅಂಶ ಮಾತ್ರವಲ್ಲದೆ ಸಾಮಾಜಿಕ ನ್ಯಾಯ ಮತ್ತು ಮಹಿಳಾ ಪ್ರಾಧಾನ್ಯತೆ ವಿಚಾರದಲ್ಲಿ ಏನೆಲ್ಲ ಮಾಡಬಾರದು ಎಂಬುದಕ್ಕೆ ‘ಪುಳು’ ಸ್ಪಷ್ಟ ಉದಾಹರಣೆ.

LEAVE A REPLY

Connect with

Please enter your comment!
Please enter your name here