ಜಡೇಶ್ ಕೆ ಹಂಪಿ ನಿರ್ದೇಶನದ ‘ಲ್ಯಾಂಡ್ ಲಾರ್ಡ್’ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಪ್ರಮುಖ ಖಳನಾಗಿ ನಟಿಸುತ್ತಿದ್ದಾರೆ. ಅವರ ‘ದಿ ರೂಲರ್’ ಪಾತ್ರದ ಟೀಸರ್ ಬಿಡುಗಡೆಯಾಗಿದೆ. ಇಲ್ಲಿ ದುನಿಯಾ ವಿಜಯ್ ಅವರಿಗೆ ರಾಜ್ ಬಿ ಶೆಟ್ಟಿ ಮುಖಾಮುಖಿಯಾಗಿದ್ದಾರೆ.
‘ಕಾಟೇರ’ ಸಿನಿಮಾಗೆ ಕತೆ ರಚಿಸಿದ್ದ ಜಡೇಶ್ ಕೆ ಹಂಪಿ ‘ಲ್ಯಾಂಡ್ ಲಾರ್ಡ್’ ಸಿನಿಮಾದಲ್ಲಿ ಅಂಥದ್ದೇ ನೆಲದ ಕತೆ ಹೇಳಲು ಹೊರಟಿದ್ದಾರೆ. ದುನಿಯಾ ವಿಜಯ್ ನಾಯಕನಟನಾಗಿ ನಟಿಸುತ್ತಿರುವ ಚಿತ್ರದಲ್ಲಿ ಖಳ ಯಾರು ಎನ್ನುವ ಬಗ್ಗೆ ಕುತೂಹಲವಿತ್ತು. ಇದೀಗ ವಿಶೇಷ ಟೀಸರ್‌ನೊಂದಿಗೆ ಚಿತ್ರತಂಡ ಈ ಪಾತ್ರ ಮತ್ತು ಪಾತ್ರಧಾರಿಯನ್ನು ಪರಿಚಯಿಸಿದ್ದಾರೆ. ರಾಜ್ ಬಿ ಶೆಟ್ಟಿ ಚಿತ್ರದ ಪ್ರಮುಖ ಖಳನಾಗಿ ನಟಿಸುತ್ತಿದ್ದಾರೆ. ಅವರ ‘ದಿ ರೂಲರ್’ ಪಾತ್ರದ ಟೀಸರ್ ಬಿಡುಗಡೆಯಾಗಿದೆ. ಇಲ್ಲಿ ದುನಿಯಾ ವಿಜಯ್ ಅವರಿಗೆ ರಾಜ್ ಬಿ ಶೆಟ್ಟಿ ಮುಖಾಮುಖಿಯಾಗಿದ್ದಾರೆ.
ಪಾತ್ರದ ಬಗ್ಗೆ ಮಾತನಾಡುವ ರಾಜ್ ಶೆಟ್ಟಿ, ‘ನಾನು ಈ ಚಿತ್ರ ಒಪ್ಪಿಕೊಳ್ಳಲು ಮೊದಲ ಕಾರಣ ನಿರ್ದೇಶಕ ಜಡೇಶ್. ನನ್ನದು ಶೋಷಕ ವರ್ಗದಲ್ಲಿರುವಂತಹ, ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುವಂತಹ ವ್ಯಕ್ತಿಯ ಪಾತ್ರ. ಕೋಲಾರ ಭಾಷೆಯಲ್ಲಿ ನನ್ನ ಸಂಭಾಷಣೆ ಇರುತ್ತದೆ. ದುನಿಯಾ ವಿಜಯ್ ಅವರ ಜೊತೆಗೆ ಮೊದಲ ಬಾರಿಗೆ ನಟಿಸಿದ್ದೇನೆ. ಬಹಳ ಖುಷಿಯಾಗಿದೆ’ ಎನ್ನುತ್ತಾರೆ. ರಾಜ್ ಅವರ ಬಗ್ಗೆ ಮೆಚ್ಚುಗೆಯ ಮಾತನಾಡುವ ದುನಿಯಾ ವಿಜಯ್, ‘ನಾನು ಇಪ್ಪತ್ತು ವರ್ಷಗಳ ಹಿಂದೆ ‘ನನ್ತಾವ ಇರೋದು ಎರಡೇ ಎರಡು ಟೊಮೆಟೊ, ಹದಿನೈದೇ ರೂಪಾಯಿ ಕಾಣ್ಣಣ್ಣ’ ಅಂತ ಬಂದೆ. ರಾಜ್ ಬಿ ಶೆಟ್ಟಿ ಅವರು ಒಂದು ಮೊಟ್ಟೆ ಇಟ್ಟುಕೊಂಡು ಬಂದವರು. ಆಗ ನಮ್ಮನ್ನು ಎಷ್ಟು ಜನ ಆಡಿಕೊಂಡಿದ್ದಾರೆ. ಕೊನೆಗೆ ನಾನೇ ‘ಸರ್ವೈವರ್’, ಅವರೇ ‘ರೂಲರ್’ ಆಗಿದ್ದೀವಿ’ ಎನ್ನುತ್ತಾರೆ.
ಈ ಹಿಂದೆ ದರ್ಶನ್ ಅವರಿಗೆ ‘ಸಾರಥಿ’ ಸಿನಿಮಾ ನಿರ್ಮಿಸಿದ್ದ ಕೆ.ವಿ.ಸತ್ಯಪ್ರಕಾಶ್ ಮತ್ತು ಹೇಮಂತ್ ಗೌಡ ಕೆ.ಎಸ್ ‘ಲ್ಯಾಂಡ್ ಲಾರ್ಡ್’ ನಿರ್ಮಿಸುತ್ತಿದ್ದಾರೆ. ರಚಿತಾರಾಮ್ ಚಿತ್ರದ ನಾಯಕನಟಿ. ಭಾವನಾ ರಾವ್ ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾಸ್ತಿ, ಶ್ರೀಕಾಂತ್ ಮತ್ತು ಮಂಜುನಾಥ್ ಸಂಭಾಷಣೆ, ಅಜನೀಶ್ ಲೋಕನಾಥ್ ಸಂಗೀತ, ಸ್ವಾಮಿ ಜೆ ಗೌಡ ಛಾಯಾಗ್ರಹಣ ಚಿತ್ರಕ್ಕಿದೆ. 2026ರ ಜನವರಿ 23ರಂದು ಸಿನಿಮಾ ತೆರೆಕಾಣಲಿದೆ.











