ಜನಪ್ರಿಯ ಕಿರುತೆರೆ ಸರಣಿ ‘ಅಶ್ವಿನಿ ನಕ್ಷತ್ರ’ದೊಂದಿಗೆ ಕನ್ನಡಿಗರಿಗೆ ಚಿರಪರಿಚಿತರಾದವರು ಕಾರ್ತೀಕ್‌ ಜಯರಾಂ (ಜೆಕೆ) ಮತ್ತು ಮಯೂರಿ. ಕಲರ್ಸ್‌ ಕನ್ನಡ ವಾಹಿನಿ ನೂತನ ವರ್ಷಕ್ಕೆಂದು ರೂಪಿಸಿದ ವಿಶೇಷ ಶೋನಲ್ಲಿ ಇವರಿಬ್ಬರೂ ಪಾಲ್ಗೊಂಡಿದ್ದು, ಜೆಕೆ ನೆನಪುಗಳನ್ನು ಸ್ಮರಿಸಿದ್ದಾರೆ.

ಇಲ್ಲಿಗೆ ಒಂಬತ್ತು ವರ್ಷಗಳ ಹಿಂದೆ 2012ರಲ್ಲಿ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಮೂಡಿಬಂದಿತ್ತು ‘ಅಶ್ವಿನಿ ನಕ್ಷತ್ರ’ ಧಾರಾವಾಹಿ. ಮಾಮೂಲಿ ಅತ್ತೆ – ಸೊಸೆ ಫ್ಯಾಮಿಲಿ ಡ್ರಾಮಾಗಳ ಮಧ್ಯೆ ವೀಕ್ಷಕರಿಗೆ ಈ ಸರಣಿ ವಿಶೇಷವೆನಿಸಿದ್ದು ಹೌದು. ಸುಮಾರು ಎರಡೂವರೆ ವರ್ಷ ಮೂಡಿಬಂದ ಸರಣಿಯೊಂದಿಗೆ ಜೆಕೆ ಮತ್ತು ಮಯೂರಿ ಕನ್ನಡಿಗರಿಗೆ ಚಿರಪರಿಚಿತರಾದರು. ಇಲ್ಲಿನ ಜನಪ್ರಿಯತೆ ಅವರನ್ನು ಸಿನಿಮಾರಂಗಕ್ಕೆ ಕರೆದೊಯ್ದಿತು. ಅಲ್ಲಿಂದ ಮುಂದೆ ಇಬ್ಬರು ಹಲವಾರು ಸಿನಿಮಾಗಳಲ್ಲಿ ನಟಿಸುತ್ತಿದ್ಧಾರೆ. ನಟ ಜೆಕೆ ಮುಂಬಯಿಗೆ ಹೋಗಿ ‘ಸಿಯಾ ಕೆ ರಾಮ್‌’ ಹಿಂದಿ ಸರಣಿಯಲ್ಲಿ ರಾವಣನ ಪಾತ್ರ ನಿರ್ವಹಿಸಿದರು. ನಟಿ ಮಯೂರಿ ಅವರೀಗ ಸುಂದರ ಗಂಡುಮಗುವಿನ ತಾಯಿ. ಕಲರ್ಸ್‌ ಕನ್ನಡ ವಾಹಿನಿ ನೂತನ ವರ್ಷಕ್ಕೆಂದು ರೂಪಿಸಿರುವ ವಿಶೇಷ ಶೋನಲ್ಲಿ ಇಬ್ಬರೂ ಪಾಲ್ಗೊಂಡಿದ್ದಾರೆ. ನಟ ಜೆಕೆ ಇನ್‌ಸ್ಟಾಗ್ರಾಮ್‌ನಲ್ಲಿ ಮಯೂರಿ ಜೊತೆಗಿನ ಫೋಟೊದೊಂದಿಗೆ ‘ಅಶ್ವಿನಿ ನಕ್ಷತ್ರ’ ಸೀರಿಯಲ್‌ನ ನೆನಪುಗಳನ್ನು ಹಂಚಿಕೊಂಡಿದ್ದಾರೆ.

“ಅಶ್ವಿನಿ ನಕ್ಷತ್ರ ಸೀರಿಯಲ್‌ ಆಗ ಕನ್ನಡ ಕಿರುತೆರೆಯಲ್ಲಿ ದೊಡ್ಡ ಕ್ರೇಝ್‌ ಸೃಷ್ಟಿಸಿತ್ತು. ಜನರು ಈಗಲೂ ನನ್ನನ್ನು ಅಲ್ಲಿನ ನನ್ನ ‘ಜೆಕೆ’ ಪಾತ್ರದೊಂದಿಗೇ ಗುರುತಿಸುತ್ತಾರೆ. ಮಯೂರಿ ಮತ್ತು ನಾನು ಅಂದಿನ ನೆನಪುಗಳನ್ನು ಮೆಲುಕು ಹಾಕಿದೆವು” ಎನ್ನುತ್ತಾರೆ ನಟ ಕಾರ್ತೀಕ್‌ ಜಯರಾಂ. ಇನ್ನು ಸಿನಿಮಾ ಕೆಲಸಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ ಜೆಕೆ ಅಭಿನಯದ ‘ಐರಾವನ್‌’ ಕನ್ನಡ ಸಿನಿಮಾ ತೆರೆಗೆ ಸಿದ್ಧವಾಗಿದೆ. ಅವರ ಮತ್ತೊಂದು ಸಿನಿಮಾ ‘ಕಾಡ’ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದೆ. ಮಗು ಆರೈಕೆಗೆ ಸಿನಿಮಾದಿಂದ ವಿರಾಮ ಪಡೆದಿದ್ದ ಮಯೂರಿ ಈಗ ಶೂಟಿಂಗ್‌ಗೆ ಮರಳಲು ಸಜ್ಜಾಗಿದ್ದಾರೆ. “ಅಶ್ವಿನಿ ನಕ್ಷತ್ರ ನನ್ನ ಬದುಕಿಗೆ ತಿರುವು ನೀಡಿದ ಪ್ರಾಜೆಕ್ಟ್‌. ಮತ್ತೆ ಅಂಥದ್ದೇ ಪ್ರಾಜೆಕ್ಟ್‌ ಸಿಕ್ಕರೆ ಕಿರುತೆರೆಯಲ್ಲಿ ನಟಿಸಲು ತುದಿಗಾಲಲ್ಲಿ ನಿಂತಿದ್ದೇನೆ” ಎನ್ನುತ್ತಾರವರು.

ನಟಿ ಮಯೂರಿ ಪುತ್ರನ ಜೊತೆ ಜೆಕೆ

LEAVE A REPLY

Connect with

Please enter your comment!
Please enter your name here