ಕನ್ನಡ ಚಿತ್ರರಂಗದ ಖ್ಯಾತ ನಟ ನರಸಿಂಹರಾಜು ಅವರ ಜನ್ಮಶತಮಾನೋತ್ಸವದ ನಿಮಿತ್ತ ಅವರ ಕುಟುಂಬದವರು ಹಾಗೂ ಅಭಿಮಾನಿಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಕಿರುಚಿತ್ರ ಹಾಗೂ ನಾಟಕ ಸ್ಪರ್ಧೆಗಳ ಆಯೋಜನೆ ಈ ಪಟ್ಟಿಯಲ್ಲಿವೆ. ನಾಡಿದ್ದು ಜುಲೈ 24ರಂದು ಮುಖ್ಯಮಂತ್ರಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

2023, ಜುಲೈ 23 – ಕನ್ನಡ ಚಿತ್ರರಂಗ ಕಂಡ ಜನಪ್ರಿಯ ಹಾಸ್ಯನಟ ನರಸಿಂಹರಾಜು ಅವರ ನೂರನೇ ಹುಟ್ಟುಹಬ್ಬ. ಅವರ ನೆನಪಿನಲ್ಲಿ ‘ನರಸಿಂಹರಾಜು ಜನ್ಮಶತಮಾನೋತ್ಸವ’ ಶೀರ್ಷಿಕೆಯಡಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ನರಸಿಂಹರಾಜು ಕುಟುಂಬದವರು ಹಾಗೂ ಅಭಿಮಾನಿಗಳು ಈ ಯೋಜನೆ ಹಮ್ಮಿಕೊಂಡಿದ್ದಾರೆ. ಯುವಜನತೆಗೆ ನರಸಿಂಹರಾಜು ಅವರ ಸಿನಿಮಾ – ಬದುಕು – ಸಾಧನೆ ಕುರಿತು ಮಾಹಿತಿ ನೀಡುವುದು ಮೊದಲ ಯೋಜನೆ. ಹನ್ನೆರಡು ಜನರ ತಂಡ ಎರಡು ಟ್ರಕ್‌ ಮೂಲಕ ಕರ್ನಾಟಕದ ಮೂವತ್ತೆರಡು ಜಿಲ್ಲೆಗಳ ಆಯ್ದ ಕಾಲೇಜುಗಳಿಗೆ ಭೇಟಿ ನೀಡುತ್ತಾರೆ. ಆ ಟ್ರಕ್‌ನಲ್ಲಿ LED ಅಳವಡಿಸಿ, ಆ ಮೂಲಕ ವಿದ್ಯಾರ್ಥಿಗಳಿಗೆ ನರಸಿಂಹರಾಜು ಅವರ ಬಗೆಗಿನ ವೀಡಿಯೋ ತುಣುಕುಗಳನ್ನು ತೋರಿಸಲಾಗುತ್ತದೆ. ಆನಂತರ ನರಸಿಂಹರಾಜು ಅವರ ಕುರಿತು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕೇಳಲಾಗುತ್ತದೆ.

PAN ಇಂಡಿಯಾ ಹಾಸ್ಯ ಕಿರುಚಿತ್ರೋತ್ಸವ ಆಯೋಜನೆ ಮಾಡಲು ಉದ್ದೇಶಿಸಲಾಗಿದೆ. ನವೆಂಬರ್‌, ಡಿಸೆಂಬರ್‌ನಲ್ಲಿ ದೊಡ್ಡಮಟ್ಟದ ಸಮಾರಂಭ ಆಯೋಜಿಸಿ, ಕಾರ್ಯಕ್ರಮದಲ್ಲಿ ಕಿರುಚಿತ್ರೋತ್ಸವ ವಿಜೇತರಿಗೆ ಬಹುಮಾನ ನೀಡಲಾಗುತ್ತದೆ. ಕರ್ನಾಟಕದಾದ್ಯಂತ ವಿವಿಧ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹಾಸ್ಯನಾಟಕಗಳ ಸ್ಪರ್ಧೆ ಆಯೋಜಿಸಲೂ ಆಲೋಚಿಸಲಾಗಿದೆ. ನರಸಿಂಹರಾಜು ಅವರು ಅಭಿನಯಿಸಿರುವ ನಾಟಕಗಳಲ್ಲಿ ವಿದ್ಯಾರ್ಥಿಗಳು ಅಭಿನಯಿಸಬೇಕು. ಈ ನಾಟಕಗಳಲ್ಲಿ ಪಾಲ್ಗೊಂಡ ಮಕ್ಕಳಿಗೆ ನೆನಪಿನ ಕಾಣಿಕೆ ನೀಡಲಾಗುವುದು.

ರಾಜ್ಯದ ಪ್ರಸಿದ್ಧ ವೃತ್ತಿ ರಂಗಭೂಮಿ ನಾಟಕ ಕಂಪನಿಗಳ ಮೂಲಕ ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ಜನಪ್ರಿಯ ನಾಟಕಗಳನ್ನು ಆಯೋಜಿಸುವ ಯೋಜನೆಯಿದೆ. ಹೀಗೆ ಇನ್ನೂ ಹಲವಾರು ಕಾರ್ಯಕ್ರಮಗಳ ಮೂಲಕ ನರಸಿಂಹರಾಜು ಅವರ ಜನ್ಮ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ತಯಾರಿ ನಡೆಯುತ್ತಿದೆ. ಕಾರ್ಯಕ್ರಮಗಳಿಗೆ ಜುಲೈ 24 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ನರಸಿಂಹರಾಜು ಅವರ ಪುತ್ರಿ, ನಟಿ ಸುಧಾ ನರಸಿಂಹರಾಜು ಹಾಗೂ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವ ನರಸಿಂಹರಾಜು ಅವರ ಮೊಮ್ಮಕ್ಕಳಾದ ಅರವಿಂದ್ ಹಾಗೂ ಅವಿನಾಶ್ ಮಾಹಿತಿ ನೀಡಿದ್ದಾರೆ.

LEAVE A REPLY

Connect with

Please enter your comment!
Please enter your name here