ಜ್ಞಾನಪೀಠ ಪುರಸ್ಕೃತ ಖ್ಯಾತ ಮಲಯಾಳಂ ಸಾಹಿತಿ ಎಂ ಟಿ ವಾಸುದೇವನ್‌ ನಾಯರ್‌ ನಿನ್ನೆ (ಡಿಸೆಂಬರ್‌ 25) ಅಗಲಿದ್ದಾರೆ. ಸಾಹಿತ್ಯ ಲೋಕದಲ್ಲಿ ಮಾತ್ರವಲ್ಲ ಮಲಯಾಳಂ ಸಿನಿಮಾ ಜಗತ್ತಿನಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದವರು ಎಂಟಿವಿ. ಸುಮಾರು ಐವತ್ತೈದು ಚಿತ್ರಗಳಿಗೆ ಸ್ಕ್ರಿಪ್ಟ್ ರಚಿಸಿರುವ ಅವರು ಏಳು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

‘ಸ್ನೇಹತ್ತಿಂಡೆ ಮುಖಂಗಳ್’ ಎಂಬ ಸಣ್ಣಕತೆಯನ್ನು ಚಿತ್ರಕತೆ ಮಾಡುವ ಮೂಲಕ ಸಿನಿಮಾ ಜಗತ್ತಿಗೆ ಕಾಲಿಟ್ಟವರು ಎಂ ಟಿ ವಾಸುದೇವನ್ ನಾಯರ್. 1965ರಲ್ಲಿ ಎಂಟಿವಿ ಬರೆದ ‘ಮುರಪ್ಪೆಣ್ಣ್’ ಎಂಬ ಕತೆ ಸಿನಿಮಾವಾಯ್ತು. ಅವಿಭಕ್ತ ಕುಟುಂಬದೊಳಗಿನ ಪ್ರೀತಿಯ ಸಂಬಂಧಗಳನ್ನು ತೋರಿಸಿದ ಸಿನಿಮಾ ಇದಾಗಿತ್ತು. ಪ್ರೇಮ್ ನಜೀರ್, ಮಧು, ಉಮ್ಮರ್, ಶಾರದ, ಸುಕುಮಾರಿ, ಪಿ ಜೆ ಆಂಥೋನಿ ಈ ಚಿತ್ರದಲ್ಲಿ ನಟಿಸಿದ್ದರು. 1965ರ ಕ್ರಿಸ್‌ಮಸ್ ದಿನದಂದು ಬಿಡುಗಡೆಯಾದ ಈ ಚಿತ್ರವು ಕಮರ್ಷಿಯಲ್ ಹಿಟ್ ಆಗಿತ್ತು.

ಎಂಟಿಯವರು ನಿರ್ದೇಶಿಸಿದ ಮೊದಲ ಸಿನಿಮಾ ‘ನಿರ್ಮಾಲ್ಯಂ’. ‘ವೇದನಯುಡೆ ಪೂಕ್ಕಳ್’ ಎಂಬ ಕಥಾಸಂಕಲನದಿಂದ ಆಯ್ದ ‘ಪಳ್ಳಿವಾಳುಂ ಕಾಲ್ಚಿಲಂಬುಂ’ ಎಂಬ ಸಣ್ಣಕತೆಯನ್ನು ಆಧರಿಸಿದ ಸಿನಿಮಾ ‘ನಿರ್ಮಾಲ್ಯಂ’. ಹಸಿವು ಮತ್ತು ಬಡತನದಿಂದ ಕಂಗೆಟ್ಟ ವೆಳಿಚ್ಚಪ್ಪಾಡ್‌ನ ಬದುಕಿನ ಕತೆ ‘ನಿರ್ಮಾಲ್ಯಂ’ ಸಿನಿಮಾದ ಕಥಾವಸ್ತು. ಪಿ ಜೆ ಆಂಟನಿ, ವೆಳಿಚ್ಚಪ್ಪಾಡ್ ಪಾತ್ರ ನಿರ್ವಹಿಸಿದರೆ ಆತನ ಪತ್ನಿಯಾಗಿ ಕವಿಯೂರ್ ಪೊನ್ನಮ್ಮ ಅವರ ನಟನೆ ಭಾರೀ ಮೆಚ್ಚುಗೆ ಗಳಿಸಿತ್ತು. ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ವೆಳಿಚ್ಚಪ್ಪಾಡ್ ತನ್ನ ಹಣೆಯನ್ನು ಕತ್ತಿಯಿಂದ ಕೊಯ್ದು ದೇವಸ್ಥಾನಕ್ಕೆ ಓಡಿಹೋಗಿ ವಿಗ್ರಹದ ಮುಂದೆ ಉಗುಳುವ ದೃಶ್ಯ ಆ ಕಾಲಕ್ಕೆ ಸಿನಿಮಾರಂಗದಲ್ಲಿ ವಿಭಿನ್ನ ಮತ್ತು ಕ್ರಾಂತಿಕಾರಿ ಬೆಳವಣಿಯಾಗಿತ್ತು. 1973ರಲ್ಲಿ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ, ಪಿ ಜೆ ಆಂಟನಿ ಅವರ ನಟನೆಗಾಗಿ ರಾಷ್ಟ್ರಪ್ರಶಸ್ತಿ ಮತ್ತು ವರ್ಷದ ಅತ್ಯುತ್ತಮ ಚಿತ್ರ ಎಂಬ ರಾಜ್ಯ ಪ್ರಶಸ್ತಿಯೂ ‘ನಿರ್ಮಾಲ್ಯಂ’ ಸಿನಿಮಾಗೆ ಲಭಿಸಿದೆ.

ಮುರಪ್ಪೆಣ್ಣ್(1965), ಪಗಲ್‌ಕಿನಾವ್ (1966), ಇರುಟ್ಟಿಂಡೆ ಆತ್ಮಾವ್ (1967), ನಗರಮೇ ನನ್ನಿ(1967) ಅಸುರವಿತ್ತ್(1968), ನಿಳಲಾಟ್ಟಂ, ಓಳವುಂ ತೀರವುಂ,ಮಾಪ್ಪುಸಾಕ್ಷಿ , ಕುಟ್ಯೇಟ್ಟತ್ತಿ, ವಿತ್ತುಗಳ್, ಮಂಞ್, ನಿರ್ಮಾಲ್ಯಂ, ಕನ್ಯಾಕುಮಾರಿ, ಪಾತಿರಾವುಂ ಪಗಲ್ ವೆಳಿಚ್ಚವುಂ, ಬಂಧನಂ , ಏಕಾಂಕಿನಿ, ನೀಲ ತಾಮರ, ಇಡವಳಿಯೆಲೆ ಪೂಚ್ಚ ಮಿಂಡಾ ಪೂಚ್ಚ, ವಿಲ್ಕಾನುಂಡ್ ಸ್ವಪ್ನಂಗಳ್, ತೃಷ್ಣ, ವಳರ್‌ತ್ತು ಮೃಗಗಳ್, ಓಪ್ಪೋಳ್, ವಾರಿಕ್ಕುಝಿ, ಎವಿಡೆಯೋ ಒರು ಶತ್ರು, ಆರೂಢ, ಅಡಿಯೊಳುಕ್ಕುಗಳ್, ಉಯರಂಗಳ್, ಆಳ್ ಕೂಟ್ಟತ್ತಿಲ್ ತನಿಯೇ ಅಕ್ಷರಂಗಳ್, ಇಡನಿಲಗಳ್, ಅನುಬಂಧಂ, ರಂಗಂ, ನಖಕ್ಷತಂಗಳ್, ಪಂಚಾಗ್ನಿ, ಕೊಚ್ಚುತೆಮ್ಮಾಡಿ, ಅಭಯಂ ತೇಡಿ, ಋತುಬೇಧ, ಅಮೃತಂ ಗಮಯ, ಅರಣ್ಯಕಂ, ವೈಶಾಲಿ, ಅತಿರ್‌ತಿಗಳ್, ಒರು ವಡಕ್ಕನ್ ವೀರಗಾಥ, ಅಸುರವಿತ್ತ್, ಉತ್ತರಂ, ಪೆರುಂತಚ್ಚನ್, ಮಿಥ್ಯಂ, ತಾಳ್‌ವಾರಂ, ವೇನಲ್ ಕಿನಾವುಗಳ್ , ಸದಯಂ, ಸುಕೃತಂ, ಪರಿಣಯಂ, ದಯಾ,ಎನ್ನ್ ಸ್ವಂತಂ ಜಾನಕಿಕುಟ್ಟಿ, ತೀರ್ಥಾಟನಂ, ಕೇರಳ ವರ್ಮ ಪಳಶ್ಶೀರಾಜ, ಕಥವೀಡು, ಏಳಾಮತ್ತೆ ವರವ್ – ಇವು ಎಂಟಿ ವಾಸುದೇವನ್ ನಾಯರ್ ಅವರ ಚಿತ್ರಕಥಾ ರಚನೆಯ ಪ್ರಮುಖ ಸಿನಿಮಾಗಳು. ಬಂಧನಂ, ಕಡವ್,ಮಂಞ್, ನಿರ್ಮಾಲ್ಯಂ, ಒರು ಚೆರುಪುಂಜಿರಿ, ತಗಳಿ- ಇವು ಅವರು ನಿರ್ದೇಶಿಸಿದ ಸಿನಿಮಾಗಳು.

ಅವರ ಆರಂಭಿಕ ಕಥೆ ಮತ್ತು ಕಾದಂಬರಿಗಳಂತೆ, ಎಂಟಿವಿ ಅವರ ಸಿನಿಮಾಗಳು ಅಳಿಯಕಟ್ಟು ಮತ್ತು ಕುಸಿಯುತ್ತಿರುವ ಕುಟುಂಬ ವ್ಯವಸ್ಥೆಯ ಬಗ್ಗೆ ಇರುವುದಾಗಿದೆ. ಎಂಟಿ ಅವರು ತಮ್ಮ ಚಲನಚಿತ್ರಗಳ ಮೂಲಕ ವಳ್ಳುವನಾಡಿನ ಹಬ್ಬಗಳು, ಆಚರಣೆಗಳು ಮತ್ತು ನಂಬಿಕೆಗಳನ್ನು ತೋರಿಸಿದ್ದರು. ಅವರ ಚಿತ್ರಕತೆಗಳು ಪ್ರಸ್ತುತ ಪ್ರದೇಶಕ್ಕೆ ಅಷ್ಟೇ ಸೀಮಿತವಾಗಿರದೆ ಪುರಾಣಗಳು, ದಂತಕಥೆಗಳು ಮತ್ತು ಜಾನಪದ ಕಥೆಗಳನ್ನೂ ಒಳಗೊಂಡಿದ್ದವು. ಅವಗಣನೆ, ತಪ್ಪುಕಲ್ಪನೆಯಿಂದ ಬಿಂಬಿತವಾಗಿರುವ ಪಾತ್ರಗಳನ್ನು ಎಂಟಿ ತೆರೆಯ ಮೇಲೆ ತಂದಿದ್ದರು, ವೈಶಾಲಿ, ವಡಕ್ಕನ್ ವೀರಗಾಥ, ಪೆರುಂತ್ತಚ್ಚನ್ ಸಿನಿಮಾಗಳಲ್ಲಿ ನಾವು ಇದನ್ನು ಕಾಣಬಹುದು. ಮನುಷ್ಯ ಎದುರಿಸುತ್ತಿರುವ ಭಾವನಾತ್ಮಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಸಿನಿಮಾ ಚಿತ್ರಕತೆಯ ಮೂಲಕ ತೆರೆಗೆ ತಂದ ಸಾಹಿತಿಯಾಗಿದ್ದರು ಎಂಟಿ ವಾಸುದೇವನ್ ನಾಯರ್.

LEAVE A REPLY

Connect with

Please enter your comment!
Please enter your name here