ಇಂತಹ ವಿಷಯವನ್ನು ಆರಿಸಿಕೊಳ್ಳುವುದೆಂದರೆ ಸಾಮಾನ್ಯ ಅಲ್ಲ. ಆ ವಿಷಯಕ್ಕಾಗಿ ನಿರ್ದೇಶಕಿ ಇಂದು ಅವರ ಮುಂದಿನ ಚಿತ್ರಗಳಿಗಾಗಿ ನಾವು ಕಾಯಬಹುದು. ನಮ್ಮ ಗೌರಿಯ ವಿಷಯವನ್ನಿಟ್ಟುಕೊಂಡು ನೆರೆ ರಾಜ್ಯದವರು ತೆಗೆದ ಚಿತ್ರ ಎನ್ನುವ ಕಾರಣಕ್ಕೂ ಇದನ್ನು ನೋಡಬಹುದು. ’19(1)a’ ಮಲಯಾಳಂ ಸಿನಿಮಾ DisneyPlus Hotstarನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಸೆಪ್ಟೆಂಬರ್ 5, 2017ರ ರಾತ್ರಿ. ಟೀವಿಯಲ್ಲಿ ಯಾವುದೋ ಕಾರ್ಯಕ್ರಮ ನೋಡುತ್ತಿದ್ದೆ. ಗೌರಿ ಲಂಕೇಶ್ ಅವರ ಮೇಲೆ ಗುಂಡು ಹಾರಿಸಿ ಅವರನ್ನು ಹತ್ಯೆ ಮಾಡಲಾಗಿದೆ ಎನ್ನುವ ಸುದ್ದಿ ಸ್ಕ್ರೋಲ್ ಆಗಲು ಶುರುವಾಯಿತು. ತಕ್ಷಣಕ್ಕೆ ಆ ಕಡೆ ಗಮನ ಹೋಗಲಿಲ್ಲ. ಆದರೆ ನಿಧಾನವಾಗಿ ಆ ಸುದ್ದಿ ಕಣ್ಣಿಗೆ, ಆಮೇಲೆ ಮನಸ್ಸಿಗೆ ಇಳಿಯಿತು. ತಕ್ಷಣಕ್ಕೆ ಕೈಕಾಲು ಆಡಲಿಲ್ಲ. ನ್ಯೂಸ್ ಚಾನಲ್ ಹಾಕಿದೆ. ಅಲ್ಲಿ ಆ ಸುದ್ದಿ ಬೆಳೆಯುತ್ತಾ ಹೋಯಿತು. ತಕ್ಷಣ ಸ್ನೇಹಿತನೊಬ್ಬನಿಗೆ ಮೆಸೇಜ್ ಮಾಡಿದ್ದೆ. ಸುದ್ದಿಯಿಂದ ಅವನೂ ಆಘಾತಗೊಂಡಿದ್ದ. ಅವನ ಜೊತೆ ಮಾತನಾಡುವಾಗ ಸುದ್ದಿ ವಾಸ್ತವಕ್ಕಿಳಿಯಿತು. ಲಂಕೇಶ್ ಅವರು ತೀರಿಕೊಂಡ ನಂತರ ಗೌರಿ ಅವರು ಸಂಪಾದಕರಾಗಿ ‘ಲಂಕೇಶ್ ಪತ್ರಿಕೆ’ಯನ್ನು ಹೊರತಂದಿದ್ದರು. ಆ ಮೊದಲ ಸಂಚಿಕೆಯನ್ನು ಓದಿದ ದಿನ ಸಹ ಹೀಗೆಯೇ ಒಂದು ಸಾವು ನನ್ನ ಆಳಕ್ಕಿಳಿದಿತ್ತು. ಅದು ಲಂಕೇಶ್ ಅವರ ಸಾವು. ಇಂದು ಮಗಳ ಸಾವು ಹಾಗೆಯೇ ನೀರವತೆಯನ್ನು ಹೊತ್ತು ತಂದಿತ್ತು. ಲಂಕೇಶ್ ಅವರದು ವಯೋ ಸಹಜ ಸಾವು, ಗೌರಿಯವರದು ಹತ್ಯೆ. ಈ ಹತ್ಯೆ ಹುಟ್ಟಿಸಿದ ತಲ್ಲಣ ಇನ್ನೂ ಆಳವಾದದ್ದು. ಇಂತಹುದೇ ಮತ್ತೊಂದು ‘ಗೌರಿ’ಯ ಹತ್ಯೆಯನ್ನು ಕುರಿತ ಚಿತ್ರ 19(1)a.

ಮೊದಲಿಗೆ ಏನಿದು 19(1)a?
ಭಾರತ ಸಂವಿದಾನದ ಈ ಭಾಗ ಭಾರತದ ಎಲ್ಲ ನಾಗರೀಕರೂ ವಾಕ್‌ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಹೊಂದಿದ್ದಾರೆ ಎಂದು ಹೇಳುತ್ತದೆ. ಸಂವಿದಾನ ದಯಪಾಲಿಸಿದ ಈ ಹಕ್ಕನ್ನು ಅಧಿಕಾರ ಮತ್ತು ಅಧಿಕಾರ ಹೊಂದಿದ್ದೇವೆ ಎಂದುಕೊಂಡಿರುವ ವ್ಯಕ್ತಿ ಅಥವಾ ಸಂಸ್ಥೆಗಳು ಕಸಿದುಕೊಳ್ಳುವ ಕಥೆ ಇದು. ಚಿತ್ರ ಶುರುವಾಗುವಾಗ ಗೌರಿ (ಗೌರಿ ಶಂಕರ್) ಒಂದು ಅಂಗಡಿಯಿಂದ ಕಟ್ಟಂ ಚಾಯ್ ತೆಗೆದುಕೊಂಡು, ಸಿಗರೇಟ್ ಒಂದನ್ನು ಹಚ್ಚಿಕೊಂಡು ಸೇದುತ್ತಿರುತ್ತಾನೆ. ದಾರಿಯಲ್ಲೇ ಒಂದು ಖಾಲಿ ಪ್ಲ್ಯಾಸ್ಟಿಕ್ ಬಾಟಲ್ ಬಿದ್ದಿರುತ್ತದೆ. ಅದನ್ನು ತೆಗೆದು ಕಸದ ಬುಟ್ಟಿಗೆ ಹಾಕುತ್ತಾನೆ. ದೂರದಲ್ಲಿ ಕೇಳಿಸುವ ಬೈಕ್ ಸದ್ದು ನಿಧಾನವಾಗಿ ಹತ್ತಿರಾಗುತ್ತದೆ, ಜೋರಾಗುತ್ತದೆ. ಬೈಕಿನ ದೀಪದ ಬೆಳಕು ಗೌರಿಯ ಮುಖದ ತುಂಬಾ. ಕತ್ತಲಿನಲ್ಲಿರುವ ಬೈಕ್ ಪಿಲಿಯನ್ ಸವಾರ ಬಂದೂಕನ್ನು ಎತ್ತಿ ಗೌರಿಯೆಡೆಗೆ ಗುರಿಯಿಡುತ್ತಾನೆ. ನಂತರ ಕತ್ತಲು, ‘ಢಂ’ ಎನ್ನುವ ಸದ್ದು. ಬಂದೂಕು ಹಾರಿಸಿದವನ ಮುಖಕ್ಕಿದ್ದ ಕತ್ತಲು ಈಗ ತೆರೆಯನ್ನು ತುಂಬಿಕೊಂಡಿದೆ. ಚಿತ್ರ ಹೀಗೆ ಶುರುವಾಗುತ್ತದೆ.

ತನ್ನ ಅಭಿಪ್ರಾಯವನ್ನು ನಿರ್ಭಯದಿಂದ ವ್ಯಕ್ತಪಡಿಸಲು ಒಂದಿನಿತೂ ಹಿಂದೆಮುಂದೆ ನೋಡದ ಗೌರಿಶಂಕರ ಇರುವ ಇದೇ ಜಗತ್ತಿನಲ್ಲಿ ಇನ್ನೊಬ್ಬಳಿದ್ದಾಳೆ, ಹೆಸರಿಲ್ಲದ ಪೆಣ್‌ಕುಟ್ಟಿ – ಚಿತ್ರದ ಟೈಟಲ್ ಸಹ ಅವಳನ್ನು ಪೆಣ್‌ಕುಟ್ಟಿ ಎಂದೇ ಕರೆಯುತ್ತದೆ – ಅವಳು ಯಾವುದೇ ಅಭಿಪ್ರಾಯವನ್ನೂ ಹೊಂದದೆ, ಜಗತ್ತು ತನ್ನಿಂದ ಏನನ್ನು ಅಪೇಕ್ಷಿಸುತ್ತದೆಯೋ ಅದರಂತೆಯೇ ಬದುಕುವವಳು. ಅಭಿಪ್ರಾಯವೇ ಇಲ್ಲದವರು, ಅದನ್ನೆಂದೂ ಅಭಿವ್ಯಕ್ತಿಸುವ ಸಾಹಸವನ್ನೇ ಮಾಡದವರು ಅನಾಮಿಕರಾಗಿಯೇ ಉಳಿಯುತ್ತಾರೆ ಎನ್ನುವುದನ್ನು ಕಥೆಗಾರ್ತಿ, ನಿರ್ದೇಶಕಿ ಹೇಳಬಯಸುತ್ತಿದ್ದಾರೆಯೆ? ಗೊತ್ತಿಲ್ಲ. ಈ ಪಾತ್ರಕ್ಕೆ ನಿತ್ಯಾಮೆನನ್ ನೂರಕ್ಕೆ ನೂರು ಸರಿಯಾಗಿ ಹೊಂದುತ್ತಾರೆ.

ಅವಳ ಅಪ್ಪನ ಜೆರಾಕ್ಸ್ ಅಂಗಡಿ ಮತ್ತು ಒಂದು ಸ್ಕೂಟರ್ ಅವಳ ಪಾಲಿಗೆ ಬಂದಿದೆ. ಇನ್ನೊಂದು ಮಾತನಾಡದೆ ಅವಳನ್ನು ನಿರ್ವಹಿಸುತ್ತಾ ಹೋಗುತ್ತಾಳೆ. ಕಾಮ್ರೇಡ್‌ ಒಬ್ಬನ ಬಳಿ ಅವಳು ಹೇಳುತ್ತಾಳೆ, ‘ಈ ಎರಡೂ ಇನ್ನೆಷ್ಟು ಕಾಲ ನಡೆಯುತ್ತದೋ ಗೊತ್ತಿಲ್ಲ..’ ಮನೆಯಲ್ಲಿ ಅವಳು ಮತ್ತು ಅವಳ ತಂದೆ ಇಬ್ಬರೇ. ಹೆಂಡತಿಯ ಸಾವಿಗೆ ತಾನು ಪರೋಕ್ಷ ಕಾರಣವೇನೋ ಎನ್ನುವ ಗಿಲ್ಟ್, ಕಾರಣ ಅಥವಾ ನೆಪ ಅವಳ ತಂದೆಯನ್ನು ಎಲ್ಲಾ ಲೌಕಿಕದಿಂದ ವಿಮುಕ್ತನನ್ನಾಗಿಸಿದೆ. ಬೆಳಗ್ಗೆ ತಿಂಡಿ, ಆಮೇಲೆ ತನ್ನಂತೆಯೇ ಕೆಲಸಗಳ್ಳನ ಜೊತೆಯಲ್ಲಿ ಐದು ಕಲ್ಲುಗಳ ಆಟ, ಅದು ಬೇಸರವಾದರೆ ಸಣ್ಣ ವಾಕಿಂಗ್, ಮಧ್ಯಾಹ್ನ ಊಟ, ನಿದ್ದೆ, ಟೀವಿ, ಮಗಳು ಬಂದು ರಾತ್ರಿ ಊಟ ತಯಾರಿಸಿದ ಮೇಲೆ ರಾತ್ರಿ ಊಟ. ಅಪ್ಪ ಮಗಳ ನಡುವೆ ಒಂದು ನಿರಂತರ ಮೌನ.

ಈ ಪೆಣ್‌ಕುಟ್ಟಿ ಬೆಳಗ್ಗೆದ್ದು, ಮನೆಯ ಕೆಲಸ ಮುಗಿಸಿ ಅಂಗಡಿಗೆ ಹೋದರೆ ಅಲ್ಲಿ ಆಗಾಗ ಕೆಡುವ ಕಂಪ್ಯೂಟರ್, ಪದೇಪದೇ ಕೈಕೊಡುವ ವಿದ್ಯುತ್ ನಡುವೆ ಡೀಟಿಪಿ ಮಾಡುವ, ಜೆರಾಕ್ಸ್ ಪ್ರತಿ ತೆಗೆಯುವ ಕೆಲಸ. ಪಕ್ಕದ ಫ್ಯಾನ್ಸಿ ಸ್ಟೋರಿನಲ್ಲಿ ಕೆಲಸ ಮಾಡುವ ಫಾತಿಮಾ ಇವಳ ಗೆಳತಿ. ಅವಳ ಆ ಏಕತಾನದ ಬದುಕನ್ನು ನಿರ್ದೇಶಕಿ ಇಂದು ವಿಎಸ್ ಅಷ್ಟೇ ನಿಧಾನವಾಗಿ, ಆ ಏಕತಾನತೆ ನಮ್ಮನ್ನೂ ತಾಕುವ ಹಾಗೆ ಕಟ್ಟಿಕೊಟ್ಟಿದ್ದಾರೆ. ಇವಳ ಶಾಂತಕೊಳದಂತಹ ಬದುಕಿಗೆ ಬಂದು ಬೀಳುವ ಕಲ್ಲು ಗೌರಿಯ ಹಸ್ತಪ್ರತಿ. ಒಂದು ಮುಂಜಾನೆ, ದಾರಿಯಲ್ಲಿ ಸಾಗುವ ಕ್ರಿಶ್ಚಿಯನ್ನರ ಧಾರ್ಮಿಕ ಮೆರವಣಿಗೆಯ ನಡುವಿನಿಂದ ಹಾದು, ಇವಳ ಅಂಗಡಿಗೆ ಬರುವ ಗೌರಿ ಇದರ ಪ್ರತಿ ತೆಗೆದಿಡಿ, ಸಂಜೆ ತೆಗೆದುಕೊಳ್ಳುತ್ತೇನೆ ಎನ್ನುತ್ತಾನೆ. ‘ಸ್ವಲ್ಪ ತಡವಾದರೂ ಕಾಯುವಿರಾ’ ಎಂದು ವಿನಂತಿಸಿಕೊಳ್ಳುತ್ತಾನೆ. ಯಾವುದೇ ಮಾತಿಗೆ ಎದುರಾಡಿಯೇ ಗೊತ್ತಿಲ್ಲದಂತಿರುವ ಈ ಪೆಣ್‌ಕುಟ್ಟಿ ರಾತ್ರಿ ಬಹಳ ಸಮಯದವರೆಗೂ ಕಾಯುತ್ತಲೇ ಇರುತ್ತಾಳೆ. ಬರುವೆನೆಂದ ಆತ ಬರುವುದೇ ಇಲ್ಲ. ಗಡಬಡಿಸಿ ಎದ್ದವಳು ಮನೆಗೆ ಹೊರಡುತ್ತಾಳೆ. ಅವಳ ಮಟ್ಟಿಗೆ ಅದೊಂದು ದೊಡ್ಡ ಆರ್ಡರ್. ಆ ದುಡ್ಡು ಬಂದರೆ ಕಂಪ್ಯೂಟರ್ ನ ರಿಪೇರಿ ದುಡ್ಡು ಬೇರೆ ಕೊಡಬೇಕು ಅವಳು.

ಆದರೆ ಅವನು ಬರುವುದೇ ಇಲ್ಲ. ಹಸ್ತಪ್ರತಿ ಕೊಟ್ಟು ಅವನು ಹೋಗುವಾಗ ಬಾಗಿಲ ಬಳಿ ಧಾವಿಸುವ ಅವಳು. ‘ಬೈಂಡಿಗ್ ಕೂಡಾ ಮಾಡಬೇಕೆ?’ ಎನ್ನುತ್ತಾಳೆ. ‘ನಿಮಗೆ ಇಷ್ಟವಾದರೆ ಹಾಗೆಯೇ ಮಾಡಿ’ ಎನ್ನುವ ಆತ ಒಂದು ದೈವೀಕವಾದ ನಗೆಯನ್ನು ಬೀರಿ ಹೊರಟಿರುತ್ತಾನೆ. ಆ ನಗುವನ್ನು, ಆ ಮಾತನ್ನು ಅವಳು ಮರೆಯಲಾಗುವುದೇ ಇಲ್ಲ. ಬಹುಶಃ ಅವನು ನಿರ್ಧಾರವೊಂದನ್ನು ಅವಳ ಪಾಲಿಗೇ ಬಿಡುವುದರಿಂದಲೇ ಅವಳ ಮಟ್ಟಿಗೆ ಅವನು ವಿಶೇಷವಾಗುತ್ತಾನೆಯೇ?
ಗೆಳತಿ ಫಾತಿಮಾಳೊಡನೆ ಅವಳ ಅಂಗಡಿಯಲ್ಲಿ ಹರಟೆ ಹೊಡೆಯುತ್ತಾ ಊಟ ಮಾಡುತ್ತಿರುವಾಗ ಯಾರೋ ಗ್ರಾಹಕಳು ಬಂದಳು ಎಂದು ಫಾತಿಮಾ ಎದ್ದು ಹೋಗುತ್ತಾಳೆ. ಅಲ್ಲೇ ಇದ್ದ ರಿಮೋಟ್ ಕೈಗೆತ್ತಿಕೊಳ್ಳುವ ಅವಳು ಟೀವಿ ಚಾನಲ್ ಬದಲಾಯಿಸುತ್ತಾಳೆ. ಅಲ್ಲಿ ಅದೇ ಗೌರಿಶಂಕರ್ ಫೋಟೋ, ಅವನು ಹತ್ಯೆಯಾದ ಸುದ್ದಿ ಸ್ಕ್ರೋಲ್ ಆಗುತ್ತಿರುತ್ತದೆ. ಸುದ್ದಿ ಓದುವಾಕೆ ‘ಗೌರಿಶಂಕರ್ ಒಬ್ಬ ಲೇಖಕ ಮತ್ತು ಹೋರಾಟಗಾರ ಎಂದು ಹೇಳುತ್ತಾ, ಕರ್ನಾಟಕದಲ್ಲಿ ನಡೆದ ಬರಹಗಾರ ನಂಜುಡಪ್ಪನವರ ಕೊಲೆಗೂ, ಈ ಕೊಲೆಗೂ ಇರುವ ಸಾದೃಶ್ಯವನ್ನು ಹೇಳುತ್ತಿರುತ್ತಾಳೆ. ಸುದ್ದಿ ಕೇಳಿ ಇವಳನ್ನು ಒಂದು ನೀರವತೆ ಆವರಿಸಿಕೊಳ್ಳುತ್ತದೆ. ಊಟ ಬಿಟ್ಟು ಸುಮ್ಮನೆ ಎದ್ದು ತನ್ನ ಅಂಗಡಿಗೆ ನಡೆಯುತ್ತಾಳೆ. ಅವನ ಹಸ್ತಪ್ರತಿಯನ್ನು ಹುಡುಕುತ್ತಾಳೆ. ಅದನ್ನು ಕೈಗೆತ್ತಿಕೊಳ್ಳುತ್ತಾಳೆ. ಆ ಘಳಿಗೆಯಿಂದ ಆ ಪದಗಳು ಅವಳ ಸಂಗಾತಿಯಾಗಿ ಬಿಡುತ್ತವೆ. ಒಂದು ದೃಶ್ಯ ಅದನ್ನು ಕಟ್ಟಿಕೊಡುತ್ತದೆ. ಸುತ್ತಮುತ್ತಲೂ ಕತ್ತಲು. ಕ್ಯಾಮೆರಾ ಅವಳಿಂದ ದೂರಕ್ಕೆ ಸಾಗುತ್ತದೆ. ಪರದೆಯ ತುಂಬಾ ಕತ್ತಲಲ್ಲಿ ನಿಂತ ಅವಳೊಬ್ಬಳೇ ಇದ್ದಾಳೆ. ಮತ್ತು ಅವಳು ಅವನ ಹಸ್ತಪ್ರತಿಯನ್ನು ಎದೆಗಪ್ಪಿಕೊಂಡು ನಿಂತಿದ್ದಾಳೆ. ಆ ನಂತರ ಕದಲಿಕೆಯೇ ಇಲ್ಲದ ಅವಳ ಜಗತ್ತು ಬದಲಾಗಿಬಿಡುತ್ತದೆ. ಅವಳ ಕನಸಿನಲ್ಲಿ ಪ್ರತಿ ರಾತ್ರಿ ಮೋಟರ್‌ಬೈಕ್ ಬರುತ್ತದೆ. ಅವನ ಮೇಲೆ ಪ್ರತಿ ರಾತ್ರಿ ಗುಂಡು ಹಾರುತ್ತದೆ. ಆನಂತರ ಯಾವಾಗ ಅವಳು ವಿಚಲಿತಳಾದರೂ, ಯಾವಾಗ ಅವಳಿಗೆ ಏಕಾಕಿ ಅನ್ನಿಸಿದರೂ ಅವಳು ಅದನ್ನ ಸ್ಪರ್ಶಿಸುತ್ತಾಳೆ, ಅಥವಾ ಅಪ್ಪಿಕೊಳ್ಳುತ್ತಾಳೆ. ಆ ಹಸ್ತಪ್ರತಿ, ಅದರಲ್ಲಿನ ಅಕ್ಷರಗಳು, ಅದರಲ್ಲಿನ ಅವನ ಹೆಸರು ಅವಳನ್ನು ಕಾಯುತ್ತಿರುತ್ತದೆ.

ನೆರೂದಾನನ್ನು ಕುರಿತು ಬಂದ ಒಂದು ಜೀವನಚರಿತ್ರೆಯಲ್ಲಿ ಮಂತ್ರಿಯೊಬ್ಬ ಹೇಳುತ್ತಾನೆ, ‘ಬರಹಗಾರ ಯಾವಾಗಲೂ ಅಪಾಯಕಾರಿ, ಅವನು ಪದಗಳಿಗೆ ಜೀವ ತುಂಬಿಬಿಡುತ್ತಾನೆ.’ ಪದಗಳಿಗೆ ಜೀವತುಂಬುವ, ಸನಾತನ ಧರ್ಮವನ್ನು ಪ್ರಶ್ನಿಸುವ, ಅಂಬೇಡ್ಕರ್‌ವಾದಿ ಗೌರಿಗೂ ಶತ್ರುಗಳಿರುತ್ತಾರೆ. ಅವರಿಗೆ ಅವನ ಮುಂದಿನ ಕೃತಿಯನ್ನು ಕುರಿತು ಅನುಮಾನ, ಆತಂಕ ಇರುತ್ತದೆ. ಅದೇ ಕಾರಣಕ್ಕೆ ಅವನ ಮನೆಯ ಮೇಲೆ ದಾಳಿಯಾಗಿರುತ್ತದೆ. ಬಹುಶಃ ಅವನ ಹಸ್ತಪ್ರತಿಗಾಗಿ ಹುಡುಕಾಟ ನಡೆದಿರುತ್ತದೆ. ಅವನಿಗೆ ಅದನ್ನು ಕಾಪಾಡಬೇಕಿರುತ್ತದೆ. ಅದಕ್ಕಾಗಿಯೇ ಅದರ ಪ್ರತಿ ಮಾಡಿಸಲೆಂದು ಕೊಟ್ಟಿರುತ್ತಾನೆಯೇ? ಹೇಗೋ ಅವನ ಹತ್ಯೆಯ ನಂತರವೂ ಅವನ ಪದಗಳು ಉಳಿದುಕೊಂಡಿರುತ್ತವೆ. ಹತ್ಯೆಗೂ ಮೊದಲು ಅವನು ತನ್ನ ಗೆಳೆಯ ಮತ್ತು ತನ್ನ ಪುಸ್ತಕಗಳ ಪ್ರಕಾಶಕನಿಗೆ ಒಂದು ಮೆಸೇಜ್ ಕಳಿಸಿರುತ್ತಾನೆ, ‘I did what I came to do. My words are safe now. They will speak for themselves’. ಅವನ ಹೊಸ ಪುಸ್ತಕದ ಹೆಸರು, ‘ಕರುಪ್ಪು’ – ಕಪ್ಪು. ಅವನನ್ನು ಯಾರು ಕೊಂದಿರಬಹುದು ಎಂದು ಪೋಲಿಸ್ ಅಧಿಕಾರಿ ಕೇಳುತ್ತಾನೆ. ಆಗ ಪ್ರಕಾಶಕ ‘may be we all – ಬಹುಶಃ ನಾವೆಲ್ಲಾ…’ ಎನ್ನುತ್ತಾನೆ.

ಅವನ ಆ ಕಡೆಯ ಕೃತಿಯನ್ನು ಅಚ್ಚುಹಾಕಿಸಲೆಂದು ಅವಳು ಆ ಪ್ರಕಾಶಕನ ಬಳಿಗೆ ಹೋಗುತ್ತಾಳೆ. ಆದರೆ ಅದೇ ಸಮಯಕ್ಕೆ ತನಿಖೆಗೆಂದು ಆ ಪೋಲಿಸ್ ಅಧಿಕಾರಿ ಬಂದಿರುತ್ತಾನೆ. ಅಧಿಕಾರ ಸ್ಥಾನದ ಬಗ್ಗೆ ಆತಂಕ, ಹೆದರಿಕೆ ಇರುವ ಅವಳು ಅಲ್ಲಿಂದ ವಾಪಸ್ ಬಂದುಬಿಡುತ್ತಾಳೆ. ಟೀವಿಯ ಆಂಕರ್ ಜೊತೆಜೊತೆಗೆ ಅವನ ಅಕ್ಕನ ಮನೆಗೆ ಹೋಗುತ್ತಾಳೆ, ಅಲ್ಲಿ ಅವನು ನಡೆದಾಡಿದ ದಾರಿಯಲ್ಲಿ ನಡೆಯುತ್ತಾಳೆ, ಅವನು ಕೂತಲ್ಲಿ ಕೂರುತ್ತಾಳೆ, ಅಲ್ಲೆಲ್ಲಾ ಅವನನ್ನು ಕಾಣುತ್ತಾಳೆ. ಕಡೆಗೆ ಹೊರಡುವಾಗ ಅವನ ಅಕ್ಕನಿಗೊಂದು ಹಗ್ ಕೊಡುತ್ತಾಳೆ. ಅವನ ಕಡೆಯ ಕೃತಿಗೆ, ಅವನನ್ನು ಈಗ ಪ್ರತಿನಿಧಿಸುತ್ತಿರುವ ಆ ಪದಗಳಿಗೆ ನ್ಯಾಯ ಒದಗಿಸಬೇಕು. ಆದರೆ ಹೇಗೆ? ನಡುರಾತ್ರಿಯಲ್ಲೆದ್ದು ಅಂಗಡಿಗೆ ಬರುವ ಈ ಜೆರಾಕ್ಸ್ ಅಂಗಡಿಯ ಪೆಣ್ಕುಟ್ಟಿ ಅದರ ಜೆರಾಕ್ಸ್ ತೆಗೆದು ಸಂಬಂಧಿಸಿದವರಿಗೆಲ್ಲಾ ಕಳಿಸುತ್ತಾಳೆ. ಅವಳ ಮೂಲಕ ಅವನ ಕೃತಿ ಬೆಳಕನ್ನು ಕಾಣುತ್ತದೆ.

ಚಿತ್ರ ಮುಗಿಯುವಾಗ ರಾತ್ರಿಯಾಗಿದೆ. ಅವಳು ಮನೆಯಲ್ಲಿ ಕುಳಿತಿದ್ದಾಳೆ. ನಿಧಾನಕ್ಕೆ ಬೈಕ್ ಸದ್ದು ಹತ್ತಿರಾಗುತ್ತಿದೆ. ಇಡೀ ಚಿತ್ರದಲ್ಲಿ ನಿರ್ದೇಶಕಿ ಈ ಸದ್ದನ್ನು ಒಂದು ಥೀಮ್‌ನಂತೆ ಬಳಸಿಕೊಂಡಿರುವುದು ಪರಿಣಾಮಕಾರಿಯಾಗಿ ಬಂದಿದೆ. ಚಿತ್ರವನ್ನು ಕುರಿತು ಹೇಳುವ ಮೊದಲು ಚಿತ್ರದ ಕಥೆ ಬರೆದು, ನಿರ್ದೇಶಿಸಿದ ಇಂದು ವಿ.ಎಸ್. ಗೆ ಅಭಿನಂದನೆಗಳನ್ನು ಹೇಳಬೇಕು. ಮೊದಲ ಪ್ರಯತ್ನದಲ್ಲಿ ಇಂತಹ ವಿಷಯವನ್ನು ಆರಿಸಿಕೊಳ್ಳುವುದು ಸುಲಭದ ನಿರ್ಧಾರವಾಗಲೀ, ಸೇಫ್ ನಿರ್ಧಾರವಾಗಲೀ ಅಲ್ಲ.

ಚಿತ್ರದ ಸ್ಫೋಟಕ ವಸ್ತುವನ್ನು ಗಮನಿಸಿದಾಗ ಚಿತ್ರದ ಸಂಭಾಷಣೆ ಅದಕ್ಕೆ ಸರಿಹೊಂದುವಂತೆ ಹೊಮ್ಮುವುದೇ ಇಲ್ಲ. ಮಾತುಗಳು ವಿಷಯವನ್ನು ದಾಟಿಸುತ್ತವೆಯೇ ಹೊರತು, ಮಾತುಗಳ ಆಚೆಗೆ ಏನನ್ನೂ ಹೇಳುವುದೂ ಇಲ್ಲ, ಉಳಿಸುವುದೂ ಇಲ್ಲ. ಇದು ಸಂಭಾಷಣೆಯ ಮಟ್ಟಿಗೂ ನಿಜ, ಚಿತ್ರದ ಮಟ್ಟಿಗೂ ನಿಜ. ನಮಗೆ ನಿಜಜೀವನದಲ್ಲಿನ ‘ಗೌರಿ’ಯೊಡನೆ ಇರುವ ಸಂಬಂಧ ಚಿತ್ರದ ಗೌರಿ ಪಾತ್ರವನ್ನು ಆಳವಾಗಿಸುತ್ತದೆಯೇ ಹೊರತು, ಒಬ್ಬ ಬರಹಗಾರ ಎನ್ನುವುದರ ಆಚೆಗೆ ಅವನ ಯಾವುದೇ ಆಕ್ಟಿವಿಸಂ ಅನ್ನೂ ಚಿತ್ರ ಕಟ್ಟಿಕೊಡುವುದಿಲ್ಲ. ಕಥೆಯೊಂದನ್ನು ಬರೆಯುವಾಗ ಆತ ಆಕ್ಟಿವಿಸ್ಟ್ ಎಂದು ಹೇಳಿದರೆ ಸಾಕು. ಆದರೆ ಸಿನಿಮಾ ಭಾಷೆಯಲ್ಲಿ ಅದನ್ನು ಹೇಳುವಾಗ ಅದಕ್ಕೆ ಪೂರಕವಾಗುವ ದೃಶ್ಯಗಳನ್ನು ಕಟ್ಟಿಕೊಡಬೇಕಾಗುತ್ತದೆ. ಆಶಯ ಮತ್ತು ಅನುಷ್ಠಾನದ ನಡುವೆ ಇರುವ ವ್ಯತ್ಯಾಸ ಚಿತ್ರದಲ್ಲಿ ಹಾಗೆಯೇ ಉಳಿದುಬಿಟ್ಟಿದೆ. ಡೀಟೇಲಿಂಗ್‌ನಲ್ಲಿ ಗೆಲ್ಲುವ ಚಿತ್ರ ಭಾವದಲ್ಲಿ ಸೋಲುತ್ತದೆ. ಅಂಗಡಿ ಬಾಗಿಲು ತೆರೆದ ಹುಡುಗಿ ಕಸ ಗುಡಿಸುವುದು. ಮೀನನ್ನು ಚೊಕ್ಕ ಮಾಡುತ್ತಾ ಉಳಿದ ಭಾಗವನ್ನು ಬೆಕ್ಕಿಗೆ ಹಾಕುವುದು, ಮನೆಗೆ ಬಂದ ಮಗಳ ಗೆಳತಿ ತನ್ನ ಮದುವೆಯ ಸುದ್ದಿ ಹೇಳಿದ ಕೂಡಲೆ ಸೈಲೆಂಟಾಗಿ ತಟ್ಟೆ ಎತ್ತಿಕೊಂಡು ಒಳಗೆ ಹೋಗುವ ಅಪ್ಪ ಇವೆಲ್ಲಾ ಚಿತ್ರದ ವಿವರಗಳನ್ನು ಹೇಳುತ್ತದೆ. ಆದರೆ ದನಿ ಎತ್ತಿದ್ದಕ್ಕಾಗಿ ಹತ್ಯೆಗೆ ಒಳಗಾಗುವ ಪಾತ್ರದ ದುರಂತವನ್ನು ಕಟ್ಟಿಕೊಡುವಲ್ಲಿ ಚಿತ್ರ ಸೋಲುತ್ತದೆ. ಮನೆಯ ಮೇಲೆ ದಾಳಿ ಮಾಡುವಷ್ಟು, ಬರೆದವನನ್ನು ಹತ್ಯೆ ಮಾಡುವಷ್ಟು ವಿಷಯ ಆ ಪುಸ್ತಕದಲ್ಲಾಗಲೀ, ಆತನ ಬರಹದಲ್ಲಾಗಲೀ ಏನಿದೆ ಎನ್ನುವುದನ್ನು ಹೇಳುವಲ್ಲಿ ನಿರ್ದೇಶಕಿ ಸೋಲುತ್ತಾರೆ.

ಇದರ ಜೊತೆಯಲ್ಲಿ ಚಿತ್ರದಲ್ಲಿ ಅನೇಕ ಎಳೆಗಳು ಹಾಗೆಯೇ ಉಳಿದುಬಿಡುತ್ತವೆ. ಚಿತ್ರಕ್ಕೆ ಅವುಗಳಿಂದ ಯಾವುದೇ ಉಪಯೋಗ ಇಲ್ಲ. ಸುಮ್ಮನೆ ಸಮಯ ತಿನ್ನುವುದರ ಹೊರತಾಗಿ ಆ ದೃಶ್ಯಗಳು ಏನನ್ನೂ ಮಾಡುವುದಿಲ್ಲ. ಚಿತ್ರದ ಹಾಡುಗಳ ವಿಷಯಕ್ಕೂ ಇದೇ ಮಾತನ್ನು ಹೇಳಬಹುದು. ಚಿತ್ರದಲ್ಲಿ ಕೆಲವೊಂದು ಮಿಂಚಿನಂತಹ ದೃಶ್ಯಗಳಿವೆ. ಅವನು ಹೆಜ್ಜೆಯಿಟ್ಟಲ್ಲಿ ನಿಂತಲ್ಲಿ, ಕುಳಿತಲ್ಲಿ ನಡೆಯುತ್ತಾ ಅವನನ್ನು ಕಲ್ಪಿಸಿಕೊಳ್ಳುವ ಅವಳು, ಅವನ ಅಕ್ಕನ ಮನೆಗೆ ಬಂದಾಗ ಹಾದಿಯಲ್ಲಿ ನಡೆದು ಬರುತ್ತಾ ಇರುವ ಅವನನ್ನು ಕಲ್ಪಿಸಿಕೊಳ್ಳುತ್ತಾಳೆ. ಅವಳ ಕಲ್ಪನೆಯಲ್ಲಿ ಅವನು ಸ್ವಲ್ಪ ನಿಂತು, ಇನ್ಯಾರೋ ಹಿಂಬಾಲಿಸುತಿದ್ದಾರೋ ಎನ್ನುವಂತೆ ಕತ್ತು ತಿರುಗಿಸಿ ನೋಡುತ್ತಾನೆ. ಅವಳ ಮನಸ್ಸಿನಲ್ಲಿ ಅವನ ಕಥೆ ಬೆಳೆಯುತ್ತಾ ಹೋಗುವ ರೀತಿ ಇದು. ಹಾಗೆ ನೋಡಿದರೆ ನಿತ್ಯಾ ಮೆನನ್ ಮತ್ತು ವಿಜಯ್ ಸೇತುಪತಿ, ಕಥೆಯನ್ನು ಸಹನೀಯವಾಗಿಸುವಲ್ಲಿ ಪಾತ್ರ ವಹಿಸುತ್ತಾರೆ.

ಮೊದಲೇ ಹೇಳಿದ ಹಾಗೆ ಇಂತಹ ವಿಷಯವನ್ನು ಆರಿಸಿಕೊಳ್ಳುವುದೆಂದರೆ ಸಾಮಾನ್ಯ ಅಲ್ಲ. ಆ ವಿಷಯಕ್ಕಾಗಿ ನಿರ್ದೇಶಕಿ ಇಂದು ಅವರ ಮುಂದಿನ ಚಿತ್ರಗಳಿಗಾಗಿ ನಾವು ಕಾಯಬಹುದು. ನಮ್ಮ ಗೌರಿಯ ವಿಷಯವನ್ನಿಟ್ಟುಕೊಂಡು ನೆರೆ ರಾಜ್ಯದವರು ತೆಗೆದ ಚಿತ್ರ ಎನ್ನುವ ಕಾರಣಕ್ಕೂ ಇದನ್ನು ನೋಡಬಹುದು.

LEAVE A REPLY

Connect with

Please enter your comment!
Please enter your name here