ಬಹುತಾರಾಗಣದ ಸೈನ್ಸ್ ಫಿಕ್ಷನ್ ಸಿನಿಮಾ ‘ಮಂಡಲ’ ತೆರೆಗೆ ಬರುತ್ತಿದೆ. ಅಜಯ್ ಸರ್ಪೇಷ್ಕರ್ ನಿರ್ದೇಶನದ ಪ್ರಯೋಗವಿದು. VFX, ಸೌಂಡ್ ಡಿಸೈನ್ ವಿಭಾಗಗಳಲ್ಲಿ ಬಹುಕಾಲ ಕೆಲಸ ಮಾಡಿದ್ದು ನಿರ್ದೇಶಕರಿಲ್ಲಿ ಅನ್ಯಗ್ರಹ, ಹಾರುವ ತಟ್ಟೆಗಳ ಕುರಿತು ಬೆಳಕು ಚೆಲ್ಲಿದ್ದಾರೆ. ಮಾರ್ಚ್ 10ರಂದು ಸಿನಿಮಾ ತೆರೆಕಾಣುತ್ತಿದೆ.
ಸೈನ್ಸ್ ಫಿಕ್ಷನ್ ‘ಮಂಡಲ’ ಸಿನಿಮಾ ತೆರೆಗೆ ಬರುತ್ತಿದೆ. ಹಾಗೆ ನೋಡಿದರೆ ಈ ಸಿನಿಮಾದ ಶೂಟಿಂಗ್ 2018ರಲ್ಲೇ ಪೂರ್ಣಗೊಂಡಿತ್ತು. ಕೋವಿಡ್‌ನಿಂದಾಗಿ ತಾಂತ್ರಿಕ ಕೆಲಸಗಳು ಬಾಕಿ ಉಳಿದಿದ್ದವು. ವಿಶ್ಯುಯೆಲ್ ಎಫೆಕ್ಟ್‌ಗೆ ಹೆಚ್ಚಿನ ಸಮಯ ಹಿಡಿದಿದ್ದರಿಂದ ಸಿನಿಮಾ ತೆರೆಗೆ ಬರುವುದು ನಿಧಾನವಾಗಿತ್ತು. ಇದೀಗ ಸಿನಿಮಾ ಸಿದ್ಧವಾಗಿದ್ದು ಮಾರ್ಚ್ 10ರಂದು ತೆರೆಕಾಣುತ್ತಿದೆ. ಸೈನ್ಸ್ ಫಿಕ್ಷನ್ ಜೊತೆಗೆ ಫ್ಯಾಮಿಲಿ ಡ್ರಾಮಾ ಬರೆಸಿ ಚಿತ್ರಿಸಿರುವುದಾಗಿ ಹೇಳುತ್ತಾರೆ ನಿರ್ದೇಶಕ ಅಜಯ್ ಸರ್ಪೇಷ್ಕರ್.
ಮೂಲತಃ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದ ಅವರು ಸಿನಿಮಾರಂಗದ ಮೇಲಿನ ಅಪಾರ ಪ್ಯಾಶನ್‌ನಿಂದ ವೃತ್ತಿಗೆ ಗುಡ್ ಬೈ ಹೇಳಿ ‘ಮಂಡಲ’ ಕೈಗೆತ್ತಿಕೊಂಡಿದ್ದರು. ಚಿಕ್ಕಂದಿನಿಂದಲೂ ಸಿನಿಮಾ, ಫೋಟೋಗ್ರಫಿಯಲ್ಲಿ ಅಪಾರ ಆಸಕ್ತಿ ಇದ್ದ ಅವರು ಕಿರುಚಿತ್ರಗಳನ್ನು ಮಾಡಿ ವಿಶ್ಯುಯೆಲ್ ಮೀಡಿಯಾ ಬಗ್ಗೆ ಅನುಭವ ಪಡೆದರು. ನಂತರ ‘ಮಂಡಲ’ಕ್ಕೆ ಕತೆ ಮಾಡಿ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಫಸ್ಟ್ ಲುಕ್ ಮೂಲಕ ಗಮನ ಸೆಳೆದಿದ್ದ ‘ಮಂಡಲ’ ಚಿತ್ರದಲ್ಲಿ ಅನಂತ್ ನಾಗ್, ಪ್ರಕಾಶ್ ಬೆಳವಾಡಿ, ಶರ್ಮಿಳಾ ಮಾಂಡ್ರೆ, ಸಂಯುಕ್ತ ಹೊರನಾಡು, ಕಿರಣ್ ಶ್ರೀನಿವಾಸ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಜೆಸ್ಸಿ ಕ್ಲಿಂಟನ್ ಸಂಗೀತ, ರಾಮಿಶೆಟ್ಟಿ ಪವನ್ ಸಂಕಲನ, ಮನೋಹರ್ ಜೋಶಿ ಛಾಯಾಗ್ರಹಣ ಚಿತ್ರಕ್ಕಿದೆ. ಸೈನ್ಸ್ ಫಿಕ್ಷನ್ ಚಿತ್ರಕ್ಕೆ ಬಹುಮುಖ್ಯವಾದ VFX ನಿರ್ವಹಣೆ ಮನೋಜ್ ಬೆಳ್ಳೂರು ಅವರದು. ನಿತಿನ್ ಲುಕೋಸೆ ಸೌಂಡ್ ಡಿಸೈನ್ ಮಾಡಿದ್ದಾರೆ.