ಇತಿಹಾಸ ಆಧಾರಿತ ಸಿನಿಮಾವಾದರೂ ಪ್ರಿಯದರ್ಶನ್ ಅಧ್ಯಯನ ಪೋರ್ಚುಗೀಸರ ಧೋರಣೆ ಮತ್ತು ವಾಸ್ಕೋ ಡ ಗಾಮನ ಕ್ರೌರ್ಯದ ಆಚೆ ಅಷ್ಟಾಗಿ ಚಾಚಿದಂತೆ ಕಾಣುವುದಿಲ್ಲ. ಪ್ರಿಯದರ್ಶನ್ ಹಾಗೂ ಮೋಹನ್ಲಾಲ್ ಜೋಡಿಯ 46ನೆಯ ಸಿನಿಮಾ ‘ಮರಕ್ಕಾರ್’ ಈಗ ಅಮೆಜಾನ್ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮ್ ಆಗುತ್ತಿದೆ.
ಸಾಮೂತ್ತರಿ ರಾಜ ವಿಧಿಸಿರುವ ಷರತ್ತುಗಳು ಪೋರ್ಚುಗಲ್ ದೊರೆಗೆ ಸರಿಕಾಣಲಿಲ್ಲ. ನೀವು ಸಂಪೂರ್ಣ ಶರಣಾಗದಿದ್ದಲ್ಲಿ ಯುದ್ಧ ಸಾರಲು ನಮಗೆ ಯಾವುದೇ ದಾಕ್ಷಿಣ್ಯವಿಲ್ಲ. ಕೋಯಿಕ್ಕೋಡಿನಿಂದ ಕೊಳತ್ತಿರಿಯವರೆಗೆ ವಿಸ್ತರಿಸಿದ ನಿಮ್ಮ ಸಾಮ್ರಾಜ್ಯವನ್ನು ಸುಟ್ಟು ಭಸ್ಮ ಮಾಡಲು ಅರುವತ್ತು ಫಿರಂಗಿಗಳು ಹಾಗೂ ಆರು ಸಾವಿರ ಸೈನಿಕರ ಬಲವಿರುವ ನಮ್ಮ ನೌಕಾಸೇನೆ ಸನ್ನದ್ಧವಾಗಿದೆ. ಕತ್ತರಿಸಿದ ಸಾಮೂತರಿ ರಾಜನ ರುಂಡದ ಮೇಲೆ ನಮ್ಮ ಪತಾಕೆ ಹಾರಾಡಲಿದೆ. ಮಲಾಬಾರಿನ ನಿಮ್ಮ ಹೆಂಗಸರು ನಮ್ಮ ಸೈನಿಕರ ಮಕ್ಕಳನ್ನು ಹೆರಲಿದ್ದಾರೆ. ಇದು ನಡೆಯಬಾರದು ಎಂದಿದ್ದರೆ ಮುಂದಿನ ಹುಣ್ಣಿಮೆಯ ಒಳಗೆ ನಮ್ಮ ಷರತ್ತುಗಳನ್ನು ನೀವು ಒಪ್ಪಿಕೊಳ್ಳತಕ್ಕದ್ದು.
– ವೈಸರಾಯ್ ವಾಸ್ಕೋ ಡ ಗಾಮ.
ನಮ್ಮ ಇತಿಹಾಸ ಪಾಠ ಒಬ್ಬ ಪ್ರವಾಸಿಯಂತೆ ಚಿತ್ರಿಸಿರುವ ವಾಸ್ಕೋ ಡ ಗಾಮ ಈ ರೀತಿ ಫಿರಂಗಿಗಳೊಡನೆ, 6000 ಮಂದಿಯ ಸೇನೆಯೊಡನೆ ಭಾರತ ಪ್ರವೇಶಿಸಿದ ಎಂದು ಹೇಳಲಿಲ್ಲ. ಪ್ರಿಯದರ್ಶನ್ ನಿರ್ದೇಶನದ ಮಲಯಾಳ ಸಿನಿಮಾ ‘ಮರಕ್ಕಾರ್: ಅರಬ್ಬಿ ಕಡಲಿಂತೆ ಸಿಂಹಂ’ ಈ ವಿಚಾರ ಹೇಳುತ್ತದೆ.
ಮಲಾಬಾರಿನ ಕಡಲ ಕಿನಾರೆ ಶತಮಾನಗಳಿಂದ ವ್ಯಾಪಾರದ ಮಹಾದ್ವಾರ. ಏಲಕ್ಕಿ, ಲವಂಗ, ಕಾಳುಮೆಣಸು, ಇತ್ಯಾದಿ ಮಸಾಲೆ ಪದಾರ್ಥಗಳು ಪಾರಂಪರಿಕವಾಗಿ ರಫ್ತಾಗುತ್ತಿದುದು ಅರೇಬಿಯಾಕ್ಕೆ. ಆದರೆ ಹೊರಗಿನವರಾಗಿ ಕಾಲಿಟ್ಟ ಪೋರ್ಚುಗೀಸರು ಬಂದರುಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡು ವ್ಯಾಪಾರ ವಹಿವಾಟಿನಲ್ಲಿ ಏಕಸ್ವಾಮ್ಯ ಸಾಧಿಸಹೊರಟರು. ಈ ನಡೆಗೆ ಪ್ರತಿರೋಧ ತೋರಿದ ಮರಕ್ಕಾರರೆಂಬ ವ್ಯಾಪಾರಿ ಸಮುದಾಯಕ್ಕೂ ಪೋರ್ಚುಗೀಸರಿಗೂ ನಿರಂತರ ತಿಕ್ಕಾಟ ನಡೆಯುತ್ತಲೇ ಇತ್ತು. 16ನೆಯ ಶತಮಾನದಲ್ಲಿ ಕನಿಷ್ಟ ನಾಲ್ಕು ಬಾರಿಯಾದರೂ ಅವರ ನಡುವೆ ಯುದ್ಧ ನಡೆದಿದೆ ಎನ್ನುತ್ತದೆ ಇತಿಹಾಸ. ಪೋರ್ಚುಗೀಸರ ದಾಳಿಯ ಕಾರಣ ಅವರು ನಾಗರಿಕ ಸಮಾಜದಿಂದ ದೂರ ಬದುಕಬೇಕಾಯಿತು.
ಉಳ್ಳವರಿಂದ ಕಸಿದು ಹಸಿದವರಿಗೆ ಅನ್ನ ನೀಡುತ್ತಾ, ಕಡಲ್ಗಳ್ಳನಾಗಿ ಜೀವಿಸುತ್ತಿದ್ದ ನಾಲ್ಕನೆಯ ಕುಂಞಾಲಿ ಮರಕ್ಕಾರನಿಗೆ ಸಾಮೂತರಿ ವಂಶದ ಅರಸ ಸ್ನೇಹ ಹಸ್ತ ಚಾಚಲು ಪೋರ್ಚುಗೀಸರ ಯುದ್ಧಪ್ರಚೋದನೆ ಕಾರಣ. ಬಹುಶಃ ಈ ಸನ್ನಿವೇಶದಿಂದಲೇ ಸಿನಿಮಾ ಆರಂಭಿಸಬೇಕಿತ್ತೇನೋ. ಆದರೆ ನಿರ್ದೇಶಕರು ಕುಂಞಾಲಿಯ ರಾಬಿನ್ ಹುಡ್ ಕತೆಯನ್ನು ಹೇಳಲು ಚಿತ್ರದ ಬರೋಬ್ಬರಿ ಒಂದು ಗಂಟೆ ಮೀಸಲಿರಿಸಿದ್ದಾರೆ. ಸಣ್ಣ ಕುಂಞಾಲಿ ಬೆಳೆದು ಮೋಹನ್ ಲಾಲ್ ಪಾತ್ರದಲ್ಲಿ ಕಾಣಿಸಿಕೊಳ್ಳುವಾಗಲೇ ಸಿನಿಮಾ 40 ನಿಮಿಷ ಓಡಿದೆ.
ಯುವ ಕುಂಞಾಲಿಯ ಪಾತ್ರ ಮೋಹನ್ ಲಾಲ್ ಮಗ ಪ್ರಣವ್ ನಿರ್ವಹಿಸಿರುವ ರೀತಿ ಅಚ್ಚುಕಟ್ಟಾಗಿಯೇ ಇದೆ. ಆದರೆ ಆ ಹೊತ್ತಿನ ಚಿತ್ರಕತೆಗೆ ಯುದ್ಧ ನೌಕೆಯ ನಿಖರತೆ ಬದಲು ಹರಿಗೋಲಿನ ತೇಲುವ ಗುಣವಷ್ಟೇ ಇರುವುದು ಹಿನ್ನಡೆಯಾಗಿದೆ. 40 ವರ್ಷಗಳ ಹಿಂದೆಯೇ ಪೋರ್ಚುಗೀಸರ ಧಾಳಿಗೆ ಕುಂಞಾಲಿಯ ವಂಶ ಸಂಪೂರ್ಣ ನಿರ್ನಾಮವಾಗಿದ್ದ ಕತೆಯನ್ನು ಹೇಳಲೇಬೇಕೆಂಬ ಅನಿವಾರ್ಯವಿದ್ದರೂ ಅದನ್ನು ಅಷ್ಟು ಸುದೀರ್ಘ ಎಳೆಯಬೇಕಿರಲಿಲ್ಲ.
ಐತಿಹಾಸಿಕ ಸಿನಿಮಾಗಳಲ್ಲಿ ಇಬ್ಬರ ನಡುವೆ ಪ್ರೇಮಾಂಕುರ ಆಯಿತೆಂದರೆ ಅದು ಮುಂದೆ ಸಮಸ್ಯೆ ತಂದೊಡ್ಡಲಿದೆ ಎಂಬುದು ಶತಸಿದ್ಧ. ಆದರೆ ಅದನ್ನು ತೀರಾ ನಿರೀಕ್ಷೆಯಂತೆಯೇ ಹೆಣೆಯುವುದು ಈ ಕಾಲಕ್ಕೆ ಒಳ್ಳೆಯ ಚಿತ್ರಕತೆಗಾರಿಕೆ ಅನಿಸಿಕೊಳ್ಳುವುದಿಲ್ಲ. ಮರಕ್ಕಾರನ ಗುಂಪಿನ ಸದಸ್ಯನಾದ ಚೀನಾ ಮೂಲದ ಚಿನ್ನಾಲಿ ಮತ್ತು ಪಾಳೆಗಾರನ ಮಗಳ ಪ್ರೇಮಕತೆ ಬೆನ್ನು ಬೆನ್ನಿಗೆ ಬರುವ ಎರಡು ಹಾಡುಗಳಲ್ಲಿ ಧಾವಂತದಿಂದ ಮುಂದೆ ಸಾಗುತ್ತದೆ. ಸೇನಾಧಿಪತಿಯ ಮಗ ಅದೇ ಹುಡುಗಿಯನ್ನು ಬಯಸುವುದು ಭಾವನೆಗಳಿಗಿಂತ ಹೆಚ್ಚು ಚಿತ್ರಕತೆಗೆ ಅನಿವಾರ್ಯತೆಗೆ.
ಸಿನಿಮಾದ ಪಾತ್ರವರ್ಗ ಬಹಳ ತೂಕದ್ದಾಗಿದೆ. ಅರ್ಜುನ್ ಸರ್ಜಾ, ಸುನೀಲ್ ಶೆಟ್ಟಿಯಂಥ ಸ್ಟಾರ್ ನಟರು ತಮ್ಮ ಪಾಲಿಗೆ ಬಂದುದನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಪಾಲಿಗೆ ಬಂದ ಅವಕಾಶವೇ ಕಡಿಮೆಯಾದಾಗ ಪಾತ್ರಧಾರಿಗಳಿಗೆ ನಡೆಯಲಿರುವ ದಾರಿಯೇ ಕಿರಿದು. ನಲ್ಮೆಯ ತಾಯಿಯಾಗಿ ಸುಹಾಸಿನಿಯದ್ದು ಎಂದಿನಂತೆ ಉತ್ತಮ ನಟನೆ. ಆದರೆ ಆರಂಭದಲ್ಲಿ ಬರುವ ತಾಯಿ, ಸಿನಿಮಾದ ಸಂಕೀರ್ಣತೆಯಿಂದಾಗಿ ಕೊನೆಕೊನೆಗೆ ಪ್ರೇಕ್ಷಕನ ಸ್ಮೃತಿಯಿಂದ ದೂರ ಹೋಗಿರುತ್ತಾರೆ.
ಎಲ್ಲಕ್ಕಿಂತಲೂ ಮುಖ್ಯವಾಗಿ ಸೋತಿರುವುದು ಸೇನಾಧಿಪತಿಯ ಮಗನಾದ ಖಳ ಅಚ್ಯುತನ್ ಪಾತ್ರ. ಕೊಳ್ಳೆಕೋರ ಪೋರ್ಚುಗೀಸರು ಮುಖ್ಯ ಭೂಮಿಕೆಯ ಕಳ್ಳರೇ ಆದರೂ ಸಂಸ್ಥಾನದ ಒಳಗಿನ ಖಳನಾಯಕ ಬೇಕಲ್ಲ. ಆದರೆ ವಿಲನ್ ಅನಂತ ಆರಂಭದಲ್ಲೇ ಮರಕ್ಕಾರನ ವಿರುದ್ಧ ಕತ್ತಿ ಮಸೆಯಲು ಅವನಿಗೆ ಸಕಾರಣವಿಲ್ಲ. ತರ್ಕ ಜೋಡಿಸಲು ಹೊರಟ ಕತೆಗಾರರ ಪ್ರಯತ್ನ ಪೇಲವವಾಗಿದೆ. ಹರೆಯದ ಅಹಂಕಾರದ ದಿನಗಳಲ್ಲಿ ಕೊಡಬೇಕಿದ್ದ ಕಾಸನ್ನು ಭಿಕ್ಷೆಯಂತೆ ಎಸೆದುದಕ್ಕೆ ಕುಂಞಾಲಿ ಮಾತಿನ ಚಾಟಿ ಬೀಸಿರುತ್ತಾನೆ. ಆದರೆ ಆತನೇ ಕುಂಞಾಲಿ ಎಂಬುದು ಆಗ ಯಾರಿಗೂ ತಿಳಿದಿರುವುದಿಲ್ಲ.
ರಾಜ ಅನಾರೋಗ್ಯಪೀಡಿತನಾದಾಗ ರಾಜ್ಯಭಾರ ನಡೆಸುವ ಜವಾಬ್ದಾರಿ ಅಚ್ಯುತನ್ ಮೇಲೆ ಬೀಳುತ್ತದೆ ಎಂದಾಗಲೇ ಮುಂದಿನ ಕತೆಯನ್ನು ಪ್ರೇಕ್ಷಕ ಗ್ರಹಿಸಿಬಿಡಬಹುದು. ದ್ವೇಷ ಕಾರುವ ವಿಲನ್ಗೆ ಅಧಿಕಾರ ಸಿಕ್ಕರೆ ಏನು ಮಾಡಬೇಕು ಎಂಬುದಕ್ಕೆ ಲಾಗಾಯ್ತಿನಿಂದ ಬಂದ ಫಾರ್ಮುಲಾವಿದೆ. ಇಬ್ಬರು ವಿಲನ್ ಗಳು ಸೇರಿ ಒಬ್ಬ ಹೀರೋನ ಮೇಲೆ ಮುಗಿಬೀಳಬೇಕು. ಹಾಗಾಗಿ ಸಾಮೂತರಿಗಳೂ ಪೋರ್ಚುಗೀಸರೂ ಕೈಜೋಡಿಸಿ ಕುಂಞಾಲಿಯ ನಿರ್ನಾಮಕ್ಕೆ ಕಟಿಬದ್ಧರಾಗಲೇಬೇಕು.
ಇತಿಹಾಸ ಆಧಾರಿತ ಸಿನಿಮಾವಾದರೂ ಪ್ರಿಯದರ್ಶನ್ ಅಧ್ಯಯನ ಪೋರ್ಚುಗೀಸರ ಧೋರಣೆ ಮತ್ತು ವಾಸ್ಕೋ ಡ ಗಾಮನ ಕ್ರೌರ್ಯದ ಆಚೆ ಅಷ್ಟಾಗಿ ಚಾಚಿದಂತೆ ಕಾಣುವುದಿಲ್ಲ. ಮರಕ್ಕಾರರ ಯುದ್ಧತಂತ್ರ ತೋರಿಸುವಾಗ ಬೆಂಕಿಯನ್ನು ಅವರು ವಿಶೇಷವಾಗಿ ಬಳಸುತ್ತಿದುದಕ್ಕೆ ಮಾತ್ರ ಸೀಮಿತಗೊಳಿಸಿದಂತಿದೆ. ಇವೆಕ್ಕವುಗಳ ನಡುವೆ ಸಿನಿಮಾಕ್ಕೆ ನೋಡಿಸುವ ಗುಣವಿರುವುದು ಛಾಯಾಗ್ರಹಣದ ಶಕ್ತಿ.
ರೋನಿ ರಫೇಲ್ ಸಂಗೀತ ಚೆನ್ನಾಗಿದೆ. ‘ಇಳವೆಯಿಲ್ ಅಳಗಯಿಲ್ ಒಳುಗುಂ’ ಹಾಡಿಗೆ ಇಳಯರಾಜಾ ಛಾಯೆಯಿದೆ. ತಂತಿವಾದ್ಯಗಳ ಬಳಕೆ ಮತ್ತು ವೇಗದ ತಾಳ ಕೂತಲ್ಲೇ ಕಾಲು ಕುಣಿಸುತ್ತದೆ. ಪುರಾತನ ಸೆಟ್ಗಳನ್ನು ಹಾಕಿದ ಕಲಾ ನಿರ್ದೇಶಕ ಸಾಬೂ ಸಿರಿಲ್ ಪ್ರಯತ್ನ ಮೊದಲಾರ್ಧದಲ್ಲಿ ಅತ್ಯಧ್ಬುತ. ದ್ವಿತೀಯಾರ್ಧದಲ್ಲಿ ಹಾಕಿರುವುದು ಸಿನಿಮಾ ಸೆಟ್ ಎಂದು ತುಂಬಾ ಕಡೆ ಸುಳಿವು ಕೊಡುತ್ತದೆ. ರಶೀದ್ ಅವರ ವಸ್ತ್ರವಿನ್ಯಾಸ ಮಾತ್ರ ಎಲ್ಲೆಡೆಯೂ ಅತ್ಯುತ್ತಮ.
ಪ್ರಿಯದರ್ಶನ್ ಹಾಗೂ ಮೋಹನ್ಲಾಲ್ ಜೋಡಿಯ 46ನೆಯ ಸಿನಿಮಾ ‘ಮರಕ್ಕಾರ್’ ಈಗ ಅಮೆಜಾನ್ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮ್ ಆಗುತ್ತಿದೆ.
ಸಿನಿಮಾ : ಮರಕ್ಕಾರ್: ಅರಬ್ಬಿಕಡಲಿಂತೆ ಸಿಂಹಂ | ನಿರ್ದೇಶನ : ಪ್ರಿಯದರ್ಶನ್ | ನಿರ್ಮಾಣ: ಆ್ಯಂಟನಿ ಪೆರುವಂಬೂರ್ | ತಾರಾಬಳಗ : ಮೋಹನ್ಲಾಲ್, ಪ್ರಣವ್ ಮೋಹನ್ಲಾಲ್, ಸುನೀಲ್ ಶೆಟ್ಟಿ, ಅರ್ಜುನ್ ಸರ್ಜಾ, ಸುಹಾಸಿನಿ, ಮಂಜು ವಾರಿಯರ್, ಕೀರ್ತಿ ಸುರೇಶ್, ನೆಡುಮುಡಿ ವೇಣು, ಸಿದ್ಧಿಕ್