2025 ಮುಗಿದು 2026 ಆರಂಭವಾಗುತ್ತಿರುವ ಹೊತ್ತಿನಲ್ಲಿ ನಿರೀಕ್ಷೆಗಳು ಗರಿಗೆದರಿವೆ. ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಲು ಹತ್ತಾರು ಸಿನಿಮಾಗಳು ಸಾಲುಗಟ್ಟಿರುವುದು ಚಿತ್ರೋದ್ಯಮಕ್ಕೆ ಭರವಸೆ ಮೂಡಿಸಿದೆ.

2026, ಭಾರತೀಯ ಚಿತ್ರರಂಗಕ್ಕೆ ಮಹತ್ವದ ವರ್ಷವಾಗಲಿದೆ. ದೊಡ್ಡ ಸ್ಟಾರ್‌ಕಾಸ್ಟ್‌ ಮತ್ತು ದುಬಾರಿ ಬಜೆಟ್‌ನ ಚಿತ್ರಗಳು ತೆರೆಗೆ ಸಜ್ಜಾಗಿವೆ. ಆಕ್ಷನ್‌ – ಥ್ರಿಲ್ಲರ್‌ಗಳಿಂದ ಹಿಡಿದು ಪೌರಾಣಿಕ – ಐತಿಹಾಸಿಕ ಕಥಾವಸ್ತುವಿನ ಚಿತ್ರಗಳ ಬಗ್ಗೆ ಈಗಾಗಲೇ ಉದ್ಯಮದ ವಿಶ್ಲೇಷಕರು ಮಾತನಾಡತೊಡಗಿದ್ದಾರೆ. ಈ ಚಿತ್ರಗಳು ಸಿನಿಪ್ರೇಮಿಗಳನ್ನೂ ನಿರೀಕ್ಷೆಯಿಂದ ಕಾಯುವಂತೆ ಮಾಡಿವೆ. ನಿತೇಶ್‌ ತಿವಾರಿ ನಿರ್ದೇಶನದ ‘ರಾಮಾಯಣ’, ಶಾರುಖ್‌ ಖಾನ್‌ರ ಆಕ್ಷನ್‌ – ಥ್ರಿಲ್ಲರ್‌ ‘ಕಿಂಗ್‌’, ಯಶ್‌ರ ‘TOXIC’, ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ‘ಲವ್‌ ಅಂಡ್‌ ವಾರ್‌’, ರಣವೀರ್‌ ಸಿಂಗ್‌ರ ‘ಧುರಂದರ್‌ 2’ ಸೇರಿದಂತೆ ಮತ್ತಷ್ಟು ದುಬಾರಿ ಬಜೆಟ್‌ನ ಸಿನಿಮಾಗಳಲ್ಲದೆ, ಕಂಟೆಂಟ್‌ ಕತೆಗಳೂ ಸದ್ದುಮಾಡುತ್ತಿವೆ.

ಕಿಂಗ್‌ | ಸಿದ್ದಾರ್ಥ್‌ ಆನಂದ್‌ ನಿರ್ದೇಶನ, ಶಾರುಖ್‌ ಖಾನ್‌ರ ‘ಕಿಂಗ್‌’ ಬಾಲಿವುಡ್‌ನಲ್ಲಿ 2026ರ ಬಹುದೊಡ್ಡ ಹಿಂದಿ ಚಿತ್ರವಾಗಲಿದೆ. ಚಿತ್ರದಲ್ಲಿ ಶಾರುಖ್‌ ಜೊತೆ ಅವರ ಪುತ್ರಿ ಸುಹಾನಾ ಖಾನ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರೆಡ್‌ ಚಿಲ್ಲೀಸ್‌ ಎಂಟರ್‌ಟೇನ್‌ಮೆಂಟ್‌ ಹಾಗೂ ಮಾರ್ಫ್ಲಿಕ್ಸ್‌ ಪಿಕ್ಚರ್ಸ್‌ ಜೊತೆಗೂಡಿ ನಿರ್ಮಿಸಿರುವ ಚಿತ್ರ. ಚಿತ್ರಕಥೆಯಲ್ಲಿ ಆಕ್ಷನ್‌ ಜೊತೆ ಭಾವನಾತ್ಮಕ ಎಳೆಯನ್ನು ಹದವಾಗಿ ಬರೆಸಿ ತೆರೆಗೆ ತರಲಾಗುತ್ತಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಸಿದ್ದಾರ್ಥ್‌ ಆನಂದ್‌. ‘ಪಠಾಣ್‌’ ಚಿತ್ರದ ದೊಡ್ಡ ಯಶಸ್ಸಿನ ನಂತರ ಶಾರುಖ್‌ – ಸಿದ್ದಾರ್ಥ್‌ ಆನಂದ್‌ ಜೊತೆಯಾಗಿರುವ ಚಿತ್ರವಿದು.

ರಾಮಾಯಣ | ಪೌರಾಣಿಕ ಕತೆಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಹೇಳಹೊರಟಿರುವ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್‌. ನಿತೇಶ್‌ ತಿವಾರಿ ನಿರ್ದೇಶನದ ದುಬಾರಿ ಸಿನಿಮಾ. ರಣಬೀರ್‌ ಕಪೂರ್‌ ಮತ್ತು ಸಾಯಿ ಪಲ್ಲವಿ, ರಾಮ – ಸೀತೆಯಾಗಿ ನಟಿಸುತ್ತಿದ್ದು, ರಾವಣನ ಪಾತ್ರದಲ್ಲಿ ಯಶ್‌ ಇದ್ದಾರೆ. ಹಿರಿಯ ನಟ ಸನ್ನಿ ಲಿಯೋನ್‌ ಅವರಿಗೆ ಹನುಮಂತನ ಪಾತ್ರ. ಪ್ರೈಮ್‌ ಫೋಕಸ್‌ ಸ್ಟುಡಿಯೋಸ್‌ ಮತ್ತು ಯಶ್‌ ಅವರ ಮಾನ್‌ಸ್ಟರ್‌ ಮೈಂಡ್‌ ಕ್ರಿಯೇಷನ್ಸ್‌ ಜೊತೆಗೂಡಿ ಚಿತ್ರ ನಿರ್ಮಿಸುತ್ತಿವೆ. ಆಸ್ಕರ್‌ ಪುರಸ್ಕೃತ ಸಂಗೀತ ಸಂಯೋಜಕರಾದ ಹಾನ್ಸ್‌ ಜಿಮರ್‌ ಮತ್ತು ಎ.ಆರ್‌.ರೆಹಮಾನ್‌ ಸಂಗೀತ ಚಿತ್ರಕ್ಕಿರಲಿದೆ. ‘ರಾಮಾಯಣ : ಭಾಗ 1’ 2026ರ ದೀಪಾವಳಿಗೆ ಬಿಡುಗಡೆಯಾಗಲಿದ್ದು, ‘ರಾಮಾಯಣ : ಭಾಗ 2’ 2027ರ ದೀಪಾವಳಿಗೆ ತೆರೆಕಾಣಲಿದೆ.

ಧುರಂದರ್‌ 2 | ರಣವೀರ್ ಸಿಂಗ್ ಅಭಿನಯದ ‘ಧುರಂಧರ್’, 2025ರಲ್ಲಿ ಅತಿದೊಡ್ಡ ಹಿಟ್‌ಗಳಲ್ಲೊಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಇದೀಗ ಅದರ ಸೀಕ್ವೆಲ್ 2026ರ ಮಾರ್ಚ್‌ನಲ್ಲಿ ತೆರೆಕಾಣಲಿದೆ. ಭಾಗ 2, ಹಿಂದಿ ಮಾತ್ರವಲ್ಲದೆ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲೂ ಬಿಡುಗಡೆಯಾಗುತ್ತಿದೆ. ಬಿಗಿಯಾದ ಚಿತ್ರಕಥೆ ಮತ್ತು ಭರಪೂರ ಆಕ್ಷನ್‌ನಿಂದ ಸಿನಿಪ್ರಿಯರ ಮನಗೆದ್ದ ‘ಧುರಂದರ್‌’ ಚಿತ್ರದ ಸರಣಿ ಸಹಜವಾಗಿಯೇ ನಿರೀಕ್ಷೆ ಮೂಡಿಸಿದೆ.

ಬ್ಯಾಟಲ್ ಆಫ್ ಗಾಲ್ವಾನ್ | ಮೊನ್ನೆ ಡಿಸೆಂಬರ್‌ 27ರಂದು ಸಲ್ಮಾನ್‌ ಖಾನ್‌ ಬರ್ತ್‌ಡೇಗೆ ಚಿತ್ರದ ಟೀಸರ್‌ ಬಿಡುಗಡೆಯಾಗಿತ್ತು. 2020ರ ಭಾರತ – ಚೀನಾ ಸೇನೆಗಳ ನಡುವಿನ ಗಾಲ್ವಾನ್‌ ಕಣಿವೆ ಸಂಘರ್ಷದ ಕಥಾನಕವಿದು. ಇಪ್ಪತ್ತು ಭಾರತೀಯ ಸೈನಿಕರು ಪ್ರಾಣ ಕಳೆದುಕೊಂಡ ಘಟನೆ, ಲಡಾಖ್‌ನ ಲೈನ್ ಆಫ್ ಆ್ಯಕ್ಚುಯಲ್ ಕಂಟ್ರೋಲ್ (LAC) ಪ್ರದೇಶದಲ್ಲಿ ಉಂಟಾದ ಉದ್ವಿಗ್ನತೆಯ ಹಿನ್ನೆಲೆ ಚಿತ್ರದ ಕಥಾವಸ್ತು. ಸಂಭವನೀಯ ಚೀನಾದ ಆಕ್ರಮಣ ಎದುರಿಸಲು ಭಾರತೀಯ ಸೇನೆ ನಿಗಾವಹಿಸುವ ಕ್ರಮಗಳನ್ನು ಕೈಗೊಂಡ ಹಿನ್ನೆಲೆಯೂ ಚಿತ್ರದಲ್ಲಿರಲಿದೆ. ಸಲ್ಮಾನ್ ಖಾನ್‌ಗೆ ಜೋಡಿಯಾಗಿ ಚಿತ್ರಾಂಗದಾ ಸಿಂಗ್ ಅಭಿನಯಿಸಲಿದ್ದು, ಚಿತ್ರವು ಏಪ್ರಿಲ್ 17, 2026ರಂದು ತೆರೆಕಾಣಲಿದೆ.

ಬಾರ್ಡರ್ 2 | ಅನುರಾಗ್ ಸಿಂಗ್ ನಿರ್ದೇಶನದ ‘ಬಾರ್ಡರ್ 2’ ಹಿಂದಿ ಸಿನಿಮಾದಲ್ಲಿ ಸನ್ನಿ ಡಿಯೋಲ್, ವರುಣ್ ಧವನ್, ದಿಲ್ಜಿತ್ ದೊಸಾಂಜ್, ಅಹಾನ್ ಶೆಟ್ಟಿ, ಮೋನಾ ಸಿಂಗ್, ಮೇಧಾ ರಾಣಾ, ಸೋನಂ ಬಾಜ್ವಾ ಮತ್ತು ಅನ್ಯಾ ಸಿಂಗ್ ಸೇರಿದಂತೆ ದೊಡ್ಡ ತಾರಾಬಳಗವಿದೆ. ಈ war – drama ಜಾನರ್‌ನ ಸಿನಿಮಾ 2026ರ ಜನವರಿ 23ರಂದು ಬಿಡುಗಡೆಯಾಗಲಿದೆ. ಇದೇ ಡಿಸೆಂಬರ್‌ ಆರಂಭದಲ್ಲಿ ವಿಜಯ್‌ ದಿವಸ್‌ ಸಂದರ್ಭದಲ್ಲಿ ಚಿತ್ರದ ಟೀಸರ್‌ ಬಿಡುಗಡೆಯಾಗಿತ್ತು. 1971ರ ಭಾರತ–ಪಾಕಿಸ್ತಾನ ಯುದ್ಧದ ಹಿನ್ನೆಲೆಯ ಕಥಾವಸ್ತು. ದೇಶವನ್ನು ರಕ್ಷಿಸಲು ಹೋರಾಡುವ ಭಾರತೀಯ ಸೈನಿಕರ ಹೋರಾಟದ ಜೊತೆ ಪ್ರೀತಿ, ಕುಟುಂಬ, ಬಂಧಗಳು ಮತ್ತು ತ್ಯಾಗದ ಭಾವನಾತ್ಮಕ ಕ್ಷಣಗಳನ್ನೂ ಹೇಳಲಿದೆ.

ದೃಶ್ಯಂ 3 | ಯಶಸ್ವೀ ‘ದೃಶ್ಯಂ’ ಸಿನಿಮಾದ ಸರಣಿಯಿದು. ಮಲಯಾಳಂ ಮತ್ತು ಹಿಂದಿ, ಎರಡೂ ಅವತರಣಿಕೆಗಳು 2026ರಲ್ಲಿ ತೆರೆಕಾಣಲಿವೆ. ಮೋಹನ್‌ ಲಾಲ್‌ರ ಮಲಯಾಳಂ ಅವತರಣಿಕೆ ಏಪ್ರಿಲ್‌ ಎರಡನೇ ವಾರದಲ್ಲಿ ತೆರೆಗೆ ಬಂದರೆ ಹಿಂದಿ ವರ್ಷನ್‌ ಅಕ್ಟೋಬರ್‌ನಲ್ಲಿ ರಿಲೀಸ್‌ ಆಗಲಿದೆ. ಹಿಂದಿ ಅವತರಣಿಕೆಯಲ್ಲಿ ಅಜಯ್‌ ದೇವಗನ್‌ ಜೊತೆ ತಬು, ಶ್ರಿಯಾ ಶರಣ್‌, ರಜತ್‌ ಕಪೂರ್‌ ಸೇರಿದಂತೆ ಹಲವು ಪ್ರಮುಖರಿದ್ದಾರೆ. ಪನೋರಮಾ ಸ್ಟುಡಿಯೋಸ್ ನಿರ್ಮಾಣದ ಚಿತ್ರಕ್ಕೆ ಅಭಿಷೇಕ್ ಪಠಕ್ ನಿರ್ದೇಶನವಿದೆ.

TOXIC | ಯಶಸ್ವೀ ‘KGF’ ಸರಣಿ ನಂತರ ಯಶ್‌ ‘TOXIC’ ಸಿನಿಮಾ ಮೂಲಕ ತೆರೆಗೆ ಮರಳುತ್ತಿದ್ದಾರೆ. ಗೀತೂ ಮೋಹನ್‌ ದಾಸ್‌ ನಿರ್ದೇಶನದಲ್ಲಿ ತಯಾರಾಗುತ್ತಿರುವ ಚಿತ್ರದ ಆಕ್ಷನ್‌ ಮತ್ತು ಗ್ರಾಫಿಕ್ಸ್‌ ವಿಭಾಗಗಳಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ನಯನತಾರಾ, ಹ್ಯೂಮಾ ಖುರೇಷಿ, ಕಿಯಾರಾ ಅಡ್ವಾನಿ, ತಾರಾ ಸುತಾರಿಯಾ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಚಿತ್ರ ತಯಾರಾಗುತ್ತಿದ್ದು, ಭಾರತದ ಹಲವು ಭಾಷೆಗಳಿಗೆ ಡಬ್‌ ಆಗಿ ರಿಲೀಸ್‌ ಆಗಲಿದೆ. ರವಿ ಬಸ್ರೂರು ಸಂಗೀತ, ರಾಜೀವ್‌ ರವಿ ಛಾಯಾಗ್ರಹಣ ಚಿತ್ರಕ್ಕಿದೆ. 2026ರ ಮಾರ್ಚ್‌ 19ರಂದು ತೆರೆಕಾಣಲಿದೆ.

ಇಕ್ಕಿಸ್‌ | ಶ್ರೀರಾಮ್‌ ರಾಘವನ್‌ ನಿರ್ದೇಶನದ ಸಸ್ಪೆನ್ಸ್‌ – ಥ್ರಿಲ್ಲರ್‌ ಹಿಂದಿ ಸಿನಿಮಾ. ಭಾರತದ ಅತಿ ಕಿರಿಯ ಪರಮವೀರ ಚಕ್ರ ಪುರಸ್ಕೃತರಲ್ಲಿ ಒಬ್ಬರಾದ ದ್ವಿತೀಯ ಲೆಫ್ಟಿನೆಂಟ್ ಅರುಣ್ ಖೇತರ್‌ಪಾಲ್ ಅವರ ಜೀವನ – ಸಾಧನೆ ಈ ಚಿತ್ರಕ್ಕೆ ಪ್ರೇರಣೆ. ಚಿತ್ರದಲ್ಲಿ ಆಗಸ್ತ್ಯ ನಂದಾ ಮತ್ತು ಜಯದೀಪ್ ಅಹ್ಲಾವತ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಅಗಲಿದ ಹಿಂದಿ ಹಿರಿಯ ನಟ ಧರ್ಮೇಂದ್ರ ಅವರ ಕೊನೆಯ ಸಿನಿಮಾ.

ಮರ್ದಾನಿ 3 | ರಾಣಿ ಮುಖರ್ಜಿ ಅವರು ಶಿಸ್ತಿನ ಪೊಲೀಸ್‌ ಅಧಿಕಾರಿ ‘ಶಿವಾನಿ ಶಿವಾಜಿ ರಾಯ್‌’ ಪಾತ್ರದಲ್ಲಿ ನಟಿಸುತ್ತಿರುವ ‘ಮರ್ದಾನಿ 3’ ಹಿಂದಿ ಸಿನಿಮಾ ಬಗ್ಗೆಯೂ ಭರವಸೆಯಿದೆ. ಅಭಿರಾಜ್ ಮಿನಾವಾಲಾ ನಿರ್ದೇಶನ ಮತ್ತು ಆದಿತ್ಯ ಚೋಪ್ರಾ ನಿರ್ಮಾಣದ ಈ ಥ್ರಿಲ್ಲರ್‌ 2026ರ ಫೆಬ್ರವರಿ 27ರಂದು ಬಿಡುಗಡೆಯಾಗಲಿದೆ.

O’ Romeo | ‘ಕಮಿನೇ’, ‘ಹೈದರ್’, ‘ರಂಗೂನ್’ ಚಿತ್ರಗಳ ನಂತರ ನಟ ಶಾಹೀದ್‌ ಕಪೂರ್‌ ಮತ್ತು ಚಿತ್ರನಿರ್ದೇಶಕ ವಿಶಾಲ್ ಭಾರದ್ವಾಜ್ ಮತ್ತೊಮ್ಮೆ O’ Romeo ಚಿತ್ರದಲ್ಲಿ ಕೈಜೋಡಿಸಿದ್ದಾರೆ. ಈ ಆಕ್ಷನ್‌ – ಥ್ರಿಲ್ಲರ್‌ನ ನಾಯಕಿ ತೃಪ್ತಿ ದಿಮ್ರಿ. ಹಿರಿಯ ನಟ ನಾನಾ ಪಟೇಕರ್ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಾಡಿಯಾಡ್ವಾಲಾ ಗ್ರ್ಯಾಂಡ್‌ಸನ್ ಎಂಟರ್‌ಟೇನ್‌ಮೆಂಟ್ ನಿರ್ಮಾಣ ಮತ್ತು ವಿಶಾಲ್ ಭಾರದ್ವಾಜ್ ನಿರ್ದೇಶನದ ‘ಒ’ ರೋಮಿಯೋ’, ವಾಲೆಂಟೈನ್ಸ್ ಡೇ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ.

ಲವ್ ಅಂಡ್ ವಾರ್ | ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ಮಹತ್ವಾಕಾಂಕ್ಷೆಯ ಹಿಂದಿ ಸಿನಿಮಾ. ರಣಬೀರ್ ಕಪೂರ್ 2007ರಲ್ಲಿ ಬನ್ಸಾಲಿ ಅವರ ‘ಸಾವರಿಯಾ’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾಗಿದ್ದರು. ಇದೀಗ ಮತ್ತೆ ಜೊತೆಯಾಗಿದ್ದಾರೆ. ವಿಕ್ಕಿ ಕೌಶಲ್ ಅವರಿಗೆ ಬನ್ಸಾಲಿ ಅವರೊಂದಿಗೆ ಇದು ಮೊದಲ ಸಿನಿಮಾ. ಆಲಿಯಾ ಭಟ್ ಈ ಹಿಂದೆ ‘ಗಂಗೂಬಾಯಿ ಕಥಿಯಾವಾಡಿ’ (2022)

ದಿ ರಾಜಾಸಾಬ್ | ಪ್ರಭಾಸ್‌ ನಟನೆಯ ಬಹುನಿರೀಕ್ಷಿತ ತೆಲುಗು ಸಿನಿಮಾ. ಮೊನ್ನೆಯಷ್ಟೇ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಇದೊಂದು ಹಾರರ್‌ – ಕಾಮಿಡಿ. ಸಂಜಯ್‌ ದತ್‌, ಬೊಮನ್‌ ಇರಾನಿ, ಮಾಳವಿಕಾ ಮೋಹನನ್‌, ನಿಧಿ ಅಗರ್‌ವಾಲ್‌, ರಿದ್ಧಿ ಕುಮಾರ್‌, ಝರೀನಾ ವಾಹಬ್‌ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. 2026ರ ಜನವರಿ 9ರಂದು ಮೂಲ ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ.

ಜನ ನಾಯಕನ್ | ವಿಜಯ್‌ ಅವರ ಕೊನೆಯ ಚಿತ್ರವೆಂದೇ ಇದು ಬಿಂಬಿತವಾಗುತ್ತಿದೆ. ಇದೊಂದು ಪೊಲಿಟಿಕಲ್‌ – ಡ್ರಾಮಾ. ವಿನೋಥ್‌ ನಿರ್ದೇಶನದ ಈ ತಮಿಳು ಚಿತ್ರಕ್ಕೆ ಅನಿರುದ್ಧ ರವಿಚಂದರ್‌ ಸಂಗೀತ ಸಂಯೋಜಿಸಿದ್ದಾರೆ. ಬಾಬ್ಬಿ ಡಿಯೋಲ್‌, ಪೂಜಾ ಹೆಗ್ಡೆ, ಮಮಿತಾ ಬೈಜು, ಪ್ರಕಾಶ್‌ ರಾಜ್‌, ಗೌತಮ್‌ ವಾಸುದೇವ್‌ ಮೆನನ್‌, ಪ್ರಿಯಾಮಣಿ ಪ್ರಮುಖ ಪಾತ್ರಗಳಲ್ಲಿದ್ದಾರೆ. 2026ರ ಜನವರಿ 9ರಂದು ಸಿನಿಮಾ ತೆರೆಕಾಣಲಿದೆ.

ಜೈಲರ್ 2 | ನೆಲ್ಸನ್‌ ದಿಲೀಪ್‌ ಕುಮಾರ್‌ ಕತೆ ರಚಿಸಿ ನಿರ್ದೇಶಿಸುತ್ತಿರುವ ಆಕ್ಷನ್‌ – ಕಾಮಿಡಿ. ರಜನೀಕಾಂತ್‌ರ ಯಶಸ್ವೀ ‘ಜೈಲರ್‌’ ಚಿತ್ರದ ಸರಣಿ. ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕಲಾನಿಧಿ ಮಾರನ್ ನಿರ್ಮಿಸಿರುವ ಈ ಚಿತ್ರ, 2023ರ ಬ್ಲಾಕ್‌ಬಸ್ಟರ್ ‘ಜೈಲರ್’ ಚಿತ್ರದ ಮುಂದುವರಿದ ಭಾಗ. ಎಸ್.ಜೆ. ಸೂರ್ಯಾ, ರಮ್ಯಾ ಕೃಷ್ಣನ್, ವಿನಾಯಕನ್, ಯೋಗಿ ಬಾಬು ಮತ್ತು ಮಿರ್ನಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. 2026ರ ಜೂನ್‌ 16ರಂದು ಸಿನಿಮಾ ತೆರೆಕಾಣಲಿದೆ.

ಮೇಲೆ ಪಟ್ಟಿ ಮಾಡಿರುವ ಚಿತ್ರಗಳ ಜೊತೆ ಇನ್ನೂ ಹತ್ತಾರು ಸಿನಿಮಾಗಳು ಸುದ್ದಿಯಲ್ಲಿವೆ. ನಾನಿ ಮತ್ತು ಸೋನಾಲಿ ಕುಲಕರ್ಣಿ ಅಭಿನಯದ ತೆಲುಗು ಆಕ್ಷನ್‌ – ಅಡ್ವೆಂಚರ್‌ ‘ದಿ ಪ್ಯಾರಡೈಸ್‌’, ಪ್ರೇಮ್‌ ನಿರ್ದೇಶನದಲ್ಲಿ ಧ್ರುವ ಸರ್ಜಾ ನಟಿಸಿರುವ ‘KD’ ಕನ್ನಡ ಸಿನಮಾ, ಸುದೀಪ್‌ರ ‘ಬಿಲ್ಲಾ ರಂಗಾ ಬಾಷಾ’ ಕನ್ನಡ ಸಿನಿಮಾ, ಪ್ರಿಯದರ್ಶನ್‌ ನಿರ್ದೇಶನದಲ್ಲಿ ಸೈಫ್‌ ಅಲಿ ಖಾನ್‌ ಮತ್ತು ಅಕ್ಷಯ್‌ ಕುಮಾರ್‌ ನಟಿಸುತ್ತಿರುವ ‘ಹೈವಾನ್‌’, ಅಕ್ಷಯ್‌ ಕುಮಾರ್‌ರ ‘ಭೂತ್‌ ಬಂಗ್ಲಾ’, ಜಸ್ಪಾಲ್‌ ಸಂಧು ನಿರ್ದೇಶನದ ‘ವಧ್‌ 2’, ರಾಮ್‌ ಚರಣ್‌ ತೇಜಾ ಮತ್ತು ಜಾಹ್ನವಿ ಕಪೂರ್‌ ನಟನೆಯ ‘ಪೆದ್ದಿ’ ತೆಲುಗು ಸಿನಿಮಾ, ಮೃಣಾಲ್‌ ಠಾಕೂರ್‌ ಮತ್ತು ಅಡವಿ ಶೇಷ್‌ ನಟನೆಯ ‘ಡಾಕಾಯಿತ್‌’ ತೆಲುಗು ಸಿನಿಮಾ, ಪ್ರಭಾಸ್‌ರ ‘ಫೌಜಿ’ ಹಿಂದಿ ಸಿನಿಮಾ ಸೇರಿದಂತೆ 2026ರ ಹಲವು ಚಿತ್ರಗಳ ಬಗ್ಗೆ ಸಿನಿಪ್ರಿಯರು ದೃಷ್ಟಿ ನೆಟ್ಟಿದ್ದಾರೆ.

LEAVE A REPLY

Connect with

Please enter your comment!
Please enter your name here