‘ದಿ ಬೆಸ್ಟ್‌ ಆಕ್ಟರ್‌’ ಮೈಕ್ರೋ ಮೂವಿ ಮೂಲಕ ಗಮನ ಸೆಳೆದಿದ್ದ ನಾಗರಾಜ ಸೋಮಯಾಜಿ ನಿರ್ದೇಶನದಲ್ಲಿ ‘ಅಕಟಕಟ’ ಸೆಟ್ಟೇರಿದೆ. ಇಂದು ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದ್ದು, ಇದು ಕಂಟೆಂಟ್‌ ಓರಿಯೆಂಟೆಡ್‌ ಸಿನಿಮಾ ಎನ್ನುತ್ತಾರೆ ನಾಗರಾಜ ಸೋಮಯಾಜಿ.

“ನಮ್ಮಲ್ಲಿ ಕಂಟೆಂಟ್‌ ಡ್ರಿವನ್‌ ಸಿನಿಮಾಗಳು ದೊಡ್ಡ ಸಂಖ್ಯೆಯಲ್ಲಿನ್ನೂ ತಯಾರಾಗುತ್ತಿಲ್ಲ. ಬರಹಗಾರರಿಗೆ ಹೆಚ್ಚು ಕೆಲಸ ಕೊಟ್ಟರೆ ಅಂತಹ ಪ್ರಯೋಗಗಳು ಹೆಚ್ಚಾಗುತ್ತವೆ. ಈ ನಿಟ್ಟಿನಲ್ಲಿ ನಾವೊಂದು ತಂಡವಾಗಿ ಕೆಲಸ ಮಾಡುತ್ತಿದ್ದೇವೆ. ನಾಲ್ಕೈದು ಸ್ಕ್ರಿಪ್ಟ್‌ಗಳು ಸಿದ್ಧವಾಗುತ್ತಿದ್ದು ಮೊದಲ ಹಂತದಲ್ಲಿ ‘ಅಕಟಕಟ’ ಸಿನಿಮಾ ತಯಾರಾಗಲಿದೆ” ಎನ್ನುತಾರೆ ನಾಗರಾಜ ಸೋಮಯಾಜಿ. ‘ದಿ ಬೆಸ್ಟ್‌ ಆಕ್ಟರ್‌’ ಮೈಕ್ರೋ ಮೂವಿ ನಿರ್ದೇಶಿಸಿದ್ದ ಅವರು ‘ಪುಕ್ಸಟ್ಟೆ ಲೈಫು’ ಸಿನಿಮಾ ನಿರ್ಮಿಸಿದ್ದರು. ಅರವಿಂದ ಕುಪ್ಳೀಕರ್‌ ನಿರ್ದೇಶನದಲ್ಲಿ ಸಂಚಾರಿ ವಿಜಯ್‌ ನಟಿಸಿದ್ದ ‘ಪುಕ್ಸಟ್ಟೆ ಲೈಫು’ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ‘ಅಕಟಕಟ’ ಚಿತ್ರ ಕೈಗೆತ್ತಿಕೊಂಡಿದ್ದಾರೆ. ಲೇಖಕಿ ಸಂಧ್ಯಾರಾಣಿ, ASG, ಭಾಸ್ಕರ್‌ ಬಂಗೇರಾ ಚಿತ್ರಕಥೆಯಲ್ಲಿ ಸೋಮಯಾಜಿ ಅವರಿಗೆ ನೆರವಾಗುತ್ತಿದ್ದಾರೆ.

“ಈ ಚಿತ್ರದ ಬಗ್ಗೆ ಈಗ ಹೆಚ್ಚೇನೂ ಹೇಳುವಂತಿಲ್ಲ. ಬರವಣಿಗೆಗೆ ಹೆಚ್ಚು ಸಮಯ ಮೀಸಲಿಟ್ಟಿದ್ದು, ಚಿತ್ರೀಕರಣವನ್ನು ಇಪ್ಪತ್ತೆಂಟು ದಿನಗಳಲ್ಲಿ ಪೂರ್ಣಗೊಳಿಸಲಿದ್ದೇವೆ. ಪಾತ್ರಗಳ ಬಗ್ಗೆ ಸರಿ, ತಪ್ಪುಗಳ ಒಂದು ಜಡ್ಜ್‌ಮೆಂಟ್‌ ಬೇಕಾಗುತ್ತೆ. ತಾನೇ ಎಲ್ಲವನ್ನೂ ನಿರ್ವಹಿಸುತ್ತೇನೆ ಎಂದು ನಿರ್ದೇಶಕ ಹೊರಟರೆ ತಪ್ಪಾಗುತ್ತೆ. ಜೊತೆಗಾರರ ಜೊತೆ ಪಾತ್ರ, ಕತೆ ಚರ್ಚೆಗಿಡಬೇಕು. ಆಗ ಪಾತ್ರಗಳು ಸದೃಢವಾಗಿ ರೂಪುಗೊಳ್ಳುತ್ತವೆ” ಎನ್ನುವುದು ಸೋಮಯಾಜಿ ಅವರ ಬಲವಾದ ನಂಬುಗೆ. ಈ ನಿಟ್ಟಿನಲ್ಲಿ ಸಮಾನಮನಸ್ಕ ಬರಹಗಾರರ ತಂಡವೊಂದನ್ನು ಕಟ್ಟಿಕೊಂಡಿದ್ದಾರೆ. ‘ಅಕಟಕಟ’ ಕಥಾವಸ್ತು, ಕಲಾವಿದರ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಸಿಗಲಿದೆ. ಚಿತ್ರಕ್ಕೆ ಎಸ್‌.ಕೆ.ರಾವ್‌ ಛಾಯಾಗ್ರಹಣ, ಮ್ಯಾಥೂಸ್‌ ಮನು ಸಂಗೀತ ಸಂಯೋಜನೆ, ಗೌಡ ಅರ್ಜುನ್‌ ಸಂಕಲನ ಇರಲಿದೆ.

ನಾಗರಾಜ ಸೊಮಯಾಜಿ ನಿರ್ದೇಶನದ ‘ದಿ ಬೆಸ್ಟ್‌ ಆಕ್ಟರ್‌’

LEAVE A REPLY

Connect with

Please enter your comment!
Please enter your name here