ಅಭಿ ದಾಸ್ ಮತ್ತು ಶರಣ್ಯ ಶೆಟ್ಟಿ ನಟನೆಯ ‘ನಗುವಿನ ಹೂಗಳ ಮೇಲೆ’ ಸಿನಿಮಾ ಫೆ. 9ಕ್ಕೆ ತೆರೆಕಾಣುತ್ತಿದೆ. ‘ಆಮ್ಲೆಟ್’, ‘ಕೆಂಪಿರ್ವೆ’ ಸಿನಿಮಾಗಳ ಖ್ಯಾತಿಯ ವೆಂಕಟ್ ಭಾರದ್ವಾಜ್ ನಿರ್ದೇಶನದ ಚಿತ್ರವಿದು. ಪ್ರೇಮಕತೆಯ ಚಿತ್ರದಲ್ಲಿ ಲಾಂಗ್ ಡಿಸ್ಟಾನ್ಸ್ ರಿಲೇಷನ್‌ಶಿಪ್ ವಿಷಯವನ್ನು ಪ್ರಸ್ತಾಪಿಸುತ್ತಿದ್ದಾರೆ ನಿರ್ದೇಶಕರು.
ವೆಂಕಟ್ ಭಾರದ್ವಾಜ್ ನಿರ್ದೇಶನದ ‘ನಗುವಿನ ಹೂಗಳ ಮೇಲೆ’ ಸಿನಿಮಾ ಇದೇ ಫೆಬ್ರವರಿ 9ರಂದು ತೆರೆಕಾಣುತ್ತಿದೆ. ಅಭಿ ದಾಸ್ ಮತ್ತು ಶರಣ್ಯಾ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಪ್ರೇಮಕತೆಯಿದು. ಈ ಹಿಂದೆ ‘ಆಮ್ಲೆಟ್’, ‘ಕೆಂಪಿರ್ವೆ’ ಸಿನಿಮಾಗಳನ್ನು ನಿರ್ದೇಶನ ಮಾಡಿ ಗಮನ ಸೆಳೆದಿರುವವರು ವೆಂಕಟ್ ಭಾರದ್ವಾಜ್. ‘ನಗುವಿನ ಹೂಗಳ ಮೇಲೆ’ ಸಿನಿಮಾದ ವಸ್ತು ಎಲ್ಲಾ ವಯೋಮಾನದವರನ್ನೂ ತಟ್ಟಲಿದೆ ಎನ್ನುತ್ತಾರವರು.
ಹೀರೋ ಅಭಿ ದಾಸ್ ಅವರಿಗೆ ಈ ವರ್ಷದ ಮೊದಲ ಚಿತ್ರವಿದು. ಕಳೆದ ವರ್ಷ ಅವರು ನಟಿಸಿದ್ದ ‘ಬೆಂಗಳೂರು ಬಾಯ್ಸ್’, ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಮತ್ತು ‘ಮರೀಚಿ’ ಸಿನಿಮಾಗಳು ತೆರೆಕಂಡಿದ್ದವು. ‘ಮರೀಚಿ’ ಚಿತ್ರದಲ್ಲಿ ತಮಗೆ ಸಿಕ್ಕ ಹೆಚ್ಚು ಸ್ಕ್ರೀನ್‌ಸ್ಪೇಸ್ ಅನ್ನು ಅಭಿ ಸೊಗಸಾಗಿ ಬಳಕೆ ಮಾಡಿಕೊಂಡಿದ್ದರು. ಅಲ್ಲಿ ಲವರ್ ಬಾಯ್ ಆಗಿದ್ದ ಅಭಿ ‘ನಗುವಿನ ಹೂಗಳ ಮೇಲೆ’ ಚಿತ್ರದ ಪ್ರೀತಿಯ ಕತೆಯ ಬಗ್ಗೆ ಭಾರಿ ನಿರೀಕ್ಷೆ ಹೊಂದಿದ್ದಾರೆ. ‘ಇದು ಲವ್‌ಸ್ಟೋರಿ ಹೌದು. ಆದರೆ ನಿರ್ದೇಶಕರು ಕತೆಯಲ್ಲಿ ಲಾಂಗ್ ಡಿಸ್ಟಾನ್ಸ್ ರಿಲೇಷನ್‌ಶಿಪ್ ತಂದಿದ್ದಾರೆ. ಸಂಬಂಧಗಳ ಸಂಕೀರ್ಣತೆ ಇಲ್ಲಿ ಕಾಣಿಸಲಿದೆ. ನನ್ನ ಕೆರಿಯರ್‌ನಲ್ಲಿ ಇದೊಂದು ವಿಶೇಷ ಕತೆ’ ಎನ್ನುತ್ತಾರೆ ಅಭಿ.
ಕಿರುತೆರೆ ಸೀರಿಯಲ್‌ಗಳಲ್ಲಿ ಕನ್ನಡಿಗರಿಗೆ ಪರಿಚಯವಾಗಿದ್ದ ಅಭಿ ದಾಸ್ ಈಗ ಸಾಲು, ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ಗಟ್ಟಿಮೇಳ’ ಅವರಿಗೆ ಹೆಸರು ತಂದುಕೊಟ್ಟ ಪ್ರಮುಖ ಸರಣಿ. ಇದೇ ಸೀರಿಯಲ್‌ನಲ್ಲಿ ನಟಿಸಿದ್ದ ಶರಣ್ಯ ಶೆಟ್ಟಿ ‘ನಗುವಿನ ಹೂಗಳ ಮೇಲೆ’ ಚಿತ್ರದ ನಾಯಕಿ ಎನ್ನುವುದು ವಿಶೇಷ. ಇನ್ನು ‘ಗಟ್ಟಿಮೇಳ’ದಲ್ಲಿ ನಟಿಸಿದ್ದ ಗಿರೀಶ್ ಬೆಟ್ಟಪ್ಪ ‘ನಗುವಿನ ಹೂಗಳ ಮೇಲೆ’ ಚಿತ್ರದಲ್ಲಿ ಅಭಿಗೆ ಮತ್ತೆ ಜೊತೆಯಾಗಿದ್ದಾರೆ. ಇಬ್ಬರೂ ಇಲ್ಲಿ ಗೆಳೆಯರಾಗಿ ಕಾಣಿಸಿಕೊಂಡಿದ್ದಾರೆ. ಅಭಿ ಅವರ ‘ಮಿಸ್ಟರ್ & ಮಿಸೆಸ್’ ಸಿನಿಮಾ ಕೂಡ ತೆರೆಗೆ ಸಿದ್ಧವಾಗಿದೆ. ಸದ್ಯ ಅಭಿ ‘ಬೋಟ್’ ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ. ಅರ್ಜುನ್ ಕೃಷ್ಣ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಸರಣಿಗೆ ಕಾಶ್ಮೀರದಲ್ಲೂ ಚಿತ್ರೀಕರಣ ನಡೆದಿದೆ.
ಕನ್ನಡ ಭಾಷೆ ಮೇಲೆ ಅಭಿಮಾನವಾಗಿ ಈ ಚಿತ್ರವನ್ನು ತೆಲುಗಿನ ಖ್ಯಾತ ನಿರ್ಮಾಪಕ ಕೆ ಕೆ ರಾಧಾ ಮೋಹನ್ ಶ್ರೀ ಸತ್ಯಸಾಯಿ ಆರ್ಟ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಬಲ ರಾಜವಾಡಿ, ಆಶಾ ಸುಜಯ್, ಹರ್ಷಿತ್ ಗೌಡ, ಅಭಿಷೇಕ್ ಐಯಂಗಾರ್, ಹರೀಶ್ ಚೌಹಾಣ್, ಹರ್ಷ ಗೋ ಭಟ್ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರಮೋದ್ ಭಾರತೀಯ ಛಾಯಾಗ್ರಹಣ, ಅಭಿಷೇಕ್ ಐಯಂಗಾರ್ ಸಂಭಾಷಣೆ, ಲವ್ ಫ್ರಾನ್ ಮೆಹತಾ ಸಂಗೀತ ನಿರ್ದೇಶನ, ಚಂದನ್ ಪಿ ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನ ಚಿತ್ರಕ್ಕಿದೆ.