ಧನ್ವೀರ್‌ ನಟನೆಯ ನೂತನ ಸಿನಿಮಾ ‘ಹಯಗ್ರೀವ’ ಸೆಟ್ಟೇರಿದೆ. ರಘುಕುಮಾರ್‌ ನಿರ್ದೇಶನದ ಚಿತ್ರದ ನಾಯಕಿ ಸಂಜನಾ ಆನಂದ್‌. ‘ಪ್ರೀತಿ, ಭಾವನೆ, ಸಸ್ಪೆನ್ಸ್ ಸೇರಿದಂತೆ ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿವೆ’ ಎನ್ನುತ್ತಾರೆ ಚಿತ್ರದ ನಿರ್ದೇಶಕ ರಘುಕುಮಾರ್‌.

ರಘುಕುಮಾರ್ ಓ ಆರ್ ನಿರ್ದೇಶನದಲ್ಲಿ ಧನ್ವೀರ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ‘ಹಯಗ್ರೀವ’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನಾಡದೇವತೆ ಶ್ರೀಚಾಮುಂಡೇಶ್ವರಿ ಸನ್ನಿಧಿಯಲ್ಲಿ ನೆರವೇರಿದೆ. ಈ ಕುರಿತು ನಿರ್ಮಾಪಕ ಸಮೃದ್ದಿ ಮಂಜುನಾಥ್ ಮಾತನಾಡಿ, ‘ಹಯಗ್ರೀವ ನಮ್ಮ KVC Productions ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಮೂರನೆಯ ಚಿತ್ರ. ನಾನು ಯೂಟ್ಯೂಬ್‍ನಲ್ಲಿ ‘ದಿ ಬೆಲ್‍’ ಎಂಬ ಕಿರುಚಿತ್ರ ನೋಡಿದೆ. ಆ ಕಿರುಚಿತ್ರದ ನಿರ್ದೇಶಕ ರಘುಕುಮಾರ್ ಅವರನ್ನು ಒಂದು ಚಿತ್ರ ಮಾಡಿಕೊಡಿ ಎಂದು ಹೇಳಿದೆ. ಅವರು ತಮ್ಮ ತಂಡದೊಂದಿಗೆ ಒಂದೊಳ್ಳೆಯ ಕಥೆ ಮಾಡಿದ್ದಾರೆ. ಇದೊಂದು ಪಕ್ಕಾ ಕಮರ್ಷಿಯಲ್‍ ಚಿತ್ರ. ಧನ್ವೀರ್ ಹಾಗೂ ಸಂಜನಾ ಆನಂದ್ ನಾಯಕ-ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಮತ್ತೊಬ್ಬ ನಟ ಇರಲಿದ್ದು, ಅವರು ಯಾರೆನ್ನುವುದನ್ನು ಚಿತ್ರದ ಬಿಡುಗಡೆಯವರೆಗೂ ಗೌಪ್ಯವಾಗಿಡಲಾಗುವುದು. ಒಂದೊಳ್ಳೆಯ ಕಥೆಗೆ ಪೂರಕವಾಗಿ ಶೀರ್ಷಿಕೆ ಸಿಕ್ಕಿದೆ. ಈ ಚಿತ್ರವನ್ನು ಎಲ್ಲರೂ ಒಪ್ಪುತ್ತಾರೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ.

ನಿರ್ದೇಶಕ ರಘುಕುಮಾರ್‌ ತಮ್ಮ ಸಿನಿಮಾದ ಕತೆ, ಪಾತ್ರಗಳ ಬಗ್ಗೆ ಮಾಹಿತಿ ನೀಡಿ, ‘ನಿರ್ಮಾಪಕರು ಫೋನ್‍ ಮಾಡಿ ಸಿನಿಮಾ ಮಾಡಿಕೊಡಿ ಎಂದರು. ನನ್ನ ಹತ್ತಿರ ಒಂದು ಕತೆ ಇತ್ತು. ಅದನ್ನು ಅವರಿಗೆ ಹೇಳಿದಾಗ ಇಷ್ಟಪಟ್ಟು ಈ ಚಿತ್ರ ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ಚಿತ್ರದಲ್ಲಿ ಮುಖ್ಯವಾಗಿ ಪೌರಾಣಿಕ ಅಂಶಗಳ ಜೊತೆಗೆ ಕ್ರೈಮ್‍ ಇದೆ. ಪ್ರೀತಿ, ಭಾವನೆ, ಸಸ್ಪೆನ್ಸ್ ಸೇರಿದಂತೆ ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿವೆ. ಕನ್ನಡದಲ್ಲಿ ಇದುವರೆಗೂ ಯಾರೂ ಈ ತರಹದ ಪ್ರಯತ್ನವನ್ನು ಮಾಡಿಲ್ಲ ಎಂಬುದು ನನ್ನ ಅನಿಸಿಕೆ. ಇಲ್ಲಿ ಹಯಗ್ರೀವ ಎಂಬ ಪೌರಾಣಿಕ ಪಾತ್ರದ ಸುತ್ತ ಚಿತ್ರ ಸುತ್ತುತ್ತದೆ. ಬೆಂಗಳೂರಿನಲ್ಲಿ ಇಡೀ ಚಿತ್ರದ ಚಿತ್ರೀಕರಣ ನಡೆಯಲಿದೆ’ ಎನ್ನುತ್ತಾರೆ. ರಂಗಾಯಣ ರಘು, ತಾರಾ, ಸಾಧು ಕೋಕಿಲ, ರವಿಶಂಕರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ‍್ಳುತ್ತಿದ್ದಾರೆ.

ಹೀರೋ ಧನ್ವೀರ್‌ ಅವರ ಐದನೇ ಚಿತ್ರವಿದು. ‘ಇದು ನನ್ನ ಐದನೇ ಚಿತ್ರ. ಒಳ್ಳೆಯ ತಂಡ ಮತ್ತು ಒಳ್ಳೆಯ ಶೀರ್ಷಿಕೆ ಸಿಕ್ಕಿದೆ. ಬಹಳ ದಿನಗಳಿಂದ ಪ್ಲಾನ್‍ ಮಾಡಿ, ಒಂದೊಳ್ಳೆಯ ಕತೆ ಮಾಡಿ ಈ ಚಿತ್ರ ಮಾಡುತ್ತಿದ್ದೇವೆ. ಅಭಿಮಾನಿಗಳಿಗೆ ಖುಷಿಯಾಗುವಂತಹ ಕಥೆ ಇದೆ. ಈ ಚಿತ್ರದಲ್ಲಿ ನೀಗ್ರೋಗಳ ಜೊತೆಗೆ ಫೈಟ್‍ ಇದೆ. ‘ಬಜಾರ್’ ನಂತರ ಸಿಕ್ಸ್ ಪ್ಯಾಕ್‌ ಮಾಡಿಕೊಳ್ಳುತ್ತಿದ್ದೇನೆ. ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ. ಕತೆ ಮತ್ತು ಪಾತ್ರ ವಿಭಿನ್ನವಾಗಿದೆ’ ಎನ್ನುವುದು ಧನ್ವೀರ್‌ ಮಾತು. ಚಿತ್ರದ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಜ್ಯೂಡಾ ಸ್ಯಾಂಡಿ ಸಂಗೀತ, ಕಾರ್ತಿಕ್ ಛಾಯಾಗ್ರಹಣ, ಉಮೇಶ್ ಸಂಕಲನ ಚಿತ್ರಕ್ಕಿರಲಿದೆ. ನಿರ್ದೇಶಕ ರಘುಕುಮಾರ್‌ ಅವರೇ ಕತೆ, ಚಿತ್ರಕಥೆ ರಚಿಸಿದ್ದಾರೆ. ಶೈಲೇಶ್ ರಾಜ್ ಮತ್ತು ಚೇತನ್ ಸಿದ್ ಸಂಭಾಷಣೆ ರಚಿಸಿದ್ದಾರೆ.

LEAVE A REPLY

Connect with

Please enter your comment!
Please enter your name here