ಈ ಹಿಂದೆ ‘ಪ್ರೀತಿಯ ಲೋಕ’, ‘ಲವ್ ಈಸ್ ಪಾಯಿಸನ್’ ಚಿತ್ರಗಳನ್ನು ನಿರ್ದೇಶಿಸಿದ್ದ ನಂದನ್ ಪ್ರಭು ಆರು ವರ್ಷಗಳ ನಂತರ ‘ಓರಿಯೋ’ ಚಿತ್ರದೊಂದಿಗೆ ತೆರೆಗೆ ಮರಳಿದ್ದಾರೆ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಸಂದೇಶವೇ ಸಿನಿಮಾ ಕತೆಗೆ ಪ್ರೇರಣೆ.
ಅಬ್ದುಲ್ ಕಲಾಂ ಅವರು ರಾಷ್ಟ್ರಪತಿ ಆಗುವುದಕ್ಕಿಂತ ಮುನ್ನ ಅವರ ಕಾರಿನ ಚಾಲಕರಾಗಿದ್ದವರು ನಂದನ್ ಪ್ರಭು. ಮೇರು ವಿಜ್ಞಾನಿ ಕಲಾಂ ಅವರೊಂದಿಗಿನ ಹತ್ತಿರದ ಒಡನಾಟ ಅವರಿಗೆ ಸಾಧ್ಯವಾಗಿತ್ತು. ಅವರ ಮಾತುಗಳೇ ಈ ಸಿನಿಮಾ ಕತೆಗೆ ಪ್ರೇರಣೆ ಎನ್ನುತ್ತಾರೆ ನಂದನ್ ಪ್ರಭು. “ಓರಿಯೋ ಪದಕ್ಕೆ ಒಂದೊಂದು ದೇಶದಲ್ಲಿ ಒಂದೊಂದು ಅರ್ಥವಿದೆ. ನಾವು ಎಚ್ಚರ ತಪ್ಪಿದರೆ ಮುಂದೊಂದು ದಿನ ಹೀಗೂ ಆಗಬಹುದು ಎಂಬ ಎಚ್ಚರಿಕೆಯ ಸಂದೇಶವನ್ನು ನೀಡುವ ವಿಭಿನ್ನ ಕಥಾಹಂದರ ಚಿತ್ರದಲ್ಲಿದೆ” ಎನ್ನುತ್ತಾರೆ ನಂದನ್ ಪ್ರಭು. ಅವರ ಈ ಸಿನಿಮಾಗೆ ಮುಹೂರ್ತ ನೆರವೇರಿತು.
ಚಿತ್ರದ ನಾಯಕನಟರಲ್ಲೊಬ್ಬರಾದ ನಿತಿನ್ ಗೌಡ ಮಾತನಾಡಿ, “ನಾನು ಮೂಲತಃ ಆರ್ಕಿಟೆಕ್ಟ್. ಇದು ನನ್ನ ಮೊದಲ ಚಿತ್ರ. ಪಾತ್ರ ಚೆನ್ನಾಗಿದೆ. ಅವಕಾಶ ನೀಡಿದ್ದ ನಂದನ್ ಪ್ರಭು ಅವರಿಗೆ ಧನ್ಯವಾದ” ಎಂದರು. “ನಾನು ‘ರಥಾವರ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದೇನೆ. ‘ವೈರ’, ‘ಪುಟಾಣಿ ಪಂಟರ್’ ಚಿತ್ರಗಳಲ್ಲೂ ಅಭಿನಯಿಸಿದ್ದೇನೆ” ಎನ್ನುವುದು ಮತ್ತೊಬ್ಬ ಹೀರೋ ಸುಚಿತ್ ಮಾತು. ನಟಿಯರಾದ ಶುಭಿ, ಲತಾ ಹಾಗೂ ಸಂಗೀತ ನಿರ್ದೇಶಕ ಸಾಯಿಕಿರಣ್ ಚಿತ್ರದ ಬಗ್ಗೆ ಮಾತನಾಡಿದರು. ಡಿಸೆಂಬರ್ 1ರಿಂದ ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಆರಂಭವಾಗಲಿದೆ. ನಂತರ ಮಡಿಕೇರಿ, ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ಶಿವಾಂಜನೇಯ ಪ್ರೊಡಕ್ಷನ್ಸ್ ಲಾಂಛನದಲ್ಲಿ ವಿಜಯಶ್ರೀ ಆರ್.ಎಂ. ಹಾಗೂ ವೈಶಾಲಿ ವೈ.ಜೆ. ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಟಿ.ಕೃಷ್ಣಪ್ಪ ಹಾಗೂ ರೇಣುಕಾ ಪ್ರಭಾಕರ್ ಈ ಚಿತ್ರದ ಸಹ ನಿರ್ಮಾಪಕರು. ಬಿ.ರಾಜರತ್ನ ಸಂಭಾಷಣೆ ರಚಿಸಿದ್ದು ನಿರ್ದೇಶನದಲ್ಲಿ ನೆರವಾಗಲಿದ್ದಾರೆ.