ಗಾಯಕರಾಗಿ ಜನಪ್ರಿಯತೆ ಗಳಿಸಿರುವ ನವೀನ್‌ ಸಜ್ಜು ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಹೊಸ ಸಿನಿಮಾದ ಶೀರ್ಷಿಕೆ ಘೋಷಣೆಯಾಗಿದೆ. ಕನ್ನಡ ಕಿರುತೆರೆ ಮತ್ತು ಸಿನಿಮಾರಂಗದ ನೂರಕ್ಕೂ ಹೆಚ್ಚು ನಟ – ನಟಿಯರು ‘ಲೋ ನವೀನ’ ಚಿತ್ರದ ಟೈಟಲ್‌ ಟೀಸರ್‌ ಅನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

‘ಲೂಸಿಯಾ’ ಸಿನಿಮಾದ ಹಾಡಿನ ಗಾಯನದೊಂದಿಗೆ ಸುದ್ದಿಯಾದ ನವೀನ್‌ ಸಜ್ಜು ತಮ್ಮ ವಿಶಿಷ್ಟ ಕಂಠದ ಮೂಲಕ ಸಂಗೀತ ಪ್ರಿಯರಿಗೆ ಇಷ್ಟವಾಗುತ್ತಾರೆ. ಕಲರ್ಸ್‌ ಕನ್ನಡದ ‘ಚುಕ್ಕಿ ತಾರೆ’ ಧಾರಾವಾಹಿಯಲ್ಲಿ ಮಾಗಡಿ ರೋಡ್‌ ಮಲ್ಲಿಕಾರ್ಜುನನಾಗಿ ಅವರು ನಟಿಸಿದ್ದರು. ಗಾಯಕರಾಗಿ ಜನರಿಗೆ ಇಷ್ಟವಾಗಿದ್ದ ಅವರು ನಟನಾಗಿಯೂ ಮೆಚ್ಚುಗೆ ಗಳಿಸಿದ್ದರು. ಇನ್ನು, ‘ಮ್ಯಾನ್ಷನ್‌ ಮುತ್ತು’ ಚಿತ್ರದೊಂದಿಗೆ ಅವರು ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದಾರೆ. ಈ ಚಿತ್ರವಿನ್ನೂ ತೆರೆಕಾಣಬೇಕಿದೆ. ಚೊಚ್ಚಲ ಸಿನಿಮಾ ಬಿಡುಗಡೆಯಾಗುವುದಕ್ಕೆ ಮುನ್ನವೇ ನವೀನ್‌ ಸಜ್ಜು ಅವರ ಹೊಸ ಸಿನಿಮಾ ‘ಲೋ ನವೀನ’ ಘೋಷಣೆಯಾಗಿದೆ. ಕನ್ನಡ ಕಿರುತೆರೆ ಮತ್ತು ಸಿನಿಮಾರಂಗದ ನೂರಕ್ಕೂ ಹೆಚ್ಚು ನಟ – ನಟಿಯರು ‘ಲೋ ನವೀನ’ ಚಿತ್ರದ ಟೈಟಲ್‌ ಟೀಸರ್‌ ಅನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

ಸಿನಿಮಾದ ಶೀರ್ಷಿಕೆ ಘೋಷಣೆ ಪೋಸ್ಟರ್‌ನಲ್ಲಿ ಎಮ್ಮೆ ಬಾಲ ಹಿಡಿದು ಎಳೆಯುತ್ತಿರುವ ನವೀನ್‌ ಸಜ್ಜು ಚಿತ್ರವಿದೆ. ಇದೊಂದು ಹಳ್ಳಿ ಸೊಗಡಿನ ಸಿನಿಮಾ ಎನ್ನುವುದು ಪೋಸ್ಟರ್‌ನಿಂದ ತಿಳಿದುಬರುತ್ತದೆ. ಧನುರ್ದಾರಿ ಪವನ್‌ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಚಿತ್ರಕ್ಕೆ ಮೂವರು ಛಾಯಾಗ್ರಾಹಕರಿದ್ದಾರೆ ಎನ್ನುವುದು ವಿಶೇಷ. ಬಿಗ್‌ಬಾಸ್‌ ಖ್ಯಾತಿಯ ಅಕ್ಷತಾ ಪಾಂಡವಪುರ ಮತ್ತು ಪ್ರಸನ್ನ ಸಾಗರ ಅವರು ವಸ್ತ್ರ ವಿನ್ಯಾಸ ಮಾಡುತ್ತಿದ್ದಾರೆ. ಎನ್‌ ಎಸ್‌ ನವೀನ್‌ ಸಜ್ಜು ಸ್ಟುಡಿಯೋ ಬ್ಯಾನರ್‌ ಅಡಿ ತಯಾರಾಗುತ್ತಿರುವ ಸಿನಿಮಾಗೆ ಅನಿವಾಸಿ ಭಾರತೀಯ, ವರ್ಜೀನಿಯಾ ನಿವಾಸಿ ಕೀರ್ತಿ ಸ್ವಾಮಿ ಬಂಡವಾಳ ಹೂಡುತ್ತಿದ್ದಾರೆ. ನವೀನ್‌ ಸಜ್ಜು ಅವರೇ ಚಿತ್ರಕ್ಕೆ ಸಂಗೀತ ಸಂಯೋಜಿಸಲಿದ್ದಾರೆ. ಮೈಸೂರು, ಮಂಡ್ಯ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣಕ್ಕೆ ಯೋಜನೆ ಹಾಕಿಕೊಂಡಿದ್ದು, ಸಹ ನಟರು ಹಾಗು ತಂತ್ರಜ್ಞರ ಪಟ್ಟಿ ಅಂತಿಮಗೊಂಡಿದೆ. ಚಿತ್ರದ ನಾಯಕಿಯಾಗಿ ಹೊಸಬರನ್ನು ಈ ಚಿತ್ರದ ಮೂಲಕ ಚಂದನವನಕ್ಕೆ ಚಿತ್ರತಂಡ ಪರಿಚಯ ಮಾಡಲಿದೆ.

LEAVE A REPLY

Connect with

Please enter your comment!
Please enter your name here