ಕಿರುತೆರೆಯ ಜನಪ್ರಿಯ ತಾರಾದಂಪತಿ ಚಂದನ್ ಗೌಡ ಮತ್ತು ನೇಹಾ ಗೌಡ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗುತ್ತಿದೆ. ಇವರು ತಂದೆ – ತಾಯಿ ಆಗುತ್ತಿದ್ದಾರೆ. ಈ ವಿಷಯವನ್ನು ತಿಳಿಸಲು ತಾರಾ ಜೋಡಿ Instagramಗೆ ಹಾಕಿರುವ ವೀಡಿಯೋ ಸಖತ್ ಕ್ರಿಯೇಟಿವ್ ಆಗಿದೆ.
ಕನ್ನಡ ಕಿರುತೆರೆಯ ‘ಲಕ್ಷ್ಮೀ ಬಾರಮ್ಮ’ ಸೀರಿಯಲ್ ಮೂಲಕ ‘ಬೊಂಬೆ’ ಎಂದೇ ಪರಿಚಿತರಾದವರು ನಟಿ ನೇಹಾ ಗೌಡ. ಕನ್ನಡ ಮಾತ್ರವಲ್ಲದೆ ತೆಲುಗು ಕಿರುತೆರೆಯಲ್ಲೂ ಅವರು ಜನಪ್ರಿಯ ನಟಿ. ಅವರ ಪತಿ ಚಂದನ್ ಗೌಡ ಕೂಡ ಕಿರುತೆರೆ ನಟ. ಆರು ವರ್ಷಗಳ ಹಿಂದೆ ಇವರ ವಿವಾಹ ನೆರವೇರಿತ್ತು. ನಿನ್ನೆ ನೇಹಾ ತಮ್ಮ Instagram ಖಾತೆಯಲ್ಲಿ ತಾವು ತಾಯಿಯಾಗುತ್ತಿರುವ ವಿಷಯವನ್ನು ಅರುಹಿದ್ದಾರೆ. ಈ ವಿಷಯ ತಿಳಿಸಲು ಪತಿ ಚಂದನ್ ಜೊತೆ ಅವರು ಮಾಡಿರುವ ವೀಡಿಯೋ ಸಖತ್ ಕ್ರಿಯೇಟಿವ್ ಆಗಿದೆ. The Newborn Times! ಎನ್ನುವ ವಿಶಿಷ್ಟ ಶೀರ್ಷಿಕೆಯ ಪತ್ರಿಕೆಯನ್ನು ತಾವೇ ಸೃಷ್ಟಿಸಿ ಅದರಲ್ಲಿ ಅವರು, ‘Our family is growing’ ಎಂದು ತಿಳಿಸಿದ್ದಾರೆ. ಈ ಸುದ್ದಿಗೆ ನೇಹಾ ಮತ್ತು ಚಂದನ್ ಸ್ನೇಹಿತ ಬಳಗ ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಸಂದೇಶಗಳು ಸಿಗುತ್ತಿವೆ.
ಕನ್ನಡ ಚಿತ್ರರಂಗದ ಹಿರಿಯ ಮೇಕಪ್ ಕಲಾವಿದ ರಾಮಕೃಷ್ಣ ಅವರ ಪುತ್ರಿ ನೇಹಾ ಕಿರುತೆರೆಯ ವಿಭಿನ್ನ ಪಾತ್ರಗಳ ಮೂಲಕ ಕನ್ನಡಿಗರನ್ನು ರಂಜಿಸುತ್ತಾ ಬರುತ್ತಿದ್ದಾರೆ. ಇತ್ತೀಚೆಗೆ ‘ನಮ್ಮ ಲಚ್ಚಿ’ ಧಾರಾವಾಹಿಯಲಿ ನಟಿಸುತ್ತಿದ್ದರು. ಇದೀಗ ನಟನೆಯಿಂದ ಬ್ರೇಕ್ ಪಡೆದಿದ್ದಾರೆ. ಅವರ ಪತಿ ಚಂದನ್ ಸದ್ಯ ‘ಅಂತರಪಟ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇಬ್ಬರದ್ದೂ ಬಾಲ್ಯದ ಪರಿಚಯ. ಪ್ರೀತಿಸಿ ಮದುವೆಯಾದರು. ಉದ್ಯಮಿ ಚಂದನ್ ಅವರು ನೇಹಾರನ್ನು ವರಿಸಿದ ನಂತರ ನಟನಾಗಿ ಕಿರುತೆರೆಯಲ್ಲಿ ಸಕ್ರಿಯರಾದರು.